ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿಗೆ ಸಿಕ್ಕಿತು ಹೊಸ ರೈಲು, ಡಿ.26ರಿಂದ ‘ಮೆಮು’ ಕಾರ್ಯಾರಂಭ

ರಾತ್ರಿ 8ಕ್ಕೆ ಬೆಂಗಳೂರಿನಿಂದ ಹೊರಡಲಿದೆ ‘ಮೆಮು’
Last Updated 22 ಡಿಸೆಂಬರ್ 2018, 2:06 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸಲಿರುವ ವಿಶೇಷ ವಿದ್ಯುತ್ ರೈಲು (ಮೆಮು) ಡಿ. 26ರಿಂದ ಕಾರ್ಯಾರಂಭ ಮಾಡಲಿದೆ.

ಸಂಜೆ ವೇಳೆ ರೈಲಿನ ಕೊರತೆ ನೀಗಿಸುವ ಸಲುವಾಗಿ ನೈರುತ್ಯ ರೈಲ್ವೆಯು ಕೇಂದ್ರೀಯ ರೈಲ್ವೆ ಮಂಡಳಿಗೆ ವಾರದಲ್ಲಿ ನಾಲ್ಕು ದಿನ ವಿಶೇಷ ರೈಲು ನೀಡುವಂತೆ ಪ್ರಸ್ತಾವ ಸಲ್ಲಿಸಿತ್ತು. ಇದಕ್ಕೆ ಮಂಡಳಿಯು ಒಪ್ಪಿಗೆ ನೀಡಿದ್ದು, ಡಿ. 26ರಿಂದ ಬೆಂಗಳೂರಿನಿಂದ ಹಾಗೂ ಡಿ. 27ರಂದು ಮೈಸೂರಿನಿಂದ ಹೊಸ ರೈಲು ಪ್ರತಿನಿತ್ಯ ಸಂಚರಿಸಲಿದೆ.

ಬೆಂಗಳೂರಿನಿಂದ ಮೈಸೂರಿಗೆ ಬುಧವಾರ, ಗುರುವಾರ, ಶುಕ್ರವಾರ ಹಾಗೂ ಶನಿವಾರದಂದು ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರದಂದು ‘ಮೆಮು’ ಸಂಚರಿಸಲಿದೆ. ಭಾನುವಾರ, ಸೋಮವಾರ, ಮಂಗಳವಾರದಂದು ರಾತ್ರಿ 8.30ಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವ ಬೆಂಗಳೂರು ಕಾರವಾರ ರೈಲು ಮೈಸೂರಿಗೆ ಬರಲಿದೆ.

23ರಂದು ಉದ್ಘಾಟನೆ

ಡಿ. 23ರಂದು ಮೈಸೂರು ರೈಲ್ವೆ ನಿಲ್ದಾಣದಲ್ಲಿ ಸಂಸದ ಪ್ರತಾಪ ಸಿಂಹ ‘ಮೆಮು’ ರೈಲಿಗೆ ಚಾಲನೆ ನೀಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ರೈಲ್ವೆ ವ್ಯವಸ್ಥಾಪಕಿ ಅಪರ್ಣಾ ಗಾರ್ಗ್‌, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎಸ್‌.ಜಿ.ಯತೀಶ್‌ ಭಾಗವಹಿಸಲಿದ್ದಾರೆ.

ರೈಲು ಸಂಚಾರದ ಸಮಯ

ರಾತ್ರಿ 7.55ಕ್ಕೆ ಬೆಂಗಳೂರಿನಿಂದ ‘ಮೆಮು’ ರೈಲು ಹೊರಡಲಿದೆ. ಮೈಸೂರನ್ನು ರಾತ್ರಿ 10.50ಕ್ಕೆ ತಲುಪಲಿದೆ. ಇದೇ ರೈಲು ಬೆಳಿಗ್ಗೆ 4.45ಕ್ಕೆ ಮೈಸೂರಿನಿಂದ ಹೊರಟು ಬೆಳಿಗ್ಗೆ 8.30ಕ್ಕೆ ಬೆಂಗಳೂರನ್ನು ಸೇರಲಿದೆ.

ಈ ರೈಲು ಬೆಂಗಳೂರಿನಿಂದ ಹೊರಟು ಕೃಷ್ಣದೇವರಾಯ ಹಾಲ್ಟ್‌, ನಾಯಂಡಹಳ್ಳಿ, ಜ್ಞಾನಭಾರತಿ ಹಾಲ್ಟ್, ಕೆಂಗೇರಿ, ಹೆಜ್ಜಾಲ, ಬಿಡದಿ, ಕೇತೋಹಳ್ಳಿ ಹಾಲ್ಟ್‌, ರಾಮನಗರ, ಚನ್ನಪಟ್ಟಣ, ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ ಮೂಲಕ ಮೈಸೂರು ಸೇರಲಿದೆ. ಇವೇ ನಿಲ್ದಾಣಗಳಲ್ಲಿ ಮೈಸೂರಿನಿಂದ ಹೊರಡುವ ರೈಲು ಸಹ ನಿಲ್ಲಲಿದೆ.

ಈ ರೈಲಿನ ಪ್ರಯಾಣದ ಅವಧಿ 2.55 ಗಂಟೆ. ಗರಿಷ್ಠ 110 ಕಿಲೋಮೀಟರ್‌ ವೇಗದಲ್ಲಿ ಸಂಚರಿಸಲಿದೆ.

ಏನಿದು ‘ಮೆಮು’ ರೈಲು?

‘ಮೇನ್‌ಲೈನ್‌ ಎಲೆಕ್ಟ್ರಿಕ್‌ ಮಲ್ಟಿಪಲ್‌ ಯೂನಿಟ್‌’ ಸಂಕ್ಷಿಪ್ತ ರೂಪವೇ ‘ಮೆಮು’. ಅರೆನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಪ್ರಯಾಣಿಕರನ್ನು ಗಮನದಲ್ಲಿ ಇರಿಸಿಕೊಂಡು ‘ಮೆಮು’ ರೈಲನ್ನು ರೈಲ್ವೆ ಇಲಾಖೆ ನಿರ್ಮಿಸಿದೆ.

‘ಮೆಮು’ ರೈಲುಗಳಲ್ಲಿ ಬೋಗಿಗಳನ್ನು ಎಳೆಯಲು ಪ್ರತ್ಯೇಕ ಎಂಜಿನ್‌ ಇರುವುದಿಲ್ಲ. ಬದಲಿಗೆ, ವಿದ್ಯುತ್‌ ಮೋಟಾರ್ ಬೋಗಿಗಳಲ್ಲೇ ಇರುತ್ತದೆ. ಹಾಗಾಗಿ, ‘ಮೆಮು’ ರೈಲುಗಳು ಸಾಂಪ್ರದಾಯಿಕ ರೈಲುಗಳಿಗಿಂತ ವೇಗವಾಗಿ ಸಂಚರಿಸುತ್ತವೆ. ಆದರೆ, ದೂರದ ಪ್ರಯಾಣ ಆಗದು. ಸಾಂಪ್ರದಾಯಿಕ ವಿದ್ಯುತ್‌ ರೈಲುಗಳಲ್ಲಿ ಬೋಗಿಗಳನ್ನು ಎಳೆಯಲೆಂದು ಪ್ರತ್ಯೇಕವಾದ ಎಂಜಿನ್‌ ಇರುತ್ತದೆ. ಇವು ಹೆಚ್ಚು ಶಕ್ತಿಶಾಲಿ ಹಾಗೂ ದೂರದ ಪ್ರಯಾಣಕ್ಕೆ ಅರ್ಹವಾಗಿರುತ್ತವೆ.

‘ಮೆಮು’ ರೈಲು ಈಗಾಗಲೇ ಬೆಂಗಳೂರಿನಿಂದ ರಾಮನಗರಕ್ಕೆ ರಾತ್ರಿ 8ಕ್ಕೆ ಸಂಚರಿಸುತ್ತಿದೆ. ಇದೇ ರೈಲನ್ನು ಈಗ ಮೈಸೂರಿನವರೆಗೆ ವಿಸ್ತರಿಸಲಾಗಿದೆ. ಹೊಸ ರೈಲಿನಲ್ಲಿ ಒಟ್ಟು 12 ಬೋಗಿಗಳಿವೆ. ಒಟ್ಟು 3,500 ಪ್ರಯಾಣಿಕರು ಈ ರೈಲಿನಲ್ಲಿ ಪಯಣಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT