ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಮಾನವಾಗಿದ್ದ ಕಡೆಯೇ ಎದ್ದು ನಿಂತೆ: ಜೀವನದ ಘಟನೆಗಳನ್ನು ನೆನೆದ ಮಂಜಮ್ಮ ಜೋಗತಿ

Published 3 ಜುಲೈ 2023, 7:30 IST
Last Updated 3 ಜುಲೈ 2023, 7:30 IST
ಅಕ್ಷರ ಗಾತ್ರ

ಮೈಸೂರು: ‘ದೇವರು ದೇವಾಲಯದಲ್ಲಿಲ್ಲ, ನಾವು ಮಾಡುವ ಕರ್ತವ್ಯದಲ್ಲಿದ್ದಾನೆ. ಜೋಗತಿ ಅಥವಾ ಇನ್ನಾರೋ ಶಾಪ ನೀಡಿದರೆ ಕೆಡುಕಾಗುವುದೆಂಬ ಭಾವನೆ ತಪ್ಪು. ಮನುಷ್ಯನು ಇನ್ನೊಬ್ಬ ವ್ಯಕ್ತಿಯನ್ನು ಗೌರವಿಸಿದಾಗ ದೇವರು ಒಲಿಯುತ್ತಾನೆ’ ಎಂದು ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಪ್ರತಿಪಾದಿಸಿದರು.

ಜನಜಾಗರಣ ಟ್ರಸ್ಟ್‌ ವತಿಯಿಂದ ಪತ್ರಕರ್ತೆ ಹರ್ಷಾ ಭಟ್‌ ಮಂಜಮ್ಮ ಜೋಗತಿ ಅವರ ಕುರಿತಾಗಿ ಬರೆದ ‘ಫ್ರಮ್‌ ಮಂಜುನಾಥ್‌ ಟು ಮಂಜಮ್ಮ’ ಎಂಬ ಆತ್ಮಕಥೆಯನ್ನು (ಇಂಗ್ಲಿಷ್) ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘6ನೇ ವಯಸ್ಸಿನಲ್ಲಿ ನನ್ನ ದೇಹದಲ್ಲಿ ಹೆಣ್ಣು ಮಕ್ಕಳ ಲಕ್ಷಣ ಕಂಡು ಬಂತು. ಪೋಷಕರು ನನ್ನನ್ನು ಬದಲಾಯಿಸಲು ವಿಫಲ ಪ್ರಯತ್ನ ನಡೆಸಿದರು. ಕೊನೆಗೆ ಜೋಗತಿಯಾದೆ. ಮನೆಯವರ ನಿರ್ಲಕ್ಷ್ಯದಿಂದ ಬೇಸತ್ತು ವಿಷ ಕುಡಿದೆ. ಮನೆಯವರು ಆಸ್ಪತ್ರೆಗೆ ಸೇರಿಸಿ ತೆರಳಿದ್ದರು. ಬಳಿಕ ಮನೆಯಿಂದ ಹೊರನಡೆದು ಬಾಡಿಗೆ ಮನೆಯಲ್ಲಿ ಬದುಕುತ್ತಿದ್ದ ವೇಳೆ ದಾರಿ ಮಧ್ಯೆ ಮದ್ಯ ಸೇವಿಸಿದ್ದ ಯುವಕರ ಗುಂಪು ನನ್ನನ್ನು ಅತ್ಯಾಚಾರ ಮಾಡಿದ್ದರು. ಆ ವೇಳೆ ಮತ್ತೆ ಸಾಯುವ ನಿರ್ಧಾರ ಮಾಡಿದ್ದೆ. ಆದರೆ, ಒಳಮನಸ್ಸಿನ ಮಾತಿಗೆ ಕಿವಿಯಾದ ಕಾರಣದಿಂದ ಇಂದು ಸಾಧಕಿಯಾಗಿ ನಿಮ್ಮ ಮುಂದಿದ್ದೇನೆ’ ಎಂದು ತಿಳಿಸಿದರು.

ಲೇಖಕಿ ಹರ್ಷಾ ಭಟ್‌ ಮಾತನಾಡಿ, ‘ಈ ಪುಸ್ತಕ ನನ್ನ ಕನಸಿನ ಕೂಸು. ಮಂಜಮ್ಮ ಅವರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಆಗಬೇಕು ಎಂಬ ಕಾರಣಕ್ಕೆ ಇಂಗ್ಲಿಷ್‌ನಲ್ಲಿ ಪುಸ್ತಕ ಬರೆದಿದ್ದೇನೆ’ ಎಂದರು.

ಸಾಮರಸ್ಯ ವೇದಿಕೆಯ ರಾಜ್ಯ ಸಂಚಾಲಕ ವಾದಿರಾಜ, ಜನಜಾಗರಣ ಟ್ರಸ್ಟ್‌ನ ಶ್ರೀನಾಥ್ ಇದ್ದರು.

‘ಕಠಿಣ ಸಂದರ್ಭದಲ್ಲಿ ಜರ್ಜರಿತರಾಗಬಾರದು’ ‘ಬದುಕಿನ ಕಠಿಣ ಕ್ಷಣಗಳಿಂದ ಜರ್ಜರಿತರಾಗಬಾರದು. ಒಂದು ಕ್ಷಣದಲ್ಲಿ ತೆಗೆದುಕೊಳ್ಳುವ ತಪ್ಪು ನಿರ್ಧಾರವು ಮುಂದಿನ ದಿನಗಳಲ್ಲಿ ದೊರೆಯುವ ದೊಡ್ಡ ಅವಕಾಶಗಳನ್ನು ತಪ್ಪಿಸುತ್ತದೆ. ಸಾವು ಎಂದಿಗೂ ಕೊನೆಯ ನಿರ್ಧಾರವಾಗಿರಬಾರದು. ಮಾಡುವ ಕೆಲಸದಲ್ಲಿ ಶ್ರದ್ಧೆ ಭಕ್ತಿಯಿದ್ದರೆ ಯಶಸ್ಸು ಹುಡುಕಿಕೊಂಡು ಬರುತ್ತದೆ. ಕಾಳಮ್ಮ ಜೋಗತಿಯ ಸಹಾಯದಿಂದ ವೇದಿಕೆ ಹತ್ತಿದ್ದಾಗ ಕಲಾವಿದೆಯಾದ ನನ್ನನ್ನು ಜಗತ್ತು ಸ್ವೀಕರಿಸಿದ ಹಾಗೂ ಅದಕ್ಕಿಂತ ಮೊದಲು ನಾನು ಅನುಭವಿಸಿದ್ದ ನೋವುಗಳೇ ಇವಕ್ಕೆ ಸಾಕ್ಷಿ’ ಎಂದರು. ‘ಆರಂಭದ ದಿನಗಳಲ್ಲಿ ನಾನು ಬಸ್ಸಿನಲ್ಲಿ ಪ್ರಯಾಣಿಸುವಾಗ ಯಾರೂ ಹತ್ತಿರ ಕುಳಿತುಕೊಳ್ಳುತ್ತಿರಲಿಲ್ಲ. ಪದ್ಮಶ್ರೀ ದೊರೆತಾಗ ಉತ್ತರ ಕರ್ನಾಟಕದ ಬಸ್‌ಗಳ ಟಿಕೆಟ್‌ನಲ್ಲಿ ನನಗೆ ಅಭಿನಂದನೆ ಸಲ್ಲಿಸಿದ್ದರು. ಅವಮಾನವಾಗಿದ್ದ ಕಡೆಯೇ ಎದ್ದು ನಿಂತೆ. ಈ ಛಲ ಯುವಜನರಲ್ಲೂ ಇರಬೇಕು. ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಯ ಹಾದಿ ಹಿಡಿಯಬಾರದು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT