ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha Election | ಉದ್ಯೋಗ ಸೃಷ್ಟಿಗೆ ಆದ್ಯತೆ: ಯದುವೀರ್‌ ಭರವಸೆ

ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಮತ ಯಾಚನೆ
Published 19 ಏಪ್ರಿಲ್ 2024, 7:26 IST
Last Updated 19 ಏಪ್ರಿಲ್ 2024, 7:26 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು– ಕೊಡಗು ಲೋಕಸಭಾ ಕ್ಷೇತ್ರವನ್ನು ನಿರುದ್ಯೋಗ ಮುಕ್ತವಾಗಿಸುವುದು ನನ್ನ ಗುರಿ’ ಎಂದು ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಕೃಷ್ಣರಾಜ ಕ್ಷೇತ್ರದ ಸುಣ್ಣದಕೇರಿಯಲ್ಲಿ ಗುರುವಾರ ರೋಡ್‌ ಶೋ ನಡೆಸಿ ಮತಯಾಚಿಸಿ ಅವರು ಮಾತನಾಡಿದರು.

‘ಎರಡೂ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡುತ್ತೇನೆ’ ಎಂದು ಭರವಸೆ ನೀಡಿದರು.

‘ವಿಕಸಿತ ಭಾರತದ ಸಂಕಲ್ಪದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕವಾಗಿ ದೇಶದ ಹೆಸರು ಬೆಳಗುವಂತೆ ಮಾಡಿದ್ದಾರೆ. ಸುಸ್ಥಿರ ಆರ್ಥಿಕತೆ ನಿರ್ಮಾಣ, ಡಿಜಿಟಲ್ ಇಂಡಿಯಾ, ರಕ್ಷಣಾ ವಲಯದಲ್ಲಿ ಸ್ವಾವಲಂಬನೆ, ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೋಘ ಯಶಸ್ಸು, ಸ್ವದೇಶಿ ಉತ್ಪನ್ನಗಳಿಗೆ ಮಾರುಕಟ್ಟೆ, ಮೇಕ್ ಇನ್ ಇಂಡಿಯಾ ಮೊದಲಾದವುಗಳ ಮೂಲಕ ಸಾಕಷ್ಟು ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.

‘ಕರ್ನಾಟಕದ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ನೀಡಲಾಗುವುದು ಎಂದು ಪ್ರಧಾನಿ ಭರವಸೆ ನೀಡಿದ್ದಾರೆ. ಈ ಲೋಕಸಭಾ ಕ್ಷೇತ್ರದಲ್ಲೂ ನವೋದ್ಯಮಗಳ ಸ್ಥಾಪನೆಗೆ ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದರು.

ಅಶೋಕಪುರಂನಲ್ಲಿ ಮಾತನಾಡಿದ ಯದುವೀರ್‌, ‘ಮೈಸೂರಿನಲ್ಲಿ ಪ್ರವಾಸೋದ್ಯಮವನ್ನು ಬೆಳೆಯುವಂತೆ ಮಾಡುವುದಕ್ಕಾಗಿ ಕೈಜೋಡಿಸಬೇಕು’ ಎಂದು ಕೋರಿದರು.

‘ಅಶೋಕಪುರಂ ಜನತೆಗೆ ಮತ್ತು ಅರಮನೆಗೆ ಅವಿನಾಭಾವ ಸಂಬಂಧವಿದೆ. ಅರಮನೆಗೆ ಬೆಂಕಿ ಬಿದ್ದಾಗ ಅಶೋಕಪುರಂನಿಂದ ನೀರನ್ನು ಹೊತ್ತು ತಂದು ಬೆಂಕಿ ನಂದಿಸುವ ಕೆಲಸ ಮಾಡಿದ್ದನ್ನು ಎಂದಿಗೂ ಮರೆಯಲಾಗದು. ಇಲ್ಲಿನ ಪೈಲ್ವಾನರು ಸೇರಿದಂತೆ ಅನೇಕರು ಇಂದಿಗೂ ನಂಟು ಹೊಂದಿದ್ದಾರೆ’ ಎಂದರು.

ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ‘ಉತ್ತಮ ಅಭ್ಯರ್ಥಿಯನ್ನು ಪಕ್ಷದ ವರಿಷ್ಠರು ನೀಡಿದ್ದಾರೆ. ಕೆ.ಆರ್.ಕ್ಷೇತ್ರದಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತಗಳು ಬಿಜೆಪಿಗೆ ಬರಲಿವೆ. ದೂರದೃಷ್ಟಿ ಹೊಂದಿರುವ ಯುವ ನಾಯಕನನ್ನು ಜನರು ಆಯ್ಕೆ ಮಾಡಬೇಕು’ ಎಂದು ಕೋರಿದರು.

ಅಶೋಕಪುರಂ ಉದ್ಯಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ದಿನದ ಪ್ರಚಾರ ಆರಂಭಿಸಿದರು. ಹಾರ್ಡ್ವಿಕ್ ಶಾಲೆಯ ಸಮೀಪದ ಗಣಪತಿ ದೇವಸ್ಥಾನದ ರಸ್ತೆಯಲ್ಲಿ ರೋಡ್‌ ಶೋ ನಡೆಸಿ ಮತ ಯಾಚಿಸಿದರು. ಸುಣ್ಣದಕೇರಿ ಮಲೆಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕಾಕರವಾಡಿ, ಕುರುಬರ ಬೀದಿಯಲ್ಲಿ ಮತ ಯಾಚಿಸಿದರು.

ರೋಡ್‌ ಶೋ ನಡೆಸಿದ ಯದುವೀರ್‌

ಜೆ.ಪಿ.ನಗರದ ಖಾಸಗಿ ಶಾಲೆಯಲ್ಲಿ ವಿವೇಕಾನಂದನಗರ ಜಟ್ಟಿ ಸಮುದಾಯ ಭವನದಲ್ಲಿ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡರು. ಬಳಿಕ ಬನುಮಯ್ಯ ವೃತ್ತದ ಗಣಪತಿ ದೇವಸ್ಥಾನ ಅಗ್ರಹಾರದ 101 ಗಣಪತಿ ದೇವಸ್ಥಾನದ ವೃತ್ತ ರಾಮಾನುಜ ರಸ್ತೆ ಕಂಸಾಳೆ ಮಹದೇವಯ್ಯ ವೃತ್ತದಲ್ಲಿ ರೋಡ್‌ ಶೋ ನಡೆಸಿದರು. ಬಲ್ಲಾಳ್ ವೃತ್ತದ ಬಳಿ ರಾಘವೇಂದ್ರಸ್ವಾಮಿ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕುರುಬರ ಬೀದಿಯಲ್ಲಿ ಜೆಡಿಎಸ್‌ ಮುಖಂಡ ಪ್ರಕಾಶ್ ಪ್ರಿಯದರ್ಶನ್ ಕುಟುಂಬದವರು ಯದುವೀರ್ ಪಾದ ತೊಳೆದು ಆರತಿ ಬೆಳಗಿ ಸ್ವಾಗತಿಸಿದರು. ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್ ಸಂಚಾಲಕ ಎ.ಹೇಮಂತಕುಮಾರ್ ಗೌಡ ವಕ್ತಾರರಾದ ಎಂ.ವಿ. ಮೋಹನ್ ಕೆ.ವಸಂತಕುಮಾರ್ ಕೆ.ದೇವರಾಜ್ ಮಹೇಶ್ ರಾಜೇ ಅರಸ್ ಮಾಜಿ ಮೇಯರ್‌ ಶಿವಕುಮಾರ್ ನಗರಪಾಲಿಕೆ ಮಾಜಿ ಸದಸ್ಯರಾದ ಶಾರದಮ್ಮ ಮ.ವಿ.ರಾಮಪ್ರಸಾದ್ ಬಿ.ವಿ.ಮಂಜುನಾಥ್ ಸುನಂದಾ ಪಾಲನೇತ್ರ ಸೀಮಾಪ್ರಸಾದ್ ಪಿ.ಟಿ.ಕೃಷ್ಣ ರವಿ ಕ್ಷೇತ್ರದ ಅಧ್ಯಕ್ಷ ಗೋಪಾಲರಾಜೇ ಅರಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಜೋಗಿ ಮಂಜು ಪ್ರಧಾನ ಕಾರ್ಯದರ್ಶಿ ಜಯರಾಮ್ ಮುಖಂಡರಾದ ಕೃಷ್ಣನಾಯಕ ವಿಜಯಕುಮಾರ್ ಶ್ರೀನಿವಾಸ್ ಸಾಥ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT