ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಮನೆ ಮನೆಯಲ್ಲೂ ನಾಲ್ವಡಿ ಕೃಷ್ಣರಾಜರನ್ನು ಆರಾಧಿಸಬೇಕು’

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಭಿಮತ
Last Updated 4 ಜೂನ್ 2019, 15:19 IST
ಅಕ್ಷರ ಗಾತ್ರ

ಮೈಸೂರು: ‘ಶತಮಾನದ ಹಿಂದೆಯೇ ತಮ್ಮ ಆಳ್ವಿಕೆಯಲ್ಲಿ ಸಮಾನತೆಯನ್ನು ಜಾರಿಗೊಳಿಸಿ, ಅಭಿವೃದ್ಧಿ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರನ್ನು ಸ್ಮರಿಸಿದರೆ ಸಾಲದು, ಮನೆ ಮನೆಯಲ್ಲೂ ಅವರ ಭಾವಚಿತ್ರವಿಟ್ಟು ಪೂಜಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಭಿಮತ ವ್ಯಕ್ತಪಡಿಸಿದರು.

ನಗರದ ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ ಸಮಿತಿ, ಅರಸು ಬಳಗಗಳ ಒಕ್ಕೂಟದ ವತಿಯಿಂದ ಮಂಗಳವಾರ ನಡೆದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಉದ್ಘಾಟಿಸಿದ ಅವರು ಮಾತನಾಡಿದರು.

‘ಚಿನ್ನಾಭರಣ ಒತ್ತೆಯಿಟ್ಟು ಜನರಿಗಾಗಿ ಕನ್ನಂಬಾಡಿ ಕಟ್ಟೆ ನಿರ್ಮಿಸಿ ನೀರಿನ ದಾಹ ತೀರಿಸಿದರು. ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯ, ಕಾಲೇಜು ಆರಂಭಿಸಿದರು. ದೇಶದಲ್ಲೇ ಮೊದಲ ಬಾರಿಗೆ ವಿದ್ಯುಚ್ಛಕ್ತಿ ಉತ್ಪಾದನೆಗೆ ಒತ್ತು ಕೊಟ್ಟವರು. ಕೃಷಿಗೆ ಆದ್ಯತೆ ನೀಡಿ, ಕೈಗಾರಿಕೆ ಆರಂಭಿಸಿದರು.

ಚಾಮುಂಡೇಶ್ವರಿ, ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಗೋಪುರಗಳನ್ನು ನಿರ್ಮಿಸಿದರು. ಹಲವು ಅಭಿವೃದ್ಧಿ ಕಾಮಗಾರಿಗಳ ಜತೆಯಲ್ಲೇ ಮಿಲ್ಲರ್ ವರದಿಯನ್ನು ಅನುಷ್ಠಾನಗೊಳಿಸಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡಿದವರು ನಾಲ್ವಡಿಯವರು’ ಎಂದು ದೇವೇಗೌಡ ರಾಜರ್ಷಿಯ ಅಭಿವೃದ್ಧಿಯ ಪರ್ವವನ್ನೇ ಬಣ್ಣಿಸಿದರು.

‘ಬ್ಯಾಂಕ್‍ಗಳ ಸ್ಥಾಪನೆ, ಸ್ಯಾನಿಟೋರಿಯಂ ಆಸ್ಪತ್ರೆ, ಸುವ್ಯವಸ್ಥಿತ, ಸುಂದರ ನಗರದ ನಿರ್ಮಾಣಕ್ಕಾಗಿ ತಮ್ಮ ಆಡಳಿತದಲ್ಲೇ ನಗರಾಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದ ಹಿರಿಮೆ ನಾಲ್ವಡಿಯವರದ್ದಾಗಿದೆ. ಸಾಹಿತ್ಯ, ಕಲೆ, ನಾಟಕ, ಜಾನಪದ, ಸಂಗೀತ ಇಂದಿಗೂ ಮೈಸೂರಿನಲ್ಲಿ ಜೀವಂತವಾಗಿದೆ ಎಂದರೇ ಅದಕ್ಕೆ ನಾಲ್ವಡಿಯವರೇ ಕಾರಣ’ ಎಂದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ‘ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ನಗರಕ್ಕೆ ನೀಡಿರುವ ಕೊಡುಗೆಗಳನ್ನು ನಾವು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ನಿರ್ಮಿಸಿದ ಕೆ.ಆರ್.ಮಾರುಕಟ್ಟೆಯನ್ನು ನಾವು ದುರಸ್ತಿ ಮಾಡಿಸಿ ಉಳಿಸಿಕೊಳ್ಳಬೇಕು. ಇಲ್ಲವಾದರೆ ಅವರಿಗೆ ಅವಮಾನ ಮಾಡಿದಂತೆ ಆಗುತ್ತದೆ’ ಎಂದು ಹೇಳಿದರು.

ಇತಿಹಾಸ ತಜ್ಞ ಪಿ.ವಿ.ನಂಜರಾಜೇ ಅರಸ್ ರಚಿಸಿದ ‘ಮರೆಯಲಾಗದ ಮಹಾನುಭಾವ ನಾಲ್ವಡಿ ಕೃಷ್ಣರಾಜ ಒಡೆಯರು’ ಕೃತಿಯನ್ನು ಇದೇ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ.ಎಂ.ವಿ.ಶ್ರೀನಿವಾಸ್ ರಾಜರ್ಷಿಯ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳ ಶ್ಯಾಂ, ಮಹಾನಗರ ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಮುಡಾ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಗಳಾ ಸೋಮಶೇಖರ್, ಇತಿಹಾಸ ತಜ್ಞ ಪಿ.ವಿ.ನಂಜರಾಜೇ ಅರಸ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ.ರಾಜಣ್ಣ, ಅರಸು ಬಳಗ ಒಕ್ಕೂಟದ ಪದಾಧಿಕಾರಿಗಳು, ಕನ್ನಡ ಪರ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT