ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೆನ್‌ಡ್ರೈವ್ ಪ್ರಕರಣ: DCM ಶಿವಕುಮಾರ್ ಅವರನ್ನು 'ಸಿಡಿ ಶಿವು' ಎಂದು ಕರೆದ HDK

Published 22 ಮೇ 2024, 10:10 IST
Last Updated 22 ಮೇ 2024, 10:10 IST
ಅಕ್ಷರ ಗಾತ್ರ

ಮೈಸೂರು: ‘ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 30ರಂದು ಹಾಸನದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯು ಸರ್ಕಾರದ ಪ್ರಯೋಜಕತ್ವದ್ದು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬುಧವಾರ ಮಾತನಾಡಿದ ಅವರು, ‘ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಯೋಜಕತ್ವದ್ದೋ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರದ್ದೋ ಗೊತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರನ್ನು ಕರೆತರುವಂತೆ ಸರ್ಕಾರದಿಂದಲೇ ಸೂಚನೆ ಬಂದಿದೆ ಎಂದು ಕೆಲವು ಅಧಿಕಾರಿಗಳೇ ನನಗೆ ಮಾಹಿತಿ ನೀಡಿದ್ದಾರೆ’ ಎಂದು ತಿಳಿಸಿದರು.

‘ಅಂಗನವಾಡಿ ನೌಕರರನ್ನು ಸೇರಿಸುವ ಬದಲಿಗೆ, ನನಗೆ ಹೇಳಿದ್ದರೆ ನಾನೇ ಒಂದಷ್ಟು ಮಹಿಳೆಯರನ್ನು ಪ್ರತಿಭಟನೆಗೆ ಕಳುಹಿಸಿಕೊಡುತ್ತಿದ್ದೆ. ಬೆಂಬಲವನ್ನೂ ಕೊಡುತ್ತಿದೆ’ ಎಂದರು.

‘ಇದೆಲ್ಲವೂ ಎಚ್‌.ಡಿ. ದೇವೇಗೌಡರ ಕುಟುಂಬವನ್ನು ಕುಗ್ಗಿಸುವುದಷ್ಟೇ ಆಗಿದೆ. ಪೆನ್‌ಡ್ರೈವ್, ವಿಡಿಯೊ ಹಂಚಿದವರನ್ನು ಅಭಿನಂದಿಸುವ ಕಾರ್ಯಕ್ರಮವಷ್ಟೆ ಆಗಿದೆ. ನೊಂದ ಕುಟುಂಬಗಳಿಗೆ ಏನು ಮಾಡುತ್ತೀರಿ’ಎಂದು ಪ್ರಶ್ನಿಸಿದರು.

ದೇವೇಗೌಡರ ಕುಟುಂಬಕ್ಕೆ ಹಾನಿ

‘ಪೆನ್‌ಡ್ರೈವ್ ಪ್ರಕರಣ ಹಾಗೂ ಪ್ರಜ್ವಲ್ ಬರುವುದು ವಿಳಂಬ ಆಗುತ್ತಿರುದರಿಂದ ದೇವೇಗೌಡರ ಕುಟುಂಬಕ್ಕೆ ಸ್ವಲ್ಪ ಹಾನಿಯಾಗಿರುವುದು ಸತ್ಯ. ಇದಕ್ಕಾಗಿಯೇ ಪ್ರಕರಣ ಸೃಷ್ಟಿಸಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಡಿಕೆಶಿ ಬಗ್ಗೆ ನಾನೇಕೆ ಹೊಟ್ಟೆಕಿಚ್ಚು ಪಡಲಿ, ಅದರಿಂದ ನನಗೇನು ಸಿಗುತ್ತದೆ? ಹಾಗೊಂದು ವೇಳೆ ಇದೆ ಎಂದಾದರೆ, ಈ ಪರಿಸ್ಥಿತಿ ತಂದುಕೊಂಡಿರೇಕೆ?’ ಎಂದು ಶಿವಕುಮಾರ್‌ ಅವರನ್ನು ಕೇಳಿದರು.

‘ನೊಂದ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕಲ್ಲವೇ, ಆ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತಲ್ಲವೇ, ಶಿಕ್ಷೆ ವಿಧಿಸಬೇಕಲ್ಲವೇ? ಆ ವ್ಯಕ್ತಿಯ ವಿಡಿಯೊ ಮಾಡಿರುವುದು ಒಂದು ಭಾಗ. ಅದನ್ನು ಚುನಾವಣೆಗಾಗಿ ಹಬ್ಬಿಸಿದ್ದು ದೊಡ್ಡ ಅಪರಾಧವಲ್ಲವೇ? ಮಹಿಳೆಯರ ಮುಖವನ್ನು ಮಸುಕು ಕೂಡ ಮಾಡದೇ ಹಂಚಿಕೊಂಡಿದ್ದರಿಂದ ಆ ಕುಟುಂಬಗಳ ಪರಿಸ್ಥಿತಿ ಏನಾಗಿದೆ, ಅದಕ್ಕೆ ಕಾರಣವಾರು ಮಹಾನುಭಾವರೇ’ ಎಂದು ಪ್ರಶ್ನಿಸಿದದರು.

‘ಮಹಾನುಭಾವರು 1980ರಲ್ಲೇ ಸಿಡಿ ಕಾರ್ಖಾನೆ ತೆರೆದಿದ್ದಾರೆ’ ಎಂದು ಟೀಕಿಸಿದರು.

‘ಅಧಿಕಾರ ಯಾರಪ್ಪನ ಆಸ್ತಿಯೂ ಅಲ್ಲ. ರಾಜಕೀಯದಲ್ಲಿ ಏಳು–ಬೀಳು ಇರುತ್ತದೆ. ಇದರಲ್ಲಿ ಅಸೂಯೆ ಏಕೆ? ಪ್ರಧಾನಿ ಸ್ಥಾನವನ್ನೇ ಅತ್ಯಂತ ಸುಲಭವಾಗಿ ಬಿಟ್ಟು ಕೊಟ್ಟು ಬಂದ ವಂಶ ನಮ್ಮದು. ಸಿಡಿ ಶಿವು ಅವರೇ ನಾವು ಅಧಿಕಾರಕ್ಕೋಸ್ಕರ ಹಂಬಲಿಸುವವರಲ್ಲ. ಎಲ್ಲ ಅಧಿಕಾರವನ್ನೂ ನಾವು ನೋಡಿ ಆಗಿದೆ. ನಾವು ಬೇಡ ಎಂದರೂ ಅಧಿಕಾರ ಬಂದಿದೆ; ಬೇಕು ಎಂದಾಗ ಉಳಿದುಕೊಂಡಿಲ್ಲ. ಆದರೆ, ಹುಡುಕಿಕೊಂಡು ಹೋಗಿಲ್ಲ’ ಎಂದು ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿದರು.

‘ಪೆನ್‌ಡ್ರೈವ್ ಪ್ರಕರಣದಲ್ಲಿ ಎಸ್‌ಐಟಿಯವರು ಎಷ್ಟು ಮನೆಗಳಿಗೆ ಹೋಗಿ ತನಿಖೆ ನಡೆಸುತ್ತಾರೆ, ಮೂಲವನ್ನು ಹೇಗೆ ಪತ್ತೆ ಹಚ್ಚುತ್ತಾರೆ? ರೇವಣ್ಣ ಅವರ ಮನೆಯಲ್ಲಿ ಕೆಲಸಕ್ಕಿದ್ದ ಕಾರ್ತಿಕ್ ಪೆನ್‌ಡ್ರೈವ್ ಮೂಲ. ಆತ ಹಾಸನದ ಕಾಂಗ್ರೆಸ್ ಅಭ್ಯರ್ಥಿ ಹಿಡಿದುಕೊಂಡು ಡಿ.ಕೆ. ಸುರೇಶ್ ಮನೆಗೆ ಹೋಗಿದ್ದ. ಅಲ್ಲಿ ಸಿಡಿ ಶಿವಕುಮಾರ್ ವಿಡಿಯೊಗಳನ್ನು ವರ್ಗಾಯಿಸಿಕೊಂಡಿದ್ದಾರೆ (ಟ್ರಾನ್ಸ್‌ಫರ್‌). ಪ್ರಕರಣದ ಹಿಂದೆ ಡಿಕೆಶಿ ಇದ್ದಾರೆ’ ಎಂದು ದೂರಿದರು.

‘ಕಾರ್ತಿಕ್ ಈಗ ಎಲ್ಲಿದ್ದಾನೆ?

‘ಕಾರ್ತಿಕ್ ಈಗ ಎಲ್ಲಿದ್ದಾನೆ? 8 ಮಂದಿ ಪೊಲೀಸರ ಮೂಲಕ ಅವನಿಗೆ ರಕ್ಷಣೆ ಕೊಡಲಾಗಿದೆ. ಅವನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿಲ್ಲವೇಕೆ, ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲವೇಕೆ? ‘ಈ ಪ್ರಕರಣದಲ್ಲಿ ದೊಡ್ಡ ಗ್ಯಾಂಗೇ ಇದೆ. ಅವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.

‘ನಾನು ಪ್ರಜ್ವಲ್ ರೇವಣ್ಣ ಪರ ಇಲ್ಲ. ಆತ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಪ್ರಜ್ವಲ್ ಭಯ ಬೀಳುವುದು ಬೇಡ, ಬಂಧನವಾದರೆ ಆಗಲಿ ಬಂದುಬಿಡು. ವಕೀಲರ ಸಲಹೆಗಿಂತ ನೈತಿಕತೆ ಉಳಿಸಿಕೊಳ್ಳಲು ಬಾ’ ಎಂದು ಮತ್ತೊಮ್ಮೆ ಕೋರಿದರು.

‘ಮುಖ್ಯಮಂತ್ರಿಯವರೇ ನಿಮ್ಮ ಅಕ್ಕಪಕ್ಕದಲ್ಲಿರುವವರೇ ನಮಗೂ ಮಾಹಿತಿ ಕೊಡುತ್ತಾರೆ. ಏನೇನು ನಡೆಯುತ್ತಿದೆ ಎನ್ನುವುದು ಅವರಿಂದಲೇ ತಿಳಿಯುತ್ತದೆ. ಅದನ್ನು ಇಟ್ಟುಕೊಂಡೇ ನಾವು ಚರ್ಚೆ ಮಾಡುತ್ತಿದ್ದೇವೆ’ ಎಂದರು.

ನನ್ನ ಬಳಿಯ ಪೆನ್‌ಡ್ರೈವ್‌ನಲ್ಲೇದೆ ಗೊತ್ತಾ?

‘ನನ್ನ ಬಳಿ ಇರುವ ಪೆನ್‌ಡ್ರೈವ್‌ ಬೇರೆಯದ್ದು. ಈ ಸರ್ಕಾರದಲ್ಲಿ ನಡೆದಿರುವ ವರ್ಗಾವಣೆಯ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದು. ಅಧಿಕಾರಿಗಳು ನೊಂದು ಏನೇನು ಚರ್ಚೆ ಮಾಡಿದ್ದಾರೆ, ಎಲ್ಲಿಂದ ಸಾಲ ತರುವುದು ಎಂದೆಲ್ಲಾ ಮಾತನಾಡಿದ್ದಾರೆ. ವರ್ಗಾವಣೆಗೆ ಎಷ್ಟೆಷ್ಟು ರೇಟ್ ನಿಗದಿಪಡಿಸಿದ್ರಿರಿ ಎನ್ನುವುದೆಲ್ಲವೂ ಆ ಪೆನ್‌ಡ್ರೈವ್‌ನಲ್ಲಿದೆ’ ಎಂದು ತಿಳಿಸಿದರು.

‘ಎಸ್‌ಐಟಿಗೆ ಇದುವರೆಗೂ ಕೊಟ್ಟ ಯಾವ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ? ನನ್ನ ಅವಧಿಯಲ್ಲಿ ಎಸ್‌ಐಟಿಗೆ ಕೊಡುವಂತಹ ಪ್ರಕರಣ ನಡೆಯಲೇ ಇಲ್ಲ’ ಎಂದರು.

‘ದೂರವಾಣಿ ಕದ್ದಾಲಿಕೆ ಮಾಡಲು ಅವರೇನು ಉಗ್ರರಾ?’ ಎಂದು ಕೆಲವರು ಕೇಳಿದ್ದಾರೆ. ಸಿಎಂ, ಡಿಸಿಎಂ ಬಳಿ ಇರುವವರೆಲ್ಲಾ ಉಗ್ರಗಾಮಿಗಳೇ. ಬಹಳಷ್ಟು ಉಗ್ರರು ಅವರ ಸುತ್ತಮುತ್ತವೇ ಇದ್ದಾರೆ. ಪೆನ್‌ಡ್ರೈವ್ ಪ್ರಕರಣದಲ್ಲಿ ಆ ಉಗ್ರರಲ್ಲಿ ಒಬ್ಬರನ್ನಾದರೂ ಮುಟ್ಟಿದ್ದಾರೆಯೇ? ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬರನ್ನಾದರೂ ಬಂಧಿಸಿದ್ದಾರೆಯೇ?’ ಎಂದು ಕೇಳಿದರು.

‘ಸರ್ಕಾರದ ವೈಫಲ್ಯಗಳು, ಫೋನ್‌ ಕದ್ದಾಲಿಕೆ ಪ್ರಕರಣವೂ ಒಳಗೊಂಡಂತೆ ಎಲ್ಲದರ ಬಗ್ಗೆಯೂ ಕಾನೂನು ಹೋರಾಟ ಮಾಡುತ್ತೇವೆ’ ಎಂದರು.

‘ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಸಚಿವರು, ಕಾಂಗ್ರೆಸ್‌ ಕಾರ್ಯಕರ್ತರು ಇನ್ಮುಂದೆ ಮಾತನಾಡಬೇಡಿ ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಅವರ ಬುಡಕ್ಕೆ ಬರುತ್ತಿದೆಯಲ್ಲಾ ಅದಕ್ಕಾಗಿ ಈಗ ಅಂತಹ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿದರು.

‘ಪೆನ್‌ಡ್ರೈವ್ ಪ್ರಕರಣವನ್ನು ಹಳ್ಳ ಹಿಡಿಸುವ ಕೆಲಸ ಆಗುತ್ತಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಲೇಬೇಕು. ಇದಕ್ಕಾಗಿ ಇನ್ನೂ ಹೆಚ್ಚಿನ ತನಿಖೆಯ ಅಗತ್ಯವಿದೆ. ತನಿಖೆಯು ಸರಿಯಾಗಿ ನಡೆಯುವಂತೆ ನೋಡಿಕೊಳ್ಳಲು ಕಾನೂನು ಹೋರಾಟ ಮಾಡುತ್ತೇವೆ’ ಎಂದರು.

‘ಬಿಜೆಪಿ-ಜೆಡಿಎಸ್ ಮೈತ್ರಿಗೂ ಪೆನ್‌ಡ್ರೈವ್‌ ಪ್ರಕರಣಕ್ಕೂ ಸಂಬಂಧವಿಲ್ಲ. ಪ್ರಜ್ವಲ್ ಎಚ್.ಡಿ. ರೇವಣ್ಣ ಸಂಪರ್ಕದಲ್ಲೂ ಇಲ್ಲ. ನಾನು ಈಗ ವಿದೇಶಕ್ಕೆ ಹೋದರೆ, ಪ್ರಜ್ವಲ್ ರಕ್ಷಣೆಗೆಂದೇ ಹೋಗಿದ್ದಾರೆಂದು ಸುದ್ದಿ ಹಬ್ಬಿಸುತ್ತಾರೆ. ಯಾವ ಗ್ರಹಚಾರ ನಮಗೆ?’ ಎಂದು ಕೇಳಿದರು.

ಶಾಸಕ ಜಿ.ಟಿ. ದೇವೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT