ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಪಪಂಗಡ ಒಗ್ಗೂಡಲಿ, ಮೀಸಲಾತಿ ಸಿಗಲಿ: ಎಂ.ಬಿ. ಪಾಟೀಲ

ಮೈಸೂರಿನಲ್ಲಿ ಅದ್ದೂರಿಯಾಗಿ ನಡೆದ ‘ನಮ್ಮ ಬಸವ ಜಯಂತಿ’ಯಲ್ಲಿ ಸಚಿವ ಎಂ.ಬಿ ಪಾಟೀಲ
Published 10 ಜೂನ್ 2024, 4:16 IST
Last Updated 10 ಜೂನ್ 2024, 4:16 IST
ಅಕ್ಷರ ಗಾತ್ರ

ಮೈಸೂರು: ‘ಚೆಲ್ಲಾಪಿಲ್ಲಿಯಾಗಿರುವ ವೀರಶೈವ– ಲಿಂಗಾಯತ ಸಮುದಾಯದ ಉಪ ಪಂಗಡಗಳು ಒಗ್ಗೂಡಬೇಕು. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಬೆಳವಣಿಗೆ ಹೊಂದಲು ಸಂಘಟಿತರಾಗಬೇಕು’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಅಖಿಲ ಭಾರತ ವೀರಶೈವ– ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘ–ಸಂಸ್ಥೆಗಳು, ಬಸವ ಬಳಗಗಳ ಒಕ್ಕೂಟದಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ‘ನಮ್ಮ ಬಸವ ಜಯಂತಿ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಮಕ್ಕಳಿಗೂ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಕೇಳುವುದು ತಪ್ಪಲ್ಲ. ಹಿಂದುಳಿದ ವರ್ಗ ಎಂದು ಪರಿಗಣಿಸಿ ಸೌಲಭ್ಯ ಕೊಡಬೇಕು. ನಮ್ಮ ಅನೇಕ ಉಪ ಪಂಗಡಗಳು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಈ ನ್ಯೂನತೆ ಸರಿಪಡಿಸುವ ಕೆಲಸ ಮೊದಲು ಆಗಬೇಕು’ ಎಂದು ಒತ್ತಾಯಿಸಿದರು.

‘ಕಲ್ಯಾಣದಲ್ಲಿ ಕ್ರಾಂತಿಯಾಗದೆ ಇದ್ದಿದ್ದರೆ ಪ್ರಸ್ತುತ ಬಸವ ಧರ್ಮ, ಬಸವ ತತ್ವವು ವಿಶ್ವವ್ಯಾಪಿ ಆಗಿರುತ್ತಿತ್ತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಕೆಲಸವನ್ನು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ’ ಎಂದು ಹೇಳಿದರು.

ನನಸಾಗದೇ ಹೋದದ್ದು ನಮ್ಮ ದೌರ್ಭಾಗ್ಯ: ‘ವಿವಿಧ ಕಾಯಕಗಳನ್ನು ಮಾಡುತ್ತಿದ್ದ ಸಣ್ಣ–ಸಣ್ಣ ಸಮುದಾಯಗಳನ್ನು ಒಂದುಗೂಡಿಸಿ, ಅವರೆಲ್ಲರೂ ವೈಚಾರಿಕತೆಯನ್ನು ಬೆಳೆಸಿ ಸಮ ಸಮಾಜ ನಿರ್ಮಾಣದ ಸುಂದರ ಕನಸನ್ನು ಕಂಡಿದ್ದ ಬಸವಣ್ಣನವರ ಆಶಯ ಕಲ್ಯಾಣ ಕ್ರಾಂತಿಯಿಂದಾಗಿ ನನಸಾಗದೇ ಹೋದದ್ದು ನಮ್ಮ ದೌರ್ಭಾಗ್ಯ. ನನಸಾಗಿದ್ದರೆ ನಮ್ಮ ದೇಶ ಬಸವ ಭಾರತವಾಗುತ್ತಿತ್ತು.

‘ರಾಜ್ಯದಲ್ಲಿ ಸಮಾಜದ ಒಗ್ಗೂಡುವಿಕೆ ವಿಷಯದಲ್ಲಿ ಉತ್ತರ– ದಕ್ಷಿಣ ಕೂಡುವಿಕೆ ಆಗುತ್ತಿಲ್ಲ. ಒಗ್ಗೂಡಿಸುವ ಕೆಲಸವನ್ನು ಶ್ರೀಗಳು ಹಾಗೂ ನಾವೆಲ್ಲರೂ ಸೇರಿ ಮಾಡಬೇಕು. ನಮ್ಮ ಧರ್ಮವನ್ನು ಪೂಜಿಸಬೇಕು. ಇತರ ಧರ್ಮವನ್ನು ಗೌರವಿಸಬೇಕು. ಅನುಭವ ಮಂಟಪದ ಪರಿಕಲ್ಪನೆ ನಮ್ಮ ರಕ್ತದಲ್ಲಿಯೇ‌ ಬಂದಿದೆ’ ಎಂದು ತಿಳಿಸಿದರು.

ಜಾತಿಯದ್ದೇ ಪಾರುಪತ್ಯ: ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ‘ಬಸವ ಜಯಂತಿ ಎಂದರೆ ಜಾತಿ ವಿನಾಶದ ಜಯಂತಿ ಹಾಗೂ ಮೂಢನಂಬಿಕೆ, ಸನಾತನವಾದ ಮತ್ತು ಶೋಷಣೆ ವಿರುದ್ಧದ್ದಾಗಿದೆ. ದೇಶದಾದ್ಯಂತ ಈಗಲೂ ಜಾತಿಯದ್ದೇ ಪಾರುಪತ್ಯ ಆಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಜಾತಿಯ ಶ್ರೇಷ್ಠತೆ ಅಳಿಯದ ಹೊರತು ಜಾತಿ ವಿನಾಶ ಆಗುವುದಿಲ್ಲ. ಜಾತಿ ನಾಶವಾಗದೇ ಮಾನವೀಯತೆ ಬರುವುದಿಲ್ಲ’ ಎಂದರು.

ಶಾಸಕ ವಿನಯ ಕುಲಕರ್ಣಿ ಮಾತನಾಡಿ, ‘ಮೈಸೂರು ಭಾಗದಲ್ಲಿ ಸಮಾಜ ಸಂಘಟನೆಯ ಕೊರತೆ ಇದೆ. ಗ್ರಾಮ ಹಾಗೂ ತಾಲ್ಲೂಕು ಘಟಕಗಳನ್ನು ‌ರಚಿಸಿ ಸಂಘಟನೆ ಬಲಪಡಿಸಬೇಕು. ಅನ್ಯಾಯವಾದಾಗ ಧ್ವನಿ ಎತ್ತಬೇಕು. ಮೈಸೂರು ಭಾಗದ ಸಮಾಜದವರು ನೋವಿನಲ್ಲಿ ಇರುವುದು ಬೇಡ. ನಿಮ್ಮೊಂದಿಗೆ ನಾವಿದ್ದೇವೆ’ ಎಂದು ತಿಳಿಸಿದರು.

ಖೇಣಿ ಸಲಹೆ: ಉದ್ಯಮಿ ಅಶೋಕ್‌ ಖೇಣಿ ಮಾತನಾಡಿ, ‘ಅಖಿಲ ಭಾರತ ವೀರಶೈವ ಮಹಾಸಭಾದಲ್ಲೂ ಪಕ್ಷ ಆಧಾರಿತ ಚುನಾವಣೆ ಮಾಡುತ್ತಿರುವುದು ವಿಷಾದನೀಯ. ರಾಜಕೀಯ ಮಾಡುವವರು ಸಮಾಜಸೇವೆ ಮಾಡಬಾರದು. ಸಮಾಜಸೇವೆ ಮಾಡುವವರು ರಾಜಕೀಯ ‌ಮಾಡಬಾರದು’ ಎಂದು  ಸಲಹೆ ನೀಡಿದರು.

ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ‘ಬಸವಣ್ಣನವರ ತತ್ವ ಪಾಲನೆಯಿಂದ ಸಮಾಜದಲ್ಲಿ ಸುಧಾರಣೆ ಸಾಧ್ಯವಾಗಲಿದೆ’ ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಂ.ಪ್ರದೀಪ್ ಕುಮಾರ್, ಶಾಸಕ ಎಚ್‌.ಎಂ. ಗಣೇಶ್ ಪ್ರಸಾದ್, ಡಾ.ಡಿ.ತಿಮ್ಮಯ್ಯ, ಮುಡಾ ಅಧ್ಯಕ್ಷ ಕೆ.ಮರೀಗೌಡ, ಕಾಡಾ ಅಧ್ಯಕ್ಷ ಮರಿಸ್ವಾಮಿ ಮಾತನಾಡಿದರು. ವಿವಿಧ ಮಠಾಧೀಶರು, ಬಸವ ಬಳಗಗಳ ಒಕ್ಕೂಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

‘ನಮ್ಮ ಬಸವ ಜಯಂತಿ’ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
‘ನಮ್ಮ ಬಸವ ಜಯಂತಿ’ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ

ಜಾತಿ ಶ್ರೇಷ್ಠತೆ ತೊಲಗಿಸಲು ಬಸವಣ್ಣ ನಾನು ಮಾದಾರ ಚನ್ನಯ್ಯನ ಮಗ ಎಂದು ಹೇಳಿಕೊಂಡರು. ಅವರ ತತ್ವಗಳನ್ನು ಭಾರತೀಯರೆಲ್ಲರೂ ಪಾಲಿಸಬೇಕು

-ಡಾ.ಎಚ್‌.ಸಿ. ಮಹದೇವಪ್ಪ ಸಮಾಜ ಕಲ್ಯಾಣ ಸಚಿವ

ಈಗ ಆಲೋಚಿಸಲೂ ಸಾಧ್ಯವಾಗದಿರುವುದನ್ನು ಸಾವಿರ ವರ್ಷಗಳ ಹಿಂದೆ ಬಸವಣ್ಣ ಅನುಷ್ಠಾನಕ್ಕೆ ತಂದು ಕ್ರಾಂತಿಕಾರಿಯಾಗಿದ್ದಾರೆ. ಅವರ ಹಾದಿಯಲ್ಲಿ ನಾವು ನಡೆಯಬೇಕು

- ನಾಗಭೂಷಣ, ಚಲನಚಿತ್ರ ನಟ

‘ದೇವರನ್ನು ಅಂಗೈಗೆ ಕೊಟ್ಟ ಬಸವಣ್ಣ’

‘ದೇವರನ್ನು ಪೂಜಿಸುವುದು ಒಂದು ವರ್ಗಕ್ಕೆ ಸೀಮಿತವಾಗಿದ್ದ ಕಾಲದಲ್ಲಿ ಗರ್ಭಗುಡಿಯಲ್ಲಿದ್ದ ದೇವರನ್ನು ಸಾಮಾನ್ಯರ ಅಂಗೈಗೆ ತಂದು ಕೊಟ್ಟವರು ಬಸವಣ್ಣ’ ಎಂದು ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು. ‘ಜಾತಿ ವ್ಯವಸ್ಥೆ ಮೌಢ್ಯ ಬಲಿಷ್ಠವಾಗಿದ್ದ ಕಾಲಘಟ್ಟದಲ್ಲೇ ಮಹಿಳಾ ಸಮಾನತೆ ಬಗ್ಗೆ ಮಾತನಾಡಿದರು. ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನೀಡಿದರು. ಅವರು ಹಚ್ಚಿದೆ ಜ್ಯೋತಿಯನ್ನು ಬೆಳಗಿಸಿ ಸಮಾನತೆ ತರಬೇಕು’ ಎಂದರು. ಚಲನಚಿತ್ರ ನಟ ಧನಂಜಯ ಮಾತನಾಡಿ ‘ಬಸವಣ್ಣನ ಸ್ಮರಣೆ ಜಯಂತಿಗೆ ಮಾತ್ರ ಸೀಮಿತಗೊಳ್ಳದೇ ವಿಚಾರವನ್ನೂ ತಿಳಿಯಬೇಕು’ ಎಂದು ಹೇಳಿದರು. ‘ಲಿಡ್ಕರ್‌ ರಾಯಭಾರಿಯಾಗಿ ಅನೇಕ ವಿಷಯ ತಿಳಿದುಕೊಂಡೆ. ಚರ್ಮದಲ್ಲಿ ಚಪ್ಪಲಿ ಹೊಲೆಯುವ ಅನೇಕ ಕುಟುಂಬಗಳಿವೆ. ಈ ಸಂಸ್ಥೆಗೆ ಮೂಲ ಪ್ರೇರಣೆ 12ನೇ ಶತಮಾನದ ಹರಳಯ್ಯ ಮತ್ತು ಕಲ್ಯಾಣಮ್ಮ. ಈ ಸಂಸ್ಥೆಯ ಭಾಗವಾಗಿದ್ದಕ್ಕೆ ಸಂತೋಷವಿದೆ’ ಎಂದರು.

ಆಕರ್ಷಿಸಿದ ಭವ್ಯ ಮೆರವಣಿಗೆ

ಜೆಎಸ್‌ಎಸ್ ಮಹಾವಿದ್ಯಾಪೀಠ ಸಮೀಪದ ಬಸವೇಶ್ವರ ಮಂಟಪದ ಬಳಿಯಿಂದ ನೊಣವಿನಕೆರೆಯ ಮಠದ ಆನೆಯ ಮೇಲೆ ಬಸವಣ್ಣನ ಪುತ್ಥಳಿಯನ್ನಿಟ್ಟು ನಡೆಸಿದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು. 108 ಕಳಸ ಹೊತ್ತ ಮಹಿಳೆಯರು ವಿವಿಧ ಜನಪದ ಕಲಾತಂಡದವರು ಮೆರುಗು ನೀಡಿದರು. ಬೆಳ್ಳಿ ರಥದಲ್ಲಿ ಅಕ್ಕಮಹಾದೇವಿ ಅಲ್ಲಮಪ್ರಭು ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ವೇಷ ಧರಿಸಿದ್ದ ಮಕ್ಕಳು ಗಮನಸೆಳೆದರು. ಅಶ್ವರೂಢರಾಗಿದ್ದ ಬಾಲ ಬಸವಣ್ಣ ವೇಷಧಾರಿ ಆಕರ್ಷಿಸಿದರು. ಯುವಕರು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ದೇವನೂರು ಮಠದ ಮಹಾಂತ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಮೆರವಣಿಗೆಗೆ ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಚಾಲನೆ ನೀಡಿದರು. ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೊಸಮಠದ ಚಿದಾನಂದ ಸ್ವಾಮೀಜಿ ಕುದೇರು ಮಠದ ಗುರುಶಾಂತ ಸ್ವಾಮೀಜಿ ಕುಂದೂರು ಮಠದ ಶರತ್‌ಚಂದ್ರ ಸ್ವಾಮೀಜಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT