ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ವಿಪುಲ ಅವಕಾಶ, ಸಂವಾದ ಕಾರ್ಯಕ್ರಮ

Published 29 ಜೂನ್ 2024, 15:29 IST
Last Updated 29 ಜೂನ್ 2024, 15:29 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಎನ್‌ಐಇ ಕಾಲೇಜಿನಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಹಾಗೂ ಐಐಐ (ಕೈಗಾರಿಕೆ ಸಂಸ್ಥೆ ಸಂವಾದ) ಮೈಸೂರು ವಲಯದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿರುವ ವಿಪುಲ ಅವಕಾಶಗಳ ಮೇಲೆ ಬೆಳಕು ಚೆಲ್ಲಿತು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನೂ ನೀಡಿತು.

‘ಕೋರ್‌ (ಮೂಲ) ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು ಹಾಗೂ ಉದ್ಯೋಗ ಅವಕಾಶಗಳು’ ಕುರಿತ ಸಂವಾದದಲ್ಲಿ ಒಂಬತ್ತು ಮಂದಿ ತಜ್ಞರು ಪಾಲ್ಗೊಂಡು ಅನುಭವ ಹಂಚಿಕೊಂಡರು. ಜತೆಗೆ, ಪ್ರಸ್ತುತ ಬೆಳವಣಿಗೆಗಳನ್ನು ತಿಳಿಸಿಕೊಟ್ಟರು. ಸುಧಾರಿತ ತಂತ್ರಜ್ಞಾನ ಬಳಕೆ, ಕೌಶಲ ವೃದ್ಧಿ ಹಾಗೂ ಕಾಲೇಜುಗಳಲ್ಲಿ ಪಡೆದ ಜ್ಞಾನವನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

‘ಪ್ರಸ್ತುತ ಹೊರಬರುತ್ತಿರುವ ಎಂಜಿನಿಯರಿಂಗ್‌ ಪದವೀಧರರು ಕೈಗಾರಿಕೆಗೆ ಸಿದ್ಧವಾದ‌ ಅಭ್ಯರ್ಥಿಗಳು ಆಗಿರುವುದಿಲ್ಲ. ಬಹಳಷ್ಟು ಮಂದಿಗೆ ಪ್ರಾಯೋಗಿಕ ಅನುಭವದ ಕೊರತೆ ಇರುತ್ತದೆ. ಬಹುತೇಕ‌ ಕಾಲೇಜುಗಳಲ್ಲಿ ಆ ಅನುಭವವನ್ನು ಕೊಡುವುದಿಲ್ಲ. ಇದು ದೊಡ್ಡ ಸವಾಲಾಗಿದೆ’ ಎಂಬ ಅಭಿಪ್ರಾಯ ಕೈಗಾರಿಕೆಗಳ ಪ್ರತಿನಿಧಿಗಳಿಂದ ವ್ಯಕ್ತವಾಯಿತು.

ಅವಕಾಶ ಬಳಸಿಕೊಳ್ಳಲು ಸಿದ್ಧವಾಗಿ: ಸಿಐಐ ಮೈಸೂರು ಉಪಾಧ್ಯಕ್ಷ ಹಾಗೂ ಎಟಿ ಅಂಡ್ ಎಸ್ ಪ್ರೈ.ಲಿ. ಕಂ‍ಪನಿಯ ಹಿರಿಯ ನಿರ್ದೇಶಕ ಸಂತೋಷ್‌ ಗುಂಡಪಿ ಮಾತನಾಡಿ, ‘ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಸಾಫ್ಟ್‌ವೇರ್‌ ಉದ್ಯಮದಲ್ಲಿರುವ ಅವಕಾಶಗಳ ಸದ್ಬಳಕೆಗೆ ಮುಂದಾಗಬೇಕು.‌ ಮುಂದಿನ ದಿನಗಳಲ್ಲಿ ‌ಉದ್ಯೋಗ ಅವಕಾಶಗಳ ಪ್ರಮಾಣ ದ್ವಿಗುಣಗೊಳ್ಳಲಿದೆ. ವಿಷಯ ಮಂಡನೆ ಮುಖ್ಯವಾಗುತ್ತದೆಯೇ ಹೊರತು ಭಾಷೆಯಲ್ಲ. ಕನ್ನಡದಲ್ಲೂ ಪರಿಣಾಮಕಾರಿಯಾಗಿ ಮಂಡನೆ ಮಾಡಬಹುದು. ಭಾಷೆಯು ಮಾಧ್ಯಮವಷ್ಟೆ’ ಎಂದು ತಿಳಿಸಿದರು.

‘ಮುಂದಿನ ದಶಕ ಎಲೆಕ್ಟ್ರಾನಿಕ್ ಯುಗವೇ ಆಗಿರಲಿದೆ. ಕೇಂದ್ರ ಸರ್ಕಾರ ಕೂಡ ಪ್ರೋತ್ಸಾಹ ನೀಡುತ್ತಿದೆ. ಉದ್ಯೋಗದ ಅವಕಾಶ ಇರುವುದಿಲ್ಲವೇನೋ ಎಂಬ ಆತಂಕ ಬೇಡವೇ ಬೇಡ. ಸೆಮಿಕಂಡಕ್ಟರ್ ವಲಯದಲ್ಲಿ ಎಲೆಕ್ಟ್ರಾನಿಕ್ಸ್‌ನವರಿಗೆ ಮಾತ್ರವಲ್ಲದೆ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಸೇರಿದಂತೆ ಅನ್ವಯಿಕ ಶಾಖೆಗಳ ‌ಜ್ಞಾನ ಹೊಂದಿರುವವರಿಗೂ ಅವಕಾಶವಿದೆ’ ಎಂದು ಹೇಳಿದರು.

ಕೋರ್ ವಿಷಯ ಆಯ್ದುಕೊಳ್ಳಿ: ‘ಎಂಜಿನಿಯರಿಂಗ್‌ನಲ್ಲಿ ಕೋರ್ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕಾದ ಸಂದರ್ಭ ಇದಾಗಿದೆ’ ಎಂದು ವರ್ತ್‌ ಎಲೆಕ್ಟ್ರಾನಿಕ್‌ ಮೈಸೂರು ಐಸಿಎಸ್‌ ಬಿಯು ಮುಖ್ಯಸ್ಥ ನಾಗರಾಜ್‌ ಅಯ್ಯಂಗಾರ್ ಹೇಳಿದರು.

‘ಎಐ (ಕೃತಕ ಬುದ್ಧಿಮತ್ತೆ) ಹಾಗೂ ಮಷಿನ್ ಲರ್ನಿಂಗ್‌ ಕಾರಣದಿಂದ ಆತಂಕಕ್ಕೆ ‌ಒಳಗಾಗಬೇಕಿಲ್ಲ. ಮಾನವನ ಬುದ್ಧಿಮತ್ತೆಗೆ ಅವಕಾಶ ಇದ್ದೇ ಇದೆ. ಕಂಪ್ಯೂಟರ್‌ಗಳು ‌ಬಂದಾಗಲೂ ಅದು ನಮ್ಮ ಕೆಲಸವನ್ನು ಕಿತ್ತುಕೊಳ್ಳುತ್ತದೆ ಎಂದು ದೊಡ್ಡ ಚಳವಳಿಯೇ ನಡೆಯಿತು.‌ ಆದರೆ, ಹಾಗಾಗಲಿಲ್ಲ.‌ ಕಂಪ್ಯೂಟರ್‌ನಿಂದ ಉದ್ಯೋಗಗಳ ಸಂಖ್ಯೆ ಜಾಸ್ತಿಯಾಯಿತು.‌ ಎಐ ಕೂಡ ಉದ್ಯೋಗಗಳ ಅವಕಾಶ ಸೃಷ್ಟಿಸುತ್ತಿದೆ. ಅದನ್ನು ಬಳಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು. ಒಳ್ಳೆಯ ಎಂಜಿನಿಯರ್‌ಗಳಿಗೆ ಬೇಡಿಕೆ ಸದಾ ಇರುತ್ತದೆ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು ಅಂಕಗಳ ಜೊತೆಗೆ ಪ್ರಾಯೋಗಿಕ ಅನುಭವ ಗಳಿಸುವುದಕ್ಕೂ ಆದ್ಯತೆ ನೀಡಬೇಕು. ಎಂಜಿನಿಯರಿಂಗ್ ‌ವಿದ್ಯಾರ್ಥಿಗಳು‌ ಪದವಿ ಮುಗಿಸುವ ವೇಳೆಗೆ ಉದ್ಯೋಗಕ್ಕೆ ಸಿದ್ಧವಾಗಿರಬೇಕು. ಕಾಲೇಜುಗಳು ಆ ರೀತಿಯಲ್ಲಿ ಸಜ್ಜುಗೊಳಿಸಬೇಕು. ಆಗ ಬಹಳಷ್ಟು ಅವಕಾಶಗಳು ತೆರೆದುಕೊಳ್ಳಲಿವೆ’ ಎಂದರು.

ರಂಗ್‌ಸನ್ಸ್‌ ಟೆಕ್ನಾಲಜೀಸ್‌ ಸಿಒಒ ಹರ್ಷ ಬಸವರಾಜು, ಎನ್‌ಐಇ ಪ್ರಾಂಶುಪಾಲೆ ರೋಹಿಣಿ ನಾಗಪದ್ಮ, ಡೀನ್‌ (ಮೂಲಸೌಕರ್ಯ) ಪ್ರಸನ್ನ, ಸಿಐಐನ ಸಾಲೊಮನ್‌ ಪುಷ್ಪರಾಜ್‌, ಧರ್ಮಪ್ರಸಾದ್ ಪಾಲ್ಗೊಂಡಿದ್ದರು.

ಭಾರತದತ್ತ ನೋಡುತ್ತಿವೆ...

ಸ್ಕೆನಿಡರ್‌ ಎಲೆಕ್ಟ್ರಿಕ್‌ ಇಂಡಿಯಾ ಪ್ರೈ.ಲಿ. ಕಂಪನಿಯ ಅಮಿತ್‌ ಕುಮಾರ್‌ ಮಾತನಾಡಿ, ‘ಪೋಷಕರು ಅಥವಾ ಯಾರದೋ ಒತ್ತಡಕ್ಕೆ ಒಳಗಾಗಿ ವಿದ್ಯಾರ್ಥಿಗಳು ಕೋರ್ಸ್ ಆಯ್ಕೆ‌ ಮಾಡಿಕೊಳ್ಳಬಾರದು. ಆಸಕ್ತಿಯ ವಿಷಯದಲ್ಲಿ ಪರಿಣತಿ ಸಾಧಿಸಬೇಕು’ ಎಂದು ಸಲಹೆ ನೀಡಿದರು.

‘ಕಾಲೇಜಿನಲ್ಲಿ ಪಡೆದ ಪುಸ್ತಕದ ಜ್ಞಾನವನ್ನು ಪ್ರಾಯೋಗಿಕವಾಗಿ ‌ಬಳಕೆ‌ ಮಾಡಿಕೊಳ್ಳುವ ಕೌಶಲ ಅಗತ್ಯವಿದೆ’ ಎಂದು ಹೇಳಿದರು.

‘ಭಾರತದಲ್ಲೇ ಉತ್ತಮ‌ ಭವಿಷ್ಯ ಕಂಡುಕೊಳ್ಳಲು ಈಗ ಬಹಳಷ್ಟು ಅವಕಾಶಗಳಿವೆ. ನನ್ನ 34 ವರ್ಷಗಳ ಅನುಭವದಲ್ಲಿ ನೋಡಿದರೆ, ಈಗ ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಸಿಲಿಕನ್ ವ್ಯಾಲಿ ಈಗ ನಮ್ಮ ದೇಶದತ್ತಲೇ ಬರುತ್ತಿದೆ. ಈ ಅವಕಾಶವನ್ನು ಬಾಚಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲೇ ಇದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT