ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ನಗರಿಯಲ್ಲಿ ತಪ್ಪದ ಹಂದಿಗಳ ಕಾಟ; ಸ್ವಚ್ಛತೆಗೆ ಸವಾಲು

ಹಂದಿ ಸಾಕಣೆದಾರರ ನಿರ್ಲಕ್ಷ್ಯ; ಸಾರ್ವಜನಿಕರಿಗೆ ತೊಂದರೆ
Last Updated 25 ಜನವರಿ 2021, 3:34 IST
ಅಕ್ಷರ ಗಾತ್ರ

ಮೈಸೂರು: ಸಾಂಸ್ಕೃತಿಕ ನಗರಿ ‘ಸ್ವಚ್ಛ ಸರ್ವೇಕ್ಷಣ್– 2021’ಕ್ಕೆ ಸಿದ್ಧತೆಯಲ್ಲಿ ತೊಡಗಿದೆ. ಈಗಾಗಲೇ ನಗರವನ್ನು ಸ್ವಚ್ಛವಾಗಿಡಲು ಮತ್ತು ಸೌಂದರ್ಯ ಹೆಚ್ಚಿಸಲು ಪಾಲಿಕೆಯು ವಿವಿಧ ಕ್ರಮಗಳಿಗೆ ಮುಂದಾಗಿದೆ.

ಇದರ ನಡುವೆಯೇ ಹಂದಿಗಳ ಕಾಟ ಹೆಚ್ಚಿದ್ದು, ಸ್ವಚ್ಛತೆಗೆ ಸವಾಲಾಗಿ ಪರಿಣಮಿಸಿವೆ. ಕಳೆದ ಕೆಲ ವರ್ಷಗಳಿಂದ ಕಾಡುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಗಿಲ್ಲ. ಹಂದಿಗಳ ಕಾಟ ತಪ್ಪಿಸಲು ಪಾಲಿಕೆಯು ವಿವಿಧ ತಂತ್ರಗಳನ್ನು ಅನುಸರಿಸಿ ನೋಡಿದರೂ ಪೂರ್ಣ ಯಶಸ್ವಿಯಾಗಿಲ್ಲ.

ಹಂದಿ ಸಾಕಣೆ ಮಾಡುವವರು ಅವುಗಳನ್ನು ಎಲ್ಲೆಂದರಲ್ಲಿ ಬಿಡುವುದಕ್ಕೆ ಕಡಿವಾಣ ತೊಡಿಸಲು ಎಚ್ಚರಿಕೆ ನೀಡುವ ಹಾಗೂ ದಂಡ ವಿಧಿಸುವ ಕ್ರಮ ಅನುಸರಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹಂದಿಗಳನ್ನು ಬಿಡಬಾರದೆಂದು ಹಲವು ಬಾರಿ ನೋಟಿಸ್‌ ನೀಡಿದ್ದರೂ ಮಾಲೀಕರು ಗಂಭೀರವಾಗಿ ಪರಿಗಣಿಸಿಲ್ಲ.

ರಸ್ತೆ ಮತ್ತು ಸಾರ್ವಜನಿಕ ಪ್ರದೇಶದಲ್ಲಿ ಓಡಾಡುವ ಹಂದಿಗಳನ್ನು ವಶಕ್ಕೆ ಪಡೆದು ಮಾಲೀಕರಿಗೆ ₹ 500 ರಿಂದ ₹ 2,000 ವರೆಗೂ ದಂಡ ವಿಧಿಸಲು ಪಾಲಿಕೆ ನಿರ್ಧರಿಸಿತ್ತು. ಆದರೂ ಯಾವುದೇ ಪ್ರಯೋಜನ ಆಗಿಲ್ಲ.

ನಗರದಲ್ಲಿ ಹಂದಿಗಳನ್ನು ಸಾಕುವವರು ಅವುಗಳಿಗಾಗಿಯೇ ಪ್ರತ್ಯೇಕವಾಗಿ ಗೂಡುಗಳನ್ನು ಕಟ್ಟಿಕೊಳ್ಳಬೇಕು. ಆದರೆ, ಕೊಳಚೆ ಪ್ರದೇಶಗಳಲ್ಲಿ ಅನಧಿಕೃತವಾಗಿ ಗೂಡುಗಳನ್ನು ಮಾಡಿಕೊಂಡು ಸಾಕಣೆ ಮಾಡುತ್ತಿದ್ದಾರೆ. ಜತೆಗೆ ನರ್ಮ್‌ ಮನೆಗಳ ಅಕ್ಕಪಕ್ಕ ಇರುವ ದೊಡ್ಡ ಮೋರಿಗಳ ಬಳಿ ಸಾಕುತ್ತಿದ್ದಾರೆ. ಕೆಲವರಂತೂ ಬೀದಿಗಳಿಗೆ ಬಿಡುತ್ತಿದ್ದಾರೆ.

ಎಲ್ಲೆಲ್ಲಿ ಸಾಕಣೆ?: ರಿಂಗ್‌ ರಸ್ತೆ ಸುತ್ತ ಮುತ್ತ, ಬೋಗಾದಿ, ಗಂಗೋತ್ರಿ ಬಡಾ ವಣೆ, ಹೆಬ್ಬಾಳು, ಹೈವೇ ವೃತ್ತ ಬಳಿಯ ಬಡಾವಣೆ, ಹಳೆ ಕೆಸರೆ, ಬನ್ನಿಮಂಟಪ, ಬಿಎಂಶ್ರೀ ನಗರ, ಅಶೋಕನಗರ, ಶಾಂತಿ ನಗರ, ರಾಜೀವ್‌ ನಗರ, ಯಾದವಗಿರಿ, ಆಲನಹಳ್ಳಿ ಪ್ರದೇಶದಲ್ಲಿ ಹಂದಿ ಕಾಟ ವಿಪರೀತವಾಗಿದೆ. ಹೊರ ವಲಯದಲ್ಲಿ ತ್ಯಾಜ್ಯ ಸುರಿಯುವುದರಿಂದ ಹಂದಿಗಳಿಗೆ ಆಹಾರ ಸಿಗುತ್ತಿದ್ದು, ಅಲ್ಲೇ ಬೀಡು ಬಿಡುತ್ತಿವೆ.

ಕುವೆಂಪು ನಗರ, ಚನ್ನಗಿರಿ ಕೊಪ್ಪಲು ಮತ್ತು ಕೆ ಬ್ಲಾಕ್ ಬಡಾವಣೆ ನಿವಾಸಿಗಳಿಗೂ ಹಂದಿ ಕಾಟ ತಪ್ಪಿಲ್ಲ. ಇಲ್ಲಿ ಇಸ್ಕಾನ್ ದೇವಾಲಯದ ಮುಂದೆ ದೊಡ್ಡ ಮೋರಿಗೆ ಬೆಳಗಿನ ಜಾವ ಬೇರೆ ಬೇರೆ ಬಡಾವಣೆಗಳಿಂದ ಬಂದು ಕಸವನ್ನು ಸುರಿದು ಹೋಗುತ್ತಾರೆ.

ಮನೆಯಲ್ಲಿ ಮಿಕ್ಕ ಆಹಾರ ಪದಾರ್ಥಗಳನ್ನು ತಂದು ರಸ್ತೆಗಳಲ್ಲಿ ಚೆಲ್ಲುತ್ತಾರೆ. ಇದನ್ನು ತಿನ್ನಲು ಹಂದಿಗಳು ಬರುತ್ತವೆ. ರಸ್ತೆಯಲ್ಲಿ ಮತ್ತು ಮೋರಿಯ ಪಕ್ಕ ಎಸೆದು ಹೋದ ಆಹಾರ ಪದಾರ್ಥಗಳನ್ನು ಚೆಲ್ಲಾಪಿಲ್ಲಿ ಮಾಡುತ್ತವೆ. ರಾತ್ರಿ ಮತ್ತು ಬೆಳಗಿನ ಜಾವ ಹಂದಿಗಳು ರಸ್ತೆಯಲ್ಲಿ ಓಡಾಡುವುದರಿಂದ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ.

‘ಈ ಪ್ರದೇಶದಲ್ಲಿ ಹೋಟೆಲ್‌ಗಳು, ಚೌಲ್ಟ್ರಿಗಳು ಇವೆ. ಇಲ್ಲಿ ಮಿಕ್ಕ ಆಹಾರವನ್ನೂ ಕೆಲವೊಮ್ಮೆ ಮೋರಿಗೆ ಎಸೆಯುತ್ತಾರೆ. ಅದನ್ನು ತಿನ್ನಲು ಹಂದಿಗಳು ಬರುತ್ತವೆ. ರಾತ್ರಿಯ ವೇಳೆ ನುಗ್ಗುತ್ತವೆ. ಅವುಗಳನ್ನು ಬೀದಿ ನಾಯಿಗಳು ಅಟ್ಟಿಸುತ್ತವೆ. ಅವುಗಳ ಕಿರುಚಾಟದಿಂದ ಬಡಾವಣೆಯ ನಿವಾಸಿಗಳಿಗೆ ನಿದ್ದೆ ಇಲ್ಲದಂತಾಗಿದೆ’ ಎಂದು ಸ್ಥಳೀಯರೊಬ್ಬರು ದೂರಿದರು.

‘ಸ್ವಚ್ಛ ನಗರಿ ಹೆಸರು ಪಡೆದಿರುವ ನಗರದ ಇದೊಂದು ಭಾಗವನ್ನು ನೋಡಿದರೆ ಮೈಸೂರು ಎಷ್ಟು ಸ್ವಚ್ಛವಾಗಿದೆ ಎಂದು ಗೊತ್ತಾಗುತ್ತದೆ. ಕಸದ ಬುಟ್ಟಿಯಲ್ಲಿ ಹಾಕಿಟ್ಟ ಕಸವನ್ನು ಹಂದಿಗಳು ಉರುಳಿಸಿ ಹೋಗುತ್ತವೆ. ಹಂದಿ ಹಿಡಿಯಲು ಯಾರಿಗೆ ಹೇಳುವುದು ಗೊತ್ತಾಗುತ್ತಿಲ್ಲ ಸಂಬಂಧಪಟ್ಟವರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ’ ಎನ್ನುವರು.

‘ಹಂದಿ ಮಾಲೀಕ ತನಗೆ ಬೇಕಾದಾಗ ಬಂದು ಕೆಲವು ಹಂದಿಗಳನ್ನು ಮಾಂಸಕ್ಕಾಗಿ ತೆಗೆದುಕೊಂಡು ಹೋಗುತ್ತಾನೆ. ನೂರಾರು ಹಂದಿಗಳು ಮಾಳದಲ್ಲಿ ಸೇರಿಕೊಂಡಿವೆ. ಜನರ ಆರೋಗ್ಯ ಕಾಪಾಡುವ ಮತ್ತು ಸ್ವಚ್ಛತೆಯ ಹಿತದೃಷ್ಟಿಯಿಂದ ಹಂದಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಯಂತ್ರಿಸುವುದು ಅವಶ್ಯಕ’ ಎಂದರು.

ವಾರ್ಡ್‌ ನಂ.6 ರ ಗೋಕುಲಂನಲ್ಲಿ ಹಂದಿಗಳ ಕಾಟ ಜಾಸ್ತಿಯಾಗಿದೆ ಇಲ್ಲಿನ ಉದ್ಯಾನ, ಗೋಕುಲಂ ಥಿಯೇಟರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ 50ಕ್ಕೂ ಹೆಚ್ಚು ಹಂದಿಗಳು ಇದೆ.

ನಗರ ಪಾಲಿಕೆಯ ವ್ಯಾಪ್ತಿ ಹಾಗೂ ಹೊರ ವಲಯದಲ್ಲಿ ಹಂದಿಗಳನ್ನು ಸಾಕುತ್ತಿರುವ ಹಂದಿ ಸಾಕಣೆದಾರರು ನಗರದ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಂದಿ ಬಿಡುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಹಲವು ಬಾರಿ ವಾಹನ ಸವಾರರು ಅಪಘಾತಕ್ಕೆ ಈಡಾಗಿರುವುದು ಗಮನಕ್ಕೆ ಬಂದಿದೆ.

ಹಂದಿ ಸಾಕಣೆ ಮಾಡುವ 50ಕ್ಕೂ ಅಧಿಕ ಕುಟುಂಬಗಳನ್ನು ಪಾಲಿಕೆಯು ಗುರುತಿಸಿದ್ದು, ಅವರಿಗೆ ತಿಳಿವಳಿಕೆ ನೀಡಲಾಗಿದೆ. ಪಾಲಿಕೆಯ ಅಂದಾಜಿನ ಪ್ರಕಾರ ನಗರದಲ್ಲಿ 2 ರಿಂದ 3 ಸಾವಿರದಷ್ಟು ಹಂದಿಗಳು ಇವೆ.

ಹಂದಿ ಸಾಕಣೆಗೆ ಪ್ರತ್ಯೇಕ ಸ್ಥಳ

ಹಂದಿ ಸಾಕಣೆಗೆ ಪ್ರತ್ಯೇಕ ಜಾಗವನ್ನು ನಿಗದಿ ಮಾಡಲು ಪಾಲಿಕೆ ಯೋಜನೆ ರೂಪಿಸಿದೆ. ಆದರೆ, ಹಲವು ತಿಂಗಳು ಕಳೆದರೂ ಈ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ.

ರಾಯನಕೆರೆ ಬಳಿ ಪಾಲಿಕೆಯ 10 ಎಕರೆ ಜಾಗದಲ್ಲಿ ಹಂದಿ ಸಾಕಾಣಿಕೆಗೆ ಸೂಕ್ತ ಸ್ಥಳಾವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ.

‘ಹಂದಿ ಸಾಕಾಣಿಕೆಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಿ, ಅಲ್ಲಿ ಮೂಲಸೌಕರ್ಯಗಳನ್ನು ಒದಗಿಸಿಕೊಟ್ಟರೆ ಎಲ್ಲರೂ ಇಲ್ಲಿಗೆ ಬರುವರು. ಇದರಿಂದ ನಗರದೊಳಗೆ ಹಂದಿಗಳ ಕಾಟ ತಪ್ಪುತ್ತದೆ. ಈಗಿನ ಸಮಸ್ಯೆ ಬಗೆಹರಿಯುತ್ತದೆ’ ಎಂಬುದು ಪಾಲಿಕೆ ಅಧಿಕಾರಿಗಳ ಹೇಳಿಕೆ.

ಪಾಲಿಕೆಯ 15ನೇ ಹಣಕಾಸು ಯೋಜನೆಯಡಿ ಇದಕ್ಕಾಗಿ ಅನುದಾನ ನಿಗದಿಪಡಿಸಲಾಗಿದೆ. ಕ್ರಿಯಾ ಯೋಜನೆಗೆ ಒಪ್ಪಿಗೆ ಲಭಿಸಿದರೆ ಯೋಜನೆ ಜಾರಿಗೆ ಬರಲಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ತಿಳಿಸಿದರು.

‘ಮಾಲೀಕರಿಗೆ ಎಚ್ಚರಿಕೆ ಕೊಟ್ಟಿದ್ದೇವೆ’

‘ಪಾಲಿಕೆಯು ಸ್ವಚ್ಛ ಸರ್ವೇಕ್ಷಣ್‌–2021ಕ್ಕೆ ಸಿದ್ಧತೆ ನಡೆಸುತ್ತಿದೆ. ಸ್ವಚ್ಛತೆಗೆ ಸವಾಲಾಗಿರುವ ಹಂದಿಗಳ ಬಗ್ಗೆಯೂ ಗಮನಹರಿಸಿದ್ದೇವೆ. ಯಾರೂ ಸಾರ್ವಜನಿಕ ಸ್ಥಳಗಳಲ್ಲಿ ಬಿಡಬಾರದು ಎಂದು ಹಂದಿ ಸಾಕಣೆ ಮಾಡುವವರಿಗೆ ಈಗಾಗಲೇ ಎಚ್ಚರಿಕೆ ಕೊಟ್ಟಿದ್ದೇವೆ. ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆ ಆರಂಭಿಸುವ ಬಗ್ಗೆಯೂ ಚಿಂತನೆಯಿದೆ’ ಎಂದು ಸ್ವಚ್ಛ ಭಾರತ್ ನೋಡೆಲ್‌ ಅಧಿಕಾರಿಯೂ ಆಗಿರುವ ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ತಿಳಿಸಿದರು.

ತುಂಬಾ ಸಮಸ್ಯೆಯಾಗುತ್ತಿದೆ

ಹಂದಿಗಳ ಸಾಕಣೆಗೆ ಸೂಕ್ತ ವ್ಯವಸ್ಥೆ ಮಾಡದೆ, ಅವುಗಳನ್ನು ಎಲ್ಲೆಂದರಲ್ಲಿ ಬಿಡುವುದರಿಂದ ತುಂಬಾ ಸಮಸ್ಯೆಯಾಗುತ್ತಿದೆ. ರಿಂಗ್‌ ರಸ್ತೆಯ ಆಸುಪಾಸಿನಲ್ಲಿ ಹಂದಿಗಳ ಕಾಟ ಹೆಚ್ಚಿದೆ. ಗುಂಪು ಗುಂಪಾಗಿ ಬರುವ ಅವುಗಳು ಕೆಲವೊಮ್ಮೆ ಮಕ್ಕಳ ಮೇಲೆ ದಾಳಿ ಮಾಡುತ್ತವೆ. ಪಾಲಿಕೆ ವ್ಯಾಪ್ತಿಗೆ ಸೇರಲಿರುವ ಆಲನಹಳ್ಳಿಯಲ್ಲಿ ಸಮಸ್ಯೆ ಇದೆ. ಸಂಬಂಧಪಟ್ಟವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ.

ಪರಮೇಶ್, ಕೆಎಸ್‌ಆರ್‌ಟಿಸಿ ಬಡಾವಣೆ

ಸಂಬಂಧಪಟ್ಟವರು ಗಮನಹರಿಸಲಿ

ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಹಂದಿ ಸಾಕಣೆ ಬೇಡ. ರಿಂಗ್‌ ರಸ್ತೆಯಲ್ಲಿ ಹಂದಿಗಳು ಓಡಾಡುವುದರಿಂದ
ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಕಸದ ಸಮಸ್ಯೆಯೂ ಇದೆ. ಹಂದಿ ಮಾಲೀಕ ತನಗೆ ಬೇಕಾದಾಗ ಬಂದು ಕೆಲವು ಹಂದಿಗಳನ್ನು ಮಾಂಸಕ್ಕಾಗಿ ತೆಗೆದುಕೊಂಡು ಹೋಗುತ್ತಾನೆ. ಆದರೆ ಅವುಗಳಿಂದ ಸಾರ್ವಜನಿಕರಿಗೆ ಆಗುವ ತೊಂದರೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಚಿಕ್ಕಮಹಾದೇವ, ಗಿರಿದರ್ಶಿನಿ ಬಡಾವಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT