ಹುಣಸೂರು: ವನ್ಯಜೀವಿ ಹಾವಳಿ ತಡೆಗಟ್ಟಲು ಕ್ರಮ

ಹುಣಸೂರು: ‘ಕಾಡಂಚಿನ ಗ್ರಾಮಗಳಲ್ಲಿ ವನ್ಯಪ್ರಾಣಿ ಹಾವಳಿ ತಡೆಗಟ್ಟಲು ರೈಲ್ವೆ ಹಳಿ ತಡೆಗೋಡೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
ತಾಲ್ಲೂಕಿನ ಕಾಡಂಚಿನ ಗ್ರಾಮ ನೇರಳಕುಪ್ಪೆಯಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ’ ಕಾರ್ಯ ಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಉತ್ತರಿಸಿದರು.
‘ನಾಗರಹೊಳೆ ಅರಣ್ಯದಂಚಿನಲ್ಲಿ ಆನೆ ಮತ್ತು ಇತರೆ ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಜನರು ಭೀತಿಯಲ್ಲೇ ಜೀವನ ನಡೆಸುತ್ತಿರುವ ಬಗ್ಗೆ ಮಾಹಿತಿ ಇದೆ. ಅರಣ್ಯ ಇಲಾಖೆ ಕೈಗೊಂಡಿರುವ ರೈಲ್ವೆ ಹಳಿ ತಡೆಗೋಡೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅದನ್ನು ಪೂರ್ಣಗೊಳಿಸಲು ಇಲಾಖೆ ಅಧಿಕಾರಿ ಗಳೊಂದಿಗೆ ಚರ್ಚಿಸುತ್ತೇನೆ’ ಎಂದು ತಿಳಿಸಿದರು.
‘ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ನಿರ್ಮಿಸಬೇಕು’ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
‘ಕೆ.ಜಿ.ಹಬ್ಬನಕುಪ್ಪೆ ಕೆರೆ ಕೋಡಿ, ಏರಿಯನ್ನು ದುರಸ್ತಿಗೊಳಿಸಬೇಕು. ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕು’ ಎಂದು ಜಿ.ಪಂ. ಅಧಿಕಾರಿಗಳಿಗೆ ಸೂಚಿಸಿದರು.
ಪಹಣಿ ನೀಡಿ: ‘ಆದಿವಾಸಿ ಗಿರಿಜನರಿಗೆ ಕಂದಾಯ ಇಲಾಖೆ ಮಂಜೂರು ಮಾಡಿರುವ ಕೃಷಿ ಭೂಮಿಗೆ ಪಹಣಿ ನೀಡದ ಕಾರಣ ಸರ್ಕಾರಿ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಪ್ರಕರಣವನ್ನು ಕಂದಾಯ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು’ ಎಂದು ದಸಂಸ ಮುಖಂಡ ಕೆಂಪರಾಜು, ನಿಂಗ ರಾಜ್ ಮಲ್ಲಾಡಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಆದಿವಾಸಿಗಳಿಗೆ ಭೂಮಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಸಿದ್ಧಪಡಿಸಿ ಒಂದು ವಾರದೊಳಗೆ ವಿತರಿಸಬೇಕು. ಈ ಸಂಬಂಧ ಉಪ ವಿಭಾಗಾಧಿಕಾರಿ ಗಮನಹರಿಸ ಬೇಕು’ ಎಂದು ಸೂಚಿಸಿದರು.
ಗ್ರಾಮದ ಪ್ರೌಢಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಬಸ್ ವ್ಯವಸ್ಥೆ, ಇಂಗ್ಲಿಷ್ ಮತ್ತು ಕಂಪ್ಯೂಟರ್ ಶಿಕ್ಷಕರ ನಿಯೋಜನೆ, ಶೌಚಾಲಯ ಮತ್ತು ತರಗತಿ ಕೊಠಡಿ ನಿರ್ಮಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು.
ಶಾಸಕ ಎಚ್.ಪಿ.ಮಂಜುನಾಥ್ ಸರ್ಕಾರದ ವಿವಿಧ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ವೇದಿಕೆಯಲ್ಲಿ ನೇರಳಕುಪ್ಪೆ ಪಂಚಾಯಿತಿ ಅಧ್ಯಕ್ಷ ಉದಯನ್, ಉಪಾಧ್ಯಕ್ಷೆ ಜವರಮ್ಮ ಇದ್ದರು.
ಮನೆ ಪರಿಹಾರ ವಿತರಿಸಲು ಆಗ್ರಹ
‘ಮೂರು ವರ್ಷಗಳ ಹಿಂದೆ ಅತಿವೃಷ್ಟಿಯಿಂದಾಗಿ ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಅನೇಕ ಮನೆಗಳು ಕುಸಿದಿದ್ದು, ಸಂತ್ರಸ್ತರಿಗೆ ಸರ್ಕಾರದಿಂದ ಬರುವ ₹5 ಲಕ್ಷ ಪರಿಹಾರವನ್ನು ಸಮರ್ಪಕವಾಗಿ ವಿತರಿಸಿಲ್ಲ. ಇದರಿಂದ ಸಂತ್ರಸ್ತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರಿಗೆ ಸೂರು ಒದಗಿಸಬೇಕು’ ಎಂದು ನೇರಳಕುಪ್ಪೆ ಮುಖಂಡ ಮಹದೇವ್ ಆಗ್ರಹಿಸಿದರು.
***
‘ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಸವಲತ್ತು ಸಿಗುತ್ತಿರಲಿಲ್ಲ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕುಟುಂಬದ ನಾಲ್ವರಿಗೆ ಆಧಾರ್ ಕಾರ್ಡ್ ಸಿಕ್ಕಿದೆ.
–ಕರಿಯ, ನೇರಳಕುಪ್ಪೆ ಬಿ ಹಾಡಿ ನಿವಾಸಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.