ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಸೋರುತಿಹುದು ಮಿನಿ ವಿಧಾನಸೌಧ!

ನಿರ್ವಹಣೆ ಕೊರತೆಯಿಂದ ತೊಂದರೆ, ನೌಕರರು ಹಾಗೂ ಜನರಿಗೆ ಆತಂಕ
Published 14 ಜೂನ್ 2024, 23:58 IST
Last Updated 14 ಜೂನ್ 2024, 23:58 IST
ಅಕ್ಷರ ಗಾತ್ರ

ಮೈಸೂರು: ಕೆಲಸದ ದಿನಗಳಲ್ಲಿ ನೂರಾರು ಮಂದಿ ಬಂದು ಹೋಗುವ ಇಲ್ಲಿನ ನಜರ್‌ಬಾದ್‌ನಲ್ಲಿನ ಮಿನಿ ವಿಧಾನಸೌಧ ಮಳೆ ಬಂದಾಗ ಸೋರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಇಲ್ಲಿ ತಾಲ್ಲೂಕು ತಹಶೀಲ್ದಾರ್‌ ಸೇರಿದಂತೆ ವಿವಿಧ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಬಹಳಷ್ಟು ಮಂದಿ ನೌಕರರು, ಸಿಬ್ಬಂದಿ ಇದ್ದಾರೆ. ವಿವಿಧ ಕೆಲಸಗಳಿಗಾಗಿ ತಾಲ್ಲೂಕಿನ ವಿವಿಧೆಡೆಯಿಂದ ನೂರಾರು ಮಂದಿ ಬರುತ್ತಾರೆ. ಆದರೆ, ನಿರ್ವಹಣೆಯ ಕೊರತೆಯಿಂದಾಗಿ ಅಲ್ಲಲ್ಲಿ ಸೋರುತ್ತಿದೆ. ಮಳೆ ಬಂದಾಗ ಅದರಲ್ಲೂ ಜೋರು ಮಳೆ ಸುರಿದಾಗ ನೌಕರರು ಆತಂಕದಲ್ಲೇ ಕೆಲಸ ನಿರ್ವಹಿಸಬೇಕಾದ ದುಃಸ್ಥಿತಿ ಇದೆ. ಇದು, ಸಾರ್ವಜನಿಕರ ಕೆಲಸಗಳು ವಿಳಂಬ ಆಗುವುದಕ್ಕೂ ಕಾರಣವಾಗಿದೆ.

ನೀರು ಸೋರುವುದರಿಂದ ವಿದ್ಯುತ್‌ ಅವಘಡವೂ ನಡೆದಿವೆ. ವಿದ್ಯುತ್‌ ದೀಪ, ಫ್ಯಾನ್‌ ಹಾಕಲು ಸ್ವಿಚ್‌ ಆನ್‌ ಮಾಡಲು ಹೋದಾಗ ಕೆಲವರಿಗೆ ವಿದ್ಯುತ್‌ ಪ್ರವಹಿಸಿದ ಉದಾಹರಣೆಯೂ ಇದೆ. ಇಷ್ಟಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ದುರಸ್ತಿಗೆ ಜಿಲ್ಲಾಡಳಿತದಿಂದ ಯಾವುದೇ ಕ್ರಮವನ್ನೂ ಕೈಗೊಳ್ಳದಿರುವುದು ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ. ಮಹತ್ವದ್ದಾದ ಕಂದಾಯ ದಾಖಲೆಗಳನ್ನು ಕಾಪಾಡಿಕೊಳ್ಳುವ ಸವಾಲು ಅವರಿಗೆ ಎದುರಾಗಿದೆ.

ಪ್ಲಾಸ್ಟಿಕ್‌ ಚೀಲ ಆಸರೆ:

ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಸೇರಿದಂತೆ ವಿವಿಧೆಡೆ ನೌಕರರು, ಕೆಲಸ ಮುಗಿಸಿ ಹೋಗುವಾಗ ಕಂಪ್ಯೂಟರ್‌, ಪ್ರಿಂಟರ್‌, ಸ್ಕ್ಯಾನರ್‌ ಮೊದಲಾದ ಎಲೆಕ್ಟ್ರಾನಿಕ್‌ ಉಪಕರಣಗಳಿಗೆ ಪ್ಲಾಸ್ಟಿಕ್‌ ಚೀಲವನ್ನು ಮುಚ್ಚಿ ಹೋಗುವುದು ಕಂಡುಬರುತ್ತಿದೆ.

‘ಕಟ್ಟಡ ಸೋರುವುದರಿಂದಾಗಿ, ರಾತ್ರಿ ಮಳೆ ನೀರು ಬಿದ್ದು ಹಾಳಾಗುವುದನ್ನು ತಪ್ಪಿಸಲು ಈ ಉಪಾಯ ಮಾಡುತ್ತಿದ್ದೇವೆ. ಕೆಲವೊಮ್ಮೆ ನೀರು ಬಿದ್ದು ಕಂಪ್ಯೂಟರ್‌ ಹಾಳಾಗಿರುವುದೂ ಇದೆ. ನೀರು ಸೋರಿಕೆ ತಡೆಗಟ್ಟದಿದ್ದರೆ ದಾಖಲೆಗಳು ಹಾಗೂ ಕಡತಗಳಿಗೆ ಹಾನಿಯಾಗುವ ಸಂಭವವಿರುತ್ತದೆ. ನಮ್ಮ ಸುರಕ್ಷತೆಯೂ ಮುಖ್ಯವಾಗುತ್ತದೆ. ಮುಂದಾಗಬಹುದಾದ ಅವಘಡವನ್ನು ತ‍ಪ್ಪಿಸಲು ಅಧಿಕಾರಿಗಳು ತುರ್ತಾಗಿ ಕ್ರಮ ಕೈಗೊಳ್ಳಬೇಕು’ ಎನ್ನುವುದು ನೌಕರರ ಕೋರಿಕೆಯಾಗಿದೆ.

ಮಿನಿವಿಧಾನಸೌಧದ ಮೇಲೆ ಮಣ್ಣು ತುಂಬಿಕೊಂಡಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಲ್ಲ. ಇದರಿಂದಾಗಿ ತೊಂದರೆಯಾಗಿದೆ ಎನ್ನಲಾಗುತ್ತಿದೆ. ಆವರಣದಲ್ಲೂ ನಿರ್ವಹಣೆ ಕೊರತೆ ಕಂಡುಬರುತ್ತಿದೆ. ಸ್ವಚ್ಛತೆಯ ಕೆಲಸವೂ ಸಮರ್ಪಕವಾಗಿ ನಡೆಯುತ್ತಿಲ್ಲ.

ಈ ಕಚೇರಿ ಅವ್ಯವಸ್ಥೆಯ ಆಗರ:

ಮಿನಿ ವಿಧಾನಸೌಧ ಕಟ್ಟಡದ 2ನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 206ರಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ಅದು ಅವ್ಯವಸ್ಥೆಯ ಆಗರವಾಗಿದೆ. ಅಲ್ಲಿ 70 ನೌಕರರು ಇದ್ದಾರೆ. ಆದರೆ, ಇರುವುದು ಎರಡು ಕೊಠಡಿ ಮಾತ್ರ! ಇದರಿಂದಾಗಿ ಇರುವ ನೌಕರರೆಲ್ಲರೂ ಕುಳಿತುಕೊಂಡು ಕೆಲಸ ಮಾಡುವುದಕ್ಕೆ ಜಾಗವೇ ಇಲ್ಲದಂತಾಗಿದೆ. ಒಬ್ಬರು ಕುಳಿತರೆ ಮತ್ತೊಬ್ಬರು ನಿಂತುಕೊಂಡೇ ವ್ಯವಹರಿಸಬೇಕಾದ ಪರಿಸ್ಥಿತಿ ಇದೆ.

ಎರಡು ಕೊಠಡಿಗಳಲ್ಲಿ ಒಂದು ಕೊಠಡಿ ಮಳೆ ಬಂದರೆ ಸೋರುತ್ತದೆ. ಈ ಕೊಠಡಿಯಲ್ಲಿರುವ ಕಂಪ್ಯೂಟರ್‌ಗಳನ್ನು ಮಳೆ ನೀರಿನಿಂದ ರಕ್ಷಿಸಲು ಪ್ಲಾಸ್ಟಿಕ್ ಚೀಲದಿಂದ ಮುಚ್ಚಿಡಲಾಗುತ್ತಿದೆ. ಮಳೆ ಬಂದಾಗ ಆಗಾಗ ವಿದ್ಯುತ್ ಶಾರ್ಟ್‌ ಸರ್ಕಿಟ್‌ ಸಂಭವಿಸುತ್ತಿದೆ. ಹಲವು ನೌಕರರಿಗೆ ಆಗಾಗ ಶಾಕ್‍ನ ಅನುಭವವಾಗಿದೆ. ಹಾಗಾಗಿ ಭೀತಿಯಲ್ಲೇ ಅವರು ಕಾರ್ಯನಿರ್ವಹಿಸುವಂತಾಗಿದೆ. ಈ ಕಾರಣಗಳಿಂದಾಗಿ ಸಾರ್ವಜನಿಕರ ಕೆಲಸಗಳನ್ನು ಸಕಾಲದಲ್ಲಿ ಮಾಡಲು ಕಷ್ಟವಾಗುತ್ತಿದೆ!

ಪ್ರತ್ಯೇಕ ಕಟ್ಟಡದ ಅಗತ್ಯ

ಮಿನಿ ವಿಧಾನಸೌಧದಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸ್ಥಳಾವಕಾಶದ ಕೊರತೆ ಹೆಚ್ಚಿದೆ. ಸರ್ಕಾರಿ ಭೂಮಾಪಕರು ಮೇಲ್ವಿಚಾರಕರು ಹೊರಗುತ್ತಿಗೆ ನೌಕರರು ಖಾಸಗಿ ಪರವಾನಗಿ ಭೂಮಾಪಕರು ಕೆಲಸ ಮಾಡುತ್ತಾರೆ. ಆದ್ದರಿಂದ ಪ್ರತ್ಯೇಕವಾಗಿ ಸುಸಜ್ಜಿತವಾದ ಕಚೇರಿಗೆ ಪ್ರತ್ಯೇಕ ಕಟ್ಟಡ ನಿರ್ಮಿಸಿಕೊಡಬೇಕು ಅಥವಾ ಸಾಕಷ್ಟು ಸ್ಥಳಾವಕಾಶ ಇರುವ ಕಡೆಗೆ ಕಚೇರಿಯನ್ನು ಸ್ಥಳಾಂತರಿಸಬೇಕು. ಈ ಮೂಲಕ ನಾವು ನೆಮ್ಮದಿಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎನ್ನುವುದು ನೌಕರರ ಮನವಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT