ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಅರಮನೆ ಆವರಣದಲ್ಲಿ ಪಾರಿವಾಳಗಳಿಗೆ ಧಾನ್ಯ: ತಡೆಗೆ ನಿರ್ಣಯ

ಸಂಸದ ಯದುವೀರ್‌ ನೇತೃತ್ವದಲ್ಲಿ ಸಭೆ; ಜೈನ ಸಂಘ, ಸಂಸ್ಥೆಗಳ ಮನವೊಲಿಕೆ
Published : 22 ಸೆಪ್ಟೆಂಬರ್ 2024, 14:36 IST
Last Updated : 22 ಸೆಪ್ಟೆಂಬರ್ 2024, 14:36 IST
ಫಾಲೋ ಮಾಡಿ
Comments

ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಎದುರು ಪಾರಿವಾಳಗಳಿಗೆ ಅಕ್ಕಿ, ಜೋಳ, ಗೋಧಿ, ನವಣೆ ಮೊದಲಾದ ಧಾನ್ಯಗಳನ್ನು ಹಾಕುವುದನ್ನು ನಿಲ್ಲಿಸಲು ನಿರ್ಧರಿಸಲಾಯಿತು.

ಇಲ್ಲಿ ಧಾನ್ಯ ಹಾಕುವುದರಿಂದ ಪಾರಿವಾಳಗಳ ಸಂಖ್ಯೆ ಹೆಚ್ಚಾಗಿ ಅರಮನೆ ಶಿಥಿಲಕ್ಕೆ ಕಾರಣವಾಗಿತ್ತು. ಈ ಕುರಿತು ಹಲವರಿಂದ ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ನೇತೃತ್ವದಲ್ಲಿ ಭಾನುವಾರ ಸ್ಥಳದಲ್ಲಿಯೇ ನಡೆದ ಸಭೆಯಲ್ಲಿ, ಧಾನ್ಯ ಹಾಕುವುದನ್ನು ನಿಲ್ಲಿಸುವಂತೆ ಜೈನ ಸಂಘ– ಸಂಸ್ಥೆಯವರನ್ನು ಪರಿಸರಪ್ರಿಯರು ಹಾಗೂ ವೈದ್ಯರು ಮನವೊಲಿಸಿದರು.

ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಜೈನಸಂಘದ ಯಶ್ ವಿನೋದ್ ಜೈನ್, ‘ನಮ್ಮ ಸಮಾಜದವರು ಸೇವಾ ಮನೋಭಾವದಲ್ಲಿ ಧಾನ್ಯ ಹಾಕುತ್ತಿರುವುದು ಇಷ್ಟು ಅನಾಹುತಕ್ಕೆ ಕಾರಣವಾಗುತ್ತಿದೆ ಎಂಬುದು ಗೊತ್ತಿರಲಿಲ್ಲ. ಧಾನ್ಯ ಹಾಕುವುದನ್ನು ಸೋಮವಾರದಿಂದಲೇ ನಿಲ್ಲಿಸಲಾಗುವುದು’ ಎಂದು ಹೇಳಿದರು.

‘ಸಮಾಜದ ಇತರ ಮೂರು ಸಂಘದವರಿಗೂ ಕಾಳು ಹಾಕದಂತೆ ಕೋರಲಾಗುವುದು’ ಎಂದರು.

ವೈದ್ಯರಾದ ಮಧು ಹಾಗೂ ಮುರುಳಿ ಮೋಹನ್, ‘ಪಾರಿವಾಳಗಳು ಆಕಾಶದ ಇಲಿಗಳಂತೆ. ಅವುಗಳ ಸಂಖ್ಯೆ ಹೆಚ್ಚಾದರೆ ನಗರ ಸ್ವಚ್ಛಗೊಳಿಸುವ ಕಾಗೆ, ಗುಬ್ಬಿ, ಮೈನಾ ಹಕ್ಕಿಗಳು ಕಡಿಮೆಯಾಗುತ್ತವೆ. ಕೀಟಗಳೂ ಹೆಚ್ಚುತ್ತವೆ. ಅಲ್ಲದೇ, ಹೈಪರ್‌ಸೆನ್ಸಿಟಿವ್ ನ್ಯುಮೋನಿಯಾ ಉಂಟಾಗಿ, ಅಲರ್ಜಿ, ಅಸ್ತಮಾ, ಸ್ನಾಯು ನೋವು, ಒಣ ಕೆಮ್ಮು, ಎದೆ ಬಿಗಿತ ಉಂಟಾಗುತ್ತದೆ’ ಎಂದು ಎಚ್ಚರಿಸಿದರು.

‘ಸೋಂಕಿನಿಂದ ರೋಗನಿರೋಧಕ ಶಕ್ತಿ ಕಡಿಮೆ ಮಾಡುತ್ತದೆ. ಶ್ವಾಸಕೋಶ ಗಟ್ಟಿಯಾಗುತ್ತಾ ಶ್ವಾಸಕೋಶ ಕಸಿ ಚಿಕಿತ್ಸೆಯ ಮೊರೆ ಹೋಗಬೇಕಾಗುತ್ತದೆ. ಶಿಲೀಂಧ್ರ ರೋಗ ಸೇರಿದಂತೆ ಪ್ರಾಣಿಜನ್ಯ ಕಾಯಿಲೆಗಳು ಮನುಷ್ಯರಿಗೆ ಬರುತ್ತವೆ’ ಎಂದರು.

ಇತಿಹಾಸ ತಜ್ಞ ಪ್ರೊ.ಎನ್‌.ಎಸ್‌.ರಂಗರಾಜು, ‘ಪಾರಂಪರಿಕ ನಗರಿಯ ಸೌಂದರ್ಯ ಹೆಚ್ಚಿಸುವಲ್ಲಿ ಅರಮನೆ ಜೊತೆಗೆ ಆವರಣದ ದೇವಾಲಯಗಳು, ಚಾಮರಾಜ, ಕೃಷ್ಣರಾಜ, ಜಯಚಾಮರಾಜೇಂದ್ರ ವೃತ್ತ, ಪಾಲಿಕೆ ಸೇರಿದಂತೆ ವಿವಿಧ ಕಟ್ಟಡಗಳು ಕಾರಣವಾಗಿವೆ. ಪಾರಿವಾಳಗಳ ಹಿಕ್ಕೆಯಲ್ಲಿನ ಯೂರಿಕ್‌ ಆ್ಯಸಿಡ್‌ ಮಾರ್ಬಲ್ಲುಗಳ ಹೊಳಪನ್ನೇ ಮಂಕಾಗಿಸುತ್ತದೆ. ಅದನ್ನು ಸ್ವಚ್ಛಗೊಳಿಸುವುದು ಕಷ್ಟ’ ಎಂದು ತಿಳಿಸಿದರು.

ನಗರಪಾಲಿಕೆ ಆಯುಕ್ತ ಅಸಾದ್‌ ಉರ್‌ ರೆಹಮಾನ್ ಷರೀಫ್, ಮೈಸೂರು ಗ್ರಾಹಕರ ಪರಿಷತ್‌ನ ಭಾಮಿ ವಿ.ಶೆಣೈ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಆರ್.ಕೌಟಿಲ್ಯ, ನಗರ ಘಟಕದ ಅಧ್ಯಕ್ಷ ಎಲ್‌.ನಾಗೇಂದ್ರ, ಉದ್ಯಮಿ ಬಿ.ಎಸ್‌.ಪ್ರಶಾಂತ್‌ ಹಾಜರಿದ್ದರು.

‘ಜೀವ ಪರಿಸರ ವ್ಯವಸ್ಥೆಗೆ ಧಕ್ಕೆ’

ಸಂಸದ ಯದುವೀರ್ ಮಾತನಾಡಿ ‘ಧಾನ್ಯ ಹಾಕುವುದನ್ನು ನಿಲ್ಲಿಸಲು ಕ್ರಮ ವಹಿಸುವಂತೆ ನಮ್ಮ ತಾಯಿ ಪ್ರಮೋದಾದೇವಿ ಒಡೆಯರ್‌ ಅವರೇ ಪತ್ರ ಬರೆದಿದ್ದರು. ಬ್ಲೂರಾಕ್ ಪಾರಿವಾಳಗಳು ನಗರ ವನ್ಯಜೀವಿಯಾಗಿದ್ದು ಆಹಾರ ಕೊಡುವ ಅವಶ್ಯಕತೆ ಇಲ್ಲ.  ಧಾನ್ಯ ಕೊಡುವುದರಿಂದ ನಗರದ ಜೀವ ಪರಿಸರ ವ್ಯವಸ್ಥೆಗೆ ತೊಂದರೆಯಾಗುತ್ತಿದೆ’ ಎಂದು ತಿಳಿಸಿದರು. ‘‍ಪಾರಂಪರಿಕ ಕಟ್ಟಡಗಳು ಹಾನಿಯಾಗುವುದರಿಂದ ಆರ್ಥಿಕತೆಗೆ ತೊಂದರೆಯಾಗುತ್ತದೆ. ದುರಸ್ತಿ ನಿರ್ಮಾಣ ಕಾಮಗಾರಿಗಳಿಗೆ ಜನರ ಹಣವನ್ನೇ ವ್ಯಯ ಮಾಡಬೇಕಾಗುತ್ತದೆ. ಅಲ್ಲದೇ ಸಾರ್ವಜನಿಕರ ಆರೋಗ್ಯ ಕಾಪಾಡುವುದೂ ಮುಖ್ಯ. ಧಾನ್ಯ ಹಾಕದಂತೆ ಪಾಲಿಕೆಯವರು ಕಟ್ಟುನಿಟ್ಟಿನ ಕ್ರಮ  ತೆಗೆದುಕೊಳ್ಳಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT