ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Mysuru Dasara 2023 | ಆಹಾರ ಮೇಳಕ್ಕೆ ಸಿದ್ಧತೆ ಜೋರು

ಮಳಿಗೆ ತೆರೆಯಲು 400ಕ್ಕೂ ಅಧಿಕ ಆರ್ಜಿ ಸಲ್ಲಿಕೆ; 140ಕ್ಕೂ ಹೆಚ್ಚು ಮಳಿಗೆ ಸ್ಥಾಪನೆ
Published 11 ಅಕ್ಟೋಬರ್ 2023, 6:12 IST
Last Updated 11 ಅಕ್ಟೋಬರ್ 2023, 6:12 IST
ಅಕ್ಷರ ಗಾತ್ರ

ವರದಿ: ರಾಘವೇಂದ್ರ ಎಂ.ವಿ

ಮೈಸೂರು: ದಸರಾ ಮಹೋತ್ಸವದ ವಿಶೇಷ ಆಕರ್ಷಣೆಗಳಲ್ಲಿ ಒಂದಾದ ಆಹಾರ ಮೇಳ ಈ ಬಾರಿ ‘ರುಚಿ ಕೈರುಚಿ ಅಭಿರುಚಿ’ ಎಂಬ ಸಂದೇಶದೊಂದಿಗೆ ಆಹಾರ ಪ್ರಿಯರ ಗಮನ ಸೆಳೆಯಲಿದೆ.

‌ಸ್ಥಳೀಯ ಹಾಗೂ ಹೆಚ್ಚು ಜನಪ್ರಿಯವಾದ ತಿನಿಸುಗಳನ್ನು ಪ್ರವಾಸಿಗರಿಗೆ ಉಣಬಡಿಸಲು ಹಾಗೂ ಸ್ಥಳೀಯರನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಸಿದ್ಧತೆ ಬಿರುಸುಗೊಂಡಿದೆ.

ನಗರದ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್‌ ಮೈದಾನದಲ್ಲಿ ಅ.15ರಿಂದ 22ರವರೆಗೆ ಆಹಾರ ಮೇಳ ನಡೆಯಲಿದೆ. ಮೇಳಕ್ಕೆ ಬರುವ ಗ್ರಾಹಕರನ್ನು ರಂಜಿಸಲು ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ. ಅಡುಗೆ ಸ್ಪರ್ಧೆ, ಭೋಜನ ಸ್ಪರ್ಧೆಯೂ ಹೆಚ್ಚು ಜನರನ್ನು ಆಕರ್ಷಿಸಿ ನೋಡುಗರ ಕಣ್ಣಿಗೂ ಹಬ್ಬದ ಸವಿಯನ್ನು ಉಣಬಡಿಸಲಿದೆ.

ಮೈಸೂರು, ಕೊಡಗು, ಕರಾವಳಿ, ಉತ್ತರ ಕರ್ನಾಟಕ ಶೈಲಿ ಆಹಾರ, ಸಾಂಪ್ರದಾಯಿಕ ಹಾಗೂ ವಿದೇಶಿ ಶೈಲಿಯ ತಿನಿಸುಗಳು ಈ ಬಾರಿಯ ದಸರಾ ಆಹಾರ ಮೇಳದ ವಿಶೇಷ ಆಕರ್ಷಣೆಯಾಗಿರಲಿವೆ. ಪ್ರಾದೇಶಿಕ, ದೇಸಿ, ಗ್ರಾಮೀಣ, ಪಾರಂಪರಿಕ ಶೈಲಿಯ ಆಹಾರಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಮಲೆನಾಡಿನ ಖಾದ್ಯದೊಂದಿಗೆ ಸಿರಿಧಾನ್ಯ ತಿನಿಸುಗಳೂ ಇರಲಿವೆ. ಜೊತೆಗೆ ಬೇಕರಿ, ಕಾಂಡಿಮೆಂಟ್ಸ್‌ ಮಳಿಗೆಗಳೂ ತೆರೆಯಲಿವೆ.

‘ಆಹಾರ ಮೇಳಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಲಭಿಸಿದೆ. ವ್ಯಾಪಾರಿಗಳಿಂದ 400ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಒಟ್ಟು 140ಕ್ಕೂ ಹೆಚ್ಚು ಆಹಾರ ಮಳಿಗೆಗಳು ಇರಲಿವೆ. ಸಸ್ಯಾಹಾರಿ ಮಳಿಗೆಗೆ ₹50 ಸಾವಿರ ಹಾಗೂ ಮಾಂಸಾಹಾರಿ ಮಳಿಗೆಗೆ ₹75 ಸಾವಿರ ನಿಗದಿ ಪಡಿಸಿದ್ದು, ಪ್ರತ್ಯೇಕವಾಗಿ ಮಳಿಗೆಗಳನ್ನು ಹಾಕಲಾಗುತ್ತಿದೆ’ ಎಂದು ಆಹಾರ ಮೇಳದ ಕಾರ್ಯಾಧ್ಯಕ್ಷೆ ಕುಮುದಾ ಶರತ್‌ ಮಾಹಿತಿ ನೀಡಿದರು.

‘ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ, ದಕ್ಷಿಣ ಕನ್ನಡ, ಹಾವೇರಿ, ದಾವಣಗೆರೆ, ಬೆಳಗಾವಿ, ಉತ್ತರ ಕನ್ನಡ, ಬೆಂಗಳೂರು, ಧಾರವಾಡ, ಬೀದರ್‌ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ನೆರೆ ರಾಜ್ಯದ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳಿಂದಲೂ ಪಾಲ್ಗೊಳ್ಳುವರು’ ಎಂದರು.

‘ಸಂಚಾರ ದಟ್ಟಣೆ, ಜನಜಂಗುಳಿ ಹೆಚ್ಚಾಗುವ ಹಿನ್ನೆಲೆಯಲ್ಲಿ ಸ್ವಚ್ಛತೆ, ಪಾರ್ಕಿಂಗ್ ಕೊರತೆ ಹಾಗೂ ಇನ್ನಿತರ ಸಮಸ್ಯೆಗಳು ಎದುರಾಗದಂತೆ ಕ್ರಮ ಕೈಗೊಳ್ಳಲಾಗುವುದು. ಮಳೆ ಬಂದಾಗ ಆಶ್ರಯ ಪಡೆಯಲು ಶೆಟ್ಟರ್‌ ತೆರೆಯಲಾಗುವುದು. ವಿಶಾಲವಾದ ಮೈದಾನ, ಕುಡಿಯುವ ನೀರಿನ ಸೌಲಭ್ಯ, ವಾಹನ ನಿಲುಗಡೆಗೆ ಜಾಗ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು. ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆಗೆ ಕೋರಲಾಗಿದ್ದು, ಕಂಟ್ರೋಲ್‌ ರೂಂ ತೆರೆಯಲಾಗುವುದು’ ಎಂದು ತಿಳಿಸಿದರು.

‘ಎಲ್ಲ ವರ್ಗದ ಜನರ ಅಭಿರುಚಿಗಳನ್ನು ಗಮನದಲ್ಲಿಟ್ಟುಕೊಂಡು ವೈವಿಧ್ಯಮಯ ಆಹಾರ ಪದಾರ್ಥ ಸಿಗುವಂತೆ ಮಾಡಲಾಗಿದೆ. ಸ್ಥಳೀಯವಾಗಿಯೇ ತಯಾರಿಸಿ ಶುಚಿ-ರುಚಿಯಾದ ಊಟ ಹಾಗೂ ಇತರ ತಿಂಡಿ ತಿನಿಸುಗಳನ್ನು ಪ್ರವಾಸಿಗರಿಗೆ ಒದಗಿಸುವ ಉದ್ದೇಶ ಮೇಳದ್ದಾಗಿದೆ. ಎಲ್ಲವೂ ಪರಿಸರ ಸ್ನೇಹಿಯಾಗಿ ಇರಲಿದೆ. ತಟ್ಟೆ ಇಡ್ಲಿ, ಮುದ್ದೆ ಉಪ್ಸಾರು, ಸೊಪ್ಪಿನ ಸಾರು, ನಾಟಿ ಕೋಳಿ ಸಾರು, ಅಕ್ಕಿ ರೊಟ್ಟಿ ಕರಿ, ದೋಸೆ, ಸ್ವೀಟ್ಸ್, ಪಾನಿಪುರಿ ಚಾಟ್ಸ್, ಚೈನಿಸ್‌ ಆಹಾರ ಇನ್ನಿತರ ಆಹಾರ ಸೇರಿದಂತೆ ವಿವಿಧ ಬಗೆಯ ಮಾಂಸಾಹಾರ ಖಾದ್ಯಗಳು ಮೇಳದಲ್ಲಿ ಸವಿಯಬಹುದು’ ಎಂದರು.

ಅ.15ರಿಂದ 22ರವರೆಗೆ ಆಹಾರ ಮೇಳ ನಗರದ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್‌ ಮೈದಾನದಲ್ಲಿ ವ್ಯವಸ್ಥೆ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ

ಮಳಿಗೆ ಶುಲ್ಕವನ್ನು ದುಪ್ಪಟ್ಟು ಮಾಡಲಾಗಿದೆ. ಗರಿಷ್ಠ ₹35 ಸಾವಿರಕ್ಕೆ ಸೀಮಿತಗೊಳಿಸಬೇಕು. ಆಹಾರ ಮೇಳವನ್ನು ಅ.24ರವರೆಗೆ ನಡೆಸಬೇಕು. ಮಳಿಗೆದಾರರಿಗೆ ಗುರುತಿನ ಚೀಟಿ ವಾಹನ ಪಾಸ್‌ ನೀಡಬೇಕು.

-ಎಸ್‌.ನಾಗರಾಜು ಅಧ್ಯಕ್ಷ ಆಹಾರ ಮೇಳದ ವ್ಯಾಪಾರಸ್ಥರ ಸಂಘ

ಒಂದೆಡೆ ಮಾತ್ರ ಆಯೋಜನೆ

‘ದಸರಾ ಮಹೋತ್ಸವ ಅಂಗವಾಗಿ ಆಯೋಜಿಸುವ ಆಹಾರ ಮೇಳವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಈ ಬಾರಿ ಒಂದೆಡೆ ಮಾತ್ರ ಆಯೋಜಿಸಲು ತೀರ್ಮಾನಿಸಲಾಗಿದೆ’ ಎಂದು ಆಹಾರ ಮೇಳದ ಕಾರ್ಯಾಧ್ಯಕ್ಷೆ ಕುಮುದಾ ಶರತ್‌ ತಿಳಿಸಿದರು. ‘ಕಳೆದ ಬಾರಿ ಎರಡ್ಮೂರು ಕಡೆ ತೆರೆಯಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಲಿಲ್ಲ. ಯಾರಿಗೂ ಆಸಕ್ತಿ ಇರಲಿಲ್ಲ. ನಿರ್ಮಿಸಿದ  ಮಳಿಗೆಗಳು ಹಾಗೇ ಖಾಲಿಯಿದ್ದವು. ಸಮಿತಿಗೆ ನಿರ್ಮಾಣ ವೆಚ್ಚ ಹೊರೆಯಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT