ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯಕ್ಕೆ ಕಿಡಿಗೇಡಿಗಳಿಂದ ಬೆಂಕಿ: ಇಸಾಕ್ ಅಜ್ಜನ 11 ಸಾವಿರ ಪುಸ್ತಕಗಳು ಭಸ್ಮ

Last Updated 10 ಏಪ್ರಿಲ್ 2021, 4:44 IST
ಅಕ್ಷರ ಗಾತ್ರ

ಮೈಸೂರು: 11 ವರ್ಷಗಳಿಂದ ಕನ್ನಡ ಕೈಂಕರ್ಯದಲ್ಲಿ ತೊಡಗಿದ್ದ ರಾಜೀವ್‌ ನಗರದ ಸೈಯದ್ ಇಸಾಕ್ (67) ಎಂಬುವವರ ಗ್ರಂಥಾಲಯಕ್ಕೆ ಕಿಡಿಗೇಡಿಗಳು ಶುಕ್ರವಾರ ನಸುಕಿನಲ್ಲಿ ಬೆಂಕಿ ಹಚ್ಚಿದ್ದು, ಸುಮಾರು 11 ಸಾವಿರ ಪುಸ್ತಕಗಳು ಭಸ್ಮವಾಗಿವೆ.

3 ಸಾವಿರ ಕನ್ನಡ ಪುಸ್ತಕಗಳು, ಭಗವದ್ಗೀತೆಯ 3 ಸಾವಿರ ಪ್ರತಿಗಳು, ಕುರ್‌ಆನ್‌ನ 3 ಸಾವಿರ ಪ್ರತಿಗಳು, 1 ಸಾವಿರ ಉರ್ದು ಪುಸ್ತಕಗಳು ಹಾಗೂ ಬೈಬಲ್‌ನ 1 ಸಾವಿರ ಕನ್ನಡ ಪ್ರತಿಗಳು ಇದರಲ್ಲಿ ಸೇರಿವೆ.

ನಸುಕಿನ 3.45ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ಪಡೆ ಸ್ಥಳಕ್ಕೆ ಬರುವಷ್ಟರಲ್ಲಿ ಎಲ್ಲ ಪುಸ್ತಕಗಳು ಬೆಂಕಿಗಾಹುತಿಯಾಗಿದ್ದವು. ನೂರಕ್ಕೂ ಅಧಿಕ ಮಂದಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಫಲ ನೀಡಲಿಲ್ಲ.

‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಸೇರಿದ ಈ ಜಾಗದಲ್ಲಿ ಈ ಮೊದಲು 4 ಬಾರಿ ಕಿಡಿಗೇಡಿಗಳು ತೊಂದರೆ ಕೊಟ್ಟಿದ್ದರು. ಗ್ರಂಥಾಲಯದ ಮುಂದೆ ಏನೇನೋ ಬರೆಯುತ್ತಿದ್ದರು. ಕನ್ನಡದ ಬರಹಗಳಿಗೆ ಮಸಿ ಬಳಿಯುತ್ತಿದ್ದರು. ಗ್ರಂಥಾಲಯ ನಡೆಸಬಾರದೆಂದು ಕರೆ ಮಾಡುತ್ತಿದ್ದರು. ಅದನ್ನೆಲ್ಲಾ ಸಹಿಸಿಕೊಂಡು ಸುಮ್ಮನಿದ್ದೆ. ಈಗ ಗ್ರಂಥಾಲಯಕ್ಕೆ ಬೆಂಕಿ ಇಟ್ಟಿದ್ದಾರೆ’
ಎಂದು ಇಸಾಕ್ ಅಳಲು ತೋಡಿಕೊಂಡರು.

2011ರಲ್ಲಿ ಇಲ್ಲಿ ಗುಡಿಸಲಿನಲ್ಲಿ ಗ್ರಂಥಾಲಯ ಆರಂಭಿಸಿದ್ದರು. ಈಚೆಗೆ ಶೀಟ್‌ ಹಾಕಿ ಮಳಿಗೆಯಾಗಿ ಮಾಡಿ
ಕೊಂಡು 11 ಸಾವಿರ ಪುಸ್ತಕ ಇಡುವು
ದರ ಜೊತೆಗೆ ನಿತ್ಯ 18 ದಿನಪತ್ರಿಕೆ ತರಿಸುತ್ತಿದ್ದರು. ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆವರೆಗೆ ಸಾರ್ವಜನಿಕರಿಗೆ ಓದಲು ಉಚಿತವಾಗಿ ನೀಡುತ್ತಿದ್ದರು.

‘ಉರ್ದು ಭಾಷಿಕರೇ ಹೆಚ್ಚಾಗಿರುವ ಈ ಸ್ಥಳದಲ್ಲಿ ಕನ್ನಡವನ್ನು ಉಳಿಸಿ, ಬೆಳೆಸುವ ದೃಷ್ಟಿಯಿಂದ ಗ್ರಂಥಾಲಯ ಸ್ಥಾಪಿಸಿದ್ದೆ. ಮನೆಯ ಚರಂಡಿ ಪೈಪ್‌ ಕಟ್ಟಿದಾಗ ಸ್ವಚ್ಛಗೊಳಿಸುವುದು, ಗೋಡೆಗಳಿಗೆ ಬಣ್ಣ ಬಳಿಯುವ ಕಾಯಕ ಮಾಡಿ ಹೊಟ್ಟೆ ಹೊರೆಯುತ್ತಿದ್ದೆ.ಕೆಲಸಕ್ಕೆ ಹೋದಾಗ ಪತ್ನಿ ಶಾಹೀನ್‌ ತಾಜ್ ಗ್ರಂಥಾಲಯ ನೋಡಿಕೊಳ್ಳುತ್ತಿದ್ದರು. ಇಷ್ಟನ್ನು ಸಹಿಸದ ಕೆಲ ಕಿಡಿಗೇಡಿಗಳು ತೊಂದರೆ ಕೊಡುತ್ತಿದ್ದರು. ಈಗ ನನ್ನ ಪುಸ್ತಕಗಳನ್ನೆಲ್ಲ ಸುಟ್ಟು ಹಾಕಿದ್ದಾರೆ’ ಎಂದು ಭಾವುಕರಾದರು.

‘ಕುವೆಂಪು ಮತ್ತು ಡಾ.ರಾಜ್‌ ಕುಮಾರ್ ಅವರಿಗೆ ಸಂಬಂಧಿಸಿದ ಎರಡು ಪುಸ್ತಕ ಮಾತ್ರವೇ ನಾನು ಖರೀದಿಸಿದ್ದು. ಉಳಿದ ಎಲ್ಲ
ಪುಸ್ತಕಗಳನ್ನು ದಾನಿಗಳು ನೀಡಿದ್ದರು’ ಎಂದರು.

ಡಿಸಿಪಿ ಡಾ.ಎ.ಎನ್.ಪ್ರಕಾಶ್‌ಗೌಡ ಪ್ರತಿಕ್ರಿಯಿಸಿ, ‘ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT