ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸರಣಿ ವರದಿ ಪರಿಣಾಮ: ಕುಕ್ಕರಹಳ್ಳಿ ಕೆರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ

ಕುಕ್ಕರ ಹಳ್ಳಿಕೆರೆ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್ ತಯಾರಿಸಿ ವಿಶ್ವವಿದ್ಯಾನಿಲಯದಿಂದ ಸಿಎಸ್ ಆರ್ ಅನುದಾನ ಬಳಸಿಕೊಳ್ಳಲು ಕ್ರಮ ವಹಿಸಲಾಗುವುದು ಎಂದ ಜಿಲ್ಲಾಧಿಕಾರಿ
Published 27 ಮೇ 2023, 5:55 IST
Last Updated 27 ಮೇ 2023, 5:55 IST
ಅಕ್ಷರ ಗಾತ್ರ

ಮೈಸೂರು: ನಗರದ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆಗೆ ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಅವರು ಭೇಟಿ ನೀಡಿ, ಕೆರೆ ಅಭಿವೃದ್ಧಿ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದರು.

'ಕೆರೆ ಅಭಿವೃದ್ಧಿ ಮಾಡುವುದು ಅಗತ್ಯವಾಗಿದೆ. ಕೆರೆಯ ಆವರಣದಲ್ಲಿರುವ ಜಾಗಿಂಗ್‌ ಟ್ರ್ಯಾಕ್‌ ಅಭಿವೃದ್ಧಿಪಡಿಸಬೇಕು. ಕಸ ತೆರವು, ರಕ್ಷಣಾ ಬಲೆ ಅಳವಡಿಕೆ ಹಾಗೂ ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಬೇಕು. ದುರ್ವಾಸನೆ ಬರುತ್ತಿರುವ ಭಾಗದಲ್ಲಿ ಹೂಳೆತ್ತಬೇಕು. ಕೆರೆ ಸ್ವಚ್ಛಗೊಳಿಸಬೇಕು. ಬೋಟ್‌ ದುರಸ್ತಿ ಮಾಡಿಸಿ ವಿಹಾರಕ್ಕೆ ಚಾಲನೆ ಕೊಡಬೇಕು' ಎಂದು ಅಧಿಕಾರಿಗಳಿಗೆ ಸೂಚಿಸಿದರು.

'ಕುಕ್ಕರ ಹಳ್ಳಿಕೆರೆ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್ ತಯಾರಿಸಿ ವಿಶ್ವವಿದ್ಯಾನಿಲಯದಿಂದ ಸಿಎಸ್ ಆರ್ ಅನುದಾನ ಬಳಸಿಕೊಳ್ಳಲು ಕ್ರಮ ವಹಿಸಲಾಗುವುದು ಎಂದು‌ ಭರವಸೆ ನೀಡಿದರು.

'ಕೆರೆಯ ಅಭಿವೃದ್ಧಿ ಮತ್ತು ಸರಿಯಾದ ನಿರ್ವಹಣೆಯಲ್ಲಿ ಸಾರ್ವಜನಿಕರ ಪಾತ್ರವೂ ಮುಖ್ಯ. ಸಾರ್ವಜನಿಕರು ಕೆರೆಯನ್ನು ಸ್ವಚ್ಛವಾಗಿಡುವಲ್ಲಿ ಸಹಕರಿಸಬೇಕು' ಎಂದು ತಿಳಿಸಿದರು.

ಪರಿಸರವಾದಿ ಪ್ರೊ. ಎಂ ರವಿಕುಮಾರ್ ಮಾತನಾಡಿ, 'ಈ ಕೆರೆಯು ಹಲವಾರು ಜೀವ ವೈವಿಧ್ಯತೆಗಳಿಂದ ಕೂಡಿದ್ದು, ಇಲ್ಲಿನ ಪರಿಸರ ವ್ಯವಸ್ಥೆ ಬಹಳ ಸ್ವಾಭಾವಿಕವಾಗಿ ರೂಪುಗೊಂಡಿದೆ. ಅವುಗಳಿಗೆ ಅಡಚಣೆಯಾಗದಂತೆ ಹಾಗೂ ಸಾರ್ವಜನಿಕರಿಗೂ ಉಪಯುಕ್ತವಾಗುವಂತೆ ಅಭಿವೃದ್ಧಿ ಕಾರ್ಯಗಳು ನಡೆಯಬೇಕು' ಎಂದರು.

'ಕೆರೆಯು ಬಹಳ ವಿಶಾಲವಾಗಿದ್ದು, ಸಾರ್ವಜನಿಕರಿಗೆ ಉತ್ತಮ ಜಾಗಿಂಗ್ ವಾತಾವರಣವನ್ನು ನೀಡಿದೆ. ಆದರೆ ಕೆರೆಯ ನಿರ್ವಹಣೆಯಲ್ಲಿ ಮತ್ತಷ್ಟು ಸುಧಾರಣೆಯಾಗಬೇಕಿದೆ. ನಿಗದಿತ ಸಮಯದ ನಂತರ ಅಂದರೆ ಬೆಳಗ್ಗೆ 9 ಗಂಟೆಯ ನಂತರ ಸಂಜೆ ಐದು ಗಂಟೆಯವರೆಗೆ ನಿಗದಿತ ಶುಲ್ಕದೊಂದಿಗೆ ಕೆರೆ ಭೇಟಿಗೆ ಅವಕಾಶ ನೀಡಬೇಕು ಇದರಿಂದ ಬೆಳಗ್ಗೆ ಮತ್ತು ಸಂಜೆ ವ್ಯಾಯಾಮಕ್ಕಾಗಿ ಬರುವ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ' ಎಂದು ಸ್ಥಳದಲ್ಲಿದ್ದ ವಾಯುವಿಹಾರಿಗಳು ಮನವಿ ಮಾಡಿದರು.

ಮಹಾನಗರ ಪಾಲಿಕೆಯ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಲೋಕನಾಥ್ ಎನ್ ಕೆ, ಕುಲಸಚಿವರಾದ ಶೈಲಜಾ ಹಾಜರಿದ್ದರು.

ಪ್ರಜಾವಾಣಿಯಲ್ಲಿ ಆರು ದಿನಗಳಿಂದ 'ಕುಕ್ಕರಹಳ್ಳಿ ಕೆರೆ: ಬೇಕು ಕಾಳಜಿ' ಸರಣಿ‌ ವರದಿಗಳು ಪ್ರಕಟವಾಗುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT