ಕೇಂದ್ರದಿಂದ ಗದಾಪ್ರಹಾರ: ಮಲ್ಲೇಶ್ ಆರೋಪ

ಮೈಸೂರು: ‘ಸಾಂಸ್ಕೃತಿಕ ನಗರಿ ಮೈಸೂರಿಗೆ ಕಿರೀಟಪ್ರಾಯವಾಗಿರುವ ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ರಹಸ್ಯ ಕಾರ್ಯಸೂಚಿ ಕೈಗೊಂಡಿದೆ’ ಎಂದು ಜೆಡಿಎಸ್ ಮುಖಂಡ ಕೆ.ವಿ.ಮಲ್ಲೇಶ್ ದೂರಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಬದಲಾದ ಕಾಲಘಟ್ಟದಲ್ಲಿ ಕೇವಲ ಹಣಕ್ಕೆ ಪ್ರಾಮುಖ್ಯತೆ ನೀಡುತ್ತಿರುವ ಕೇಂದ್ರ ಸರ್ಕಾರ ಪರಿಸರ ಪರ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದ್ದು, ಪರಿಸರದ ಮೇಲೆ ಗದಾಪ್ರಹಾರ ನಡೆಸುತ್ತಿದೆ’ ಎಂದು ಆರೋಪಿಸಿದ್ದಾರೆ.
‘ಮಾನವನ ದುರಾಸೆಯಿಂದಾಗಿ ಹವಾಮಾನ ವೈಪರೀತ್ಯ ಉಂಟಾಗಿ ಗಾಳಿ, ನೀರು ಭಾಗಶಃ ಮಲಿನಗೊಂಡಿರುವ ಈ ಹೊತ್ತಿನಲ್ಲಿ ಪರಿಸರವನ್ನು ಕಾಪಾಡಲೇಬೇಕೆಂಬ ಕನಿಷ್ಠ ಕಾಳಜಿಯೂ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಇಲ್ಲದಿರುವುದು ದುರ್ದೈವ’ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
‘ನಿರ್ವಹಣೆ ಕೊರತೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ರಸ್ತೆ ಅಲ್ಲಲ್ಲಿ ಪದೇ ಪದೆ ಕುಸಿಯುತ್ತಿದೆ. ಹೀಗಿದ್ದರೂ ಕೇಂದ್ರ ಸರ್ಕಾರ ರೋಪ್ ವೇ ಮಾಡಲು ಮುಂದಾಗಿರುವುದು ಮೈಸೂರಿನ ಪರಿಸರ ನಾಶಕ್ಕೆ ಕೈಗೊಂಡಿರುವ ಯೋಜನೆಯಾಗಿದೆ. ‘ಪ್ರಸಾದ’ ಯೋಜನೆಯಡಿ ಈಗಾಗಲೇ ಚಾಮುಂಡಿ ಬೆಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಪ್ರಕೃತಿಗೆ ವಿರುದ್ಧವಾದ ವಾತಾವರಣ ನಿರ್ಮಿಸಲಾಗುತ್ತಿದೆ. ರೋಪ್ ವೇ ಮಾಡುವುದು ಅರ್ಥಹೀನವಾದುದು ಮತ್ತು ಜನ–ಪರಿಸರ ವಿರೋಧಿಯೂ ಆಗಿದೆ’ ಎಂದು ಹೇಳಿದ್ದಾರೆ.
‘ಮೈಸೂರಿನ ಪ್ರಜ್ಞಾವಂತ ನಾಗರಿಕರು ಕೂಡಲೇ ಎಚ್ಚೆತ್ತುಕೊಂಡು ಚಾಮುಂಡಿಬೆಟ್ಟ ಉಳಿಸುವ ಸಂಕಲ್ಪ ಮಾಡದಿದ್ದಲ್ಲಿ, ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ಮೈಸೂರನ್ನು ಹಾಳುಗೆಡವುದರಲ್ಲಿ ಸಂಶಯವಿಲ್ಲ. ಸಂಘ–ಸಂಸ್ಥೆಗಳು ಹೋರಾಟಕ್ಕೆ ಇಳಿಯುವುದು ಒಂದೆಡೆಯಾದರೆ, ನ್ಯಾಯಾಲಯದ ಮೂಲಕವೇ ಈ ರಾಜಕೀಯ ಹಿತಾಸಕ್ತಿಯನ್ನು ಕಟ್ಟಿ ಹಾಕುವ ಕೆಲಸ ಮಾಡಬೇಕು’ ಎಂದು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.