ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ವರ್ಷದ ಮೊದಲ ಹಬ್ಬಕ್ಕೆ ತಯಾರಿ ಜೋರು: ಸಂಕ್ರಾಂತಿ ಸ್ವಾಗತಿಸಲು ಮೈಸೂರು ಸಜ್ಜು

ಶಿವಪ್ರಸಾದ್‌ ರೈ
Published : 14 ಜನವರಿ 2024, 7:24 IST
Last Updated : 14 ಜನವರಿ 2024, 7:24 IST
ಫಾಲೋ ಮಾಡಿ
Comments
ಸಂಕ್ರಾಂತಿ ಪ್ರಯುಕ್ತ ನಗರದ ರಸ್ತೆ ಬದಿಗಳಲ್ಲಿ ಕಬ್ಬು ರಾಶಿ ಹಾಕಿ ಮಾರಾಟ ಮಾಡುತ್ತಿರುವುದು – ಪ್ರಜಾವಾಣಿ ಚಿತ್ರ/ ಹಂಪಾ ನಾಗರಾಜ್‌
ಸಂಕ್ರಾಂತಿ ಪ್ರಯುಕ್ತ ನಗರದ ರಸ್ತೆ ಬದಿಗಳಲ್ಲಿ ಕಬ್ಬು ರಾಶಿ ಹಾಕಿ ಮಾರಾಟ ಮಾಡುತ್ತಿರುವುದು – ಪ್ರಜಾವಾಣಿ ಚಿತ್ರ/ ಹಂಪಾ ನಾಗರಾಜ್‌
ಮಾರುಕಟ್ಟೆಯಲ್ಲಿ ಹೆಚ್ಚಿದ ಚಟುವಟಿಕೆ ಹಸುಗಳಿಗೆ ಕಿಚ್ಚು ಹಾಯಿಸಲು ತಯಾರಿ ಎಲ್ಲು, ಬೆಲ್ಲ ಖರೀದಿಯಲ್ಲಿ ತೊಡಗಿದ ಜನ
ಎರಡು ದಿನಗಳಲ್ಲಿ ವ್ಯಾಪಾರ ಹೆಚ್ಚುವ ನಿರೀಕ್ಷೆಯಲ್ಲಿದ್ದೇವೆ. ನಗರದ ಕೆಲವೆಡೆ ಸಂಭ್ರಮಾಚರಣೆಗಳೂ ಸ್ಥಗಿತವಾಗಿರುವುದರಿಂದ ವ್ಯಾಪಾರಕ್ಕೆ ಹಿನ್ನಡೆಯಾಗಿದೆ
ಎಸ್‌.ಮಹಾದೇವ್‌ ದೇವರಾಜ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ
ಊರಿನಲ್ಲಿ ಕಬ್ಬು ಬೆಳೆದು ವ್ಯಾಪಾರಕ್ಕಾಗಿ ಮಾರುಕಟ್ಟೆಗೆ ಬಂದಿದ್ದೇನೆ. ಗ್ರಾಹಕರ ಕೊರತೆ ಇರುವುದರಿಂದ ಕಡಿಮೆ ಬೆಲೆಗೆ ಮಾರುತ್ತಿದ್ದೇನೆ
ಅಂದಾನಿ ಗೌಡ ಬಿದರಳ್ಳಿ ಮಂಡ್ಯ
ಕುಸಿದ ಬೆಲೆ: ಕಾಯುತ್ತಿರುವ ವರ್ತಕರು
‘ದೀಪಾವಳಿ ಕಳ್ದ್‌ ಮೇಲೆ ವ್ಯಾಪಾರ ಕಮ್ಮಿ. ಮಾರುಕಟ್ಟೆಗೆ ಜನ ಬಂದ್ರೆ ನಮ್ ಹೊಟ್ಟೆ ತುಂಬುತ್ತೆ’ ಎಂದು ಹಣ್ಣುಗಳ ವ್ಯಾಪಾರಿ ಮಲ್ಲೇಶ್‌ ಹೇಳಿದರು. ದೇವರಾಜ ಮಾರುಕಟ್ಟೆಯಲ್ಲಿ ಹಣ್ಣು ವ್ಯಾಪಾರಿಗಳು ಹೆಚ್ಚಿದ್ದಾರೆ. ಗ್ರಾಹಕರು ಕಡಿಮೆ ಇದ್ದಾರೆ. ಹಬ್ಬಕ್ಕೆ ಬೇಕಾದ ಎಲ್ಲಾ ವಸ್ತುಗಳು ಮಾರುಕಟ್ಟೆಯೊಳಗೆ ಲಭ್ಯವಿದ್ದು ಮಾವಿನ ಎಲೆ ಬಾಳೆ ಗಿಡ ವೀಳ್ಯದೆಳೆ ಕಡ್ಲೆ ಸೊಪ್ಪು ಆಕರ್ಷಿಸುತ್ತಿದೆ. ಗಗನಕ್ಕೇರಿದ್ದ ಹಣ್ಣುಗಳ ಬೆಲೆ ಹಬ್ಬದ ಸಮಯದಲ್ಲೇ ಕುಸಿದಿದೆ. ತಿಂಗಳ ಹಿಂದೆ ಕೆಜಿಗೆ ₹250ಕ್ಕೆ ಮಾರಾಟವಾಗಿದ್ದ ದಾಳಿಂಬೆ 150ಕ್ಕೆ ಇಳಿದಿದೆ. ದ್ರಾಕ್ಷಿ ಕೆ.ಜಿಗೆ ₹100 ಕಿತ್ತಳೆ ₹60 ಬಾಳೆಹಣ್ಣು ₹40 ಸೇಬು ₹160ಕ್ಕೆ ಗ್ರಾಹಕರ ಕೈ ಸೇರುತ್ತಿದೆ. ಸೇವಂತಿಗೆ ಯಥೇಚ್ಛವಾಗಿದ್ದು ಒಂದು ಮೀಟರ್ ಬೆಲೆ ₹50ಕ್ಕೆ ಮಾರಾಟವಾಗುತ್ತಿದೆ. ಕನಕಾಂಬರ ಹಾಗೂ ಮಲ್ಲಿಗೆಯೂ ಸಮಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಯುವ ರೈತರು ತಾವು ಬೆಳೆದ ಕಬ್ಬು ಮಾರಾಟ ಮಾಡಲು ಮಾರುಕಟ್ಟೆಗೆ ಬಂದಿದ್ದು ಒಂದು ಜೋಡಿ ಕೆಂಪು ಕಬ್ಬು ₹40 ಹಾಗೂ ಕಪ್ಪು ಕಬ್ಬು ₹60ಕ್ಕೆ ಮಾರಾಟವಾಗುತ್ತಿದೆ. ಕಳೆದ ವರ್ಷಕ್ಕಿಂದ ಈ ಬಾರಿ ಹೆಚ್ಚಿನ ಪ್ರಮಾಣದ ಕಬ್ಬು ಮಾರುಕಟ್ಟೆಗೆ ಬಂದಿದೆ. ಎಳ್ಳು ಬೆಲ್ಲದ ಅಚ್ಚು ಕೊಬ್ಬರಿಯ ಮಿಶ್ರಣವನ್ನು ₹10 ₹30 ₹120ರ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.
ಕಿಚ್ಚು ಹಾಯಿಸಲು ಸಿದ್ಧ
ಸಂಕ್ರಾಂತಿ ಸಮಯದಲ್ಲಿ ಹಸುಗಳಿಗೆ ಕಿಚ್ಚು ಹಾಯಿಸುವಲ್ಲಿ ಸಿದ್ದಲಿಂಗಪುರವು ಜಿಲ್ಲೆಯಲ್ಲೇ ಪ್ರಸಿದ್ಧಿ ಪಡೆದಿದೆ. ಹಿರಿಯರ ಸಂಪ್ರದಾಯವನ್ನು ಯುವ ಸಮೂಹ ಮುಂದುವರಿಸುತ್ತಿದೆ. ಸುಮಾರು ಹದಿನೈದರಿಂದ ಇಪ್ಪತ್ತು ಜೊತೆ ಹಸುಗಳಿಗೆ ಕಿಚ್ಚು ಹಾಯಿಸಲು ಸಿದ್ಧತೆ ನಡೆದಿದ್ದು ಶನಿವಾರದಿಂದಲೇ ಸಂಭ್ರಮ ಮನೆಮಾಡಿದೆ. ಹಸುಗಳನ್ನು ಸ್ನಾನ ಮಾಡಿಸಿ ಸ್ವಚ್ಛಗೊಳಿಸಿ ಅವುಗಳನ್ನು ಸಿಂಗರಿಸುವ ಕಾಯಕದಲ್ಲಿ ಜನ ತೊಡಗಿದ್ದಾರೆ. ನಗರದ ಮಾರುಕಟ್ಟೆಯಿಂದ ಪೂಜಾ ಸಾಮಗ್ರಿ ಖರೀದಿಸಿ ಬೆಂಕಿ ಹಾಯಿಸಲು ಜಮೀನಿನಿಂದ ಹುಲ್ಲು ಸಂಗ್ರಹಿಸುತ್ತಿದ್ದಾರೆ. ಹಸುಗಳ ಕೊಂಬಿಗೆ ಬಣ್ಣ ಬಳಿದಿದ್ದು ‘ಗುಲಾಂ ಪಟ್ಟೆ’ ಸುತ್ತಿ ಸಿಂಗರಿಸುತ್ತಿದ್ದಾರೆ. ಹಸುಗಳ ಮೈ ತುಂಬೆಲ್ಲಾ ಅರಸಿನ ಹಚ್ಚಿದ್ದು ಸಂಕ್ರಾಂತಿ ಸಂಭ್ರಮ ಕಳೆಗಟ್ಟಿದೆ. ‘ಸಿದ್ದಲಿಂಗಪುರದ ಸರ್ವಿಸ್‌ ರಸ್ತೆಯಲ್ಲಿ ಹಸುಗಳಿಗೆ ಕಿಚ್ಚು ಹಾಯಿಸುವ ಕಾರ್ಯಕ್ರಮ ಭಾನುವಾರ ಸಂಜೆ ನಡೆಸುತ್ತೇವೆ’ ಎಂದು ಸೋಮು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT