ಮೈಸೂರು: ‘ಶತಮಾನದ ಹಿಂದೆಯೇ ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಸಿಗಬೇಕೆಂದು ಮೈಸೂರು ಸಂಸ್ಥಾನದಲ್ಲಿ ಮಹಿಳಾ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಯೋಜನೆ ರೂಪಿಸಿದವರು ತಾತಯ್ಯನವರು’ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಸ್ಮರಿಸಿದರು.
ಮಗ್ಗೆ ವೆಂಕಟಕೃಷ್ಣಯ್ಯ ತಾತಯ್ಯ ಅವರ 180ನೇ ಜಯಂತಿ ಅಂಗವಾಗಿ ನಗರಪಾಲಿಕೆ ವತಿಯಿಂದ ಅನಾಥಾಲಯ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ನಗರ ಬಸ್ ನಿಲ್ದಾಣದ ಮುಂಭಾಗದ ತಾತಯ್ಯ ಉದ್ಯಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮೈಸೂರು ಸಂಸ್ಥಾನದ ಮಹಿಳೆಯರಿಗೆ ಕಡ್ಡಾಯ ಶಿಕ್ಷಣ ಸಿಗಬೇಕೆಂದು, ಸಮಾಜದಲ್ಲಿ ಸಮಾನತೆ, ಮಹಿಳಾ ಪ್ರಾತಿನಿಧ್ಯ ಹಾಗೂ ಮೌಲ್ಯಯುತ ವಾತಾವರಣ ಹೆಚ್ಚಾಗಲು ಶೈಕ್ಷಣಿಕ–ಸಾಂಸ್ಕೃತಿಕ ಯೋಜನೆಯ ಮುನ್ನುಡಿ ಬರೆದರು’ ಎಂದರು.
‘ಮಹಾತ್ಮ ಗಾಂಧೀಜಿ ಅವರು ಮೈಸೂರಿಗೆ ಬಂದಿದ್ದಾಗ ತಾತಯ್ಯ ಅವರನ್ನ ದಿ ಓಲ್ಡ್ ಮ್ಯಾನ್ ಆಫ್ ಮೈಸೂರ್ ಎಂಪೈರ್ (ವೃದ್ಧ ಪಿತಾಮಹ) ಎಂದು ಬಣ್ಣಿಸಿದ್ದರು. ತಾತಯ್ಯನವರು ಸ್ವತಃ ಶಿಕ್ಷಕರೇ ಆಗಿದ್ದರು. ಅವರು ಸುಬ್ಬರಾಯನಕೆರೆ ಪಕ್ಕ ಕಟ್ಟಿದ ಅನಾಥಾಲಯ ಮತ್ತು ಚಾಮುಂಡಿಪುರಂನಲ್ಲಿ ದಾನ ನೀಡಿದ ಬಾಲಬೋಧಿನಿ ಶಾಲೆಯಲ್ಲಿ ಶಿಕ್ಷಣ ಪಡೆದ ಸಹಸ್ರಾರು ಮಂದಿ ವಿಶ್ವದ ಹಲವೆಡೆ ಉನ್ನತ ಸ್ಥಾನದಲ್ಲಿರುವುದು ಮೈಸೂರಿಗೆ ಹೆಮ್ಮೆಯ ವಿಚಾರ’ ಎಂದು ಹೇಳಿದರು.
ಅನಾಥಾಲಯದ ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಸುಂದರೇಶನ್, ‘ಮುಂದಿನ ವರ್ಷದಿಂದ ಪುರಭವನದಲ್ಲಿ ತಾತಯ್ಯನವರ ಜಯಂತಿ ಆಚರಿಸಲು ನಗರಪಾಲಿಕೆ ಹಾಗೂ ಜಿಲ್ಲಾಡಳಿತ ಮುಂದಾಗಬೇಕು. ಸಾಧಕರನ್ನು ಗುರುತಿಸಿ ತಾತಯ್ಯ ಪ್ರಶಸ್ತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಮುಖಂಡ ಕೆ.ರಾಘುರಾಂ ವಾಜಪೇಯಿ, ‘ತಾತಯ್ಯ ಉದ್ಯಾನದಲ್ಲಿ ವಾಚನಾಲಯ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಪುಸ್ತಕ ಭಂಡಾರ ಸ್ಥಾಪನೆಗೆ ನಗರಪಾಲಿಕೆ ಮುಂದಾಗಬೇಕು’ ಎಂದು ಕೋರಿದರು.
ನಗರಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್, ವಲಯ ಉಪ ಆಯುಕ್ತೆ ಪ್ರಭಾ, ಎಂಜಿನಿಯರ್ ತೇಜಸ್ವಿನಿ, ಜೋಗಿ ಮಂಜು, ಅಜಯ್ ಶಾಸ್ತ್ರಿ, ವಿಕ್ರಂ ಅಯ್ಯಂಗಾರ್, ಹೇಮಲತಾ, ಸೌಭಾಗ್ಯಮೂರ್ತಿ, ಲಕ್ಷ್ಮಿ, ಶಾಂತರಾಜು, ಕೃಷ್ಣಪ್ಪ, ಸತೀಶ್ ಭಟ್, ಮಂಜುನಾಥ ಹೆಗ್ಡೆ, ಶ್ರೀಧರ್, ರಂಗನಾಥ್, ವೆಂಕಟೇಶ್ ಪಾಲ್ಗೊಂಡಿದ್ದರು.
ದೇಶಪ್ರೇಮ ಮೂಡಿಸಿದ ತಾತಯ್ಯ: ತಾತಯ್ಯ ಅವರ ಪ್ರತಿಮೆಗೆ ಶಾಸಕ ಕೆ.ಹರೀಶ್‌ಗೌಡ ಮಾಲಾರ್ಪಣೆ ಮಾಡಿದರು.
ನಂತರ ಮಾತನಾಡಿ, ‘ಮೈಸೂರು ಸಂಸ್ಥಾನದ ಆಡಳಿತಕ್ಕೆ ಮಹಾರಾಜರೊಂದಿಗೆ ಮಾರ್ಗದರ್ಶಕರಾಗಿ ಮಹತ್ವದ ಪಾತ್ರ ವಹಿಸಿದ್ದವರು ರಾಜಗುರು ತಾತಯ್ಯರವರು, ಪತ್ರಿಕಾ ರಂಗದ ಭೀಷ್ಮರಾಗಿ ದೇಶಪ್ರೇಮವನ್ನೂ ಮೂಡಿಸಿದರು’ ಎಂದು ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.