ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಕವಿಯ ನೆನಪಿನ ಹೊನಲು

Last Updated 29 ಜನವರಿ 2023, 14:38 IST
ಅಕ್ಷರ ಗಾತ್ರ

ಮೈಸೂರು: ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಭಾನುವಾರ ಕೃಪಾಕರ–ಸೇನಾನಿ ಅವರ ‘ಕ್ಯಾಮರಾ v/s ಕುವೆಂಪು’ ಪುಸ್ತಕ ಬಿಡುಗಡೆ ಕಾರ್ಯಕ್ರಮವು, ನೆರೆದಿದ್ದವರನ್ನು ರಾಷ್ಟ್ರಕವಿಯ ನೆನಪಿನ ಲೋಕಕ್ಕೆ ಕರೆದೊಯ್ಯಿತು.

ಮಾತನಾಡಿದವರೆಲ್ಲರೂ ಆ ಮೇರುವ್ಯಕ್ತಿತ್ವವನ್ನು ತಮ್ಮ ದಾಟಿಯಲ್ಲಿ ಕಟ್ಟಿಕೊಟ್ಟರು. ಪ್ರಕಾಶಕ ಪ್ರೊ.ಬಿ.ಎನ್.ಶ್ರೀರಾಮ್‌ ಕುವೆಂ‍ಪು ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು. ಸಭಾಂಗಣದಲ್ಲಿ ಕವಿಯ ಸ್ಮರಣೆಯ ಹೊನಲು ಹರಿಯಿತು. ಯುವಕರಾಗಿದ್ದಾಗ ಆರಂಭಿಸಿದ್ದ ಪ್ರಯತ್ನವು ಕೈಗೂಡಿದ ಸಾರ್ಥಕ ಭಾವದಲ್ಲಿ ಕೃಪಾಕರ–ಸೇನಾನಿ ಇದ್ದರು.

ಚಿತ್ರನಟ ಪ್ರಕಾಶ್‌ ರಾಜ್ ಹಳೆಯ ಕ್ಯಾಮೆರಾ ಕ್ಲಿಕ್ಕಿಸಿ ಕಾರ್ಯಕ್ರಮ ಉದ್ಘಾಟಿಸಿದ್ದು ವಿಶೇಷವಾಗಿತ್ತು.

ನಂತರ ಮಾತನಾಡಿದ ಅವರು, ‘ನನಗಿದು ಕ್ಯಾಮರಾ v/s ಕುವೆಂಪು ಅಲ್ಲ. ಪ್ರಕಾಶ್‌ ರಾಜ್‌ v/s ಕೃಪಾಕರ ಸೇನಾನಿ. ಈ ಪುಸ್ತಕ ಓದುತ್ತಾ ಓದುತ್ತಾ ಲೇಖಕರ ನೋಟದ‌ ಕಣ್ಣು ವಿಶೇಷ ಎನಿಸಿತು. ಇತ್ತೀಚಿನ ದಿನಗಳಲ್ಲಿ ಸಂವಹನ ಕೌಶಲದ ಬಗ್ಗೆ ಮಾತನಾಡುತ್ತಿದ್ದೇವೆ. ಒಂದು ವಿಷಯವನ್ನು ಗ್ರಹಿಸುವ, ಜೀರ್ಣಿಸಿಕೊಳ್ಳುವ, ಅರ್ಥೈಸಿಕೊಳ್ಳುವ ಹಾಗೂ ನೋಡುವ ದೃಷ್ಟಿಯ ಮೇಲೆ ನಮ್ಮ ದೃಷ್ಟಿ ಸಾಕಷ್ಟಿಲ್ಲ. ಓದುಗ–ಪ್ರೇಕ್ಷಕ–ಸಮಾಜದ ಜೊತೆ ಬದುಕಿನ ಅನುಭವ ಹಂಚಿಕೊಂಡಿರುವ ಕಾರಣದಿಂದ ಈ ಪುಸ್ತಕ ತುಂಬಾ ಇಷ್ಟವಾಗುತ್ತದೆ’ ಎಂದರು.

‘ಇಂತಹ ಪುಸ್ತಕವನ್ನು ಈವರೆಗೆ ನೋಡಿಲ್ಲ. ಅದು ಏನನ್ನೂ ಹೇಳುವುದಿಲ್ಲ. ಪ್ರಯಾಣವನ್ನು ಕಟ್ಟಿಕೊಟ್ಟಿದೆ’ ಎಂದು ತಿಳಿಸಿದರು.

ಗಾಂಭೀರ್ಯದ ಪರಿಚಯ:

‘ಒಬ್ಬ ಮಹಾನ್ ವ್ಯಕ್ತಿಯ ಮೌನವನ್ನು ಹೇಳುವ ಪ್ರಯತ್ನ ಇಲ್ಲಿದೆ. ಈ ಪುಸ್ತಕವನ್ನು ಓದಿ ನಾಲ್ಕು ದಿನ ಮೌನವಾದೆ. ಕೃಪಾಕರ–ಸೇನಾನಿ ಎಂಬ ಇಬ್ಬರು ನಮ್ಮ ಕೈಹಿಡಿದು ದೊಡ್ಡ ಅಜ್ಜನ, ಧೀಮಂತ ವ್ಯಕ್ತಿಯ ಗಾಂಭೀರ್ಯವನ್ನು ಪರಿಚಯಿಸುತ್ತಾ ಕರೆದೊಯ್ದಿದ್ದಾರೆ’ ಎಂದು ಹೇಳಿದರು.

ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ‘ಬರೆದಂತೆ ಬದುಕಿದ ವ್ಯಕ್ತಿ ಇದ್ದರೆ ಅದು ಕುವೆಂಪು ಮಾತ್ರ. ತಮ್ಮ ಪ್ರಭಾವವನ್ನು ಸ್ವಾರ್ಥಕ್ಕೆ ಅಥವಾ ಕುಟುಂಬಕ್ಕೆ ಬಳಸಿಕೊಳ್ಳಲಿಲ್ಲ. ಅವರಂತಹ ಶಿಸ್ತು, ಸಮಯಪಾಲನೆಯು ಕವಿ ಅಥವಾ ಬರಹಗಾರರಲ್ಲಿ ಕಂಡುಬರುವುದು ಅಪರೂಪದಲ್ಲಿ ಅಪರೂಪ’ ಎಂದು ಹೇಳಿದರು.

‘ಈ ಪುಸ್ತಕ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕಾಣಿಕೆಯಾಗಿದೆ’ ಎಂದರು.

‘ಸಾಹಿತ್ಯವು ನಾವು ಓದಿ ಸಂತೋಷಪಡುವುದಕ್ಕೆ ಮಾತ್ರವೇ ಇರುವುದಾ, ಅನುಷ್ಠಾನಕ್ಕೆ ಇಲ್ಲವೇ, ಅಳವಡಿಸಿಕೊಳ್ಳಲು ಆಗುವುಲ್ಲವೇ ಎಂಬ ನೋವು ನನಗಿದೆ’ ಎಂದರು.

‘ಪುಸ್ತಕ ಓದುತ್ತಾ ಹೋದಂತೆ, ಕೃಪಾಕರ–ಸೇನಾನಿ ಕೇವಲ ಫೋಟೊಗ್ರಾಫರ್‌ಗಳಲ್ಲ ಎನಿಸಿತು. ಕಲಾವಿದ–ಕವಿ ಇಬ್ಬರೂ ಭಾವಜೀವಿಗಳೇ ಎನಿಸಿತು. ಇವರು ಚಿತ್ರಗಳ ಮೂಲಕ ಮಾತನಾಡಿರುವುದು ವಿಶೇಷ. ನಾನು ಒಮ್ಮೆಲೇ ಓದಿದಂತಹ ಮೊದಲ ಪುಸ್ತಕವಿದು. ಪುಸ್ತಕದಲ್ಲಿರುವ ಚಿತ್ರಗಳು ಅದ್ಭುತವಾಗಿವೆ. ಇದರಲ್ಲಿನ ಬರವಣಿಗೆಯೂ ಚೆನ್ನಾಗಿದೆ. ಓದಿದ ಮೇಲೆ ಈ ಜೋಡಿಯ ಮೇಲಿನ ಗೌರವ ಹೆಚ್ಚಾಯಿತು. ಅಣ್ಣಮ್ಮನ ಕಥೆ ಮನಸ್ಸು ಕಲಕಿತು’ ಎಂದು ಹೇಳಿದರು.

‘ಪ್ರಜಾವಾಣಿ’ಗೆ ಕಳುಹಿಸಿದರದೇ ಬಿಡುಗಡೆ

‘ನಾವು ನಮ್ಮ ಹಿಂದಿನ ಕೃತಿಗಳನ್ನು ಹೀಗೆ ಸಮಾರಂಭ ನಡೆಸಿ ಬಿಡುಗಡೆ ಮಾಡಿಲ್ಲ. ‘ಪ್ರಜಾವಾಣಿ’ ಸಂಪಾದಕರಿಗೆ ಪ್ರತಿ ಕಳುಹಿಸುತ್ತಿದ್ದೆವು. ಅವರಿಗೆ ಕರೆ ಮಾಡಿ, ‘ನೀವು ಕವರ್ ತೆರೆದರೆ ಅದೇ ಪುಸ್ತಕ ಬಿಡುಗಡೆ’ ಎಂದು ಹೇಳುತ್ತಿದ್ದೆವು’ ಎಂದು ಕೃಪಾಕರ ತಿಳಿಸಿದರು.

ಒಂದೊಂದು ರೀತಿಯ ಅನುಭವ...

‘ವ್ಯಕ್ತಿ ಚಿತ್ರವನ್ನು ಕಟ್ಟಿಕೊಡಬೇಕಾದರೆ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಬೇಕು. ಹಾಗಾಗಿಯೇ ನಾವು 30 ವರ್ಷದಿಂದ ಈ ಪುಸ್ತಕ ಹೊರತರಬೇಕೆಂಬ ಆಲೋಚನೆಯನ್ನು ಕೈಚೆಲ್ಲುತ್ತಾ ಬರುತ್ತಿದ್ದೆವು’ ಎಂದು ಸೇನಾನಿ ಅನುಭವ ಹಂಚಿಕೊಂಡರು.

‘ಅಧ್ಯಯನ ಮಾಡುತ್ತಿದ್ದೆವು. ಕೊನೆಗೆ, ಇದನ್ನು ಪುಸ್ತಕವೆಂದು ನೋಡಬೇಕೇಕೇ ಎಂದು ನಿರ್ಧರಿಸಿ ಮುಂದುವರಿದೆವು. ಕೃತಿಯ ಓದು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ ನೀಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT