ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ನಾನೂ ಟಿಕೆಟ್ ಆಕಾಂಕ್ಷಿ, ಯತೀಂದ್ರಗೆ ಸಿಕ್ಕರೆ ಬೆಂಬಲ: ಎಂ. ಲಕ್ಷ್ಮಣ

ಲೋಕಸಭಾ ಟಿಕೆಟ್ ಬಗ್ಗೆ ಕೆಪಿಸಿಸಿ ವಕ್ತಾರ ಲಕ್ಷ್ಮಣ ಹೇಳಿಕೆ
Published 14 ಸೆಪ್ಟೆಂಬರ್ 2023, 6:09 IST
Last Updated 14 ಸೆಪ್ಟೆಂಬರ್ 2023, 6:09 IST
ಅಕ್ಷರ ಗಾತ್ರ

ಮೈಸೂರು: ‘ಲೋಕಸಭಾ ಚುನಾವಣೆಯಲ್ಲಿ ಮೈಸೂರು–ಕೊಡಗು ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ಗೆ ನಾನೂ ಪ್ರಬಲ ಆಕಾಂಕ್ಷಿ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಟಿಕೆಟ್ ನೀಡಿದರೆ ಎಲ್ಲರೂ ಮುಕ್ತ ಮನಸ್ಸಿನಿಂದ ಬೆಂಬಲಿಸುತ್ತೇವೆ’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿರುವ ಸುಶ್ರುತ್‌ ಗೌಡ ಯಾರೆಂದು ‌ಗೊತ್ತಿಲ್ಲ. ಪಕ್ಷಕ್ಕೆ ಅವರ ಕೊಡುಗೆ ಏನು? ಬ್ಯಾನರ್, ಕಟೌಟ್ ಹಾಕಿಕೊಳ್ಳುವವರಿಗೆಲ್ಲ ಟಿಕೆಟ್ ಸಿಗುವುದಿಲ್ಲ’ ಎಂದು ಹೇಳಿದರು.

‘ಸಂಸದ ಪ್ರತಾಪ ಸಿಂಹ ಅವರಿಗೆ ಆತಂಕ ಶುರುವಾಗಿರುವುದರಿಂದಲೇ ಕಂಡ ಕಂಡವರ ಕಾಲಿಗೆ ಬೀಳುತ್ತಿದ್ದಾರೆ. ಅವರು ಮುಂದಿನ ಚುನಾವಣೆಯಲ್ಲಿ 3 ಲಕ್ಷ ಮತಗಳ ಅಂತರದಿಂದ ಸೋಲುತ್ತಾರೆ. ಅವರೇನಾದರೂ ಗೆದ್ದರೆ ನಾನು ಊರನ್ನೇ ಬಿಡುತ್ತೇನೆ. ಬೇಕಿದ್ದರೆ ಅಫಿಡವಿಟ್ ಮಾಡಿಕೊಡುತ್ತೇನೆ. ಅಫಿಡವಿಟ್ ಮಾಡಿಕೊಡಲು ಅವರು ಸಿದ್ಧವಿದ್ದಾರೆಯೇ?’ ಎಂದು ಸವಾಲು ಹಾಕಿದರು.

ಕೇಂದ್ರದ ವ್ಯಾಪ್ತಿಯದ್ದು: ‘ಕಾವೇರಿ ವಿಷಯದಲ್ಲಿ ಪ್ರತಿಭಟಿಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್‌ನವರು ನಾಲ್ಕೂ ಜಲಾಶಯಗಳ ನಿಯಂತ್ರಣವು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕೇಂದ್ರದ ಜಲಶಕ್ತಿ ಸಚಿವಾಲಯದ ಅಡಿಯಲ್ಲಿದೆ’ ಎಂದು ತಿಳಿಸಿದರು.

‘ನಮ್ಮಲ್ಲಿ ನೀರಿಲ್ಲದೇ ಇರುವುದರಿಂದ ತಮಿಳುನಾಡಿಗೆ ನೀರು ಹರಿಸಲೇಬಾರದು ಎಂಬುದು ನಮ್ಮ ಒತ್ತಾಯವಾಗಿದೆ’ ಎಂದು ತಿಳಿಸಿದರು.

‘ಕಾವೇರಿ ಜಲಾನಯದ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ಹೊರತೆಗೆಯಬಹುದಾದ ನೀರಿನ ಪ್ರಮಾಣ 46 ಟಿಎಂಸಿ ಮಾತ್ರ. ಮುಂದಿನ ಮುಂಗಾರಿನವರೆಗೆ ಬೆಂಗಳೂರಿಗೆ 24 ಟಿಎಂಸಿ ನೀರು ಕುಡಿಯುವ ಉದ್ದೇಶಕ್ಕೆ ಪೂರೈಸಲು ಬೇಕು. ಇತರ 8 ಜಿಲ್ಲೆಗಳಿಗೆ 25 ಟಿಎಂಸಿ ಬೇಕು. ಕೃಷಿಗೆ 80 ಟಿಎಂಸಿ ಬೇಕು. ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸುವುದು ಹೇಗೆ? ಮುಂಗಾರು ವಿಫಲವಾಗಿರುವ ಬಗ್ಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಆದರೂ ತಂಡವನ್ನು ಕಳುಹಿಸಿಕೊಟ್ಟು ವಾಸ್ತವ ಪರಿಶೀಲಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿಲ್ಲ’ ಎಂದು ಹೇಳಿದರು.

‘ಪ್ರತಿಭಟನೆಗೆ ನಮ್ಮ ಬೆಂಬಲವಿದೆ. ಪ್ರತಿಭಟಿಸಬೇಕಿರುವುದು ಕೇಂದ್ರದ ವಿರುದ್ಧವೇ ಹೊರತು ರಾಜ್ಯದ ವಿರುದ್ಧವಲ್ಲ. ಬಿಜೆಪಿಯ 25 ಸಂಸದರು ದನಿ ಎತ್ತುತ್ತಿಲ್ಲವೇಕೆ? ಮಂಡ್ಯ ಸಂಸದೆ ಸುಮಲತಾ ಆ ಕ್ಷೇತ್ರದ ಜನರ ಬಗ್ಗೆ ಕಾಳಜಿ‌ ವಹಿಸುತ್ತಿಲ್ಲವೇಕೆ?’ ಎಂದು ಕೇಳಿದರು.

ಪಕ್ಷದ ನಗರದ ಸಮಿತಿಯ ಅಧ್ಯಕ್ಷ ಆರ್.‌ ಮೂರ್ತಿ, ಮುಖಂಡರಾದ ಬಿ.ಎಂ. ರಾಮು, ಗಿರೀಶ್ ಹಾಗೂ ವಕ್ತಾರ ಮಹೇಶ್ ಇದ್ದರು.

ಲೋಕಸಭೆ ಚುನಾವಣೆ ಮುಗಿಯುವವರೆಗೂ ನಳೀನ್‌ಕುಮಾರ್‌ ಕಟೀಲ್‌ ಅವರನ್ನೇ ಬಿಜೆಪಿ ರಾಜ್ಯ ಘಟಕದ ಆಧ್ಯಕ್ಷರನ್ನಾಗಿ ಮುಂದುವರಿಸಬೇಕು ಎಂದು ಕೈಮುಗಿದು ಮನವಿ ಮಾಡುತ್ತೇನೆ.
ಎಂ. ಲಕ್ಷ್ಮಣ ಕೆಪಿಸಿಸಿ ವಕ್ತಾರ .

‘ಸಂಸದರು ಧಮಕಿ ಹಾಕುವುದು ಬಿಡಲಿ’

ಮಹಿಷ ದಸರಾ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಎಲ್ಲರಿಗೂ ಸ್ವಾತಂತ್ರ್ಯ ಇದೆ. ಯಾರು ಏನು ಬೇಕಾದರೂ ಆಚರಣೆ ಮಾಡಬಹುದು. ಕಾಂಗ್ರೆಸ್ ಸರ್ಕಾರದಲ್ಲಿ ಅದಕ್ಕೆ ಅವಕಾಶವಿದೆ. ಇದನ್ನು ಪ್ರಶ್ನಿಸಲು ಜಿಲ್ಲಾಡಳಿತಕ್ಕೆ ಧಮಕಿ ಹಾಕಲು ಪ್ರತಾಪ ಸಿಂಹ ಯಾರು? ನಮ್ಮ ಸರ್ಕಾರದಲ್ಲಿ ಅವರ ಆಟ ನಡೆಯುವುದಿಲ್ಲ’ ಎಂದು ತಿರುಗೇಟು ನೀಡಿದರು. ‘ಮಹಿಷಾಸುರ ಪ್ರತಿಮೆಯನ್ನು ಚಾಮುಂಡಿ ಬೆಟ್ಟದ ಪ್ರವೇಶ ದ್ವಾರದಲ್ಲೇ ಹಾಕಿರುವುದೇಕೆ? ಅವನೇನು ಭಯೋತ್ಪಾದಕರಾ?’ ಹಿಂದೆ ನಡೆಯುತ್ತಿದ್ದಂತೆಯೇ ನಡೆಯಲಿ.‌ ಯಾರೂ ಚಾಮುಂಡೇಶ್ವರಿ ವಿರುದ್ಧ ಮಾತನಾಡುತ್ತಿಲ್ಲವಲ್ಲ? ಆಚರಣೆ ಮಾಡುವುದನ್ನು ತಡೆಯಬಾರದು. ಘರ್ಷಣೆ ಗಲಾಟೆಗೆ ಅವಕಾಶ ಕೊಡಬಾರದು. ಸಂಸದರು ತೊಡೆ ತಟ್ಟಿ ಸವಾಲು ಹಾಕುವುದನ್ನೆಲ್ಲ ನಿಲ್ಲಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT