ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಲೋಕಸಭಾ ಚುನಾವಣೆ ಮತ ಎಣಿಕೆಗೆ ಸಿದ್ಧತೆ

Published 30 ಮೇ 2024, 13:05 IST
Last Updated 30 ಮೇ 2024, 13:05 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಜೂನ್ 4ರಂದು ಇಲ್ಲಿನ ಪಡುವಾರಹಳ್ಳಿಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯಲಿದ್ದು, ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

‘ಸಿಬ್ಬಂದಿ ನಿಯೋಜನೆ, ಭದ್ರತೆ, ತರಬೇತಿ ಮೊದಲಾದ ಸಿದ್ಧತೆ ನಡೆದಿದೆ. ಸಾಧ್ಯವಾದಷ್ಟು ಬೇಗ ಫಲಿತಾಂಶ ಪ್ರಕಟಿಸಲು ಪ್ರಯತ್ನಿಸಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.

‘ಏ.26ರಂದು ನಡೆದ ಚುನಾವಣೆಯಲ್ಲಿ ಒಟ್ಟು ಶೇ. 70.62ರಷ್ಟು ಮತ ಚಲಾವಣೆಯಾಗಿದೆ. 20,92,222 ಮತದಾರರ ಪೈಕಿ 14,77,571 ಮಂದಿ ಹಕ್ಕು ಚಲಾಯಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಹಂಚಿಕೆ ಮಾಡಿದ್ದ 2,088 ಸೇವಾ ಮತದಾರರ (ಇಟಿಪಿಬಿಎಂಎಸ್) ಅಂಚೆ ಮತಗಳಲ್ಲಿ 1,012 ಮತಪತ್ರಗಳು ಸ್ವೀಕೃತವಾಗಿವೆ. ಹೊರ ಜಿಲ್ಲೆಗಳಿಂದ 3,682 ಮತಪತ್ರ, ಮನೆಯಿಂದ ಮತ ಚಲಾಯಿಸಿದವರು, ಅಂಗವಿಕಲರು, ಅಗತ್ಯ ಸೇವೆ ವರ್ಗದಡಿ ಬರುವ ಗೈರುಹಾಜರಿ ಮತದಾರರು (ಎವಿಇಎಸ್) ಸೇರಿ ಒಟ್ಟು 8,606 ಮತಪತ್ರಗಳನ್ನು ಸ್ವೀಕರಿಸಲಾಗಿದೆ. ಜೂನ್‌ 4ರಂದು ಬೆಳಿಗ್ಗೆ 8ರವರೆಗೆ ಸ್ವೀಕೃತವಾಗುವ ಅಂಚೆ ಮತಪತ್ರಗಳನ್ನು ಕೂಡ ಎಣಿಕೆಗೆ ಸ್ವೀಕರಿಸಲಾಗುವುದು’ ಎಂದು ತಿಳಿಸಿದರು.

ಯಾವ ಕ್ಷೇತ್ರ, ಯಾವ ಕೊಠಡಿಯಲ್ಲಿ?

‘ಕಾಲೇಜು ಕಟ್ಟಡದ ನೆಲ ಮಹಡಿಯ ಕೊಠಡಿ ಸಂಖ್ಯೆ 11ರಲ್ಲಿ ಹುಣಸೂರು ಕ್ಷೇತ್ರ, ಮೊದಲ ಮಹಡಿಯ ಕೊಠಡಿ 103ರಲ್ಲಿ ಚಾಮರಾಜ, 111ರಲ್ಲಿ ಕೃಷ್ಣರಾಜ, 120ರಲ್ಲಿ ಚಾಮುಂಡೇಶ್ವರಿ, 126ರಲ್ಲಿ ಪಿರಿಯಾಪಟ್ಟಣ, 2ನೇ ಮಹಡಿಯ ಕೊಠಡಿ ಸಂಖ್ಯೆ 203ರಲ್ಲಿ ವಿರಾಜಪೇಟೆ, 211ರಲ್ಲಿ ಮಡಿಕೇರಿ, 218ರಲ್ಲಿ ನರಸಿಂಹರಾಜ, 220(1) ಪೋಸ್ಟಲ್‌ ಬ್ಯಾಲೆಟ್‌, 220(2)ರಲ್ಲಿ ಇಟಿಪಿಬಿಎಂಎಎಸ್‌ ಮತ ಎಣಿಕೆ ಮಾಡಲಾಗುವುದು. ಕೇಂದ್ರಕ್ಕೆ ಮೂರು ಹಂತದ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಕೇಂದ್ರದ 100 ಮೀಟರ್‌ ವ್ಯಾಪ್ತಿಯಲ್ಲಿ ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶ ಇರುವುದಿಲ್ಲ’ ಎಂದು ಹೇಳಿದರು.

‘ಅಂದು ಬೆಳಿಗ್ಗೆ 7.30ಕ್ಕೆ ಮೊಹರಾದ ಮತಯಂತ್ರಗಳನ್ನಿಟ್ಟಿರುವ ಭದ್ರತಾ ಕೊಠಡಿಯನ್ನು ತೆರೆಯಲಾಗುವುದು. ಆ ಸಮಯದಲ್ಲಿ ಅಭ್ಯರ್ಥಿಗಳು ಅಥವಾ ಅವರ ಚುನಾವಣಾ ಏಜೆಂಟರು ಹಾಜರಿರುವಂತೆ ತಿಳಿಸಲಾಗಿದೆ. ಎಣಿಕೆ ವೀಕ್ಷಕರನ್ನಾಗಿ ಎಸ್.ಇಕ್ಬಾಲ್‌ ಚೌಧರಿ ಅವರನ್ನು ಆಯೋಗ ನೇಮಿಸಿದೆ’ ಎಂದರು.

‘ಮೊದಲಿಗೆ ಅಂದರೆ ಬೆಳಿಗ್ಗೆ 8ಕ್ಕೆ ಅಂಚೆ ಮತಪತ್ರ ಎಣಿಕೆ ನಡೆಯಲಿದೆ. ಅದಾದ ಅರ್ಧ ಗಂಟೆಯ ಬಳಿಕ ಇವಿಎಂಗಳನ್ನು ಎಣಿಕೆಗೆ ತೆಗೆದುಕೊಳ್ಳಲಾಗುತ್ತದೆ. ಈ ಎಲ್ಲ ಕಾರ್ಯಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 80ರಿಂದ 100 ಮಂದಿಯನ್ನು ನಿಯೋಜಿಸಲಾಗಿದೆ’ ಎಂದು ವಿವರಿಸಿದರು.

ಮೇಜುಗಳ ವ್ಯವಸ್ಥೆ

‘ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ತಲಾ 14 ಎಣಿಕೆ ಮೇಜುಗಳನ್ನು, ಅಂಚೆ ಮತಪತ್ರ ಹಾಗೂ ಸೇವಾ ಮತದಾರರ ಅಂಚೆ ಮತಪತ್ರಗಳ ಎಣಿಕೆಗೆ 25 ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅತಿ ಹೆಚ್ಚು ಮತಗಟ್ಟೆ (343) ಹೊಂದಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಅಂದರೆ 25 ಸುತ್ತುಗಳವರೆಗೆ ಮತ ಎಣಿಕೆ ನಡೆಯಲಿದೆ. ಎಲ್ಲಾ ಅಭ್ಯರ್ಥಿಗಳು ಟೇಬಲ್‌ಗೆ ಒಬ್ಬರಂತೆ ಎಣಿಕೆ ಏಜೆಂಟರನ್ನು ನೇಮಿಸಬಹುದು. ಈ ಏಜೆಂಟರು ಮತ ಎಣಿಕೆ ಕೇಂದ್ರದಲ್ಲಿ ಅವರಿಗೆ ನಿಯೋಜಿಸಿರುವ ಸ್ಥಳದಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು ಟೇಬಲಿಗೆ ಒಬ್ಬ ಅಭ್ಯರ್ಥಿಯ ಒಬ್ಬ ಏಜೆಂಟ್ ಮಾತ್ರ ಇರಲು ಅವಕಾಶವಿದೆ’ ಎಂದು ಹೇಳಿದರು.

‘25 ಮಂದಿ ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳ ನೇಮಕಕ್ಕೆ ಅನುಮತಿ ಕೋರಲಾಗಿದೆ’ ಎಂದರು.

‘ಇವಿಎಂ ಮತ ಎಣಿಕೆ ಮತ್ತು ಅಂಚೆ ಮತಪತ್ರ, ಇಟಿಪಿಬಿಎಂಎಸ್ ಮತ ಎಣಿಕೆ ಕಾರ್ಯಕ್ಕೆ ಮೀಸಲು ಸಿಬ್ಬಂದಿ ಸೇರಿ ಒಟ್ಟು 160 ಮತ ಎಣಿಕೆ ಮೇಲ್ವಿಚಾರಕರು, 187 ಮತ ಎಣಿಕೆ ಸಹಾಯಕರು ಮತ್ತು 171 ಮತ ಎಣಿಕೆ ಮೈಕ್ರೋಅಬ್ಸರ್ವರ್ ನೇಮಕ ಮಾಡಿಕೊಳ್ಳಲಾಗಿದೆ. ಅವರಿಗೆ ಗುರುವಾರ ಒಂದು ಸುತ್ತಿನ ತರಬೇತಿ ನೀಡಲಾಗಿದ್ದು, ಜೂನ್‌ 2ರಂದು 2ನೇ ಸುತ್ತಿನ ತರಬೇತಿ ಕೊಡಲಾಗುವುದು’ ಎಂದು ತಿಳಿಸಿದರು.

ಗುರುತಿನ ಚೀಟಿ ಇಲ್ಲದಿದ್ದರೆ ಪ್ರವೇಶವಿಲ್ಲ

‘ಮತ ಎಣಿಕೆ ಕೇಂದ್ರಕ್ಕೆ ಏಜೆಂಟರು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಮೊಬೈಲ್ ಫೋನ್‌ ನಿಷೇಧಿಸಲಾಗಿದೆ. ಏಜೆಂಟರು ಪೆನ್‌ ಮತ್ತು ಹಾಳೆ ತರಬಹುದಷ್ಟೆ. ಮತ ಎಣಿಕ ಕೇಂದ್ರಕ್ಕೆ ನಿರ್ಬಂಧಿಸಿರುವ ವಸ್ತುಗಳನ್ನು ತರುವಂತಿಲ್ಲ. ಏಜೆಂಟರು ಒಮ್ಮ ಹೊರಗಡೆ ಹೋದರೆ, ಮತ್ತೆ ಒಳಗಡೆಗೆ ಸೇರಿಸಲಾಗುವುದಿಲ್ಲ. ನಿಗದಿಪಡಿಸಿದ ಮೇಜು ಹಾಗೂ ಎಣಿಕೆ ಕೇಂದ್ರವನ್ನು ಬಿಟ್ಟು ಬೇರೆಡೆ ಹೋಗುವಂತಿಲ್ಲ’ ಎಂದು ಸೂಚನೆ ನೀಡಿದರು.

‘ಮತ ಎಣಿಕೆ ಕೇಂದ್ರದಲ್ಲಿ ಮೆರವಣಿಗೆ, ಪ್ರಚೋದನಕಾರಿ ಭಾಷಣ ನಿಷೇಧಿಸಲಾಗಿದೆ. ಬೈಕ್ ರ‍್ಯಾಲಿ ನಡೆಸುವಂತಿಲ್ಲ ಹಾಗೂ ವಿಜಯೋತ್ಸವ ಮೆರವಣಿಗೆಯನ್ನೂ ನಿಷೇಧಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ತಲಾ 5 ವಿವಿಪ್ಯಾಟ್ ಮಷಿನ್‌ಗಳ ಸ್ಲಿಪ್‌ಗಳನ್ನು ಮಾತ್ರವೇ ಎಣಿಕೆ ಮಾಡಲಾಗುವುದು. ಯಾವುದನ್ನು ಎಣಿಕೆಗೆ ಪರಿಗಣಿಸಬೇಕು ಎಂಬುದನ್ನು ಏಜೆಂಟರ ಮೂಲಕವೇ ಆಯ್ಕೆ ಮಾಡಲಾಗುವುದು (ಚೀಟಿ ಎತ್ತುವ ಮೂಲಕ)’ ಎಂದು ತಿಳಿಸಿದರು.

1.25 ಕೋಟಿ ಲೀಟರ್‌ ಮದ್ಯ ವಶ

‘ನೀತಿಸಂಹಿತೆ ಜಾರಿಯಾದ ನಂತರ ಜಿಲ್ಲೆ ವ್ಯಾಪ್ತಿಯಲ್ಲಿ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ 2 ಎಫ್ಐಆರ್, ಅಬಕಾರಿ ಕಾಯ್ದೆ ಉಲ್ಲಂಘನೆಯಡಿ 110 ಎಫ್ಐಆರ್‌ ಸೇರಿ ಒಟ್ಟು 112 ಎಫ್‌ಐಆರ್ ದಾಖಲಾಗಿವೆ’ ಎಂದು ರಾಜೇಂದ್ರ ಮಾಹಿತಿ ನೀಡಿದರು.

‘ಒಟ್ಟು ₹ 3.18 ಕೋಟಿ ನಗದು ವಶಪಡಿಸಿಕೊಳ್ಳಲಾಗಿತ್ತು. ಈ ಪೈಕಿ, ಸಮರ್ಪಕ ದಾಖಲೆ ಒದಗಿಸಿದ ಹಿನ್ನೆಲೆಯಲ್ಲಿ ₹ 2.13 ಕೋಟಿ ನಗದನ್ನು ಬಿಡುಗಡೆ ಮಾಡಲಾಗಿದೆ. ₹ 1.05 ಕೋಟಿಯನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ನೀಡಲಾಗಿದೆ. 1.25 ಕೋಟಿ ಲೀಟರ್‌ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ₹ 108.81 ಕೋಟಿ ಆಗಿದೆ. ಅಂದಾಜು ಮೌಲ್ಯ ₹ 1.27 ಲಕ್ಷ ಮೌಲ್ಯದ 4.894 ಕೆ.ಜಿ. ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ವಿವರ ನೀಡಿದರು.

‘46.69 ಗ್ರಾಂ. ಚಿನ್ನ, 1,728 ಸೀರೆ ಸೇರಿ ₹ 4.65 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಅಬಕಾರಿ ಕಾಯ್ದೆಯಡಿ 33 ಎಫ್‌ಐಆರ್‌ ದಾಖಲಾಗಿವೆ. ₹ 18.01 ಲಕ್ಷ ನಗದು, 42,323.350 ಲೀಟರ್‌ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ₹ 1.27 ಕೋಟಿಯಾಗಿದೆ. ಅಂದಾಜು ₹ 1.01 ಲಕ್ಷ ಮೌಲ್ಯದ 4.713 ಕೆ.ಜಿ. ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಪೊಲೀಸ್ ಬಂದೋಬಸ್ತ್

ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾತನಾಡಿ, ‘ಮುಂಜಾಗ್ರತಾ ಕ್ರಮವಾಗಿ ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಅಂದು ಇಬ್ಬರು ಡಿಸಿ‍ಪಿ, 8 ಎಸಿಪಿ, 25 ಇನ್‌ಸ್ಪೆಕ್ಟರ್‌, 165 ಪಿಎಸ್‌ಐ, ಎಎಸ್‌ಐ, 750 ಸಿಬ್ಬಂದಿ, 4 ಕೆಎಸ್‌ಆರ್‌ಪಿ ತುಕಡಿ, 12 ಸಿಎಆರ್‌ ತುಕಡಿ, 2 ಕಮಾಂಡೊ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ನಗರದಾದ್ಯಂತ ಕೂಡ ಪೊಲೀಸ್‌ ಭದ್ರತೆ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯತ್ರಿ, ಡಿಸಿಪಿಗಳಾದ ಮುತ್ತುರಾಜ್ ಹಾಗೂ ಜಾಹ್ನವಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT