ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ: ಪ್ರತಾಪ ಸಿಂಹ

Published 13 ಮಾರ್ಚ್ 2024, 15:40 IST
Last Updated 13 ಮಾರ್ಚ್ 2024, 15:40 IST
ಅಕ್ಷರ ಗಾತ್ರ

ಮೈಸೂರು: ‘ಬಿಜೆಪಿ ಟಿಕೆಟ್ ಸಿಗದಿದ್ದರೆ ಬಂಡಾಯ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ’ ಎಂದು ಮೈಸೂರು–ಕೊಡಗು ಕ್ಷೇತ್ರದ ಸಂಸದ ಪ್ರತಾಪ ಸಿಂಹ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನನಗೆ ಟಿಕೆಟ್ ಕೈ ತಪ್ಪಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವುದು ಅಧಿಕೃತವಲ್ಲ. ಇನ್ನೂ ಯಾವುದೇ ನಿರ್ಧಾರವಾಗಿಲ್ಲ. ಅವಕಾಶ ಕೊಟ್ಟರೆ ಇನ್ನಷ್ಟು ಉತ್ತಮ ಕೆಲಸ ಮಾಡುತ್ತೇನೆ. ರಾಜವಂಶಸ್ಥ ಅಥವಾ ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸುವುದು ನನ್ನ ಜವಾಬ್ದಾರಿ’ ಎಂದರು.

‘ಪಕ್ಷದಿಂದ ಟಿಕೆಟ್‌ ದೊರೆಯದಿದ್ದರೆ ಬೇಸರವೇನಿಲ್ಲ. ಪ್ರಾಣ ಇರುವವರೆಗೂ ನಾನು ಮೋದಿ ಭಕ್ತ. ಅವರಿಲ್ಲದಿದ್ದರೆ ನಾನು ಶೂನ್ಯ. ಬಿಜೆಪಿ ಕಾರ್ಯಕರ್ತನಾಗಿಯೇ ಸಾಯುತ್ತೇನೆ’ ಎಂದರು.

‘ಬಿ.ಎಸ್. ಯಡಿಯೂರಪ್ಪ ರಾಜ್ಯದಲ್ಲಿ ಪ್ರಶ್ನಾತೀತ ನಾಯಕರು. ನನ್ನ ಟಿಕೆಟ್ ವಿಚಾರದಲ್ಲಿ ಅವರನ್ನು ಎಳೆದುತರುವ ಅಗತ್ಯವಿಲ್ಲ. ಅವರು ಪಕ್ಷ ಕಟ್ಟಿ ಬೆಳೆಸದಿದ್ದರೆ ನನ್ನಂಥವರು ಸಂಸದರಾಗಲು ಸಾಧ್ಯವಾಗುತ್ತಿರಲಿಲ್ಲ’ ಎಂದರು.

‘ಹೆಸರು ಕೆಡಿಸಿಕೊಂಡಿದ್ದಕ್ಕೆ ಪ್ರತಾಪಗೆ ಟಿಕೆಟ್ ಕೈತಪ್ಪಿರಬಹುದು’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅದು ಅವರ ಹಿರಿತನಕ್ಕೆ ಸೂಕ್ತವಾದ ಹೇಳಿಕೆಯಲ್ಲ. ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡುವಂತೆ ಪ್ರತಿಭಟನೆಗಳು ನಡೆಯುತ್ತಿಲ್ಲ. ಇಲ್ಲಿ ನಡೆದಿದೆ ಎಂದರೆ ನನ್ನ ಕೆಲಸವನ್ನು ಜನ ಮೆಚ್ಚಿದ್ದಾರೆ ಎಂದರ್ಥ. ಹೆಸರು ಕೆಡಿಸಿಕೊಂಡಿದ್ದರಿಂದ ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿಗೆ ಹೋಗಿದ್ರಾ, ಅದೇ ಕಾರಣಕ್ಕೆ ಅಲ್ಲಿಂದ ವಾಪಸಾದರಾ, ಅವರೆಷ್ಟು ಚುನಾವಣೆಯಲ್ಲಿ ಸೋತಿಲ್ಲ?’ ಎಂದು ತಿರುಗೇಟು ನೀಡಿದರು.

ಪ್ರತಾಪ ಪರ ಬಲ ಪ್ರದರ್ಶನ

ಪ್ರತಾಪ ಸಿಂಹ ಪರವಾಗಿ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಹಿನಕಲ್ ಫ್ಲೈಓವರ್ ಬಳಿ ಬುಧವಾರ ಬಲ ಪ್ರದರ್ಶಿಸಿದರು. ‘ಮತ್ತೊಮ್ಮೆ ದೇಶಕ್ಕಾಗಿ ಮೋದಿ ಮೈಸೂರಿಗಾಗಿ ಪ್ರತಾಪ ಸಿಂಹ’ ‘ಬಡವರ ಮನೆ ಮಕ್ಕಳು ಬೆಳೆಯಬಾರದಾ?’ ‘ರಾಜಕೀಯದಲ್ಲಿ ಒಳ್ಳೆಯವರಿಗೆ ಬೆಲೆ ಇಲ್ಲವೇ?’ ‘ಮೈಸೂರು ವಿಮಾನನಿಲ್ದಾಣ ಅಭಿವೃದ್ಧಿ ಮಾಡಿದ್ದಕ್ಕಾಗಿ ಟಿಕೆಟ್ ಇಲ್ವಾ?’ ‘ಕಾಂಗ್ರೆಸ್‌ಗೆ ಟಕ್ಕರ್ ಕೊಟ್ಟಿದ್ದಕ್ಕೆ ಟಿಕೆಟ್ ಇಲ್ವಾ? ‘ಹಿಂದೂಗಳ ಪರ ಮಾತಾಡಿದ್ದಕ್ಕಾಗಿ ಟಿಕೆಟ್ ಕೊಡಲು ಮೀನಮೇಷವೇ?’ ಎಂಬ ಪೋಸ್ಟರ್‌ಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಕಾರ್ಯಕರ್ತರು ಬೆರಳೆಣಿಕೆಯಷ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT