ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ ಗೆಲ್ಲಲು ಹಲವು ರೀತಿಯಲ್ಲಿ ಪ್ರಚಾರ, ವಿವಿಧ ವೇದಿಕೆ ಬಳಸುತ್ತಿರುವ ಅಭ್ಯರ್ಥಿಗಳು

Published 5 ಏಪ್ರಿಲ್ 2024, 6:36 IST
Last Updated 5 ಏಪ್ರಿಲ್ 2024, 6:36 IST
ಅಕ್ಷರ ಗಾತ್ರ

ಮೈಸೂರು: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಅಖಾಡದಲ್ಲಿರುವ ಕಾಂಗ್ರೆಸ್‌ನ ಎಂ. ಲಕ್ಷ್ಮಣ ಹಾಗೂ ಬಿಜೆಪಿ–ಜೆಡಿಎಸ್ ಮೈತ್ರಿಯ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಸಾಮಾಜಿಕ ಮಾಧ್ಯಮ ಬಳಕೆಗೂ ಒತ್ತು ನೀಡುತ್ತಿದ್ದಾರೆ. ಈ ಮೂಲಕ ‘ನವ, ಯುವ ಹಾಗೂ ಅಂತರ್ಜಾಲ ಸೌಲಭ್ಯ ಹೊಂದಿರುವ ಮೊಬೈಲ್‌ ಫೋನ್‌ ಬಳಕೆದಾರ’ರನ್ನು ತಲುಪಲು ಲಭ್ಯ ವೇದಿಕೆಯನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ.

ಇಬ್ಬರೂ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಎಕ್ಸ್‌, ಇನ್‌ಸ್ಟಗ್ರಾಂ ಖಾತೆಗಳನ್ನು ಹೊಂದಿದ್ದಾರೆ. ಈ ಮಾಹಿತಿಯನ್ನು ಅವರು ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ನೀಡಿರುವ ಪ್ರಮಾಣದಲ್ಲಿ ಹಂಚಿಕೊಂಡಿದ್ದಾರೆ. ಪಕ್ಷದಿಂದ ವಾಟ್ಸ್ಆ್ಯಪ್ ಗ್ರೂಪ್‌ಗಳನ್ನೂ ಮಾಡಲಾಗಿದೆ.

ಪ್ರಚಾರ ಕಾರ್ಯಕ್ರಮದ ಫೋಟೊಗಳು, ವಿಡಿಯೊಗಳು, ರೀಲ್ಸ್‌ ಹಾಗೂ ಟೀಸರ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಸಿಬ್ಬಂದಿ ಮೂಲಕ ಇದೆಲ್ಲವನ್ನೂ ನಿರ್ವಹಿಸುತ್ತಿದ್ದಾರೆ. ‘ಫಾಲೋವರ್‌’ಗಳನ್ನು ಮಾಡಿಕೊಳ್ಳಲು ಹಾಗೂ ಅವರನ್ನು ತಲುಪಲು ಯತ್ನಿಸುತ್ತಿದ್ದಾರೆ. ವಿವಿಧ ವಿಧಾನದಲ್ಲಿ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಹೊಸ ಖಾತೆ ತೆರೆದ ಯದುವೀರ್: ಯದುವೀರ್‌ ಈ ಹಿಂದೆ ಫೇಸ್‌ಬುಕ್ ಮಾತ್ರ ಬಳಸುತ್ತಿದ್ದರು. ಬಿಜೆಪಿಯಿಂದ ಟಿಕೆಟ್‌ ಪ್ರಕಟವಾದ ನಂತರ ‘ಎಕ್ಸ್‌’ ಮತ್ತು ‘ಇನ್‌ಸ್ಟಗ್ರಾಂ’ನಲ್ಲಿ ಖಾತೆಗಳನ್ನು ತೆರೆದಿದ್ದಾರೆ. ವೈಯಕ್ತಿಕ ಖಾತೆಯೊಂದಿಗೆ, ‘ಯದುವೀರ್‌ಬಿಜೆಪಿ’ ಎಂಬ ಹೊಸ ಖಾತೆಯನ್ನೂ ಫೇಸ್‌ಬುಕ್‌ನಲ್ಲಿ ಇತ್ತೀಚೆಗಷ್ಟೆ ತೆರೆದಿದ್ದಾರೆ. ಕೇಂದ್ರ ಸರ್ಕಾರದ ಸಾಧನೆಗಳು, ಪ್ರಧಾನಿ ನರೇಂದ್ರ ಮೋದಿ ಫೋಟೊ ಸಹಿತ ಯೋಜನೆಗಳ ಪೋಸ್ಟರ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕೆಪಿಸಿಸಿ ವಕ್ತಾರ ಆಗಿದ್ದ ಲಕ್ಷ್ಮಣ ಅವರು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅಷ್ಟೇನು ಸಕ್ರಿಯವಾಗಿರಲಿಲ್ಲ. ಆದರೆ, ಟಿಕೆಟ್ ಪಡೆದ ನಂತರ ಫೇಸ್‌ಬುಕ್‌, ‘ಎಕ್ಸ್‌’, ಇನ್‌ಸ್ಟಗ್ರಾಂ ಖಾತೆಗಳನ್ನು ತೆರೆದಿದ್ದಾರೆ. ಇದರೊಂದಿಗೆ ಪಕ್ಷಗಳ ನಿಯೋಜಿತ ಸಿಬ್ಬಂದಿಯಿಂದಲೂ ಸಾಮಾಜಿಕ ಜಾಲತಾಣದಲ್ಲಿ ಮತ ಯಾಚನೆ ಹಾಗೂ ಪ್ರಚಾರ ಕಾರ್ಯ ನಡೆಯುತ್ತಿದೆ. ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳನ್ನು ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಅವುಗಳಿಂದ ಆಗಿರುವ ಪ್ರಯೋಜನವನ್ನು ತಿಳಿಸುತ್ತಿದ್ದಾರೆ. ಪಕ್ಷದಿಂದ ಘೋಷಿಸಲಾಗಿರುವ ‘ಶ್ರಮಿಕ ನ್ಯಾಯ’ ಸೇರಿದಂತೆ ವಿವಿಧ ಗ್ಯಾರಂಟಿಗಳ ಪರಿಚಯ ಮಾಡಿಕೊಡುವ ಪ್ರಯತ್ನವೂ ನಡೆದಿದೆ.

ತಂಡ ನಿಯೋಜನೆ: ಈ ಖಾತೆಗಳಲ್ಲಿ ಅಭ್ಯರ್ಥಿಯ ಪ್ರವಾಸ ಕಾರ್ಯಕ್ರಮದ ವಿವರ, ಪ್ರಚಾರ ನಡೆಸಿದ ಚಿತ್ರ–ವರದಿ, ನಾಯಕರ ಭೇಟಿ, ಹೇಳಿಕೆಗಳು ಮೊದಲಾದವುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮತದಾರರ ಮನ ಗೆಲ್ಲುವುದಕ್ಕೆ ನಡೆಸುತ್ತಿರುವ ಕಸರತ್ತಿನ ಭಾಗವಾಗಿ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುತ್ತಿದ್ದಾರೆ. ಪೋಸ್ಟ್‌ಗಳನ್ನು ಹಾಕಲು ತಂತ್ರಜ್ಞಾನದ ಬಳಕೆಯ ಅರಿವಿರುವವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮೊಬೈಲ್‌ ಫೋನ್‌ನಲ್ಲಿ ಸಿಗುವ ಆ್ಯಪ್‍ಗಳನ್ನು ಬಳಸಿಕೊಂಡು ತುಣಕುಗಳು, ಹಾಡು, ಮುದ್ರಿತ ಸಂದೇಶಗಳನ್ನು ಸಿದ್ಧಪಡಿಸಿ ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಭರವಸೆಗಳನ್ನೂ ಆ ವೇದಿಕೆಯಲ್ಲೇ ನೀಡುತ್ತಿದ್ದಾರೆ. ಚುನಾವಣಾ ಕಚೇರಿ ಅಥವಾ ‘ವಾರ್‌ ರೂಂ’ ಮೂಲಕ ಇವುಗಳನ್ನು ನಿರ್ವಹಿಸಲಾಗುತ್ತಿದೆ. ‘ನಂಬಿಕಸ್ಥ’ರಿಗೆ ಈ ಹೊಣೆಯನ್ನು ಅಭ್ಯರ್ಥಿಗಳು ವಹಿಸಿದ್ದಾರೆ. ಸ್ಪರ್ಧಿಸಿರುವ ಇತರರು ಸಾಮಾಜಿಕ ಮಾಧ್ಯಮದಲ್ಲಿ ಅಷ್ಟೇನು ಸದ್ದು ಮಾಡುತ್ತಿಲ್ಲ. ಎಸ್‌ಯುಸಿಐಸಿಯ ಸುನೀಲ್‌ ಅವರನ್ನು ಬಿಟ್ಟರೆ ಇತರರು ಗಮನಸೆಳೆಯುವ ರೀತಿಯಲ್ಲಿ ಪ್ರಚಾರವನ್ನೂ ನಡೆಸುತ್ತಿಲ್ಲ.

‘ಹಿಂಬಾಲಕರು’ ಎಷ್ಟಿದ್ದಾರೆ?

ಗುರುವಾರ ಮಧ್ಯಾಹ್ನದವರೆಗಿನ ಮಾಹಿತಿಯಂತೆ ಯದುವೀರ್‌ ಅವರಿಗೆ ಹೆಚ್ಚು ‘ಫಾಲೋವರ್‌’ಗಳಿದ್ದಾರೆ. ಯದುವೀರ್‌ ಅವರು ಫೇಸ್‌ಬುಕ್‌ನಲ್ಲಿ ಹೊಂದಿರುವ ‘ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌’ (ಇಂಗ್ಲಿಷ್‌ನಲ್ಲಿ) ಖಾತೆಯನ್ನು 3.51 ಲಕ್ಷ ಮಂದಿ ‘ಹಿಂಬಾಲಿಸು’ತ್ತಿದ್ದಾರೆ. ಈಚೆಗೆ ತೆರೆದಿರುವ ‘ಯದುವೀರ್‌ಬಿಜೆಪಿ’ ಖಾತೆಯನ್ನು 1700 ಮಂದಿಯಷ್ಟೆ ಫಾಲೋ ಮಾಡುತ್ತಿದ್ದಾರೆ. ‘ಎಕ್ಸ್‌’ನಲ್ಲಿ 2197 ಫಾಲೋವರ್‌ಗಳಿದ್ದಾರೆ. ಇನ್‌ಸ್ಟಗ್ರಾಂನಲ್ಲಿ ಅವರ ಹಿಂಬಾಲಕರ ಸಂಖ್ಯೆ 1.93 ಲಕ್ಷ ಇದೆ. ಲಕ್ಷ್ಮಣ ಅವರಿಗೆ ಫೇಸ್‌ಬುಕ್‌ನಲ್ಲಿ 7500 ‘ಎಕ್ಸ್‌’ನಲ್ಲಿ 12 ಹಾಗೂ ಇನ್‌ಸ್ಟಗ್ರಾಂನಲ್ಲಿ 347 ಫಾಲೋವರ್‌ಗಳಿದ್ದಾರೆ.

ತಲುಪುವುದು ಉದ್ದೇಶ...

‘ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಪ್ರಚಾರದೊಂದಿಗೆ ತಂತ್ರಜ್ಞಾನವನ್ನು ಹಾಗೂ ಆದರಲ್ಲಿ ಲಭ್ಯವಿರುವ ಜಾಲತಾಣಗಳನ್ನು ಬಳಸಿಕೊಳ್ಳುವುದು ಮಹತ್ವ ಪಡೆಯುತ್ತಿದೆ. ಕ್ಷೇತ್ರದ ವ್ಯಾಪ್ತಿ ದೊಡ್ಡದಾಗಿರುವುದರಿಂದ ಅಭ್ಯರ್ಥಿಯು ಎಲ್ಲ ಗ್ರಾಮಗಳಿಗೂ ಪಟ್ಟಣಗಳಿಗೂ ಹೋಗುವುದಕ್ಕೆ ಸಾಧ್ಯವಾಗದೇ ಇರಬಹುದು. ಆದ್ದರಿಂದ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಪ್ರಚಾರ ಮಾಡಲಾಗುತ್ತಿದೆ. ಪ್ರಸ್ತುತ ಬಹುತೇಕರು ಸ್ಮಾರ್ಟ್‌ ಫೋನ್‌ ಹಾಗೂ ಇಂಟರ್‌ನೆಟ್‌ ಬಳಸುತ್ತಾರೆ. ಅಂಥವರನ್ನು ತಲುಪಲು ಪ್ರಯತ್ನಿಸಲಾಗುತ್ತಿದೆ. ಈ ಮಾಧ್ಯಮವೂ ಸಾಕಷ್ಟು ಪ್ರಭಾವ ಬೀರುತ್ತದೆ’ ಎನ್ನುತ್ತಾರೆ ಈ ಪಕ್ಷಗಳ ಮುಖಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT