ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: ಮುಸ್ಲಿಂ ಧರ್ಮೀಯನನ್ನು ಪ್ರೀತಿಸುತ್ತಿದ್ದ ಯುವತಿಯ ಮರ್ಯಾದೆಗೇಡು ಹತ್ಯೆ

Published 24 ಜನವರಿ 2024, 21:15 IST
Last Updated 24 ಜನವರಿ 2024, 21:15 IST
ಅಕ್ಷರ ಗಾತ್ರ

ಹುಣಸೂರು (ಮೈಸೂರು ಜಿಲ್ಲೆ): ತಾಲ್ಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮದ ನಿವಾಸಿ ನಿತೀಶ್‌ (22) ಎಂಬಾತ ತಂಗಿಯನ್ನು ಕೆರೆಗೆ ದೂಡಿ ಕೊಲೆ ಮಾಡಿದ್ದಾನೆ. ಆಕೆಯನ್ನು ರಕ್ಷಿಸಲು ಹೋದ ತಾಯಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಹಿರಿಕ್ಯಾತನಹಳ್ಳಿ ಗ್ರಾಮದ ನಿವಾಸಿ ಅನಿತಾ (43) ಮತ್ತು ಧನುಶ್ರೀ (19) ಮೃತರು. ಪೊಲೀಸರು ಇದೊಂದು ಮರ್ಯಾದೆಗೇಡು ಹತ್ಯೆ ಪ್ರಕರಣ ಎಂದು ಶಂಕಿಸಿದ್ದಾರೆ.

ಮಂಗಳವಾರ ರಾತ್ರಿ 8ರ ಸುಮಾರಿಗೆ ಮನೆಯಿಂದ ಅನಿತಾ ಹಾಗೂ ಧನುಶ್ರೀ ಅವರನ್ನು ಬೈಕ್‌ನಲ್ಲಿ ಕರೆದುಕೊಂಡು ಹೊರಟ ನಿತೀಶ್‌ ಮರೂರು ಗ್ರಾಮದ ಬಸವೇಶ್ವರ ದೇವಸ್ಥಾನ ಸಮೀಪದ ಕೆರೆಯ ಬಳಿ ಇಬ್ಬರನ್ನೂ ಕೆಳಗಿಳಿಸಿದ್ದಾನೆ. ತಂಗಿಯನ್ನು ಕೆರೆಗೆ ತಳ್ಳಿದ್ದಾನೆ. ತನ್ನನ್ನು ರಕ್ಷಿಸಲು ಬಂದ ತಾಯಿಯನ್ನು ಧನುಶ್ರೀ ತಬ್ಬಿಕೊಂಡಿದ್ದರಿಂದ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ರಾತ್ರಿ 10ರ ಸುಮಾರಿಗೆ ಮನೆಗೆ ಬಂದ ನಿತೀಶ್, ತಂದೆ ಸತೀಶ್‌ ಬಳಿ ವಿಚಾರ ತಿಳಿಸಿದ್ದಾನೆ ಎಂದು ಗೊತ್ತಾಗಿದೆ.

‘ತಂಗಿ ಒಬ್ಬಳನ್ನೇ ಕರೆದರೆ ಬರುವುದಿಲ್ಲ ಎಂಬ ಕಾರಣಕ್ಕೆ ತಾಯಿಯನ್ನೂ ಕರೆದುಕೊಂಡು ಹೋಗಿದ್ದ. ಸಂಬಂಧಿಕರ ಮನೆಗೆ ಹೋಗೋಣ ಎಂದು ತಿಳಿಸಿದ್ದ’ ಎಂದು ತಿಳಿದುಬಂದಿದೆ.

ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

‘ಧನುಶ್ರೀಯು ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದು, ಆಕೆ ಮುಸ್ಲಿಂ ಧರ್ಮೀಯನನ್ನು ಪ್ರೀತಿಸುತ್ತಿದ್ದಳು. ನಮಗೆ ವಿಷಯ ತಿಳಿದಾಗ, ಆತನನ್ನು ಬಿಟ್ಟುಬಿಡುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದೆವು. ಎಚ್ಚರಿಕೆ ನೀಡಿದ್ದರೂ ಆಕೆ ಕೇಳಿರಲಿಲ್ಲ. ಇದೇ ವಿಚಾರವಾಗಿ ನಿತೀಶ್‌ ಆಕೆಯೊಂದಿಗೆ ಏಳು ತಿಂಗಳಿನಿಂದ ಮಾತು ಬಿಟ್ಟಿದ್ದ ಎಂದು ಸತೀಶ್‌ ದೂರಿನಲ್ಲಿ ತಿಳಿಸಿದ್ದಾರೆ. ಹೀಗಾಗಿ ಆರೋಪಿ ಮರ್ಯಾದೆಗೇಡು ಹತ್ಯೆ ನಡೆಸಿದ್ದಾನೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಂಗಿಯು ದೊಡ್ಡಹೆಜ್ಜೂರು ಜಾತ್ರೆಯಲ್ಲಿ ಪ್ರಿಯಕರನ ಜೊತೆ ಇದ್ದಿದ್ದನ್ನು ಕಂಡು ನಿತೀಶ್ ಸಿಟ್ಟಾಗಿದ್ದ. ಈ ವೇಳೆ ಆಕೆ ಪ್ರಿಯಕರನ ಪರವಾಗಿ ವಾದಿಸಿದ್ದಳು. ಹನಗೋಡಿನ ಯುವಕ, ಆತನ ಸ್ನೇಹಿತರು ಮತ್ತು ನಿತೀಶ್ ನಡುವೆ ಹೊಡೆದಾಟವೂ ನಡೆದಿತ್ತು. ಇದರಿಂದ ಮತ್ತಷ್ಟು ಕುಪಿತನಾಗಿದ್ದ ಎಂದು ತಿಳಿದುಬಂದಿದೆ.

ಧನುಶ್ರೀ ಪ್ರಿಯಕರ ನೊಂದಿಗೆ ಕೆಲ ಹಾಡುಗಳಿಗೆ ರೀಲ್ಸ್‌ ಕೂಡ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಎನ್ನಲಾಗಿದೆ.

ಅಮ್ಮನನ್ನು ಕಾಪಾಡಲಾಗಲಿಲ್ಲ: ‘ತಂಗಿಯನ್ನು ನಾನೇ ತಳ್ಳಿದೆ. ಕಾಪಾಡಲು ಹೋದ ಅಮ್ಮನೂ ಮುಳುಗಿದಳು. ಅಮ್ಮನನ್ನು ಕಾಪಾಡಲು ಪ್ರಯತ್ನಿಸಿದರೂ ಸಾಧ್ಯ ವಾಗಲಿಲ್ಲ’ ಎಂದು ಆರೋಪಿ ತಂದೆ ಬಳಿ ಹೇಳಿಕೊಂಡಿದ್ದಾನೆ. ಬೈಕ್‌ನಲ್ಲಿ ತಂದೆಯನ್ನು ಕೆರೆಯ ಬಳಿಗೆ ಕರೆದೊಯ್ದು ತೋರಿಸಿದ್ದ’ ಎಂದೂ ಹೇಳಲಾಗುತ್ತಿದೆ.

ಸತೀಶ್ ಅವರು ಬುಧವಾರ ಗ್ರಾಮಾಂತರ ಠಾಣೆಗೆ ಬಂದು, ಮಗ ಎಸಗಿದ ಕೃತ್ಯದ ಬಗ್ಗೆ ದೂರು ನೀಡಿದ್ದಾರೆ. ಇದನ್ನು ಆಧರಿಸಿ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿದರು. ಈ ವೇಳೆ ಕೆರೆಯ ಬಳಿ ಸಾವಿರಾರು ಮಂದಿ ಜಮಾಯಿಸಿದ್ದರು. ಆರೋಪಿ ನಿತೀಶ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆತ ಕೃತ್ಯ ಎಸಗಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಮೈಸೂರಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

‘ತಂಗಿಯ ವಿಷಯದಲ್ಲಿ ನಿತೀಶ್ ಹಲವು ಬಾರಿ ಗಲಾಟೆ ನಡೆಸಿದ್ದ. ‌ಕೆಲವು ತಿಂಗಳಿಂದ ಆಕೆಯೊಂದಿಗೆ ಮಾತು ಬಿಟ್ಟಿದ್ದ. ಮರ್ಯಾದೆ ಕಳೆಯಬೇಡ ಎಂದು ನಾನೂ ಮಗಳಿಗೆ ಹೇಳಿದ್ದೆ. ಈ ವಿಚಾರವಾಗಿ ಗಲಾಟೆ ನಡೆಯುತ್ತಲೇ ಇತ್ತು. ಈಗ ತಂಗಿಯನ್ನೇ ಸಾಯಿಸಿದ್ದಾನೆ’ ಎಂದು ಸತೀಶ್‌ ಹೇಳಿದರು.

‘ತಂಗಿಯನ್ನು ನಾನೇ ಕೆರೆಗೆ ತಳ್ಳಿದೆ ಎಂದು ಆರೋಪಿ ವಿಚಾರಣೆ ವೇಳೆ ಹೇಳಿದ್ದಾನೆ. ತನಿಖೆ ನಡೆಯುತ್ತಿದೆ’ ಎಂದು ಎಸ್ಪಿ ಸೀಮಾ ಲಾಟ್ಕರ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT