ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಸಂವಿಧಾನದ ಸಮಾಧಿ ಮಾಡುತ್ತಿದ್ದಾರೆ: ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ
Last Updated 27 ಮಾರ್ಚ್ 2023, 8:57 IST
ಅಕ್ಷರ ಗಾತ್ರ

ಮೈಸೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಹಾವೇರಿ ಸೇರಿದಂತೆ ರಾಜ್ಯದ 10 ಜಿಲ್ಲೆಗಳನ್ನು ಬಡತನ ಹಾಗೂ ಅಪೌಷ್ಟಿಕತೆ ಕಾಡುತ್ತಿದ್ದು, ಅದರ ನಿವಾರಣೆಗೆ ಯಾವುದೇ ಕ್ರಮವಹಿಸದ ನರೇಂದ್ರ ಮೋದಿ ಅವರು ಜನರನ್ನಷ್ಟೇ ಅಲ್ಲ ಸಂವಿಧಾನವನ್ನೂ ಸಮಾಧಿ ಮಾಡುತ್ತಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹರಿಹಾಯ್ದರು.

ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ‘ಡೆಕ್ಕನ್‌ ಹೆರಾಲ್ಡ್‌’ನ ಸಂಪಾದಕೀಯ ಬರಹವನ್ನು ಪ್ರಸ್ತಾಪಿಸಿ, ‘ಮಕ್ಕಳ ಬೆಳವಣಿಗೆ ಕುಂಠಿತಗೊಂಡಿದೆ. ಅದನ್ನು ಸರ್ಕಾರದ ವರದಿಯೇ ಹೇಳಿದೆ. ಮೋದಿ ಅವರು ಜನರ ಬಡತನ ಹೋಗಲಾಡಿಸಲು ರಾಜ್ಯ ಸರ್ಕಾರಕ್ಕೆ ಮಾರ್ಗದರ್ಶನ ಮಾಡುವ ಬದಲು ಕಾಂಗ್ರೆಸ್‌ ನನ್ನನ್ನು ಸಮಾಧಿ ಮಾಡುತ್ತಿದೆ. ಕರ್ನಾಟಕದ ಜನರು ನನ್ನನ್ನು ಕಾಪಾಡಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ’ ಎಂದು ಟೀಕಿಸಿದರು.

‘ಜನರ ಆತ್ಮಸ್ಥೈರ್ಯ ತುಂಬುವ ರಚನಾತ್ಮಕ ಕಾರ್ಯಕ್ರಮಗಳು ನಿಮ್ಮ ಬಳಿಯಿಲ್ಲ. ಡಾ.ಬಿ.ಆರ್‌.ಅಂಬೇಡ್ಕರ್‌ ನೀಡಿದ ಸಂವಿಧಾನವನ್ನು ಸಮಾಧಿ ಮಾಡುತ್ತಿದ್ದೀರಿ. ಪ್ರಧಾನಿಯೊಬ್ಬರು ಸಾರ್ವಜನಿಕವಾಗಿ ನೀಡುತ್ತಿರುವ ಹೇಳಿಕೆಗಳು ಸರಿಯಿಲ್ಲ’ ಎಂದರು.

‘ರಾಜ್ಯದಲ್ಲಿ ಪ್ರವಾಹವಾದಾಗ ಕನ್ನಡಿಗರ ಸಂಕಷ್ಟ ಕೇಳಲು ಮೋದಿ ಬರಲಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾಗ, ಬೆಳಗಾವಿಯಲ್ಲಿ ಮಹಾರಾಷ್ಟ್ರದ ಕಿಡಿಗೇಡಿಗಳು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಲು ಹೊರಟಾಗ, ಕನಿಷ್ಠ ಸೌಜನ್ಯದ ಹೇಳಿಕೆಯನ್ನೂ ನೀಡಲಿಲ್ಲ. ಇದೀಗ ನಿಮಗೆ ಕನ್ನಡಿಗರ ಮತ ಬೇಕೆ? ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ, ನಮ್ಮ ಪಾಲಿನ ನೀರಿನ ಬಳಕೆಗೆ ಯಾವ ಅನುಕೂಲ ಮಾಡಿಕೊಟ್ಟಿದ್ದೀರಿ? ಮೇಕೆದಾಟು, ಮಹಾದಾಯಿ ಕೆಲಸ ಆರಂಭಿಸಿದ್ದೀರಾ’ ಎಂದು ಪ್ರಶ್ನಿಸಿದರು.

‘ಭದ್ರಾ ಮೇಲ್ದಂಡೆ ಯೋಜನೆಗೆ ₹ 5,500 ಕೋಟಿ ನೀಡಿರುವುದು ಕಾಗದದ ಮೇಲಷ್ಟೇ. ಶಂಕುಸ್ಥಾಪನೆ ಹಾಗೂ ಫಲಾನುಭವಿಗಳ ಕಾರ್ಯಕ್ರಮಗಳನ್ನು ಸರ್ಕಾರದ ಹಣದಲ್ಲಿ ನಡೆಸಿ, ಪಕ್ಷದ ಬಾವುಟ ಹಾಗೂ ಪಕ್ಷದ ಚಿಹ್ನೆ ಬಳಸುತ್ತಿರುವುದು ಎಷ್ಟು ಸರಿ? ಇದು ಉತ್ತರ ಪ್ರದೇಶವಲ್ಲ, ಕರ್ನಾಟಕ. ಜನರು ಪಾಠ ಕಲಿಸಲಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್‌ ಹಲವು ಭಾಗ್ಯ ಕೊಟ್ಟರೂ, ಎಲ್ಲ ಸಮುದಾಯಗಳಿಗೆ ಯೋಜನೆಗಳು ನೀಡಿದ್ದರೂ, ಮುಸ್ಲಿಂ ಸಮುದಾಯದ ಶೇ 89ರಷ್ಟು ಮತಗಳನ್ನು ಪಡೆದರೂ, ಕಳೆದ ಬಾರಿ ಬಹುಮತ ಬರಲಿಲ್ಲ. ಈ ಬಾರಿ ಮತ್ತಷ್ಟು ಕುಸಿಯಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪಂಚರತ್ನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದೇ ಗುರಿ. ಸಮಾರೋಪಕ್ಕೆ ರಾಜ್ಯ 31 ಜಿಲ್ಲೆಗಳಿಂದ 8 ಲಕ್ಷಕ್ಕೂ ಹೆಚ್ಚು ಮಂದಿ ಬಂದಿದ್ದರು. ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಚಾಲಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಅವರ ಶ್ರಮಕ್ಕೆ ಕೃತಜ್ಞತೆ ಸಲ್ಲಿಸುವೆ’ ಎಂದರು.

‘ಪಂಚರತ್ನ ಯಾತ್ರೆಯು ಏಪ್ರಿಲ್ 10ರವರೆಗೂ ಮುಂದುವರಿಯಲಿದೆ. ಮಾರ್ಚ್‌ 28ರಿಂದ ಬೆಂಗಳೂರಿನ ಯಶವಂತಪುರ, ಗೋವಿಂದರಾಜ, ಬಸವನಗುಡಿ, ಯಲಹಂಕ ವಿಧಾನ ಸಭಾ ಕ್ಷೇತ್ರಗಳು ಸೇರಿದಂತೆ ಬೆಂಗಳೂರು, ಮೈಸೂರು ಹಾಗೂ ಚಾಮರಾಜನಗರದ ಎಲ್ಲ ತಾಲ್ಲೂಕುಗಳಲ್ಲೂ ಯಾತ್ರೆ ನಡೆಯಲಿದೆ’ ಎಂದೂ ತಿಳಿಸಿದರು.

‘ಬಿಜೆಪಿಯದ್ದು, ಒಡೆದು ಆಳುವ ನೀತಿ’

‘ಮುಸ್ಲಿಮರ ಮೀಸಲಾತಿ ತೆಗೆದಿರುವುದು ಬಿಜೆಪಿ ಒಡೆದು ಆಳುವ ನೀತಿಯಾಗಿದೆ. ಮೀಸಲಾತಿ ರದ್ದತಿಯಿಂದ ಮುಸ್ಲಿಮರು ಬೀದಿಗಿಳಿದು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟರೆ, ಒಕ್ಕಲಿಗರು ಹಾಗೂ ಲಿಂಗಾಯಿತರ ಮತ ಪಡೆಯಬಹುದು. ಬೆಂಕಿ ಹಚ್ಚುವ ಕೆಲಸ ಮಾಡಬೇಕೆಂಬುದೇ ಬಿಜೆಪಿಗರ ಉದ್ದೇಶವಾಗಿದೆ’ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

‘ಯಾವುದೇ ಆಯೋಗವನ್ನು ರಚಿಸದೇ, ಸಲಹೆ ಪಡೆಯದೇ ಅವೈಜ್ಞಾನಿಕವಾಗಿ ಮುಸ್ಲಿಮರ ಮೀಸಲಾತಿಯನ್ನು ತರಾತುರಿಯಲ್ಲಿ ತೆಗೆದುಹಾಕಿರುವುದು ಸರಿಯಲ್ಲ. ಸರ್ಕಾರದ ಮಕ್ಕಳಾಟಿಕೆಯಿದು’ ಎಂದರು.

‘ಲಿಂಗಾಯತರು ಹಾಗೂ ಒಕ್ಕಲಿಗರ ಕಿವಿಗೆ ಹೂ ಮುಡಿಸಲು ಹೊರಟಿದ್ದಾರೆ. ವಾರದಲ್ಲಿ ಚುನಾವಣೆ ಘೋಷಣೆಯಾಗಲಿದೆ. ಬಿಜೆಪಿಯ ಮೀಸಲಾತಿ ಘೋಷಣೆಯು ಕಾರ್ಯರೂಪಕ್ಕೆ ಬರುವುದಿಲ್ಲ’ ಎಂದರು.

ಶಾಸಕರಾದ ಜಿ.ಟಿ.ದೇವೇಗೌಡ. ಸಾ.ರಾ.ಮಹೇಶ್‌, ಅಶ್ವಿನ್‌ ಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT