ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ: ಆ ‘1’ಕ್ಕಾಗಿ 11 ಮಂದಿ ಪೈಪೋಟಿ!

Published 28 ಮೇ 2024, 7:36 IST
Last Updated 28 ಮೇ 2024, 7:36 IST
ಅಕ್ಷರ ಗಾತ್ರ

ಮೈಸೂರು: ವಿಧಾನಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯು ವಿಧಾನಸಭೆ, ಲೋಕಸಭೆ ಚುನಾವಣೆಯಂತೆ ಇರುವುದಿಲ್ಲ. ಇಲ್ಲಿ ಅಭ್ಯರ್ಥಿಗಳ ಹೆಸರಿನ ಮುಂದೆ ಯಾವುದೇ ಚಿಹ್ನೆ ಇರುವುದಿಲ್ಲ. ಪ್ರಾಶಸ್ತ್ಯದ ಮತಗಳ ಮೇಲೆ ಗೆಲುವನ್ನು ನಿರ್ಧರಿಸಲಾಗುತ್ತದೆ. ಹೀಗಾಗಿ, ಪ್ರಥಮ ಪ್ರಾಶಸ್ತ್ಯದ ಮತಕ್ಕಾಗಿ ಅಂದರೆ ತಮ್ಮ ಹೆಸರಿನ ಮುಂದೆ ಮತದಾರರು ‘1’ ಎಂದು ಬರೆಯಲೆಂದು (ನಮಗಷ್ಟೇ ಬರೆಯಲೆಂದೂ) ಅಭ್ಯರ್ಥಿಗಳು ಬಯಸುತ್ತಿದ್ದಾರೆ.

ಕ್ಷೇತ್ರದಲ್ಲಿ ಪ್ರಮುಖ ಪಕ್ಷ ಕಾಂಗ್ರೆಸ್‌ನ ಮರಿತಿಬ್ಬೇಗೌಡ, ಜೆಡಿಎಸ್‌–ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ, ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್‌, ಪಕ್ಷೇತರ ಅಭ್ಯರ್ಥಿ ಕೆ.ಸಿ. ಪುಟ್ಟಸಿದ್ದಶೆಟ್ಟಿ ಸೇರಿದಂತೆ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರಥಮ ಪ್ರಾಶಸ್ತ್ಯದ ಮತ ಗಳಿಸುವುದೇ ಅವರೆಲ್ಲರ ಗುರಿ. ಅದಕ್ಕಾಗಿಯೇ ಮತದಾರರ ಮನವೊಲಿಸಿಕೊಳ್ಳುವ ಕಸರತ್ತುಗಳನ್ನು ನಡೆಸುತ್ತಿದ್ದಾರೆ.

ಹೀಗಾದರೆ ಗೆಲುವಿನ ಹಾದಿ ಸುಗಮ:

ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಭಾರಿ ಅಂತರ ಇದ್ದಲ್ಲಿ ಮಾತ್ರ ಅಭ್ಯರ್ಥಿಯು ಗೆಲುವಿನ ದಡವನ್ನು ತಲುಪುವುದು ಸುಲಭವಾಗುತ್ತದೆ. ಇಲ್ಲದಿದ್ದರೆ ಕಡಿಮೆ ಮತ ಪಡೆದ ಅಭ್ಯರ್ಥಿಯನ್ನು ಹೊರ ಹಾಕುವ, ಆತ ಪಡೆದ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಹಂಚುವ ಪ್ರಕ್ರಿಯೆಯು ಆರಂಭವಾಗುತ್ತದೆ. ಆ ಬೆಳವಣಿಗೆಯಲ್ಲಿ ಯಾರ ಕೈಬೇಕಾದರೂ ಮೇಲಾಗಬಹುದು. ಎಣಿಕೆಗೆ ಹೆಚ್ಚಿನ ಸಮಯವೂ ಬೇಕಾಗಬಹುದು. ಹಿಂದಿನ ಕೆಲವು ಚುನಾವಣೆಗಳಲ್ಲಿ ಆ ‘ಸರ್ಕಸ್‌’ ನಡೆದಿದೆ. ಆದ್ದರಿಂದ ‘ನಮಗೆ ಮಾತ್ರವೇ ಪ್ರಾಶಸ್ತ್ಯದ (1) ಮತ ಕೊಡಿ ಉಳಿದವರಿಗೆ ನಮೂದಿಸಲೇಬೇಡಿ’ ಎಂಬ ಮನವಿಯನ್ನೂ ಅಭ್ಯರ್ಥಿಗಳು ಮಾಡಿಕೊಳ್ಳುತ್ತಿದ್ದಾರೆ. ವಿಶೇಷವಾಗಿ, ಇದೇ ಮೊದಲ ಬಾರಿಗೆ ಈ ಚುನಾವಣೆಯಲ್ಲಿ ಮತದಾನ ಮಾಡುತ್ತಿರುವವರಿಗೆ ಹೆಚ್ಚಿನ ಮಾಹಿತಿ ಕೊಡುವ ಕೆಲಸವೂ ನಡೆದಿದೆ.

ಮತದಾರರು ತಮ್ಮಿಷ್ಟದ ಅಭ್ಯರ್ಥಿಗೆ ಪ್ರಾಶಸ್ತ್ಯದ ಮತವನ್ನು ನೀಡುವುದಕ್ಕೆ ಈ ಚುನಾವಣೆಯಲ್ಲಿ ಅವಕಾಶವಿದೆ. ಅಭ್ಯರ್ಥಿಯ ಫೋಟೊ ಮುಂದಿನ ನಿಗದಿತ ಸ್ಥಳದಲ್ಲಿ ತಮ್ಮ ಪ್ರಾಶಸ್ತ್ಯದ ಮತವನ್ನು ನಮೂದಿಸಬಹುದು. 1, 2, 3, 4 ಹೀಗೆ... ಅಂಕಿಯ ಮೂಲಕ ಪ್ರಾಶಸ್ತ್ಯವನ್ನು ತಿಳಿಸಬಹುದು.

ಕೇಂದ್ರದಲ್ಲಿ ನೀಡುವ ಪೆನ್‌ ಮಾತ್ರ ಬಳಸಬೇಕು:

ಮತಗಟ್ಟೆಯಲ್ಲಿ ಒದಗಿಸುವ ಪೆನ್ ಅನ್ನು ಮಾತ್ರವೇ ಬಳಸಿ ಬರೆಯಬೇಕು. ರೋಮನ್ ಅಂಕಿ ಅಥವಾ ಕನ್ನಡ ಅಂಕಿ ಬರೆಯುವುದಕ್ಕೂ ಅವಕಾಶವಿದೆ. ಆದರೆ, ಯಾವುದಾದರೂ ಒಂದನ್ನೇ ಅಂದರೆ ಏಕರೂಪವಾಗಿ ಬಳಸಬೇಕು. ಬ್ಯಾಲೆಟ್  ಪೇಪರ್ ಮೇಲೆ ಯಾವುದೇ ಗುರುತು ಅಥವಾ ಚಿತ್ರವನ್ನು ಬರೆದರೆ ಸಿಂಧುವಾಗುವುದಿಲ್ಲ. ಎಲ್ಲ ಅಭ್ಯರ್ಥಿಗೂ ಮೊದಲ ಪ್ರಾಶಸ್ತ್ಯವನ್ನೇ ನೀಡಿದರೆ ಮಾನ್ಯವಾಗುವುದಿಲ್ಲ. ಪ್ರಥಮ ಪ್ರಾಶಸ್ತ್ಯದಲ್ಲಿ ಶೇ 50ಕ್ಕಿಂತ ಹೆಚ್ಚಿನ ಮತ ಪಡೆದವರನ್ನು ವಿಜೇತರು ಎಂದು ಘೋಷಿಸಲಾಗುತ್ತದೆ. ಇದನ್ನು ಯಾವ ಅಭ್ಯರ್ಥಿಯೂ ಪಡೆಯದಿದ್ದರೆ 2ನೇ ಪ್ರಾಶಸ್ತ್ಯದ ಮತ ಎಣಿಕೆ ಮಾಡಲಾಗುತ್ತದೆ.

ಈ ಚುನಾವಣೆಯಲ್ಲಿ ಮತ ಚಲಾವಣೆಯ ಬಗ್ಗೆ ಮತದಾರರಲ್ಲಿ ಸಾಕಷ್ಟು ಜಾಗೃತಿಯೂ ಬೇಕಾಗುತ್ತದೆ. ಏಕೆಂದರೆ, 2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ 819 ಮತಗಳನ್ನು ‘ಕುಲಗೆಟ್ಟ ಮತ’ಗಳು ಎಂದು ಪರಿಗಣಿಸಿ ತಿರಸ್ಕರಿಸಲಾಗಿತ್ತು. ಇದು, ಫಲಿತಾಂಶದ ಮೇಲೆ ಬಹಳಷ್ಟು ಪರಿಣಾಮವನ್ನು ಬೀರಿತ್ತು. ಆಗ ಜೆಡಿಎಸ್ ಅಭ್ಯರ್ಥಿ ಮರಿತಿಬ್ಬೇಗೌಡ ಗೆದ್ದಿದ್ದರು; ಕಾಂಗ್ರೆಸ್‌ನ ಎಂ. ಲಕ್ಷ್ಮಣ ಸೋಲನುಭವಿಸಿದ್ದರು. ಮರಿತಿಬ್ಬೇಗೌಡ ಅವರು ಈಗ ಕಾಂಗ್ರೆಸ್‌ನಿಂದ ಕಣದಲ್ಲಿದ್ದಾರೆ. ಅವರ ಪರವಾಗಿ ಲಕ್ಷ್ಮಣ ಕೆಲಸ ಮಾಡುತ್ತಿದ್ದಾರೆ!

ಈ ಚುನಾವಣೆಯಲ್ಲಿ ಚಿಹ್ನೆ ಇರುವುದಿಲ್ಲ ಪ್ರಥಮ ಪ್ರಾಶಸ್ತ್ಯದ ಮತವನ್ನೇ ಕೇಳುತ್ತಿರುವ ಅಭ್ಯರ್ಥಿಗಳು ಮತಗಟ್ಟೆಗಳಲ್ಲೂ ಜಾಗೃತಿಗೆ ಕ್ರಮ
ಚುನಾವಣಾ ಆಯೋಗದ ಸೂಚನೆಯಂತೆ ಮತದಾರರ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುವುದು. ಈ ಚುನಾವಣೆಯಲ್ಲಿ ಎನ್‌ಒಟಿಎ (ನೋಟಾ) ಇರುವುದಿಲ್ಲ
ಜಿ.ಸಿ. ಪ್ರಕಾಶ್ ಚುನಾವಣಾಧಿಕಾರಿ
‘ನೇರ ಹಣಾಹಣಿಯಿಂದ ಗೊಂದಲವಾಗದು’
‘ಈ ಬಾರಿ ಕಾಂಗ್ರೆಸ್‌ ಹಾಗೂ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇರುವುದರಿಂದ ಹೆಚ್ಚು ಗೊಂದಲ ಉಂಟಾಗುವುದಿಲ್ಲ ಎಂಬ ವಿಶ್ವಾಸವಿದೆ.  ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿರುವುದರಿಂದ ಹಾಗೂ ಮೈಸೂರಿನವರೇ ಮುಖ್ಯಮಂತ್ರಿ ಆಗಿರುವುದರಿಂದ ಸಮಸ್ಯೆಗಳ ಪರಿಹಾರಕ್ಕೆ ಅನುಕೂಲವಾಗುತ್ತದೆ ಎಂದು ಪ್ರಬುದ್ಧ ಮತದಾರರು ನಮ್ಮ ಅಭ್ಯರ್ಥಿ ಮರಿತಿಬ್ಬೇಗೌಡ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಲಿದ್ದಾರೆ. ಹೀಗಾಗಿ ಈ ಬಾರಿ ಸ್ಪಷ್ಟ ಫಲಿತಾಂಶ ಹೊರಬೀಳಲಿದೆ ಎನ್ನುವುದು ನಮ್ಮ ನಿರೀಕ್ಷೆ’ ಎಂದು ಹೋದ ಚುನಾವಣೆಯಲ್ಲಿ ಪರಾಜಿತರಾಗಿದ್ದ ಎಂ. ಲಕ್ಷ್ಮಣ ಪ್ರತಿಕ್ರಿಯಿಸಿದರು.
ಯಾವುದು ಕ್ರಮಬದ್ಧವಾಗದು?
‘ಮತದಾರರು ಬ್ಯಾಲೆಟ್‌ ಪೇಪರ್‌ನಲ್ಲಿ ಮತದಾನ ಮಾಡಬೇಕು. ಕೇಂದ್ರದಲ್ಲಿ ಒದಗಿಸಲಾಗುವ ನೇರಳೆ ಬಣ್ಣದ ಪೆನ್‌ನಲ್ಲಿ ಪ್ರಾಶಸ್ತ್ಯದ ಮತಗಳನ್ನು ಬರೆದು ಮಡಚಿ ಬ್ಯಾಲೆಟ್‌ ಬಾಕ್ಸ್‌ನಲ್ಲಿ ಹಾಕಬೇಕು. ಎಲ್ಲ ಅಭ್ಯರ್ಥಿಗಳಿಗೂ ‘1’ ಎಂದೇ ನಮೂದಿಸಿದರೆ ಕನ್ನಡ ಇಂಗ್ಲಿಷ್‌ ರೋಮನ್ ಅಂಕಿಗಳನ್ನೆಲ್ಲ ಬಳಸಿದರೆ ರೈಟ್ ಅಥವಾ ಟಿಕ್‌ ಮಾರ್ಕ್‌ ಹಾಕುವುದು ಮಾಡಿದರೆ ಅದು ಕುಲಗೆಟ್ಟ ಮತವಾಗುತ್ತದೆ. ಬ್ಯಾಲೆಟ್‌ ಪೇಪರ್‌ನಲ್ಲಿ ಓಂ ಶ್ರೀ ಎಂಬಿತ್ಯಾದಿಯಾಗಿ ಬರೆದರೆ ತಿರಸ್ಕರಿಸಲಾಗುತ್ತದೆ’ ಎಂದು ಪ್ರಾದೇಶಿಕ ಆಯುಕ್ತರ ಕಚೇರಿಯ ಚುನಾವಣಾ ತಹಶೀಲ್ದಾರ್‌ ಅಶೋಕ್‌ ‘‍ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ‘ಪ್ರತಿ ಮತಗಟ್ಟೆಯಲ್ಲೂ ಮತಗಟ್ಟೆ ಅಧಿಕಾರಿಯು ಪೆನ್ ಕೊಡುವಾಗಲೇ ಹೇಗೆ ಮತ ಚಲಾಯಿಸಬೇಕು ಎಂಬುದನ್ನು ಮತದಾರರಿಗೆ ತಿಳಿಸುತ್ತಾರೆ. ಮತದಾನದ ಕ್ರಮಬದ್ಧವಾದ ವಿಧಾನದ ಮಾಹಿತಿಯುಳ್ಳ ಪೋಸ್ಟರ್‌ ಅನ್ನು ಅಂಟಿಸಲಾಗುತ್ತದೆ. ಅದನ್ನು ಮತದಾರರು ನೋಡಿಕೊಳ್ಳಬಹುದು’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT