ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ಸಮಿತಿ ರದ್ದು ಚಿಂತನೆ: ಮಹದೇವಪ್ಪ

Published 7 ಜುಲೈ 2024, 14:23 IST
Last Updated 7 ಜುಲೈ 2024, 14:23 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಹಾಲಿ ಇರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರದ್ದುಪಡಿಸಲು ಚಿಂತನೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರಕವಾಗಿ ಸ್ಪಂದಿಸಿದ್ದಾರೆ’ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ತಿಳಿಸಿದರು.

‘ಮುಡಾದ ಈಗಿನ ಸಮಿತಿಯಲ್ಲಿ 13ಕ್ಕೂ ಹೆಚ್ಚು ಜನಪ್ರತಿನಿಧಿಗಳ ಜೊತೆಗೆ ಅಧಿಕಾರಿಗಳೂ ಇದ್ದಾರೆ. ಹೆಚ್ಚು ಜನರ ಬದಲಿಗೆ ಈ ಹಿಂದೆ ಇದ್ದಂತೆ 3–4 ಜನರ ಸಮಿತಿಯಷ್ಟೇ ಇರಲಿ ಎಂದು ಸಲಹೆ ನೀಡಿದ್ದೇನೆ’ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮುಡಾದಲ್ಲಿ ಶೇ 50-50 ಅನುಪಾತದಲ್ಲಿ ಬದಲಿ ನಿವೇಶನ ಪಡೆದವರ ಪಟ್ಟಿ ಬಿಡುಗಡೆ ಮಾಡಲಾಗುವುದು. ಯಾವ ಪಕ್ಷದವರೇ ಇರಲಿ, ಅಧಿಕಾರಿ ಇರಲಿ, ಪ್ರಭಾವಿ ಇರಲಿ. ಅವರ ಪಟ್ಟಿಯನ್ನು ಸಾರ್ವಜನಿಕರಿಗೆ ತಿಳಿಯುವಂತೆ ಜಾಹೀರಾತು ಮೂಲಕ ಬಹಿರಂಗಪಡಿಸಲಾಗುವುದು’ ಎಂದರು.

‘ಕೆಸರೆ ಗ್ರಾಮದ ಸರ್ವೆ ನಂ.464ರ 3 ಎಕರೆ 16 ಗುಂಟೆ ಜಮೀನನ್ನು 1985ರಲ್ಲಿ ಜವರ ಎಂಬುವರು ಜಿಲ್ಲಾಧಿಕಾರಿಯಿಂದ ಹರಾಜಿನಲ್ಲಿ ₹100ಕ್ಕೆ ಖರೀದಿಸಿದ್ದಾರೆ. ನಂತರದಲ್ಲಿ ಈ ಜಮೀನು ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಅವರಿಗೆ ಹಾಗೂ ಅವರಿಂದ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ವರ್ಗಾವಣೆ ಆಗಿದೆ. ಹೀಗಾಗಿ ಇದು ದಲಿತ ಸಮುದಾಯಕ್ಕೆ ಸರ್ಕಾರ ನೀಡಿದ ‘ಗ್ರ್ಯಾಂಟ್ ಲ್ಯಾಂಡ್’ ಅಲ್ಲ. ಪಿಟಿಸಿಎಲ್‌ ಕಾಯ್ದೆ ಅಡಿ ಬರುವುದಿಲ್ಲ’ ಎಂದು ಸ್ಪಷ್ಟನೆ ನೀಡಿದರು. ಪಾರ್ವತಿ ಅವರಿಗೆ ವಿಜಯನಗರದಲ್ಲಿ ನಿವೇಶನ ನೀಡಿರುವುದನ್ನು ಸಮರ್ಥಿಸಿಕೊಂಡರು.

ಪತ್ರಕರ್ತರ ಮೇಲೆ ಸಿಟ್ಟು:

‘ಮುಡಾ ಅಕ್ರಮವನ್ನು ಸಿಬಿಐಗೆ ವಹಿಸಬೇಕು’ ಎಂಬ ಪತ್ರಕರ್ತರ ಪ್ರಶ್ನೆಗೆ ಸಿಟ್ಟಾದ ಮಹದೇವಪ್ಪ, ‘ಇಲಿ ಹೋಯಿತು ಎಂದರೂ ಸಿಬಿಐಗೆ ಹಾಕಿ, ಕೋತಿ ಹೋಯಿತು ಎಂದರೂ ಸಿಬಿಐಗೆ ಹಾಕಿ ಅಂತ ಹೇಳುವುದೇಕೆ? ನಮ್ಮ ನೆಲದ ಪೊಲೀಸರ ಮೇಲೆ ನಂಬಿಕೆ ಇಲ್ಲವೇ’ ಎಂದು ಮರು ಪ್ರಶ್ನಿಸಿದರು.

‘ಬಿಜೆಪಿಯವರಿಗೆ ಏಕಾಏಕಿ ಸಿಬಿಐ ಮೇಲೆ ಪ್ರೀತಿ ಬಂದಿದೆ. ಅವರು ಅಧಿಕಾರದಲ್ಲಿದ್ದಾಗ ಎಷ್ಟು ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದರು?’ ಎಂದು ಕೇಳಿದರು.

ಡಾ. ಎಚ್.ಸಿ. ಮಹದೇವಪ್ಪ
ಪ್ರಜಾವಾಣಿ ಚಿತ್ರ.
ಡಾ. ಎಚ್.ಸಿ. ಮಹದೇವಪ್ಪ ಪ್ರಜಾವಾಣಿ ಚಿತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT