ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸವಾಲಿನಿಂದ ಹೊಸ ಬಲ: ಜಿಲ್ಲಾಧಿಕಾರಿ ಅಭಿರಾಮ್‌ ಶಂಕರ್‌

ಜಿಲ್ಲೆಯ ಅಧಿಕಾರಿಗಳ, ಸಾರ್ವಜನಿಕರ ಸಹಕಾರ ನೆನೆದ ಜಿಲ್ಲಾಧಿಕಾರಿ
Last Updated 22 ಜೂನ್ 2020, 9:59 IST
ಅಕ್ಷರ ಗಾತ್ರ

ಮೈಸೂರು: ‘ನಂಜನಗೂಡಿನ ಔಷಧ ಕಾರ್ಖಾನೆಯ ನೌಕರರೊಬ್ಬರಿಗೆ ಮಾರ್ಚ್‌ 26ರಂದು ಕೋವಿಡ್–19 ದೃಢಪಟ್ಟಿತು. ಎರಡು ದಿನ ಕಳೆಯು ತ್ತಲೇ, ಇವರ ಸಂಪರ್ಕದಲ್ಲಿದ್ದ ಮತ್ತೆ ಐವರಿಗೆ ದೃಢಪಟ್ಟಿತು. ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು...’

‘ಆಗ ಎಲ್ಲವೂ ನಮಗೆ ಹೊಸತು. ಕೋವಿಡ್–19 ನಿಯಮಾವಳಿ, ಮಾರ್ಗಸೂಚಿಗಳಿಗೆ ಸ್ಪಷ್ಟ ಚೌಕಟ್ಟಿ ಲ್ಲದ ಕಾಲವದು. ದೇಶದ 25 ಹಾಟ್‌ಸ್ಪಾಟ್‌ಗಳಲ್ಲಿ ಮೈಸೂರು ಒಂದಾಗಿತ್ತು. ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿತ್ತು. ಸಂಕಷ್ಟಗಳ ಸರಮಾಲೆ ಆಗಷ್ಟೇ ಆರಂಭವಾಗಿತ್ತು. ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಸ್ಥಳೀಯವಾಗಿ ಕಠಿಣ ಕ್ರಮ ಜಾರಿಗೊಳಿಸಬೇಕಿತ್ತು...’

ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದ ಕಾರ್ಯನಿರ್ವಹಿಸಬೇಕಾದ ಆರಂಭದಲ್ಲಿ ತಮಗಾದ ಅನುಭವ, ಎದುರಾದ ಸವಾಲುಗಳನ್ನು ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ‘ಪ್ರಜಾವಾಣಿ’ಗೆ ವಿವರಿಸಿದರು.

‘ಜಿಲ್ಲಾ ಹಂತದ ಪ್ರಮುಖ ಅಧಿ ಕಾರಿಗಳ ಸಭೆ ನಡೆಸಿ, ಮೊದಲ ಪ್ರಕರಣ ವರದಿಯಾದ ಮರುದಿನ ಬೆಳಿಗ್ಗೆಯೇ ನಂಜನಗೂಡಿನ ಔಷಧ ಕಾರ್ಖಾನೆಗೆ ಭೇಟಿ ನೀಡಿದೆವು. ಕೆಲಸಕ್ಕೆ ಬಂದಿದ್ದ 950ಕ್ಕೂ ಹೆಚ್ಚು ನೌಕರರನ್ನು ಕಡ್ಡಾಯವಾಗಿ ಕ್ವಾರಂಟೈನ್‌ಗೊಳಪಡಿಸಿದೆವು. ಭಯದಿಂದ ಬರದೇ ಇದ್ದವರನ್ನು ಪತ್ತೆ ಹಚ್ಚಿ, ಒಟ್ಟು 1500ಕ್ಕೂ ಹೆಚ್ಚು ಜನರನ್ನು ಎರಡ್ಮೂರು ದಿನದೊಳಗೆ ಕ್ವಾರಂಟೈನ್‌ಗೊಳಪಡಿಸಿದ್ದು ಸವಾ ಲಿನ ಕೆಲಸವಾಗಿತ್ತು’ ಎಂದು ಆ ಸನ್ನಿವೇಶ ವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

‘60 ಸಾವಿರ ಜನರಿರುವ ನಂಜನಗೂಡು ನಗರವನ್ನು ಕಂಟೈನ್‌ಮೆಂಟ್ ಜೋನ್ ಎಂದು ಘೋಷಿಸಿ, ಅಲ್ಲಿನ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಯ ಹೊಣೆಯನ್ನು ಹೊತ್ತೆವು. ಕೆಳ ಹಂತದ ಸಿಬ್ಬಂದಿಯ ಮನೋಸ್ಥೈರ್ಯ ಕುಸಿಯಬಾರದು, ಅವರಲ್ಲೂ ಸಮಮನ್ವಯತೆ ಮೂಡಲಿ ಎಂದು ಪ್ರತಿಯೊಂದು ಹಂತದಲ್ಲೂ ಎಸ್‌ಪಿ, ಸಿಇಒ ಸೇರಿದಂತೆ ಇತರೆ ಪ್ರಮುಖ ಅಧಿಕಾರಿಗಳ ಜೊತೆಗೆ ನಿಯಂತ್ರಿತ ವಲಯಕ್ಕೆ ಹೋಗಿ ನಿಂತೆ. ಕೋವಿಡ್ ಆಸ್ಪತ್ರೆಗೂ ತೆರಳಿ ‘ನಿಮ್ಮೊಟ್ಟಿಗೆ ನಾವಿದ್ದೇವೆ’ ಎಂಬುದನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗೂ ಮನದಟ್ಟು ಮಾಡಿಕೊಟ್ಟೆವು’ ಎಂದು ಸೂಕ್ಷ್ಮ ಸಂಗತಿಗಳ ಕಡೆಗೂ ನಿಗಾ ವಹಿಸಿದ ಬಗೆಯನ್ನು ಜಿಲ್ಲಾಧಿಕಾರಿ ವಿವರಿಸಿದರು.

‘ಪ್ರಮುಖ ಅಧಿಕಾರಿಗಳು ನಿತ್ಯವೂ ಜಿಲ್ಲೆಯ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಖುದ್ದು ಮುಖ್ಯಮಂತ್ರಿಯೇ ಇಲ್ಲಿನ ಚಿತ್ರಣ ಪಡೆಯುತ್ತಿದ್ದರು. ಸಮಗ್ರ ಚಿತ್ರಣ ಸಿಕ್ಕ ಬಳಿಕ ಫೇಸ್‌ಬುಕ್ ಲೈವ್ ಮೂಲಕ ಜಿಲ್ಲೆಯ ಜನರಿಗೆ ಮಾಹಿತಿ ಒದಗಿಸು ತ್ತಿದ್ದೆವು. ಸಣ್ಣ–ಪುಟ್ಟ ಅಡೆತಡೆ ಹೊರತು ಪಡಿಸಿದರೆ ಜಿಲ್ಲೆಯ ಜನರು ಸೇರಿದಂತೆ ಎಲ್ಲರ ಸಹಕಾರ ಸ್ಮರಣಾರ್ಹ’ ಎಂದರು.

‘ಆರಂಭದಲ್ಲಿ ಕೋವಿಡ್‌ ನಿರ್ವಹಣೆಯ ಬಗೆ, ತರಬೇತಿ ಯಾವುದೊಂದೂ ಗೊತ್ತಿರಲಿಲ್ಲ. ಎಲ್ಲ ಇಲಾಖೆಯನ್ನೂ ಬಳಸಿಕೊಂಡು ಸಿಬ್ಬಂದಿಗೆ ತರಬೇತಿ ನೀಡಿದೆವು. ಸಮನ್ವಯ ಸಾಧಿಸಿದೆವು. ಕಾಲ್‌ಸೆಂಟರ್ ರಚಿಸಿ ಕ್ವಾರಂಟೈನ್‌ಗಳ ಮೇಲೆ ನಿಗಾ ಇಟ್ಟೆವು. ಇದರ ಪರಿಣಾಮ ನಂಜನಗೂಡು ನಿಯಂತ್ರಣಕ್ಕೆ ಬಂದಿತು. ಇದರೊಟ್ಟಿಗೆ ನಮ್ಮ ವಿಶ್ವಾಸವೂ ಹಲವು ಪಟ್ಟು ಹೆಚ್ಚಿತು. ಎಂತಹ ಸಂಕಷ್ಟದ ಪರಿಸ್ಥಿತಿಯನ್ನೂ ಧೈರ್ಯದಿಂದ ಎದುರಿಸಬಲ್ಲೆವು ಎಂಬ ಆತ್ಮವಿಶ್ವಾಸ ಇದೀಗ ನಮ್ಮದಾಗಿದೆ’ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ತಿಳಿಸಿದರು.

ಎರಡೂ ನಿರ್ವಹಣೆ ಅನಿವಾರ್ಯ

‘ಆಗಿನ ಚಿತ್ರಣವೇ ಬೇರೆ. ಈಗಿನದ್ದೇ ಬೇರೆ. ಆರಂಭದಲ್ಲಿ ಕೋವಿಡ್ ನಿಯಂತ್ರಣವಷ್ಟೇ ಆದ್ಯತೆಯಾಗಿತ್ತು. ನಂತರ ದೈನಂದಿನ ಆಡಳಿತವನ್ನೂ ನಿಭಾಯಿಸಬೇಕಾಯಿತು. ಸಾಂತ್ವನ ಕೇಂದ್ರ ತೆರೆದೆವು. ದಾನಿಗಳ ಸಹಕಾರದಿಂದ ಊಟೋಪಚಾರದ ವ್ಯವಸ್ಥೆ ಕಲ್ಪಿಸಿದೆವು. ಮಂಡ್ಯ, ಕೊಡಗು, ಹಾಸನ, ಚಾಮರಾಜನಗರ ಜಿಲ್ಲೆಗಳಿಗೆ ಮೈಸೂರೇ ಕೇಂದ್ರ ಸ್ಥಾನ. ಅಲ್ಲಿದ್ದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸುವ ಜವಾಬ್ದಾರಿಯೂ ನಮ್ಮ ಮೇಲಿತ್ತು’ ಎಂದು ಅಭಿರಾಮ್‌ ತಿಳಿಸಿದರು.

‘ಇದೀಗ ಮತ್ತೆ ಕೋವಿಡ್ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಜೊತೆ ನಿತ್ಯದ ಆಡಳಿತಕ್ಕೂ ಅಡ್ಡಿ ಯಾಗದಂತೆ ಕೆಲಸ ನಿರ್ವಹಿಸಬೇಕಿದೆ. ಇದೂ ನಮಗೆ ಹೊಸ ಸವಾಲು’ ಎಂದು ಹೇಳಿದರು.

‘ಒಂದೂವರೆ ತಿಂಗಳು ದೂರವಿದ್ದೆ...’

‘ನಂಜನಗೂಡಿನ ಪ್ರಕರಣದ ತೀವ್ರತೆ ತಗ್ಗುವ ತನಕವೂ, ಕೋವಿಡ್–19 ಮಾರ್ಗಸೂಚಿಗಳು ಸರಳೀಕರಣಗೊಳ್ಳುವವರೆಗೂ ಒಂದೂವರೆ ತಿಂಗಳಿಗೂ ಹೆಚ್ಚಿನ ಅವಧಿ ಕುಟುಂಬದಿಂದ ದೂರವೇ ಉಳಿದಿದ್ದೆ’ ಎಂದು ಅಭಿರಾಂ ತಿಳಿಸಿದರು.

‘ನಿತ್ಯವೂ ಕಂಟೈನ್‌ಮೆಂಟ್ ಜೋನ್‌ಗೆ, ಆಗಾಗ್ಗೆ ಕೋವಿಡ್ ಆಸ್ಪತ್ರೆಗೂ ಭೇಟಿ ನೀಡುತ್ತಿದ್ದರಿಂದ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೆ. ಒಂದು ವೇಳೆ ಕೋವಿಡ್ ಬಾಧಿತನಾದರೂ ಆಡಳಿತಕ್ಕೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಲಿಕ್ಕಾಗಿ ಪ್ರತ್ಯೇಕ ಕೇಂದ್ರವನ್ನು ಸಿದ್ಧಮಾಡಿಕೊಂಡಿದ್ದೆ’ ಎಂದು ಹೇಳಿದರು.

‘ಮನೆಗೆ ಹೋದರೂ ಮನೆಯವರಿಂದ ದೂರ ಉಳಿದಿದ್ದೆ. ಪತ್ನಿಯ ಕುಟುಂಬಕ್ಕೆ ವೈದ್ಯಕೀಯ ಕ್ಷೇತ್ರದ ನಂಟಿರುವುದರಿಂದ ಅವರೂ ಸಹಕರಿಸಿದರು’ ಎಂದು ತಮ್ಮ ಅನುಭವ ಹಂಚಿಕೊಂಡರು.

3 ಸಾವಿರ ಹಾಸಿಗೆ ಸಿದ್ಧ

‘ಕೋವಿಡ್‌ ಪೀಡಿತರಿಗೆ ಚಿಕಿತ್ಸೆ ನೀಡಲು ಪ್ರಸ್ತುತ ಮೈಸೂರಿನಲ್ಲಿ 3 ಸಾವಿರ ಹಾಸಿಗೆ, 17 ವೆಂಟಿಲೇಟರ್ ಲಭ್ಯವಿವೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಹೊಸ ಕಟ್ಟಡ, ವಿದ್ಯುತ್ ಸಂಪರ್ಕ ಬಿಟ್ಟರೆ ಕೋವಿಡ್ ಆಸ್ಪತ್ರೆಯಲ್ಲಿ ಯಾವೊಂದು ಸೌಲಭ್ಯ ಇರಲಿಲ್ಲ. ಲಭ್ಯ ಅನುದಾನ ಬಳಸಿಕೊಂಡು ಬೆರಳೆಣಿಕೆ ದಿನದಲ್ಲೇ ಸೌಲಭ್ಯ ಒದಗಿಸಿದೆವು. ಚಾಮರಾಜನಗರ ಸೇರಿದಂತೆ, ಇಲ್ಲಿನ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಸದಿದ್ದ ಮಂಚಗ ಳನ್ನು ಕೋವಿಡ್ ಆಸ್ಪತ್ರೆಗೆ ತಂದೆವು’ ಎಂದರು.

‘ಇದೀಗ ಚಿಕಿತ್ಸೆಗೆ ಯಾವುದೇ ಅಡ್ಡಿಯಿಲ್ಲ. ವೈದ್ಯಕೀಯ ಸಿಬ್ಬಂದಿಗೆ ಮಾತ್ರ ಸವಾಲಿರುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT