ಮೈಸೂರು: ರೈಲ್ವೆ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ಉದ್ದಿಮೆಯಾದ ‘ಭಾರತೀಯ ಕಂಟೈನರ್ ನಿಗಮ’ (ಸಿಒಎನ್‌ಸಿಒಆರ್)ದಿಂದ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಿರುವ ‘ಮಲ್ಟಿಮಾಡೆಲ್ ಲಾಜಿಸ್ಟಿಕ್ಸ್ ಪಾರ್ಕ್’ (ಎಂಎಂಎಲ್‌ಪಿ) ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ಜಿಲ್ಲೆ ಹಾಗೂ ಸುತ್ತಮುತ್ತಲ ಜಿಲ್ಲೆಗಳ ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಡುವ ಮಹತ್ವದ ಯೋಜನೆ ಇದಾಗಿದೆ.
ಉದ್ಯಮದ ಬೆಳವಣಿಗೆಗೆ ಪೂರಕವಾಗಿ ರೂಪಿಸಲಾಗಿರುವ ಈ ‘ಇನ್‌ಲ್ಯಾಂಡ್ ಕಂಟೇನರ್ ಡಿಪೊ’ (ಐಸಿಡಿ– ಹಿಂದಿನ ಹೆಸರು) ಉದ್ಘಾಟನೆಗೆ ಸಿದ್ಧವಾಗಿದೆ. 2015–16ರಲ್ಲೇ ಯೋಜನೆ ಮಂಜೂರಾಗಿತ್ತು. ಆದರೆ, ಭೂಸ್ವಾಧೀನ ಮೊದಲಾದ ಸಮಸ್ಯೆಗಳು ಎದುರಾಗಿದ್ದವು. ಅವುಗಳನ್ನೆಲ್ಲ ಪರಿಹರಿಸಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಶೀಘ್ರದಲ್ಲೇ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲು ರೈಲ್ವೆ ಇಲಾಖೆ ಯೋಜಿಸಿದೆ. ಯೋಜನೆಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ ಸಂಸದ ಪ್ರತಾಪ ಸಿಂಹ ಆಗಾಗ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ್ದರು.
₹ 102 ಕೋಟಿ ವೆಚ್ಚದಲ್ಲಿ (ಭೂಸ್ವಾಧೀನವೂ ಸೇರಿ) ಕೈಗೊಂಡಿರುವ ಯೋಜನೆ ಇದಾಗಿದೆ. ಬೆಂಗಳೂರು ನಂತರ ರಾಜ್ಯದ 2ನೇ ಕಂಟೇನರ್ ಡಿಪೊ ಇದಾಗಲಿದೆ. ಅಧಿಕೃತ ಉದ್ಘಾಟನೆಗೆ ರೈಲ್ವೆ ಸಚಿವರನ್ನು ಆಹ್ವಾನಿಸುವ ಉದ್ದೇಶವನ್ನು ಅಧಿಕಾರಿಗಳು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಿಎಂ ಗತಿ–ಶಕ್ತಿ ಯೋಜನೆಯಲ್ಲಿ: ಚೆನ್ನೈನಿಂದ ಮೈಸೂರಿಗೆ ವಾರಕ್ಕೆ ಮೂರು ಕಂಟೇನರ್‌ಗಳು ಬರುತ್ತಿವೆ. ಅವುಗಳಿಗೆ ಚೆನ್ನೈನಲ್ಲೇ ಅನುಮತಿ ನೀಡಲಾಗುತ್ತಿದ್ದು, ನಿಗದಿತ ಸುಂಕವನ್ನೂ ಅಲ್ಲೇ ಕಟ್ಟಿಸಿಕೊಳ್ಳಲಾಗುತ್ತಿದೆ. ಇಲ್ಲೇ ಸುಂಕ ಪಾವತಿಸಿಕೊಳ್ಳುವ ಕೆಲಸ ನಡೆದರೆ ಸರ್ಕಾರಕ್ಕೆ ವರಮಾನವೂ ಹೆಚ್ಚಲಿದೆ. ವಾರ್ಷಿಕವಾಗಿ 1.40 ಲಕ್ಷ ಕಂಟೇನರ್‌ಗಳನ್ನು ನಿರೀಕ್ಷಿಸಲಾಗುತ್ತಿದೆ. ಇಲ್ಲಿಂದಲೇ ರಫ್ತು ಹಾಗೂ ಆಮದು ನಡೆಯಲಿದೆ. ಅಗತ್ಯವಿದ್ದವರಿಗೆ, ಗೋದಾಮಿನ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಇದಕ್ಕೆ ಪೂರಕವಾಗಿ ಮೊದಲ ಹಂತದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು.
‘ಕೇಂದ್ರ ಸರ್ಕಾರ ರೂಪಿಸಿರುವ ಪ್ರಧಾನ ಮಂತ್ರಿ ಗತಿ–ಶಕ್ತಿ ಯೋಜನೆಯಲ್ಲಿ ಈ ಕಂಟೇನರ್ ಡಿಪೊ ನಿರ್ಮಿಸಲಾಗಿದೆ. 62 ಎಕರೆಯನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಡಿಪೊ ನಿರ್ಮಾಣದಿಂದಾಗಿ, ಈ ಭಾಗದ ಉದ್ದಿಮೆಯವರು ರಫ್ತು ಹಾಗೂ ಆಮದಿಗಾಗಿ ಚೆನ್ನೈ ಮೊದಲಾದ ನಗರಗಳನ್ನು ಅವಲಂಬಿಸುವುದು ತಪ್ಪಲಿದೆ. ಇಲ್ಲೇ ಆ ಸೌಲಭ್ಯ ಸಿಗಲಿದೆ. ಇಲ್ಲಿಂದಲೇ ರೈಲಿನ ಮೂಲಕ ರವಾನಿಸಬಹುದಾಗಿದೆ. ಇದರಿಂದ ಶೇ 30ರಷ್ಟು ಸಾಗಣೆ ವೆಚ್ಚವನ್ನೂ ಉಳಿಸಬಹುದಾಗಿದೆ. ಸಮಯವೂ ಉಳಿತಾಯವಾಗಲಿದೆ’ ಎಂದು ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾದ ಅಧಿಕಾರಿಗಳು ಮಾಹಿತಿ ನೀಡಿದರು.
ಲೋಡಿಂಗ್, ಅನ್‌ಲೋಡಿಂಗ್‌ಗೆ: ಕಡಕೊಳ ರೈಲು ನಿಲ್ದಾಣದಿಂದ ಡಿಪೊವರೆಗೆ ರೈಲ್ವೆ ಹಳಿಯನ್ನು ಹಾಕಲಾಗಿದೆ. ಲೋಡಿಂಗ್ ಹಾಗೂ ಅನ್‌ಲೋಡಿಂಗ್‌ಗೆ ಬೇಕಾದ ಸ್ಥಳಾವಕಾಶ ಕಲ್ಪಿಸಲಾಗಿದೆ ಮತ್ತು ಗೋದಾಮಿನ ವ್ಯವಸ್ಥೆಯನ್ನೂ ಮಾಡಲಾಗಿದೆ.
‘ಮಲ್ಟಿಮಾಡೆಲ್ ಲಾಜಿಸ್ಟಿಕ್ಸ್ ಪಾರ್ಕ್’ ಬಹುತೇಕ ಪೂರ್ಣಗೊಂಡಿದ್ದು, (ಸಣ್ಣಪುಟ್ಟ ಕೆಲಸ ಹೊರತುಪಡಿಸಿ) ಕಾರ್ಯಾಚರಣೆಗೆ ಸಿದ್ಧವಾಗಿದೆ. ಆಮದು–ರಫ್ತು ಸರಕುಗಳಿಗೆ ಕ್ಲಿಯರೆನ್ಸ್ ಕೊಡಲಾಗುವುದು, ದೇಶದೊಳಗೆ ಬೇರೆ ಕಡೆಗೆ ರವಾನಿಸುವುದು ಮತ್ತು ತರಿಸುವುದು ಶುರುವಾಗಿದೆ. ಬೇರೆ ದೇಶದಿಂದ ಯಾವುದಾದರೂ ಉದ್ಯಮದವರು ಸರಕುಗಳನ್ನು ಆಮದು ಮಾಡಿಕೊಳ್ಳಬೇಕಾದರೆ ಕಸ್ಟಮ್ ನೋಟಿಫಿಕೇಷನ್, ಪ್ರಮಾಣೀಕರಣ ಅಗತ್ಯವಾಗುತ್ತದೆ. ಇದನ್ನು ಪಡೆದುಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕಸ್ಟಮ್ಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪ್ರಮಾಣಪತ್ರ ಕೊಡುತ್ತಾರೆ. ಅದು ಮುಂದಿನ ತಿಂಗಳ ಹೊತ್ತಿಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ಪಾರ್ಕ್‌ನ ಮುಖ್ಯ ವ್ಯವಸ್ಥಾಪಕ ವಿಜಯ್‌ಕುಮಾರ್ ಎಂ.ಪಿ. ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಪ್ರತಿ ತಿಂಗಳು 5ಸಾವಿರದಿಂದ 10ಸಾವಿರದವರೆಗೆ ಕಂಟೇನರ್ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಸಾಮರ್ಥ್ಯ ಈ ಪಾರ್ಕ್‌ಗಿದೆ. ಈ ಭಾಗದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.
₹ 102 ಕೋಟಿ ವೆಚ್ಚದಲ್ಲಿ ನಿರ್ಮಾಣ ರಾಜ್ಯದ 2ನೇ ಡಿಪೊ ಇದು ಉದ್ಘಾಟನೆಗೆ ರೈಲ್ವೆ ಸಚಿವರ ಆಹ್ವಾನಿಸಲು ಯೋಜನೆ
ಮೈಸೂರು ಜಿಲ್ಲೆಯಲ್ಲಿ ಕೂರ್ಗಳ್ಳಿ ಮತ್ತು ಕಡಕೊಳ ಬಳಿ ಎರಡು ಪ್ರಮುಖ ಕೈಗಾರಿಕಾ ವಲಯಗಳಿದ್ದು ದೊಡ್ಡ ಪ್ರಮಾಣದ ಸರಕು ಸಾಗಣೆಗೆ ಗೂಡ್ಸ್ ಟರ್ಮಿನಲ್ ಅಗತ್ಯವಿರುವುದು ಮನಗಂಡು ನಿರ್ಮಿಸಲಾಗಿದೆ- ಪ್ರತಾಪ ಸಿಂಹ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.