ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರುನಾಡ ಸವಿಯೂಟ ಅಡುಗೆ ಸ್ಪರ್ಧೆ: ಖಾದ್ಯ ವೈವಿಧ್ಯ, ರುಚಿಗಳ ಸಮಾಗಮ

ಉತ್ತಮ ಪ್ರತಿಕ್ರಿಯೆ, ವೃದ್ಧರು, ಗೃಹಿಣಿಯರೊಂದಿಗೆ ಯುವಜನರೂ ಭಾಗಿ
Published : 23 ಆಗಸ್ಟ್ 2024, 23:30 IST
Last Updated : 23 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಮೈಸೂರು: ಅಲ್ಲಿ ವೈವಿಧ್ಯಮಯ, ರುಚಿಕರ ಖಾದ್ಯಗಳ ರಸಪಾಕದ ವರ್ಣರಂಜಿತ ಮೆರವಣಿಗೆ ಇತ್ತು. ಬೆಳಿಗ್ಗೆ ವಿವಿಧ ಭಾಗದಿಂದ ಬಂದ ಅಪರಿಚಿತರೆಲ್ಲರ ನಡುವೆ ಮಧ್ಯಾಹ್ನದ ವೇಳೆಗೆ ಸ್ನೇಹ–ಸೌಹಾರ್ದ ಮೊಳೆದಿತ್ತು. ಎಲ್ಲರೂ ಎಲ್ಲರೊಂದಿಗೆ ಬೆರೆತು ಸಂಭ್ರಮಿಸಿದರು. ತಾವು ಮನೆಯಲ್ಲಿ ತಯಾರಿಸಿ ತಂದಿದ್ದ ತಿನಿಸುಗಳನ್ನು ಹಂಚಿದರು; ‘ರುಚಿ ಹೇಗಿದೆ’ ಎಂದು ಕೇಳಿ ಅಭಿಪ್ರಾಯ ಪಡೆದರು. ಈ ಭಿನ್ನ ರುಚಿಗಳ ಸಮಾಗಮ; ತಿಂಡಿಗಳ  ಪರಿಮಳವು ನೆರೆದವರ ಬಾಯಲ್ಲಿ ನೀರೂರಿಸಿತು. ಹೀಗೆ ಅಲ್ಲಿ ಸಾಂಪ್ರದಾಯಿಕ–ವಿನೂತನ ತಿನಿಸುಗಳ ಮಹಾಮನೆಯೊಂದು ನಿರ್ಮಾಣವಾಗಿತ್ತು.

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್’ ಮತ್ತು ‘ಫ್ರೀಡಂ ಹೆಲ್ದಿ ಕುಕ್ಕಿಂಗ್ ಆಯಿಲ್‌’ ಸಹಯೋಗದಲ್ಲಿ ಇಲ್ಲಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಶುಕ್ರವಾರ ನಡೆದ ‘ಕರುನಾಡ ಸವಿಯೂಟ’ ಅಡುಗೆ ಸ್ಪರ್ಧೆಯಲ್ಲಿ ಶುಚಿ–ರುಚಿಯ ಆಹಾರ ಪದಾರ್ಥಗಳು ಗಮನಸೆಳೆದವು.

ಹತ್ತೂ ದಿಕ್ಕಿನಿಂದ ಬಂದಿದ್ದ ಸ್ಪರ್ಧಿಗಳು, ಉಚಿತವಾಗಿ ಇಂಥದೊಂದು ಸ್ಪರ್ಧೆ ಆಯೋಜಿಸಿದ್ದಕ್ಕಾಗಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್’ ಪತ್ರಿಕೆಗಳಿಗೆ ಧನ್ಯವಾದ ಸಮರ್ಪಿಸಿದರು.

ಸ್ಪರ್ಧೆಯ ನಿಯಮದಂತೆ, ಮನೆಯಲ್ಲೇ ಸಿದ್ಧಪಡಿಸಿಕೊಂಡು ತಂದಿದ್ದ ಖಾದ್ಯಗಳನ್ನು ಸ್ಪರ್ಧಿಗಳು ವ್ಯವಸ್ಥಿತವಾಗಿ ಜೋಡಿಸಿಟ್ಟಿದ್ದರು. ಖಾದ್ಯವನ್ನು ಮೊಂಬತ್ತಿ, ಹೂವುಗಳು, ಗೊಂಬೆಗಳು ಹಾಗೂ ಕಲಾಕೃತಿಗಳಿಂದ ಆಕರ್ಷಕವಾಗಿ ಅಲಂಕರಿಸಿದ್ದರು. ಪ್ರತಿಯೊಬ್ಬರ ಬಳಿಗೂ ಹೋದ ತೀರ್ಪುಗಾರರಾದ ಸಿಹಿಕಹಿ ಚಂದ್ರು ಮತ್ತು ಆದರ್ಶ್‌ ತತ್ಪತಿ, ಪ್ರತಿ ತಿನಿಸುಗಳ ರುಚಿಯನ್ನೂ ಸವಿದು ಗುಣಮಟ್ಟಕ್ಕೆ ಅಂಕ ನೀಡಿದರು. ಪ್ರಸ್ತುತಿ, ಆವಿಷ್ಕಾರವನ್ನೂ ಮೌಲ್ಯಮಾಪನ ಮಾಡಿದರು.

‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್’ ಮತ್ತು ‘ಫ್ರೀಡಂ ಹೆಲ್ದಿ ಕುಕ್ಕಿಂಗ್ ಆಯಿಲ್‌’ ಸಹಯೋಗದಲ್ಲಿ ಮೈಸೂರಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಶುಕ್ರವಾರ ನಡೆದ ‘ಕರುನಾಡ ಸವಿಯೂಟ’ ಅಡುಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವರು ನಟಿ ಸಿಹಿಕಹಿ ಗೀತಾ ತೀರ್ಪುಗಾರರಾದ ಸಿಹಿಕಹಿ ಚಂದ್ರು ಹಾಗೂ ಆದರ್ಶ್‌ ತತ್ಪತಿ ಅವರೊಂದಿಗೆ ಸಂಭ್ರಮಿಸಿದರು

‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್’ ಮತ್ತು ‘ಫ್ರೀಡಂ ಹೆಲ್ದಿ ಕುಕ್ಕಿಂಗ್ ಆಯಿಲ್‌’ ಸಹಯೋಗದಲ್ಲಿ ಮೈಸೂರಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಶುಕ್ರವಾರ ನಡೆದ ‘ಕರುನಾಡ ಸವಿಯೂಟ’ ಅಡುಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವರು ನಟಿ ಸಿಹಿಕಹಿ ಗೀತಾ ತೀರ್ಪುಗಾರರಾದ ಸಿಹಿಕಹಿ ಚಂದ್ರು ಹಾಗೂ ಆದರ್ಶ್‌ ತತ್ಪತಿ ಅವರೊಂದಿಗೆ ಸಂಭ್ರಮಿಸಿದರು

–  ಪ್ರಜಾವಾಣಿ ಚಿತ್ರ

ಆದರ್ಶ್‌ ತತ್ಪತಿ ಅವರು, ಫ್ರೀಡಂ ಸನ್‌ಫ್ಲವರ್ ಅಡುಗೆ ಎಣ್ಣೆ ಬಳಸಿ ಪೇಪರ್ ಅವಲಕ್ಕಿಯಿಂದ ‌ಸ್ಥಳದಲ್ಲೇ ಅವಲಕ್ಕಿ ಖಾದ್ಯವನ್ನು ತಯಾರಿಸಿ ಗಮನ ಸೆಳೆದರು.

ಸ್ಪರ್ಧಿಗಳೆಲ್ಲರಿಗೂ ಪ್ರಮಾಣಪತ್ರವನ್ನು ವಿತರಿಸಲಾಯಿತು. ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಮಳಿಗೆಯ ನಿಂಗರಾಜ ಚಿತ್ತಣ್ಣನವರ್ ಅವರು ನೀಡಿದ ‘ಹರಿದಾಸರ ಕೀರ್ತನೆಗಳಲ್ಲಿ ಉಪಚಾರ ಸಾಹಿತ್ಯ’ ಪುಸ್ತಕಗಳನ್ನು ತೀರ್ಪುಗಾರರಿಗೆ ನೀಡಲಾಯಿತು.

ಆಹಾರವನ್ನು ಮೊದಲು ಕಣ್ಣುಗಳು ತಿನ್ನಬೇಕು!

‘ಮಾಸ್ಟರ್ ಕ್ಲಾಸ್‌’ನಲ್ಲಿ ಮಾತನಾಡಿದ ಸಿಹಿ ಕಹಿ ಚಂದ್ರು, ‘ಸ್ಪರ್ಧೆಗೆ ಯೋಗ್ಯವಾದ ತಿನಿಸುಗಳನ್ನೇ ತಯಾರಿಸಬೇಕು. ಆವಿಷ್ಕಾರ, ಹೊಸತನವಿರಬೇಕು. ಹೇಗೆ ಪ್ರಸ್ತುತಪಡಿಸುತ್ತೀರಿ ಎಂಬುದೇ ಮಾನದಂಡ. ಆಹಾರವನ್ನು ಮೊದಲು ಕಣ್ಣು‌ ತಿನ್ನಬೇಕು; ನಂತರ ಘಮ ಮೂಗಿಗೆ ಬಡಿಯಬೇಕು. ಬಳಿಕ ನಾಲಿಗೆಗೆ ರುಚಿ ದಕ್ಕಬೇಕು.‌ ಆಗಲೇ ತಿಂದವರ ಮನಸ್ಸಿಗೆ ಖುಷಿಯಾಗುತ್ತದೆ. ಆಹಾರವು ಹಲ್ಲಿಗೆ ತೊಂದರೆಯಾಗುವಂತಿರಬಾರದು’ ಎಂದು ತಿಳಿಸಿಕೊಟ್ಟರು.

‘ಅಡುಗೆ ಸ್ಪರ್ಧೆ ಎಂದರೆ ಸಾಮನ್ಯವಾಗಿ 30ರಿಂದ 40 ಜನ ಭಾಗವಹಿಸುತ್ತಾರೆ. ಇಲ್ಲಿ ಹೆಚ್ಚು ಜನ ಬಂದಿದ್ದು ನೋಡಿ ಖುಷಿಯಾಯಿತು. ಇದು ಉತ್ತಮ ಗುಣಮಟ್ಟದ ಸ್ಪರ್ಧೆ. ಕೆಲವರ ಪ್ರಸ್ತುತಿಯಲ್ಲಿ ವಿಶೇಷವಿರಲಿಲ್ಲ; ತಿನಿಸು ರಚಿಯಾಗಿತ್ತು. ಕೆಲವರು ಚೆನ್ನಾಗಿ ಪ್ರಸ್ತುತಪಡಿಸಿದ್ದರು; ರುಚಿ ಸಾಮಾನ್ಯವಾಗಿತ್ತು. ಸ್ಪರ್ಧೆಯಲ್ಲಿ ಬೇರಾರೂ ತಯಾರಿಸದ, ವೈವಿಧ್ಯಮಯ ಪದಾರ್ಥವನ್ನೇ ತಯಾರಿಸಬೇಕು’ ಎಂದು ಸಲಹೆ ನೀಡಿದರು.

ಸ್ಪರ್ಧಿಯೊಬ್ಬರು ಪ್ರಜಾವಾಣಿ ‘ಕರುನಾಡ ಸವಿಯೂಟ’ ಎಂದು ಹಿಟ್ಟಿನಲ್ಲಿ ಬರೆದಿದ್ದು ಗಮನಸೆಳೆಯಿತು
ಸ್ಪರ್ಧಿಯೊಬ್ಬರು ಪ್ರಜಾವಾಣಿ ‘ಕರುನಾಡ ಸವಿಯೂಟ’ ಎಂದು ಹಿಟ್ಟಿನಲ್ಲಿ ಬರೆದಿದ್ದು ಗಮನಸೆಳೆಯಿತು

ಉತ್ಸವದ ಮಾದರಿ

ಆದರ್ಶ್‌ ತತ್ಪತಿ ಮಾತನಾಡಿ, ‘ಹೆಚ್ಚಿನ ಜನ ಭಾಗವಹಿಸಿರುವುದರಿಂದ ಇದನ್ನು ಉತ್ಸವ ಎಂದೇ ಹೇಳಬೇಕು. ಮೈಸೂರಿನಲ್ಲಿ ಮೊದಲ ಬಾರಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಖುಷಿಯಾಯಿತು. ಅಡುಗೆ ಒಂದು ಕಲೆ. ಪದಾರ್ಥ ಪ್ರಸ್ತುತಿಯೂ ಮಹತ್ವದ ಅಂಶ’ ಎಂದರು.

‘ಬೆಂಗಳೂರಿನ‌ಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ನಾವು ಹೋಗುವುದಕ್ಕೆ ಆಗದಿರಬಹುದು. ಸ್ಪರ್ಧೆಯಲ್ಲಿ ಸರಳವಾಗಿ ಭಾಗವಹಿಸಿ, ಪ್ರತಿಭೆ ಪ್ರದರ್ಶಿಸಲು ನಮ್ಮಂತಹ ಸಾಮಾನ್ಯ ಮಹಿಳೆಯರಿಗೆ ಅವಕಾಶ ಸಿಕ್ಕಿದ್ದು ಖುಷಿ ತಂದಿದೆ’ ಎಂದು ಗೃಹಿಣಿಯರು ಹೇಳಿದರು.

‘ಪ್ರಜಾವಾಣಿ’ ಮೈಸೂರು ಬ್ಯೂರೊ ಮುಖ್ಯಸ್ಥ ಕೆ.ನರಸಿಂಹಮೂರ್ತಿ, ‘ಡೆಕ್ಕನ್‌ ಹೆರಾಲ್ಡ್‌’ ಬ್ಯೂರೊ ಮುಖ್ಯಸ್ಥ ಟಿ.ಆರ್. ಸತೀಶ್‌ಕುಮಾರ್‌, ಟಿಪಿಎಂಎಲ್‌ ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಎಸ್.ಪ್ರಕಾಶ್, ಸಹಾಯಕ ವ್ಯವಸ್ಥಾಪಕ ಲೋಕೇಶ್ ಪಿ.ಆರ್., ಜಾಹೀರಾತು ವಿಭಾಗದ ಶಾಖಾ ವ್ಯವಸ್ಥಾಪಕ ಸ್ಕಂದನ್ ರಾವ್ ಕೆ.ಎನ್., ಈವೆಂಟ್ಸ್‌ ವಿಭಾಗದ ಪ್ರಮೋದ್ ಹಾಗೂ ಬ್ರ್ಯಾಂಡ್ ವಿಭಾಗದ ಅಂಗೀರಾ ಪಾಲ್ಗೊಂಡಿದ್ದರು.

‘ಕರುನಾಡ ಸವಿಯೂಟ’ದಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳು ಆಹಾರ ಪದಾರ್ಥ ಪ್ರಸ್ತುತಪಡಿಸುವಲ್ಲಿ ತಲ್ಲೀನರಾಗಿದ್ದರು–ಪ್ರಜಾವಾಣಿ ಚಿತ್ರ
‘ಕರುನಾಡ ಸವಿಯೂಟ’ದಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳು ಆಹಾರ ಪದಾರ್ಥ ಪ್ರಸ್ತುತಪಡಿಸುವಲ್ಲಿ ತಲ್ಲೀನರಾಗಿದ್ದರು–ಪ್ರಜಾವಾಣಿ ಚಿತ್ರ
ಸಿಹಿ ಕಹಿ ಚಂದ್ರು ಹಾಗೂ ಆದರ್ಶ್ ತತ್ಪತಿ ‘ಮಾಸ್ಟರ್‌ ಕ್ಲಾಸ್‌’ನಲ್ಲಿ ಮಾತನಾಡಿದರು
ಸಿಹಿ ಕಹಿ ಚಂದ್ರು ಹಾಗೂ ಆದರ್ಶ್ ತತ್ಪತಿ ‘ಮಾಸ್ಟರ್‌ ಕ್ಲಾಸ್‌’ನಲ್ಲಿ ಮಾತನಾಡಿದರು

ಚಂಚಂ ಕೈಮಾ ಸೀಬೆಹಣ್ಣಿನ ಹಲ್ವಾ...

ಮೆಣಸಿನಕಾಯಿ ಚಿಕನ್ ಕಬಾಬ್ ಚಂಚಂ ಕೈಮಾ ನವಣೆ ಊದಲು ಮೊದಲಾದ ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ಖಾದ್ಯಗಳು ಬದನೆಕಾಯಿ ಗೊಜ್ಜು ಕುಚ್ಚಲಕ್ಕಿ ಹುರಿದು ಮಾಡಿದ್ದ ನನ್ನೇರಿ ಪತ್ರೊಡೆ ಚಿಕನ್ ಬೆಲ್ಲದನ್ನ ಬೋನ್‌ಲೆಸ್ ಚಿಕನ್ ಘೀ ರೋಸ್ಟ್ ಗುಡ್‌ಪಾವಟೆ ಒಣಹಣ್ಣುಗಳನ್ನು ಸೇರಿಸಿ ಮಾಡಿದ್ದ ಸೀಬೆಹಣ್ಣಿನ ಹಲ್ವಾ ಕಾಯಿ ಹೋಳಿಗೆ ಅಮೃತಬಳ್ಳಿ ಇನ್ಸುಲಿನ್ ಬಳ್ಳಿ ಹಾಗೂ ಕಿರುನೆಲ್ಲಿಕಾಯಿ‌ ಮೊದಲಾದವುಗಳನ್ನು ಸೇರಿಸಿ ಮಾಡಿದ್ದ ಬಾತ್‌ ನವಣೆ ಉಪ್ಪಿಟ್ಟು ಊದಲು ಉಪ್ಪಿಟ್ಟು ಕುಂಬಳಕಾಯಿ ಹಲ್ವಾ ಹಾಗಲಕಾಯಿ ಚಿಪ್ಸ ಕರ್ಜಿಕಾಯಿ ಹಾಲುಬಾಯಿ ಹೀಗೆ... ಹತ್ತು ಹಲವು ಖಾದ್ಯಗಳು ಪ್ರೇಕ್ಷಕರ ಬಾಯಲ್ಲಿ ನೀರೂರಿಸಿದವು.

ಎಲ್‌ಪಿಜಿ ಸಿಲಿಂಡರ್ ಸುರಕ್ಷಿತ ಬಳಕೆಗೆ ಸಲಹೆ

ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್‌ ಸುರಕ್ಷಿತ ಬಳಕೆಯ ಬಗ್ಗೆ ಇಂಡಿಯನ್ ಆಯಿಲ್ ಹಾಗೂ ಇಂಡೇನ್‌ ತಂಡದ ಸೇಲ್ಸ್ ಮ್ಯಾನೇಜರ್ ನೂರ್ ಫಾತಿಮಾ ಮತ್ತು ಗೋವರ್ಧನ್ ಅವರು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡಿದರು. ಆ ವೇಳೆ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ನಳಿನಾ ದಿವ್ಯಾ ಹಾಗೂ ಜಗನ್ನಾಥ್ ಅವರಿಗೆ ಬಹುಮಾನ ವಿತರಿಸಲಾಯಿತು.

‘ಸಿಲಿಂಡರ್ ಪಡೆಯುವ ಮುನ್ನ ಸೋರಿಕೆ ಇದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ತೂಕದ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಸ್ವಯಂ ದುರಸ್ತಿ ಅಪಾಯಕಾರಿ. ಐದು ವರ್ಷಕ್ಕೊಮ್ಮೆ ಸುರಕ್ಷಾ ಪೈಪ್ ಬದಲಿಸಬೇಕು. ಸಿಲಿಂಡರ್ ಹಾಗೂ ಪೈಪ್ ಕಾಣಿಸುವಂತಿರಬೇಕು. ಅಡುಗೆ ಮನೆಯ ಕಿಟಕಿ ಬಾಗಿಲನ್ನು ತೆಗೆದಿರಬೇಕು. ಪರದೆ ಹಾಕಿರಬಾರದು. ಸುರಕ್ಷಿತ ಬಳಕೆಗೆಂದೇ ಇರುವ ಸಲಕರಣೆಗಳನ್ನು ಬಳಸಬೇಕು. ಬೇಸಿಕ್ ಸರ್ವೀಸ್ ಚೆಕ್‌ಗೆ ಬಂದಾಗ ಸಹಕರಿಸಬೇಕು’ ಎಂದು ಸಲಹೆ ನೀಡಿದರು.

ನೆಚ್ಚಿನ ಪತ್ರಿಕೆ ‘ಪ್ರಜಾವಾಣಿ’ ‘ಡೆಕ್ಕನ್ ಹೆರಾಲ್ಡ್’

‘ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್‌ ಪತ್ರಿಕೆಗಳನ್ನು ನಿತ್ಯವೂ ತಪ್ಪದೇ ಓದುತ್ತೇನೆ. ಆ ಮೂಲಕವೇ ನನ್ನ ದಿನಚರಿ ಆರಂಭವಾಗುತ್ತದೆ’ ಎಂದು ಸಿಹಿಕಹಿ ಚಂದ್ರು ತಿಳಿಸಿದರು. ವಿಶೇಷ ಅತಿಥಿಯಾಗಿದ್ದ ಅವರ ಪತ್ನಿ ಸಿಹಿಕಹಿ ಗೀತಾ ‘ಪ್ರಜಾವಾಣಿ ನಮ್ಮ‌ ತಂದೆ ಕಾಲದಿಂದಲೂ ಓದುತ್ತಿರುವ ಪತ್ರಿಕೆ.‌ ಎಲ್ಲರ ವಿಶ್ವಾಸ ಉಳಿಸಿಕೊಂಡಿದೆ. ನಮ್ಮ ಮಕ್ಕಳ ತಲೆಮಾರಿಗೂ ಆ ಪತ್ರಿಕೆಯ ಓದು ಮುಂದುವರಿದಿದೆ’ ಎಂದರು.

ಲೇಖಕ ನಾ.ದಿನಾಕರ್ ಮಾತನಾಡಿ ‘ಸಹಭೋಜನಕ್ಕೆ ಅವಕಾಶ ಕಲ್ಪಿಸಿದ ವಿಶೇಷ ಸಾಮಾಜಿಕ ಸಮನ್ವಯದ ಕಾರ್ಯಕ್ರಮ ಇದು. ಆ ಮೂಲಕ ಅಂಬೇಡ್ಕರ್ ಪ್ರತಿಪಾದಿಸಿದ ಸೌಹಾರ್ದ ಬೆಳೆಸುವುದಕ್ಕೂ ಸಹಕಾರಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತ‍ಪಡಿಸಿದರು. ‘45 ವರ್ಷಗಳಿಂದ ಪ್ರಜಾವಾಣಿ ಓದುತ್ತಿದ್ದೇವೆ. ಬೇರೆ ಪತ್ರಿಕೆ ಓದಿದರೆ ಓದಿದಂತೆ ಆಗುವುದಿಲ್ಲ. ನಮ್ಮ ಅಡುಗೆ ಕೌಶಲ ಪ್ರದರ್ಶನಕ್ಕೆ ವೇದಿಕೆ ಒದಗಿಸಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ’ ಎಂದು 75 ವರ್ಷದ ನೃತ್ಯ ಕಲಾವಿದೆ ಯದುಗಿರಿ ಅನಿಸಿಕೆ ಹಂಚಿಕೊಂಡರು.

ತೀರ್ಪುಗಾರರ ಮನ ಗೆಲ್ಲಲು...

ಕೆಲವು ಸ್ಪರ್ಧಿಗಳು ಒಂದಕ್ಕಿಂತ ಹೆಚ್ಚು ಖಾದ್ಯಗಳನ್ನು ತಂದಿದ್ದರು. ಆಗ ಅವರ ಆಯ್ಕೆಯ ಒಂದನ್ನು ‌ಮಾತ್ರ ತೀರ್ಪುಗಾರರು ಪರಿಗಣಿಸಿದರು. ಹದಿಹರೆಯದವರಿಂದ 81 ವರ್ಷ ವಯಸ್ಸಿನ ಹಿರಿಯ ನಾಗರಿಕವರೆಗೆ ಎಲ್ಲ ವಯೋಮಾನದ ಸ್ಪರ್ಧಿಗಳೂ ಇದ್ದುದು ವಿಶೇಷ.  ವಿದ್ಯಾವಿಕಾಸ ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜಿನ ಟೂರಿಸಂ ಹಾಗೂ ಹಾಸ್ಪಿಟಾಲಿಟಿ ಕೋರ್ಸ್‌ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರೂ ಪಾಲ್ಗೊಂಡಿದ್ದರು. ಖಾದ್ಯವನ್ನು ಸಿದ್ಧಪಡಿಸಿದ್ದ ಬಗೆ ಬೇಕಾಗುವ ಸಮಯ ಬಳಸಿದ ಪದಾರ್ಥಗಳ ವಿವರಣೆಯನ್ನು ನೀಡುವ ಮೂಲಕ ಸ್ಪರ್ಧಿಗಳು ತೀರ್ಪುಗಾರರ ಮನಗೆಲ್ಲಲು ಯತ್ನಿಸಿದರು. ‌ಪ್ರತಿಯೊಬ್ಬರ ಬಳಿಯೂ ಸಮಾಧಾನದಿಂದ ಮಾಹಿತಿ ಪಡೆದ ತೀರ್ಪುಗಾರರು ರುಚಿಯನ್ನೂ ಸವಿದು ಪ್ರೋತ್ಸಾಹಿಸಿದರು.

ಗೆದ್ದ ‘ಕರ್ಜಿಕಾಯಿ’ ‘ಮಾಕ್ ಮೀಟ್ ಕರಿ’ ‘ಸೂಜಿ ಸೋಜಿಗ’!

ಮೊದಲನೇ ಬಹುಮಾನ ಪಡೆದ ಧೃತಿ ಎಂ. ‘ಕರದಂಟು ಮೊದಲಾದವುಗಳನ್ನು ಬಳಸಿ ಕರ್ಜಿಕಾಯಿ’ ತಯಾರಿಸಿದ್ದರು. 2ನೇ ಸ್ಥಾನ ಗಳಿಸಿದ ಭಾಗ್ಯಲಕ್ಷ್ಮಿ ‘ಮಾಕ್ ಮೀಟ್ ಕರಿ’ ಮಾಡಿದ್ದರು. ಅದು ಮಾಂಸಾಹಾರಕ್ಕೆ ಬಳಸುವ ಮಸಾಲೆಗಳನ್ನು ಹಾಕಿ ತಯಾರಿಸಿದ್ದ ಸಸ್ಯಾಹಾರ ಎಂಬುದು ವಿಶೇಷ. 3ನೇ ಬಹುಮಾನ ಪಡೆದ ಜಾಹ್ನವಿ ಮಹೇಶ್ ಅವರು ರವೆ ಬಳಸಿ ಕಪ್ ಕೇಕ್ ತಯಾರಿಸಿ ಅದಕ್ಕೆ ‘ಸೂಜಿ ಸೋಜಿಗ’ ಎಂದು ಹೆಸರಿಟ್ಟಿದ್ದರು. ಅವುಗಳನ್ನು ತೀರ್ಪುಗಾರರು ಮೆಚ್ಚಿ ಬಹುಮಾನಕ್ಕೆ ಪರಿಗಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT