ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಪ್ರತಾಪ ಸಿಂಹ ರಾಜೀನಾಮೆ ಕೇಳುವುದು ಸರಿಯಲ್ಲ: ಜಿ.ಟಿ. ದೇವೇಗೌಡ

Published 17 ಡಿಸೆಂಬರ್ 2023, 14:34 IST
Last Updated 17 ಡಿಸೆಂಬರ್ 2023, 14:34 IST
ಅಕ್ಷರ ಗಾತ್ರ

ಮೈಸೂರು: ‘ಸಂಸತ್‌ನಲ್ಲಿ ಭದ್ರತಾ ಲೋಪ ಆಗಿರುವುದು ನಿಜ. ಇದಕ್ಕೆ ಕಾರಣವಾದ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಲಿ. ದಾಳಿ ನಡೆಸಿದ ದುಷ್ಕರ್ಮಿಗಳಿಗೆ ಪಾಸ್ ನೀಡಿದ್ದರೆಂಬ ಕಾರಣಕ್ಕೆ ಸಂಸದ ಪ್ರತಾಪ ಸಿಂಹ ಅವರ ರಾಜೀನಾಮೆ ಕೇಳುವುದು ಯಾರಿಗೂ ಶೋಭೆ ತರುವುದಿಲ್ಲ’ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಅಧಿವೇಶನ ನೋಡಲೆಂದು ಮತದಾರರು ಶಾಸಕರು ಹಾಗೂ ಸಂಸದರ ಬಳಿ ಪಾಸ್ ಕೇಳುತ್ತಾರೆ. ನಾವು ಕೊಡಲೇಬೇಕಾಗುತ್ತದೆ. ಕೇಳಿದವರು ಕ್ಷೇತ್ರದ ಮತದಾರರೇ ಎಂದು ಪರಿಶೀಲನೆ ಮಾಡುತ್ತೇವೆ. ಬಳಿಕ ಕೊಡುತ್ತೇವೆ. ಅದನ್ನೇ ಪ್ರತಾಪ ಕೂಡ ಮಾಡಿದ್ದಾರೆ’ ಎಂದು ಸಮರ್ಥಿಸಿಕೊಂಡರು.

‘ಪಾಸ್ ಪಡೆದಿದ್ದವರನ್ನು ಸಂಸತ್‌ನ ಭದ್ರತಾ ಸಿಬ್ಬಂದಿ ಸಮರ್ಪಕವಾಗಿ ತಪಾಸಣೆಗೆ ಒಳಪಡಿಸಬೇಕಿತ್ತು. ಅವರ ವೈಫಲ್ಯದಿಂದ ಘಟನೆ ನಡೆದಿದೆ. ಇದಕ್ಕೆ ಸಂಸದರ ರಾಜೀನಾಮೆ ಕೇಳುವುದು ಸರಿಯಲ್ಲ’ ಎಂದರು.

‘ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗಿದ್ದ ನಾವು, ರಾಜ್ಯದಲ್ಲಿರುವ ಬರಗಾಲ ಪರಿಸ್ಥಿತಿಯ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದ್ದೇವೆ’ ಎಂದು ತಿಳಿಸಿದರು.

‘ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದ್ದೇವೆ. ಆದರೆ, ಯಾರು ಸಾಲ ಕಟ್ಟುತ್ತಾರೆಯೋ ಅವರ ಬಡ್ಡಿ ಮನ್ನಾ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕೇವಲ ಬಡ್ಡಿ ಮನ್ನಾದಿಂದ ಏನೂ ಪ್ರಯೋಜನವಿಲ್ಲ. ರೈತರು ಸಾಲ ಕಟ್ಟುವ ಪರಿಸ್ಥಿತಿಯಲ್ಲಿಲ್ಲ’ ಎಂದರು.

‘ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಿ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿರುವುದು ಸರಿಯಲ್ಲ. ಇಲ್ಲಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರೇ ಅಂತಿಮ. ಅವರು ಮೈಸೂರು ಕಟ್ಟಿ– ಬೆಳೆಸಿ, ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅಬ್ಬಯ್ಯ ಅವರ ವೈಯಕ್ತಿಕ ಹೇಳಿಕೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ಯಾವ ಶಾಸಕರೂ ಬೆಂಬಲ ಸೂಚಿಸಿಲ್ಲ. ಸರ್ಕಾರದ ಮುಂದೆ ಕೂಡ ಇಂತಹ ಪ್ರಸ್ತಾವ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT