ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಮೋದಿ ವಾಸ್ತವ್ಯ; ಹೋಟೆಲ್‌ಗೆ ₹80 ಲಕ್ಷ ಬಿಲ್‌ ಬಾಕಿ!

ಅರಣ್ಯ ಇಲಾಖೆಗೆ ಹೋಟೆಲ್‌ ಅಧಿಕಾರಿಗಳಿಂದ ಪತ್ರ; ಕಾನೂನು ಸಮರದ ಎಚ್ಚರಿಕೆ
Published 25 ಮೇ 2024, 16:13 IST
Last Updated 25 ಮೇ 2024, 16:13 IST
ಅಕ್ಷರ ಗಾತ್ರ

ಮೈಸೂರು: ಪ್ರಧಾನಿ ನರೇಂದ್ರ ಮೋದಿ 2023ರ ಏಪ್ರಿಲ್‌ನಲ್ಲಿ ಮೈಸೂರಿಗೆ ಆಗಮಿಸಿದ್ದ ವೇಳೆ ವಾಸ್ತವ್ಯ ಹೂಡಿದ್ದ ಇಲ್ಲಿನ ರಾಡಿಸನ್‌ ಬ್ಲ್ಯೂ ಹೋಟೆಲ್‌ಗೆ ಆತಿಥ್ಯ ವೆಚ್ಚವಾಗಿ ₹80.6 ಲಕ್ಷ ಬಾಕಿ ಉಳಿಸಿಕೊಂಡಿದ್ದು, ಬಿಲ್‌ ಪಾವತಿಸದಿದ್ದರೆ ಕಾನೂನು ಸಮರ ನಡೆಸಲು ಹೋಟೆಲ್‌ ಮುಂದಾಗಿದೆ.

ಈ ಸಂಬಂಧ ಹೋಟೆಲ್‌ನ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕರು ಮೇ 21ರಂದು ಮೈಸೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದು, ‘ಬಾಕಿ ಇರುವ ಬಿಲ್‌ನ ಮೊತ್ತವನ್ನು ಜೂನ್‌ 1ರ ಒಳಗೆ ಪಾವತಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಏನಿದು ಕಾರ್ಯಕ್ರಮ?:

ಬಂಡೀಪುರ ಹುಲಿ ಯೋಜನೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ 2023ರ ಏಪ್ರಿಲ್‌ 9ರಿಂದ 11ರವರೆಗೆ ಬಂಡೀಪುರದಲ್ಲಿ ಏರ್ಪಡಿಸಿದ್ದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಪ್ರಧಾನಿ ಮೋದಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಹಾಗೂ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಆರಂಭದಲ್ಲಿ ಕಾರ್ಯಕ್ರಮಕ್ಕೆ ₹3 ಕೋಟಿ ವೆಚ್ಚ ಅಂದಾಜಿಸಲಾಗಿತ್ತು. ನಂತರ ₹6.3 ಕೋಟಿ ವೆಚ್ಚವಾಗಿದೆ. ಎನ್‌ಟಿಸಿಎ ₹3 ಕೋಟಿ ಪಾವತಿಸಿದ್ದು, ಉಳಿದ ಬಾಕಿ ₹3.3 ಕೋಟಿ ಪಾವತಿ ಆಗಿಲ್ಲ. ಅದರಲ್ಲಿ ಹೋಟೆಲ್‌ಗೆ ನೀಡಬೇಕಾದ ₹80.6 ಲಕ್ಷವೂ ಸೇರಿದೆ.

‘ಕಾರ್ಯಕ್ರಮ ಸಂಪೂರ್ಣ ಎನ್‌ಟಿಸಿಎ ಹಾಗೂ ಕೇಂದ್ರ ಅರಣ್ಯ ಇಲಾಖೆ ಸಹಯೋಗದಲ್ಲಿ ನಡೆದಿತ್ತು. ಹೀಗಾಗಿ ಕೇಂದ್ರವೇ ಸಂಪೂರ್ಣ ವೆಚ್ಚ ಭರಿಸಬೇಕು’ ಎನ್ನುವುದು ರಾಜ್ಯ ಅರಣ್ಯ ಇಲಾಖೆಯ ವಾದ. ಬಾಕಿ ಹಣ ಪಾವತಿಗೆ ರಾಜ್ಯ ಹಾಗೂ ಕೇಂದ್ರ ಅರಣ್ಯ ಇಲಾಖೆ ನಡುವೆ ಅನೇಕ ಬಾರಿ ಪತ್ರ ಸಮರ ನಡೆದಿದೆ.

ಈ ವರ್ಷ ಮಾರ್ಚ್ 22ರಂದು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಸಂರಕ್ಷಣಾ ಅಧಿಕಾರಿ (ಪಿಸಿಸಿಎಫ್‌) ಎನ್‌ಟಿಸಿಎ ಡಿಐಜಿಗೆ ಪತ್ರ ಬರೆದಿದ್ದು, ‘ಬಾಕಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಹೋಟೆಲ್‌ಗೆ ನೀಡಬೇಕಾದ ₹80.6 ಲಕ್ಷವನ್ನು ಅವರ ಖಾತೆಗೆ ನೇರವಾಗಿ ಪಾವತಿಸಬೇಕು’ ಎಂದು ಕೋರಿದ್ದರು. ಉತ್ತರಿಸಿದ್ದ ಎನ್‌ಟಿಸಿಎ, ‘ರಾಜ್ಯ ಸರ್ಕಾರವೇ ಹಣ ಬಿಡುಗಡೆ ಮಾಡಬೇಕು’ ಎಂದು ಹೇಳಿ ಸುಮ್ಮನಾಗಿದೆ.  

ಈ ಕುರಿತು ಪ್ರತಿಕ್ರಿಯೆಗೆ ಡಿಸಿಎಫ್‌ ಬಸವರಾಜು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT