ಮೈಸೂರು: ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಕಲಾವಿದರು ಮತ್ತು ಕಲಾತಂಡಗಳಿಂದ ಸಾಕಷ್ಟು ಬೇಡಿಕೆ ಬಂದಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕೃತ ಆಹ್ವಾನಕ್ಕೂ ಮುನ್ನವೇ ಅರ್ಜಿಗಳು ಸಲ್ಲಿಕೆಯಾಗುತ್ತಿವೆ!
ವಿಶ್ವ ವಿಖ್ಯಾತಿಯಾದ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಬೇಕೆಂಬುದು ಕಲಾವಿದರು ಹಾಗೂ ಕಲಾತಂಡಗಳ ಹೆಬ್ಬಯಕೆ. ಅದರಲ್ಲೂ ಅಂಬಾವಿಲಾಸ ಅರಮನೆ ಆವರಣದ ವೇದಿಕೆಯಲ್ಲಿ ಪ್ರತಿಭೆ ಪ್ರದರ್ಶಿಸಲು ಕಲಾವಿದರು ಹೆಮ್ಮೆಯಿಂದಲೇ ಮುಗಿಬೀಳುತ್ತಾರೆ.
ಕಲಾರಸಿಕರು ವಿವಿಧ ಕಲಾ ಪ್ರಕಾರಗಳನ್ನು ನೋಡುವ ಹಾಗೂ ಕೇಳಿ ಆನಂದಿಸುವ ಅವಕಾಶ ಉತ್ಸವದಲ್ಲಿ ದೊರೆಯುತ್ತದೆ. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವೇದಿಕೆ ಕಲ್ಪಿಸುತ್ತದೆ. ಖ್ಯಾತನಾಮರನ್ನು ಸಾಂಸ್ಕೃತಿಕ ಉಪ ಸಮಿತಿಯಿಂದ ಆಹ್ವಾನಿಸಲಾಗುತ್ತದೆ. ಆದರೆ, ಬಹಳಷ್ಟು ಕಲಾವಿದರು ಸ್ವಯಂ ಅರ್ಜಿ ಸಲ್ಲಿಸಿ ಅವಕಾಶ ಕೇಳುತ್ತಾರೆ. ಅವರಲ್ಲಿ ಕೆಲವರಿಗೆ ಅವಕಾಶ ನೀಡಲಾಗುತ್ತಿದೆ.
ಅಧಿಕೃತ ಆಹ್ವಾನ ಶೀಘ್ರ: ‘ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಸಂಬಂಧ ಅವಕಾಶ ಕೋರಿ, ನೃತ್ಯ ಹಾಗೂ ಸಂಗೀತ ಕ್ಷೇತ್ರದವರಿಂದ 25ಕ್ಕೂ ಹೆಚ್ಚಿನ ಅರ್ಜಿಗಳು ಬಂದಿವೆ. ಅರಮನೆ ವೇದಿಕೆ ಸೇರಿದಂತೆ ವಿವಿಧ ವೇದಿಕೆಗಳಲ್ಲಿಯೂ ಅವಕಾಶಕ್ಕಾಗಿ ಕಲಾವಿದರು ಅರ್ಜಿ ಸಲ್ಲಿಸಿದ್ದಾರೆ. ಉಪ ಸಮಿತಿಗಳು ರಚನೆಯಾದ ಬಳಿಕ ಅರ್ಜಿಗಳನ್ನು ಆಹ್ವಾನಿಸಲಾಗುವುದು’ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಹಿಂದಿನ ವರ್ಷ ಬರಗಾಲದ ಕಾರಣದಿಂದ ‘ಅದ್ದೂರಿ’ ಎಂಬ ಪದವನ್ನು ಸರ್ಕಾರ ಬಳಸಿರಲಿಲ್ಲ. ಆದರೆ, ಯಾವ ಕಾರ್ಯಕ್ರಮಗಳೂ ರದ್ದಾಗಿರಲಿಲ್ಲ! ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಮತ್ತಷ್ಟು ವೇದಿಕೆಗಳ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಕೆಲವು ಬಡಾವಣೆಗಳ ಜನರಿಗೆ ರಸದೌತಣ ಸವಿಯುವ ಅವಕಾಶವನ್ನೂ ಕಲ್ಪಿಸಲಾಗಿತ್ತು.
ಈ ಬಾರಿ, ಇಲ್ಲಿಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲು ಉದ್ದೇಶಿಸಲಾಗಿದೆ.
ಬಹಳಷ್ಟು ಮಂದಿಗೆ ಅವಕಾಶ
‘9 ದಿನಗಳವರೆಗೆ ಸಾಂಸ್ಕೃತಿಕ ಸಂಭ್ರಮ ನಡೆಯಲಿದ್ದು ಒಂದು ವೇದಿಕೆಯಲ್ಲಿ 9 ದಿನಕ್ಕೆ ಒಟ್ಟು 36 ಕಾರ್ಯಕ್ರಮ ಆಗುತ್ತವೆ. ಅದರಂತೆ ಸರಾಸರಿ 360 ತಂಡಗಳಿಗೆ ಅವಕಾಶ ಆಗಲಿದೆ. 5 ಸಾವಿರ ಕಲಾವಿದರಿಗೆ ಅವಕಾಶ ಕಲ್ಪಿಸಬಹುದು’ ಎಂದು ಮೂಲಗಳು ತಿಳಿಸಿವೆ.
ಹಿಂದಿನ ವರ್ಷ ಅರಮನೆ ವೇದಿಕೆಯಲ್ಲಿ ಅಂಗವಿಕಲ ಕಲಾವಿದರಿಗೆ ಅವಕಾಶ ಕೊಡಲಾಗಿತ್ತು. ಸುಡುಗಾಡು ಸಿದ್ದರಿಂದ ಕಾರ್ಯಕ್ರಮ ಸೇರಿದಂತೆ ವಿವಿಧ ವಿಶೇಷಗಳನ್ನು ಜೋಡಿಸಲಾಗಿತ್ತು. ಈ ಬಾರಿಯೂ ‘ಕಾರ್ಯಕ್ರಮ ವೈವಿಧ್ಯ’ ಇರಲಿದೆ. ಕಲಾವಿದರ ಸಂಭಾವನೆಗೆಂದೇ ₹1.60 ಕೋಟಿ ಅನುದಾನ ಬೇಕು. ಜತೆಗೆ ಸಂಘಟನಾ ವೆಚ್ಚವನ್ನೂ ಕೋರಲಾಗುತ್ತದೆ. ಹಿಂದಿನ ವರ್ಷ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ 2450ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು.
ಎಲ್ಲೆಲ್ಲಿ ಕಾರ್ಯಕ್ರಮ?
ಉತ್ಸವದಲ್ಲಿ ಮುಖ್ಯವಾಗಿ ಅಂಬಾವಿಲಾಸ ಅರಮನೆ ಆವರಣ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಪುರಭವನ ಜಗನ್ಮೋಹನ ಅರಮನೆ ಚಿಕ್ಕ ಗಡಿಯಾರ ಕಲಾಮಂದಿರ ಕಲಾಮಂದಿರ ಆವರಣದ ಕಿರು ರಂಗಮಂದಿರ ನಾದಬ್ರಹ್ಮ ಸಂಗೀತ ಸಭಾ ಗಾನಭಾರತಿ ವೇದಿಕೆ ‘ನಟನ’ ರಂಗಶಾಲೆ ರಮಾಗೋವಿಂದ ರಂಗಮಂದಿರ ಹಾಗೂ ನಂಜನಗೂಡಿನ ಅರಮನೆ ಮಾಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದವು. ದಸರಾ ಉದ್ಘಾಟನೆಯ ದಿನದಂದೇ ಸಂಜೆ 6ಕ್ಕೆ ಅಂಬಾವಿಲಾಸ ಅರಮನೆ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಉದ್ಘಾಟಿಸುತ್ತಾರೆ. ಅದೇ ವೇಳೆ ಸಂಗೀತ ಕ್ಷೇತ್ರದ ಸಾಧಕರೊಬ್ಬರಿಗೆ ‘ರಾಜ್ಯ ಸಂಗೀತ ವಿದ್ವಾನ್ ಪುರಸ್ಕಾರ’ವನ್ನೂ ನೀಡಲಾಗುತ್ತಿದೆ. ಸಾಧಕರನ್ನು ಅಂತಿಮಗೊಳಿಸುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.
ಈ ಬಾರಿ ಹಿಂದಿನ ವರ್ಷಕ್ಕಿಂತಲೂ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಸಾರ್ವಜನಿಕರಿಗೆ ಸಾಂಸ್ಕೃತಿಕ ಸೌರಭ ಉಣಬಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುವುದು.-ಎಂ.ಡಿ. ಸುದರ್ಶನ್, ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.