ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮಕ್ಕಳ ಸ್ವಾಗತಕ್ಕೆ ಶಾಲೆಗಳಲ್ಲಿ ತಯಾರಿ

ಪಠ್ಯ‍ಪುಸ್ತಕ, ಸಮವಸ್ತ್ರ, ಹಾಲಿನ ಪುಡಿ ಪೂರೈಕೆ, ಈ ಬಾರಿಯಾದರೂ ಸಿಗುವುದೇ ಬೈಸಿಕಲ್?
Published 24 ಮೇ 2023, 23:33 IST
Last Updated 24 ಮೇ 2023, 23:33 IST
ಅಕ್ಷರ ಗಾತ್ರ

ಎಂ.ಮಹೇಶ

ಮೈಸೂರು: ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಾಲೆಗಳ ಪುನರಾರಂಭಕ್ಕೆ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ನಡೆದಿದೆ.

ನಗರವೂ ಸೇರಿದಂತೆ ವಿವಿಧೆಡೆ ಕೆಲವು ಖಾಸಗಿ ಶಾಲೆಗಳು ಈಗಾಗಲೇ ತರಗತಿಗಳನ್ನು (ವಿಶೇಷವಾಗಿ 9 ಹಾಗೂ 10ನೇ ತರಗತಿ) ಆರಂಭಿಸಿದ್ದು, ಮಕ್ಕಳ ಕಲರವ ಕಂಡುಬರುತ್ತಿದೆ.

ಕೆಲವು ಖಾಸಗಿ ಹಾಗೂ ಅನುದಾನರಹಿತ ಶಾಲೆಗಳು ಮೇ 25ರಿಂದ ಶುರುವಾಗಲಿವೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳನ್ನು ಮೇ 29ರಿಂದ ಏಕಕಾಲಕ್ಕೆ ಪುನರಾರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಾಲೆಗಳ ಮಟ್ಟದಲ್ಲಿ ತಯಾರಿ ನಡೆದಿದೆ. ಕೇಂದ್ರೀಯ ವಿದ್ಯಾಲಯಗಳು ಜೂನ್‌ 21ರಿಂದ (ಸಂಪೂರ್ಣವಾಗಿ) ತೆರೆಯಲಿವೆ.

ಪಠ್ಯಪುಸ್ತಕಗಳು, ಲೇಖನ ಸಾಮಗ್ರಿಗಳು, ಬ್ಯಾಗ್‌ಗಳು, ಶೂ, ಸಮವಸ್ತ್ರ ಮೊದಲಾದವುಗಳ ಖರೀದಿಯಲ್ಲಿ ಪೋಷಕರು ತೊಡಗಿದ್ದಾರೆ. ಮಕ್ಕಳನ್ನು ಮೊದಲ ದಿನದಿಂದಲೇ ಶಾಲೆಗಳಿಗೆ ಕಳುಹಿಸಲು ಮುಂದಾಗಿದ್ದಾರೆ. ಪರಿಣಾಮ, ಶಾಲೆಗಳಿಗೆ ಅಗತ್ಯವಾದ ಪರಿಕರಗಳಿಗೆ ಬೇಡಿಕೆ ಕಂಡುಬಂದಿದೆ. ಹೋದ ವರ್ಷಕ್ಕೆ ಹೋಲಿಸಿದರೆ ಬೆಲೆಯು ಸರಾಸರಿ ಶೇ 10ರಿಂದ ಶೇ 15ರಷ್ಟು ಏರಿಕೆಯಾಗಿರುವುದು ಪೋಷಕರಿಗೆ ಹೊರೆಯಾಗಿ ಪರಿಣಮಿಸಿದೆ.

ಖಾಸಗಿಯವರು ಖರೀದಿಸಬೇಕು: ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕಗಳು, ಶೂ–ಸಾಕ್ಸ್‌, ಸಮವಸ್ತ್ರ ಸರ್ಕಾರದಿಂದಲೇ ಉಚಿತವಾಗಿ ದೊರೆಯುತ್ತವೆ. ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ಕೊಡಿಸಿರುವವರು ತಾವಾಗಿಯೇ ಖರೀದಿಸಬೇಕಾಗಿದೆ.

ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ಪಠ್ಯಪುಸ್ತಕಗಳ ವಿತರಣೆ ತಡವಾಗಿತ್ತು. ಆದರೆ, ಈ ಬಾರಿ ಅವುಗಳನ್ನು ಈಗಾಗಲೇ ಶಾಲೆಗಳಿಗೆ ತಲುಪಿಸಲಾಗಿದೆ. ಬೇಡಿಕೆಗೆ ತಕ್ಕಂತೆ ಸಮವಸ್ತ್ರ, ಹಾಲಿನ ಪುಡಿ ಪೂರೈಕೆಯೂ ನಡೆದಿದೆ. ಶೂ ಹಾಗೂ ಸಾಕ್ಸ್‌ ಖರೀದಿ ಮತ್ತು ವಿತರಣೆ ಪ್ರಕ್ರಿಯೆ ನಂತರ ನಡೆಯಲಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಬೈಸಿಕಲ್‌ಗಳ ವಿತರಣೆ ಕಾರ್ಯ ಕೋವಿಡ್‌ ನಂತರ ನಡೆದಿಲ್ಲ. ಈ ಬಾರಿಯಾದರೂ ದೊರೆಯುವುದೇ ಎನ್ನುವ ನಿರೀಕ್ಷೆ ವಿದ್ಯಾರ್ಥಿಗಳು ಹಾಗೂ ಪೋಷಕರದ್ದಾಗಿದೆ. ಹೊಸ ಸರ್ಕಾರವು ಏನೇನು ಹೊಸ ಕೊಡುಗೆಗಳನ್ನು ಕೊಡಬಹುದು ಎನ್ನುವ ನಿರೀಕ್ಷೆಯೂ ಅವರದಾಗಿದೆ.

‘ಉಚಿತ ಪಠ್ಯಪುಸ್ತಕಗಳು ಈಗಾಗಲೇ ಜಿಲ್ಲೆಗೆ ಹಂಚಿಕೆಯಾಗಿವೆ. ತಾಲ್ಲೂಕು ಕೇಂದ್ರಗಳಿಂದ ಮುಖ್ಯಶಿಕ್ಷಕರಿಗೆ ತಲುಪಿಸಲಾಗಿದೆ. ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಮೇ 29ರಂದು (ಸೋಮವಾರ) ಎಲ್ಲ ಕಡೆಯೂ ಪುನರಾರಂಭ ಕಾರ್ಯಕ್ರಮವನ್ನು ಸಡಗರದಿಂದ ನಡೆಸಬೇಕು ಎಂದು ಸೂಚಿಸಲಾಗಿದೆ’ ಎಂದು ಡಿಡಿಪಿಐ ರಾಮಚಂದ್ರರಾಜೇ ಅರಸ್‌ ತಿಳಿಸಿದರು.

ಸೂಚನೆಯಂತೆ ಕ್ರಮ: ‘ಇಲಾಖೆಯ ಸೂಚನೆಯಂತೆ ಮೇ 29ರಿಂದ ಶಾಲೆಗಳ ಪುನರಾರಂಭಕ್ಕೆ ಕ್ರಮ ವಹಿಸಲಾಗಿದೆ. ಮೊದಲಿಗೆ ಸ್ವಚ್ಛತಾ ಕಾರ್ಯ ನಡೆಯಲಿದೆ. ಮಕ್ಕಳ ದಾಖಲಾತಿ ಆಂದೋಲನವೂ ಅಂದೇ ಶುರುವಾಗಲಿದೆ. ತಳಿರು–ತೋರಣಗಳಿಂದ ಶಾಲೆಯನ್ನು ಸಿಂಗರಿಸಿ, ಮಕ್ಕಳಿಗೆ ಸಿಹಿ ವಿತರಿಸಿ ಸ್ವಾಗತಿಸಲಾಗುವುದು. ‘ಸೇತುಬಂಧು’ ಕಲಿಕಾ ಚಟುವಟಿಕೆಗೂ ತಯಾರಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಎಚ್‌.ಡಿ.ಕೋಟೆ ತಾಲ್ಲೂಕಿನ ಚಾಮಲಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಾಲುಂಡಿ ಎಸ್.ದೊರೆಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಠ್ಯಪುಸ್ತಕಗಳು ಏಪ್ರಿಲ್‌ನಲ್ಲೇ ಬಂದಿವೆ. ಸ್ಥಳೀಯ ಜನಪ್ರತಿನಿಧಿಗಳು, ಎಸ್‌ಡಿಎಂಸಿಯವರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮೇ 29ರಂದು ಮಕ್ಕಳಿಗೆ ವಿತರಿಸಲಾಗುವುದು. ನಮ್ಮ ವ್ಯಾಪ್ತಿಯಲ್ಲಿ 5 ವರ್ಷ 10 ತಿಂಗಳು ವಯಸ್ಸಿನ ಮಕ್ಕಳು ಯಾರಾರಿದ್ದಾರೆ ಎಂಬುದನ್ನು ಪಟ್ಟಿ ಮಾಡಲಾಗಿದೆ. ಅವರನ್ನು ದಾಖಲು ಮಾಡಿಕೊಂಡು ಶಾಲೆಗೆ ಕರೆತರುವ ಕಾರ್ಯಕ್ರಮವೂ ನಡೆಯಲಿದೆ. ಅವರು ಶಾಲೆಗೆ ಸೇರಿದರೇ ಇಲ್ಲವೇ ಎನ್ನುವುದನ್ನೂ ಖಾತರಿಪಡಿಸಿಕೊಳ್ಳಲಾಗುತ್ತದೆ. ನಮ್ಮ ಶಾಲೆಯಲ್ಲಿ 30 ಮಕ್ಕಳಿದ್ದು, ಸಮವಸ್ತ್ರವನ್ನೂ ಮೇ 29ರಂದೇ ವಿತರಿಸಲಾಗುವುದು’ ಎನ್ನುತ್ತಾರೆ ಅವರು.

ನಂಜನಗೂಡು ತಾಲ್ಲೂಕಿನ ದೇಬೂರಿನಿಂದ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ರವಾನಿಸಲಾಯಿತು
ನಂಜನಗೂಡು ತಾಲ್ಲೂಕಿನ ದೇಬೂರಿನಿಂದ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ರವಾನಿಸಲಾಯಿತು

- ಲೇಖನ ಸಾಮಗ್ರಿ ದುಬಾರಿ 29ರಂದು ಎಲ್ಲ ಕಡೆ ಪುನರಾರಂಭ ಕಾರ್ಯಕ್ರಮ ಹೊಸ ಸರ್ಕಾರದಿಂದ ಹೊಸ ಕೊಡುಗೆಗಳ ನಿರೀಕ್ಷೆ

ನಮ್ಮ ಇಬ್ಬರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದ್ದು ಮೇ 25ರಿಂದ ತರಗತಿಗಳು ಆರಂಭವಾಗಲಿವೆ. ಸಮವಸ್ತ್ರ ಪಠ್ಯಪುಸ್ತಕ ಶೂ ಬ್ಯಾಗ್‌ ಖರೀದಿಸಿದ್ದೇನೆ. ಬೆಲೆ ಹೆಚ್ಚಳ ಹೊರೆಯಾಗಿದೆ.

- ಎಂ.ರಮೇಶ್ ಕುಮಾರ್ ಪೋಷಕ ವಿಜಯನಗರ 3ನೇ ಹಂತ

ಸರ್ಕಾರಿ ಶಾಲೆಗಳ ಪುನರಾರಂಭಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಬುಧವಾರ ಇಡೀ ದಿನ ವಿಡಿಯೊ ಕಾನ್ಫರೆನ್ಸ್ ನಡೆಸಿ ಇಲಾಖೆಯಿಂದ ಮಾರ್ಗಸೂಚಿ ನೀಡಲಾಗಿದ್ದು ಅದನ್ನು ಪಾಲಿಸಲಾಗುವುದು.

- ರಾಮಚಂದ್ರರಾಜೇ ಅರಸ್, ಡಿಡಿಪಿಐ

ಕ್ಷೀರ ಭಾಗ್ಯ ಯೋಜನೆಯಲ್ಲಿ ಜೂನ್‌ ಹಾಗೂ ಜುಲೈ ತಿಂಗಳಿಗೆ ಅಗತ್ಯವಿರುವ ಹಾಲಿನ ಪುಡಿ ಪೂರೈಕೆಯಾಗಿದೆ. ಮಧ್ಯಾಹ್ನದ ಬಿಸಿಯೂಟವನ್ನು ಮೊದಲ ದಿನದಿಂದಲೇ ಆರಂಭಿಸಲಾಗುವುದು.

-ಸಾಲುಂಡಿ ಎಸ್.ದೊರೆಸ್ವಾಮಿ, ಮುಖ್ಯಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಾಮಲಾ‍ಪುರ

3445 ಶಾಲೆ 4.28 ಲಕ್ಷ ಮಕ್ಕಳು ‘ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಸಮಾಜ ಕಲ್ಯಾಣ ಮತ್ತು ಬುಡಕಟ್ಟು ಇಲಾಖೆ ಅನುದಾನಿತ ಅನುದಾನರಹಿತ ಹಾಗೂ ಕೇಂದ್ರ ಸರ್ಕಾರ ಸೇರಿದಂತೆ ಒಟ್ಟು 3446 ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ. ಹೋದ ಶೈಕ್ಷಣಿಕ ವರ್ಷದಲ್ಲಿ 4.28 ಲಕ್ಷ ಮಕ್ಕಳು ಇದ್ದರು. ಅದಕ್ಕೆ ತಕ್ಕಂತೆ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಕ್ಕೆ ಬೇಡಿಕೆ  ಸಲ್ಲಿಸಿದ್ದೆವು. ಇದರಲ್ಲಿ ಶೇ 95ರಷ್ಟು ಪುಸ್ತಕಗಳು ಬಂದಿವೆ. ಅಷ್ಟನ್ನೂ ಶಾಲೆಗಳಿಗೆ ಕಳುಹಿಸಿದ್ದೇವೆ. ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತದೆ. ಖಾಸಗಿ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಮಾರಾಟಕ್ಕೆ ದೊರೆಯುತ್ತವೆ. ಸಮವಸ್ತ್ರ ಶೇ 100ರಷ್ಟು ಬಂದಿವೆ. ಶೂ ಹಾಗೂ ಸಾಕ್ಸ್‌ ಈ ವರ್ಷವೂ ಒದಗಿಸುವುದಾಗಿ ಹೇಳಿದ್ದಾರೆ. ಬೈಸಿಕಲ್ ಬಗ್ಗೆ ನಮಗೆ ಮಾಹಿತಿ ಇಲ್ಲ’ ಎಂದು ರಾಮಚಂದ್ರರಾಜೇ ಅರಸ್ ತಿಳಿಸಿದರು. ‘ಈ ಬಾರಿ ದಾಖಲಾತಿ ಆಂದೋಲನ ನಡೆದ ನಂತರ ಮಕ್ಕಳ ಸಂಖ್ಯೆಯ ಸ್ಪಷ್ಟ ಚಿತ್ರಣ ದೊರೆಯಲಿದೆ’ ಎನ್ನುತ್ತಾರೆ ಅವರು. ‘2023–24ನೇ ಶೈಕ್ಷಣಿಕ ವರ್ಷವನ್ನು ಗುಣಾತ್ಮಕ ಶೈಕ್ಷಣಿಕ ವರ್ಷ ಎಂದು ಆಚರಿಸಲಾಗುವುದು. ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಶಿಥಿಲಗೊಂಡಿರುವ ಕೊಠಡಿಗಳ ಬಳಿ ಮಕ್ಕಳು ಹೋಗದಂತೆ ನೋಡಿಕೊಳ್ಳುವಂತೆ ಶಾಲೆಗಳವರಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ಶಾಲೆಗಳ ವಿವರ (ಕಿರಿಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಸೇರಿ) ಶೈಕ್ಷಣಿಕ ತಾಲ್ಲೂಕು;ಶಿಕ್ಷಣ ಇಲಾಖೆ;ಸಮಾಜ ಕಲ್ಯಾಣ ಇಲಾಖೆ;ಅನುದಾನ ರಹಿತ;ಅನುದಾನಿತ;ಕೇಂದ್ರ ಸರ್ಕಾರ;ಒಟ್ಟು ಎಚ್‌.ಡಿ.ಕೋಟೆ;333;20;16;50;0;419 ಹುಣಸೂರು;315;18;14;75;2;424 ಕೆ.ಆರ್.ನಗರ;255;12;31;52;0;424 ಮೈಸೂರು ಉತ್ತರ;78;13;79;216;2;388 ಮೈಸೂರು ಗ್ರಾಮಾಂತರ;253;8;18;212;6;497 ಮೈಸೂರು ದಕ್ಷಿಣ;41;0;57;149;2;249 ನಂಜನಗೂಡು;289;18;24;60;0;391 ಪಿರಿಯಾಪಟ್ಟಣ;303;15;10;51;4;383 ತಿ.ನರಸೀಪುರ;255;10;18;62;0;345 ಒಟ್ಟು;2122;114;267;927;16;3446

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT