ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ ಕೈತಪ್ಪುವ ಚರ್ಚೆ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಲೈವ್ ಮಾಡಿದ ಸಂಸದ ಪ್ರತಾಪ

ಕೆಟ್ಟತನಕ್ಕೆ ಇರುವ ಶಕ್ತಿ, ಪ್ರೀತಿಗಿಲ್ಲವೇ?: ಪ್ರತಾಪ
Published 12 ಮಾರ್ಚ್ 2024, 1:56 IST
Last Updated 12 ಮಾರ್ಚ್ 2024, 1:56 IST
ಅಕ್ಷರ ಗಾತ್ರ

ಮೈಸೂರು: ‘ಕೆಟ್ಟವರ ಅಸೂಯೆ ಮತ್ತು ಕೆಟ್ಟತನಕ್ಕೆ ಶಕ್ತಿ ಇದೆ ಎನ್ನುವುದಾದರೆ ಒಳ್ಳೆಯವರ ಹಾರೈಕೆ, ಪ್ರೀತಿ ಹಾಗೂ ಆಶೀರ್ವಾದಕ್ಕೂ ಇರಬೇಕಲ್ಲವೇ?’ ಎಂದು ಮೈಸೂರು–ಕೊಡಗು ಸಂಸದ ಪ್ರತಾಪ ಸಿಂಹ ಕೇಳಿದ್ದಾರೆ.

‘ಪ್ರತಾಪ ಸಿಂಹಗೆ ಟಿಕೆಟ್‌ ಕೈತಪ್ಪಲಿದೆ’ ಎಂಬ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ, ಫೇಸ್‌ಬುಕ್‌ನಲ್ಲಿ ಸೋಮವಾರ (ಮಾರ್ಚ್ 11) ರಾತ್ರಿ 43 ನಿಮಿಷ ಲೈವ್ ಮಾಡಿದ ಅವರು, ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ ಕೆಲಸಗಳನ್ನು ಹೇಳಿಕೊಂಡರು.

‘ನರೇಂದ್ರ ಮೋದಿ ಹೆಸರಿನಲ್ಲಿ 2 ಬಾರಿ ಗೆದ್ದೆ. 3–4 ದಿನಗಳಿಂದ ಎಲ್ಲರೂ ನನ್ನ ಬಗ್ಗೆ ತೋರುತ್ತಿರುವ ಪ್ರೀತಿಗೆ ಶರಣಾಗಿದ್ದೇನೆ. ಜನರಿಗೆ ಅವರ ಮನೆಯ ಬಾಗಿಲು ಕಾಯುವವರು ಬೇಕೇ ಹೊರತು, ಅವರು ಬೇರೆಯವರ ಬಾಗಿಲಿಗೆ ಹೋಗಿ ಕಾಯುವುದನ್ನು ಬಯಸುವುದಿಲ್ಲ’ ಎಂದರು.

‘ನನಗೆ ಈ ಬಾರಿ ಟಿಕೆಟ್ ಸಿಗುತ್ತದೆಯೋ ಇಲ್ಲವೋ ಎಂಬುದನ್ನು ಚಾಮುಂಡಿ ತಾಯಿ ನಿರ್ಧರಿಸುತ್ತಾಳೆ. ರಾಜಕೀಯ ಅಸ್ವಿತ್ವಕ್ಕಾಗಿ ಯಾರದೋ ಮನೆಯನ್ನು ಸುತ್ತುವುದಿಲ್ಲ. ಸೋತಿರುವವರೆಲ್ಲ ಅವರವರ ಕಾರಣಗಳಿಂದ ಸೋತಿದ್ದಾರೆಯೇ ಹೊರತು ಅದಕ್ಕೆ ಪ್ರತಾಪ ಸಿಂಹ ಕಾರಣವಲ್ಲ. ಉದಾಸೀನತೆ ಅಥವಾ ನಡತೆಯಿಂದ ಸೋತಿದ್ದೀರಷ್ಟೆ. ಸೋಲುವಂಥ ಕೆಲಸ ಮಾಡಿದ್ದಾರೆಂದು ನಾನು ಹೇಳಿಲ್ಲ ಎಂದು ಸ್ವಪಕ್ಷೀಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಮೋದಿ ಹೆಸರಿಗೆ ಕಳಂಕ ಬಾರದಂತೆ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ದ್ವೇಷ–ಅಸೂಯೆ ಇರುತ್ತದೆ. ಮೋದಿ ಅವರಂಥವರಿಗೇ ವನವಾಸಕ್ಕೆ ಹೋಗುವಂತಹ ಸ್ಥಿತಿ ಬಂದಿತ್ತು. ಸೂರ್ಯನಿಗೆ ಗ್ರಹಣ ಹಿಡಿಯುತ್ತದೆ, ಇನ್ನು ನಾನು ಯಾವ ಲೆಕ್ಕ? ಆದರೆ, ಕೊಟ್ಟ ಕೆಲಸವನ್ನು ಸಮರ್ಥವಾಗಿ ಮಾಡಿದ ಆತ್ಮಸಂತೃಪ್ತಿ ಇದೆ’ ಎಂದರು.

‘ನನ್ನದೇ ಆದ ಯುವಕರ ಪಡೆ ಕಟ್ಟುತ್ತೇನೆ. ರಾಜಕಾರಣದಲ್ಲಿ ಬದಲಾವಣೆ ತರೋಣ. ಪ್ರಬಲ ಹಿನ್ನೆಲೆಯೇ ಇಲ್ಲದವರು ರಾಜಕೀಯಕ್ಕೆ ಬರಬೇಕು. ಪದವೀಧರರು, ಯುವಜನರು ಬರಬೇಕು. ಇದಕ್ಕಾಗಿ ರಾಜ್ಯದಾದ್ಯಂತ ಕೆಲಸ ಮಾಡುತ್ತೇನೆ. ಒಂದೆರಡು ದಿನಗಳಲ್ಲಿ ಟಿಕೆಟ್ ಪ್ರಕಟವಾಗಬಹುದು. ನನಗೆ ಟಿಕೆಟ್ ಸಿಕ್ಕಿ, ಇನ್ನೂ 5 ವರ್ಷ ಕೆಲಸ ಮಾಡಲು ಅವಕಾಶ ಸಿಗಬಹುದು. ನಾನು ನಂಬಿರುವ ದೇವರು ಕೈಬಿಡುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮೈಸೂರಿನ ಋಣ ಸಾಕಷ್ಟು ತೀರಿಸಿದ್ದೇನೆ. ಮುಂದೆ ಕೊಡಗಿನ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತೇನೆ’ ಎಂದು ತಿಳಿಸಿದರು.

‘ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರ ಬೆಂಬಲ ನನಗೆ ಬಂತು. ನಿತಿನ್ ಗಡ್ಕರಿ ಅವರ ಕಾರ್ಯಕ್ರಮದಲ್ಲಿ ಜನರು ನನಗೆ ಜೈಕಾರ ಹಾಕಿದರು. ಯಾವ ಕ್ಷೇತ್ರದಲ್ಲಿ ಇಂತಹ ವ್ಯಕ್ತಿಗೆ ಟಿಕೆಟ್ ಕೊಡಿ ಎಂದು ಜನರು ಕೇಳುತ್ತಿದ್ದಾರೆ? ಆದರೆ, ನನ್ನ ಬಗ್ಗೆ ಎಲ್ಲರೂ ಬೆಂಬಲ ತೋರುತ್ತಿದ್ದಾರೆ’ ಎಂದು ಭಾವುಕವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT