ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಪರಿವೀಕ್ಷಣಾಲಯದ ಮಕ್ಕಳು

ಕರ್ನಾಟಕ ಸೇರಿದಂತೆ ದೇಶದ 10 ರಾಜ್ಯಗಳಲ್ಲಿ ಮೈಸೂರು ವಿವಿಯಿಂದ ಅಧ್ಯಯನ
Published 25 ಜೂನ್ 2024, 0:40 IST
Last Updated 25 ಜೂನ್ 2024, 0:40 IST
ಅಕ್ಷರ ಗಾತ್ರ

ಮೈಸೂರು: ಬಾಲನ್ಯಾಯ ಕಾಯ್ದೆ -2015 ಜಾರಿಗೆ ಬಂದು 9 ವರ್ಷವಾದರೂ ಅದರ ಎಲ್ಲಾ ಅಂಶಗಳು ಇಂದಿಗೂ ಸಂಪೂರ್ಣವಾಗಿ ಜಾರಿಯಾಗಿಲ್ಲ ಎಂಬ ಅಂಶ, ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ಅಧ್ಯಯನ ಕೇಂದ್ರವು (ಸಿಎಸ್‌ಎಸ್‌ಇಐಪಿ) ಕರ್ನಾಟಕ ಸೇರಿದಂತೆ ದೇಶದ ಹತ್ತು ರಾಜ್ಯಗಳಲ್ಲಿ ನಡೆಸಿದ ಅಧ್ಯಯನದಿಂದ ಹೊರಬಿದ್ದಿದೆ.

ಹೊಸ ಕಾಯ್ದೆಯ ಪ್ರಕಾರ ಕಾನೂನಿನ ಸಂಘರ್ಷಕ್ಕೆ ಒಳಗಾಗಿರುವ ಮಕ್ಕಳ ವಿಚಾರಣೆ ಪರಿವೀಕ್ಷಣಾಲಯಗಳಲ್ಲಿ ನಿಗದಿತ ನಾಲ್ಕು ತಿಂಗಳ ಕಾಲಾವಧಿಯಲ್ಲಿ ನಡೆಯುತ್ತಿಲ್ಲ. ಅದರಿಂದ ಮಕ್ಕಳು ವರ್ಷಾನುಗಟ್ಟಲೆ ಪರಿವೀಕ್ಷಣಾಲಯಗಳಲ್ಲೇ ಇರುವಂತಾಗಿದೆ.

ಸದಾ ಕೂಡಿ ಹಾಕುವುದರಿಂದ ಆ ಮಕ್ಕಳು ಕ್ರಮೇಣ ಹಲವು ಗಂಭೀರವಾದ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವ ಅಂಶ ಕಂಡುಬಂದಿದೆ. ಏಳು ಮಕ್ಕಳ ಪೈಕಿ ಒಬ್ಬರಲ್ಲಿ ಈ ಸಮಸ್ಯೆ ಇರುವುದು ಪತ್ತೆಯಾಗಿದೆ. ಅದರಲ್ಲೂ ಆತಂಕ ಮತ್ತು ಖಿನ್ನತೆಯಿಂದ ಮತ್ತು ಆಕ್ರಮಣಕಾರಿ ಸಮಸ್ಯೆಗಳಿಂದ ಹೆಚ್ಚಿನ ಮಕ್ಕಳು ಬಳಲುತ್ತಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಸಿಎಸ್‌ಎಸ್‌ಇಐಪಿ ಕೇಂದ್ರದ ಸಹ ಪ್ರಾಧ್ಯಾಪಕ ಡಿ.ಸಿ. ನಂಜುಂಡ ಮತ್ತು ತಂಡವು ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ, ಹರಿಯಾಣ, ನವದೆಹಲಿ, ಅಸ್ಸಾಂ, ಒರಿಸ್ಸಾ, ಮಣಿಪುರ, ಜಾರ್ಖಂಡ್‌ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಕ್ರೋಢೀಕರಿಸಿ ಅಧ್ಯಯನ ನಡೆಸಿದೆ.

‘ನವದೆಹಲಿಯ ಪೊಲೀಸ್ ಸಂಶೋಧನಾ ಮತ್ತು ಅಭಿವೃದ್ಧಿ ಬ್ಯೂರೊ ಈ ಅಧ್ಯಯನವನ್ನು ಪ್ರಾಯೋಜಿಸಿತ್ತು. 340 ಪುಟಗಳ ವರದಿಯನ್ನು ಆ ಬ್ಯೂರೊಗೆ ಈಗಾಗಲೇ ಸಲ್ಲಿಸಲಾಗಿದೆ. ₹ 19 ಲಕ್ಷ ಅನುದಾನ ದೊರೆತಿತ್ತು. ಅಧ್ಯಯನಕ್ಕೆ ಎರಡು ವರ್ಷ ತೆಗೆದುಕೊಳ್ಳಲಾಗಿದೆ’ ಎಂದು ಡಿ.ಸಿ. ನಂಜುಂಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಕ್ಕಳು ಜಾಮೀನು ಪಡೆಯುವ ಅಪರಾಧ ಮಾಡಿದ್ದರೂ ಜಾಮೀನು ನೀಡಲು ಹೆಚ್ಚಿನ ಪೋಷಕರು ಮುಂದೆ ಬರುತ್ತಿಲ್ಲ. ಬಡತನ ಮತ್ತಿತ್ತರ ಕಾರಣಗಳಿಂದ ಪರಿವೀಕ್ಷಣಾಲಯಗಳಲ್ಲೇ ಬಿಡಲು ಬಯಸುತ್ತಿದ್ದಾರೆ. ಕೆಲವು ಮಕ್ಕಳಲ್ಲಿ ಮಾನಸಿಕ ಕಾಯಿಲೆಗಳು ಪ್ರಕಟವಾದರೂ ಹೆಚ್ಚಿನ ಮಕ್ಕಳಲ್ಲಿ ಗುಪ್ತವಾಗಿದ್ದು ಹೊರನೋಟಕ್ಕೆ ಕಂಡುಬರುತ್ತಿಲ್ಲ. ಕೆಲವರಲ್ಲಿ ಕಾಯಿಲೆಗಳು ಆರಂಭಿಕ ಹಂತದಲ್ಲಿವೆ ಮತ್ತು ಕೆಲವರಲ್ಲಿ ಆತಂಕಕಾರಿ ಹಂತ ದಾಟಿದೆ ಎಂಬ ಕಳವಳಕಾರಿ ಅಂಶ ಅಧ್ಯಯನದಿಂದ ತಿಳಿದುಬಂದಿದೆ’ ಎಂದು ಮಾಹಿತಿ ನೀಡಿದರು.

‘ಕೆಲವು ಮಕ್ಕಳು ಕದ್ದು ಮುಚ್ಚಿ ಮಾದಕ ವಸ್ತು ಬಳಸುತ್ತಿರುವುದನ್ನು ಗಮನಿಸಲಾಗಿದೆ. ಸಣ್ಣ ವಯಸ್ಸಿನಲ್ಲಿ ಕಂಡುಬರುವ ಮತ್ತು ಸೂಕ್ತ ಚಿಕಿತ್ಸೆ ದೊರಕದ ಮಾನಸಿಕ ಕಾಯಿಲೆಗಳೇ ಮಕ್ಕಳು ಅಪರಾಧ ಕೃತ್ಯ ನಡೆಸಲು ಕಾರಣವಾಗಬಹುದು ಎಂಬ ಮುಖ್ಯ ಅಂಶ ತಿಳಿದುಬಂದಿದೆ’ ಎಂದು ತಿಳಿಸಿದರು.

‘ಅಲ್ಲದೇ ಕೆಲವು ಪರಿವೀಕ್ಷಣಾಲಯದಲ್ಲಿ ಮಕ್ಕಳನ್ನು ನಿಯಂತ್ರಿಸಲು ಕ್ರೂರ ಶಿಕ್ಷೆಯನ್ನು ನೀಡುತ್ತಿದ್ದು, ಇದು ಸಹ ಮಾನಸಿಕ ಕಾಯಿಲೆಗಳು ಉಂಟಾಗಲು ಕಾರಣವಾಗಬಹುದು’ ಎನ್ನುತ್ತಾರೆ ನಂಜುಂಡ.

‘ಸೃಜನಶೀಲ ಚಟುವಟಿಕೆಗಳು ಮಕ್ಕಳನ್ನು ಅವರ ಮಾನಸಿಕ ಒತ್ತಡದಿಂದ ಹೊರಬರಲು ಪ್ರೇರೇಪಿಸುತ್ತವೆ. ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ಮಕ್ಕಳನ್ನು ಧನಾತ್ಮಕವಾಗಿ ಪ್ರೇರೇಪಿಸಲು ಮತ್ತು ಅವರ ಜೀವನದಲ್ಲಿ ರಚನಾತ್ಮಕ ಬದಲಾವಣೆಗಳನ್ನು ತರಲು ಚಿತ್ರಕಲೆ, ಕರಕುಶಲ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಅಗತ್ಯವಿದೆ. ಕೆಲವು ಪರಿವೀಕ್ಷಣಾಲಯಗಳು ಇಂತಹ ಕಾರ್ಯಕ್ರಗಳನ್ನು ಹಮ್ಮಿಕೊಂಡಿವೆ. ಅವುಗಳ ಪರಿಣಾಮ ಕುರಿತು ಮೌಲ್ಯ ಮಾಪನದ ಅಗತ್ಯವಿದೆ’ ಎಂದು ತಿಳಿಸಿದರು.

ಅಧ್ಯಯನ ತಂಡದಲ್ಲಿ ಎಸ್. ರಮೇಶ್, ಸೋಹನ್ ಮತ್ತು ಮಹೇಶ್ ಪಾಲ್ಗೊಂಡಿದ್ದರು.

ಮಧ್ಯಪ್ರದೇಶದ ಉಜ್ಜಯಿನಿಯ ಪರಿವೀಕ್ಷಣಾಲಯಕ್ಕೆ ಭೇಟಿ ನೀಡಿದ್ದ ಅಧ್ಯಯನ ತಂಡವು ಅಲ್ಲಿನ ಸಿಬ್ಬಂದಿಯೊಂದಿಗೆ
ಮಧ್ಯಪ್ರದೇಶದ ಉಜ್ಜಯಿನಿಯ ಪರಿವೀಕ್ಷಣಾಲಯಕ್ಕೆ ಭೇಟಿ ನೀಡಿದ್ದ ಅಧ್ಯಯನ ತಂಡವು ಅಲ್ಲಿನ ಸಿಬ್ಬಂದಿಯೊಂದಿಗೆ

‘ಹಾರರ್ ಚಿತ್ರ ನೋಡುತ್ತಾರೆ!’

‘ಪರಿವೀಕ್ಷಣಾಲಯಗಳಲ್ಲಿ ಮಕ್ಕಳು ಹಾರರ್ ಚಲನಚಿತ್ರಗಳನ್ನು ವೀಕ್ಷಿಸುವುದು ಕಂಡುಬಂದಿದೆ! ಅಲ್ಲಿ ಮಕ್ಕಳ ಸ್ನೇಹಿ ವಾತಾವರಣವಿಲ್ಲ’ ಎಂದು ನಂಜುಂಡ ವಿವರಿಸಿದರು. ‘ಬಹುತೇಕ ಕಡೆ ಆಪ್ತಸಮಾಲೋಚಕರ ಕೊರತೆ ಇದೆ. ಆಪ್ತ ಸಮಾಲೋಚಕರಾಗಿರುವ ಎಂಎಸ್‍ಡಬ್ಲ್ಯು ಪಧವೀಧರರಿಗೆ ಸೂಕ್ತ ತರಬೇತಿ ಇಲ್ಲ. ಬಾಲಾಪರಾಧಿಗಳ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ತಕ್ಷಣ ಕ್ಲಿನಿಕಲ್  ಸೈಕಾಲಜಿಸ್ಟ್‌ಗಳ ಅಗತ್ಯವಿದೆ’ ಎಂದರು.

ಬಾಲಕಿಯರಿಗೆ ಪ್ರತ್ಯೇಕವಿಲ್ಲ

ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಬಾಲಕಿಯರಿಗೆ ಪ್ರತ್ಯೇಕ ಪರಿವೀಕ್ಷಣಾಲಯ ಎಲ್ಲೂ ಕಂಡುಬಂದಿಲ್ಲ. 65 ವರ್ಷ ಹಳೆಯದಾದ ಮಕ್ಕಳ ಪಾಲನಾ ಸಂಸ್ಥೆಗಳ ರಚನೆ ಮತ್ತು ಕಾರ್ಯವೈಖರಿಯನ್ನು ಸಂಪೂರ್ಣವಾಗಿ ಬದಲಿಸಬೇಕು. ಉನ್ನತ ತರಬೇತಿ ಪಡೆದ ಮನೋರೋಗ ತಜ್ಞರ ಸೇವೆ ಆಗಾಗ ಅಗತ್ಯ. ಅದಕ್ಕಾಗಿ ಸ್ಥಳೀಯ ವೈದ್ಯಕೀಯ ಕಾಲೇಜುಗಳ ಸಹಾಯವನ್ನು ಪಡೆದುಕೊಳ್ಳಬೇಕೆಂಬ ಅಭಿಪ್ರಾಯ ವರದಿಯಲ್ಲಿ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT