ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಅಭಿವೃದ್ಧಿಗೆ ನಾವು ಕೇಳುವುದನ್ನೆಲ್ಲಾ ಮಾಡಿಕೊಡಲಿರುವ ಮೋದಿ: ಎಚ್‌ಡಿಕೆ

Published 22 ಏಪ್ರಿಲ್ 2024, 16:26 IST
Last Updated 22 ಏಪ್ರಿಲ್ 2024, 16:26 IST
ಅಕ್ಷರ ಗಾತ್ರ

ಸಾಲಿಗ್ರಾಮ (ಮೈಸೂರು): ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಚ್‌.ಡಿ.ದೇವೇಗೌಡ ಹಾಗೂ ನನ್ನ ಬಗ್ಗೆ ಅಪಾರವಾದ ಗೌರವವಿದೆ. ರಾಜ್ಯದ ಅಭಿವೃದ್ಧಿಗೆ ನಾವು ಕೇಳುವ ಎಲ್ಲ ಕೆಲಸವನ್ನೂ ಅವರು ಮಾಡಿಕೊಡಲಿದ್ದಾರೆ’ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಇಲ್ಲಿ ಸೋಮವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ಖಜಾನೆಯನ್ನು ಕಾಂಗ್ರೆಸ್‌ನವರು ಲೂಟಿ ಮಾಡಿದ್ದಾರೆ. ತಿಂಗಳಿಗೆ ₹ 2 ಸಾವಿರ ಕೊಡುತ್ತಿರುವ ‘ಗೃಹಲಕ್ಷ್ಮಿ ಯೋಜನೆ’ಯಿಂದ ಮಹಿಳೆಯರು ಮುಂದಿನ ದಿನಗಳಲ್ಲಿ ಅನಾಹುತಕ್ಕೆ ಒಳಗಾಗುತ್ತೀರಿ. ಏಕೆಂದರೆ, ಸರ್ಕಾರ ಈ ಕಾರ್ಯಕ್ರಮಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಸಾಲ ಮಾಡುತ್ತಿದೆ. ಗ್ಯಾರಂಟಿ ಹೆಸರಿನಲ್ಲಿ ಜನರ ಮೇಲೆ ಸಾಲದ ಹೊರೆಯನ್ನು ಜಾಸ್ತಿ ಮಾಡಲಾಗುತ್ತಿದೆ’ ಎಂದು ದೂರಿದರು.

‘ಈ ಸರ್ಕಾರ ಮಾಡಿರುವ ಸಾಲದ ಹೊರೆಯನ್ನು ಮುಂದೆ ಬರಲಿರುವ ಯಾವ ಪಕ್ಷದ ಸರ್ಕಾರದಿಂದಲೂ ತೀರಿಸಲು ಸಾಧ್ಯವಾಗುವುದಿಲ್ಲ. ಅಂತಿಮವಾಗಿ ಆ ಸಾಲವನ್ನು ತೀರಿಸಲು ತೆರಿಗೆಯ ರೂಪದಲ್ಲಿ ಜನರ ಮೇಲೆಯೇ ಹೊರೆ ಹೊರಿಸುತ್ತಾರೆ’ ಎಂದು ಆರೋಪಿಸಿದರು.

‘ಮಹಿಳೆಯರೇ ಅರ್ಥ ಮಾಡಿಕೊಳ್ಳಿ, ಈಗ ಪ್ರತಿಯೊಬ್ಬರ ಮೇಲೆ ತಲಾ ₹ 36ಸಾವಿರ ಸಾಲವಿದೆ. ಇದೇ ಸರ್ಕಾರ ಐದು ವರ್ಷ ಇದ್ದರೆ ಸಾಲದ ಪ್ರಮಾಣ ಇನ್ನೆಷ್ಟಾಗುತ್ತದೆಯೋ ಗೊತ್ತಿಲ್ಲ. ಆದ್ದರಿಂದ ಯೋಚಿಸಿ ತೀರ್ಮಾನಿಸಿ. ಗ್ಯಾರಂಟಿ ಕಾರ್ಯಕ್ರಮಗಳಿಗಿಂತ ಜನರಿಗೆ ಬೇಕಿರುವುದು ಮಕ್ಕಳಿಗೆ ಉಚಿತ ಶಿಕ್ಷಣ, ಉದ್ಯೋಗ, ಸಂಪೂರ್ಣ ಉಚಿತ ಚಿಕಿತ್ಸೆ, ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು ಎನ್ನುವುದಾಗಿದೆ. ಆಗ ನೀವು ಯಾರೊಬ್ಬರ ಮುಂದೆಯೂ ಕೈ ಒಡ್ಡಬೇಕಾದ ಪರಿಸ್ಥಿತಿ ಬರುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT