ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಖಾಸಗಿ ಶಾಲಾ–ಕಾಲೇಜು ಶಿಕ್ಷಣವೂ ದುಬಾರಿ!

ಶುಲ್ಕ ಏರಿಕೆಯ ಮೇಲೆ ಕಡಿವಾಣವೇ ಇಲ್ಲದಂತಾಗಿದೆ: ಪೋಷಕರ ಆರೋಪ
Published : 3 ಸೆಪ್ಟೆಂಬರ್ 2024, 6:17 IST
Last Updated : 3 ಸೆಪ್ಟೆಂಬರ್ 2024, 6:17 IST
ಫಾಲೋ ಮಾಡಿ
Comments

ಮೈಸೂರು: ನಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಬೇಕು, ಈಗಿನ ಸ್ಪರ್ಧಾತ್ಮಕ ಜಗತ್ತಿಗೆ ಸಜ್ಜುಗೊಳಿಸಲೆಂದು ಇಂಗ್ಲಿಷ್‌ ಭಾಷೆಯನ್ನು ಕಲಿಸಬೇಕೆಂಬ ಮನೋಭಾವ ಹಾಗೂ ಇದಕ್ಕಾಗಿ ಖಾಸಗಿ ಶಾಲಾ–ಕಾಲೇಜುಗಳಲ್ಲಿ ಓದಿಸಬೇಕು ಎಂದು ಬಯಸುವ ಪೋಷಕರಿಗೂ ಮೈಸೂರು ದುಬಾರಿಯಾಗಿ ಪರಿಣಮಿಸಿದೆ.

ಸೀಟು ಪಡೆದುಕೊಳ್ಳುವುದು ಒಂದು ಸಾಹಸವಾದರೆ, ಶುಲ್ಕವನ್ನು ಭರಿಸುವುದು ಮತ್ತೊಂದು ಹರಸಾಹಸವೇ ಸರಿ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಐದಾರು ವರ್ಷಗಳಿಗೆ ಹೋಲಿಸಿದರೆ ಶೇ 30ರಿಂದ 40ರಷ್ಟು ಪ್ರಮಾಣದಲ್ಲಿ ಶುಲ್ಕ ಏರಿಕೆಯಾಗಿದೆ. ಇದಕ್ಕೆ ಕಡಿವಾಣವೇ ಇಲ್ಲದಂತಾಗಿದೆ ಎನ್ನುವುದು ಪೋಷಕರ ಆರೋಪವಾಗಿದೆ.

ನಗರದಲ್ಲಿ ಪ್ರತಿ ವರ್ಷ ಹೊಸದಾಗಿ ಹಲವು ಶಿಕ್ಷಣ ಸಂಸ್ಥೆಗಳು ಆರಂಭವಾಗುತ್ತಲೇ ಇವೆ. ಹೊರವಲಯದಲ್ಲೂ ತಲೆ ಎತ್ತುತ್ತಿವೆ. ಅವುಗಳನ್ನು ಪೋಷಕರು ಕೂಡ ಖಾಸಗಿ ಶಾಲೆಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸುತ್ತಿದ್ದಾರೆ. ಈ ಪರಿಣಾಮ, ಪ್ರವೇಶ ಶುಲ್ಕದ ಪ್ರಮಾಣ ಹೆಚ್ಚಾಗುತ್ತಲೇ ಇದೆ.

ನಗರದ ಶ್ರೀರಾಂಪುರ 2ನೇ ಹಂತದ ಖಾಸಗಿ ಶಾಲೆಯೊಂದರಲ್ಲಿ ಆರು ವರ್ಷಗಳ ಹಿಂದೆ ಎಲ್‌ಕೆಜಿಗೆ ₹18ಸಾವಿರ ಇದ್ದ  ಪ್ರವೇಶ ಶುಲ್ಕ ಈಗ ₹ 30ಸಾವಿರವನ್ನು ದಾಟಿದೆ. ಇದರೊಂದಿಗೆ ‘ಅಭಿವೃದ್ಧಿ ಶುಲ್ಕ’, ಪಠ್ಯೇತರ ಚಟುವಟಿಕೆಗಳ ಶುಲ್ಕವೆಂದು ಹಣ ಪಡೆಯುತ್ತಿರುವುದು ಹೊಸ ಬೆಳವಣಿಗೆ. ಈ ಹಣ ಹೊಂದಿಸುವುದಕ್ಕೆ ಮಧ್ಯಮ ವರ್ಗದವರು ಹೆಣಗಾಡಬೇಕಾದ ಪರಿಸ್ಥಿತಿ ಇದೆ.

ಹೊಂದಿಸಲೇಬೇಕಾದ ಅನಿವಾರ್ಯ: ಮಕ್ಕಳು ಹೆಚ್ಚಿದ್ದಷ್ಟೂ ಅವರ ಶಿಕ್ಷಣಕ್ಕೆಂದೇ, ವಾರ್ಷಿಕ ಸರಾಸರಿ ಲಕ್ಷಾಂತರ ರೂಪಾಯಿಯನ್ನು ಹೊಂದಿಸಬೇಕಾದ ಅನಿವಾರ್ಯತೆ ಇದೆ.

ಈಚೆಗೆ ಹುಬ್ಬಳ್ಳಿಯಿಂದ ಬಂದ ಕುಟುಂಬವೊಂದು ಇಬ್ಬರು ಮಕ್ಕಳನ್ನು ಸಿಬಿಎಸ್‌ಇ ಪಠ್ಯಕ್ರಮದ ಶಾಲೆಗೆ (ಪಬ್ಲಿಕ್‌) ಸೇರಿಸಲು ಸಾಕಷ್ಟು ಸುತ್ತಾಡಬೇಕಾಯಿತು. ಈ ರಿಯಾಲಿಟಿ ಚೆಕ್‌ಗೆ ‘ಪ್ರಜಾವಾಣಿ’ ಸಾಕ್ಷಿಯಾಯಿತು.

ಮೊದಲಿಗೆ, ಸಿದ್ಧಾರ್ಥನಗರ ಹಾಗೂ ವಿಜಯನಗರ ಸಮೀಪದ ಶಾಲೆಗಳಲ್ಲಿ ಸೀಟಿಲ್ಲ ಎಂದು ಹೇಳಲಾಯಿತು. ಸಿಕ್ಕಿದರೆ ಶುಲ್ಕ ಎಷ್ಟಿದೆ ಎಂಬ ಪ್ರಶ್ನೆಗೆ, ₹ 1 ಲಕ್ಷ ಕಟ್ಟಬೇಕಾಗುತ್ತದೆ ಎಂದು ಶಾಲೆಯವರು ತಿಳಿಸಿದರು. ಶ್ರೀರಾಂಪುರ 2ನೇ ಹಂತದ ಶಾಲೆ, ಕುವೆಂಪುನಗರದ ಶಾಲೆ, ಜಯಲಕ್ಷ್ಮಿಪುರಂನ ಹಲವು ಶಾಲೆಗಳಲ್ಲಿ ವಿಚಾರಿಸಿದಾಗಲೂ ಅಲ್ಲೂ ₹ 90ಸಾವಿರ ಶುಲ್ಕವಿತ್ತು. ಇನ್ನೊಂದು ಶಾಲೆಯಲ್ಲಿ ₹1.20 ಲಕ್ಷ ಕೇಳಲಾಯಿತು. ಜಿಲ್ಲಾಧಿಕಾರಿ ಸಮೀಪದ ಶಾಲೆಯಲ್ಲೂ ₹40ಸಾವಿರ ಕಟ್ಟಬೇಕು ಎಂದು ಕೇಳಿದರು. ಅಲ್ಲದೇ, ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಬೇಕು ಎಂಬ ಷರತ್ತನ್ನೂ ಒಡ್ಡಲಾಯಿತು. 5ನೇ ತರಗತಿಗೆ ನೇರ ಪ್ರವೇಶ ಕೊಡುವುದಿಲ್ಲ. 1ನೇ ತರಗತಿಗೆ ಬೇಕಿದ್ದರೆ ಪ್ರಯತ್ನಿಸಬಹುದು ಎಂಬ ಉತ್ತರವನ್ನು ಶಾಲೆಗಳ ಸಿಬ್ಬಂದಿ ಹೇಳಿದರು. ಕೊನೆಗೆ, ಜಯಲಕ್ಷ್ಮೀಪುರಂನ ಶಾಲೆಯೊಂದರಲ್ಲಿ ಒಟ್ಟು ₹ 60ಸಾವಿರ ಶುಲ್ಕ ಕಟ್ಟುವ ಮೂಲಕ ಆ ಪೋಷಕರು ಮಕ್ಕಳಿಗೆ ಸೀಟು ಪಡೆದುಕೊಂಡರು. ಶಾಲಾ ಸಮವಸ್ತ್ರ, ಶೂಗಳು, ಪಠ್ಯಪುಸ್ತಕ ಮೊದಲಾದ ಲೇಖನ ಸಾಮಗ್ರಿಗಳಿಗೆ ಪ್ರತ್ಯೇಕ ಹಣ ಕಟ್ಟಬೇಕಾಯಿತು. ಇಂಟರ್‌ನ್ಯಾಷನಲ್‌, ಪಬ್ಲಿಕ್‌ ಎಂಬ ಹೆಸರಿನಲ್ಲಿ ನಡೆಯುವ ಶಾಲೆಗಳಲ್ಲಿ ಶುಲ್ಕದ ಪ್ರಮಾಣ ಮತ್ತಷ್ಟು ಏರಿದೆ!

ವಾಹನ ವ್ಯವಸ್ಥೆಗೆಂದು: ನಗರದ ಖಾಸಗಿ ಶಾಲೆಗಳಲ್ಲಿ ಶುಲ್ಕ ಶುರುವಾಗುವುದೇ ಸರಾಸರಿ ₹30ಸಾವಿರ, ₹ 40ಸಾವಿರದಿಂದ. ಸಮವಸ್ತ್ರ, ಶೂಗಳು, ಪಠ್ಯಪುಸ್ತಕ ಮೊದಲಾದ ಲೇಖನಗಳಿಗೆ ಮತ್ತಷ್ಟು ಖರ್ಚಾಗುತ್ತದೆ. ಶಾಲೆಯ ಸಮೀಪವೇ ಮನೆ ಸಿಗುವುದು ಕಷ್ಟ. ಆಗ, ಮಕ್ಕಳನ್ನು ಶಾಲೆಗೆ ಕಳುಹಿಸಲು ಶಾಲಾ ವಾಹನಕ್ಕೆ ಹಣ ಕಟ್ಟಲೇಬೇಕು; ಇಲ್ಲವೇ ಖಾಸಗಿಯಾಗಿ ವಾಹನದ ವ್ಯ‌ವಸ್ಥೆ ಮಾಡಿಕೊಳ್ಳಬೇಕು. ಒಂದು ಮಗುವಿಗೆ ಸರಾಸರಿ ₹ 1ಸಾವಿರದಿಂದ ₹2ಸಾವಿರ (ಅಂತರ ಆಧರಿಸಿ)ವನ್ನು ಆಟೊರಿಕ್ಷಾದವರಿಗೆ ಕೊಡಲೇಬೇಕು! ಇದರೊಂದಿಗೆ, ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳು ಮೊದಲಾದವುಗಳಿಗೆಂದು ಆಗಾಗ ನೂರಾರು ರೂಪಾಯಿ ಖರ್ಚಾಗುತ್ತದೆ. ಇವುಗಳೆಲ್ಲವನ್ನು ಭರಿಸುವುದಕ್ಕೆ ಕಷ್ಟ. ಸಾಲ ಮಾಡಲೇಬೇಕಾದ ಸ್ಥಿತಿ ಇದೆ ಎನ್ನುತ್ತಾರೆ ಪೋಷಕರು.

ಈಚೆಗೆ ದಾವಣಗೆರೆಯಿಂದ ವರ್ಗವಾಗಿ ಬಂದ ಪೋಷಕರು, ತಮ್ಮ ಮಗನನ್ನು ಜೆ.ಪಿ.ನಗರದ ಶಾಲೆಗೆ ಸೇರಿಸಿದೆ. ಅಲ್ಲಿ ₹ 40ಸಾವಿರ ಶುಲ್ಕ ಪಾವತಿಸಿದೆ! ಇದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಆಗುವ ಖರ್ಚಿನ ಕಥೆಯಾದರೆ, ಪಿಯುಸಿ, ಪಾಲಿಟೆಕ್ನಿಕ್‌ ಮೊದಲಾದ ವೃತ್ತಿಪರ ಕೋರ್ಸ್‌ಗಳು, ವಿವಿಧ ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ವಿವಿಧ ವೈದ್ಯಕೀಯ ಕೋರ್ಸ್‌ಗಳಿಗೆ ಒಂದು ವರ್ಷಕ್ಕೆ ಲಕ್ಷಾಂತರ ರೂಪಾಯಿಗಳೇ ಬೇಕಾಗುತ್ತದೆ. ಎಂಜಿನಿಯರಿಂಗ್ ಹಾಗೂ ವಿವಿಧ ವೈದ್ಯಕೀಯ ಮೊದಲಾದ ವೃತ್ತಿಪರ ಕೋರ್ಸ್‌ಗಳಿಗೆ ಸಿಇಟಿ ಮೂಲಕ ಸರ್ಕಾರಿ ಸೀಟು ಪಡೆದುಕೊಂಡರೂ ಕಾಲೇಜುಗಳ ಹಂತದಲ್ಲಿ ವಿವಿಧ ರೀತಿಯ ಶುಲ್ಕಗಳನ್ನು ಪಡೆಯಲಾಗುತ್ತದೆ ಎಂದು ತಿಳಿಸುತ್ತಾರೆ ಪೋಷಕರು.

‘ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವೆ’

‘ಖಾಸಗಿ ಶಾಲೆಗಳವರು ಅವರಲ್ಲಿ ದಾಖಲಾಗಿರುವ ಮಕ್ಕಳ ಸಂಖ್ಯೆ ಶಿಕ್ಷಕರು ವೇತನ ನಿರ್ವಹಣೆ ಮೊದಲಾದವುಗಳನ್ನು ಲೆಕ್ಕಾಚಾರ ಹಾಕಿ ಶುಲ್ಕ ತೆಗೆದುಕೊಳ್ಳಬೇಕಾಗುತ್ತದೆ. ಮಾಹಿತಿಯನ್ನು ಆನ್‌ಲೈನ್‌ನಲ್ಲೂ ಹಾಕಬೇಕಾಗುತ್ತದೆ. ಬಿಇಒಗಳ ಕಚೇರಿಗೂ ಮಾಹಿತಿ ಕೊಡಬೇಕಾಗುತ್ತದೆ. ಇದೆಲ್ಲವೂ ನಿಯಮದ ಪ್ರಕಾರ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸುತ್ತೇನೆ’ ಎಂದು ಡಿಡಿಪಿಐ ಎಸ್‌.ಟಿ. ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಾಧಿಕಾರ ಕೆಲಸ ಮಾಡುತ್ತಿದೆಯೇ?

‘ಪ್ರವೇಶ ಶುಲ್ಕವನ್ನು ಸದ್ದಿಲ್ಲದೇ ಹೆಚ್ಚಿಸಲಾಗುತ್ತಲೇ ಇದೆ. ಜಿಲ್ಲಾಧಿಕಾರಿ ನೇತೃತ್ವದ ಖಾಸಗಿ ಶಾಲಾ–ಕಾಲೇಜುಗಳ ಶುಲ್ಕ ನಿಯಂತ್ರಣ ಪ್ರಾಧಿಕಾರ ಸಮಿತಿಗೆ ದೂರು ಕೊಡುವುದಕ್ಕೆ ಅವಕಾಶವಿದೆ. ಆದರೆ ‍ಪ್ರಾಧಿಕಾರ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುತ್ತಿಲ್ಲ. ದೂರು ನೀಡಿದವರಿಗೆ ಸಮರ್ಪಕವಾಗಿ ಸ್ಪಂದಿಸುವ ಕೆಲಸವೂ ಆಗಬೇಕು. ಶುಲ್ಕದ ಮಾಹಿತಿಯನ್ನು ನೋಟಿಸ್ ಬೋರ್ಡ್‌ನಲ್ಲಿ ಹಾಕಬೇಕೆಂಬ ನಿಯಮವಿದೆ. ಅದನ್ನೂ ಪಾಲಿಸುತ್ತಿಲ್ಲ’ ಎಂದು ಶಿಕ್ಷಕರೊಬ್ಬರು ತಿಳಿಸಿದರು. ‘ಕೆಲವು ಖಾಸಗಿ ಶಾಲೆಗಳವರು ಶುಲ್ಕ ವಸೂಲಾತಿ ಕಷ್ಟವೆನಿಸಿದ ವಿದ್ಯಾರ್ಥಿಗಳಿಗ ಟಿಸಿ ಕೊಟ್ಟು ಕಳುಹಿಸುವುದು ಅವರು ಸರ್ಕಾರಿ ಶಾಲೆಗಳಿಗೆ ಸೇರಿದ ಉದಾಹರಣೆಯನ್ನೂ ನೋಡಿದ್ದೇನೆ’ ಎನ್ನುತ್ತಾರೆ ಶಿಕ್ಷಕರು. ‘ವಸತಿ ಪಿಯು ಕಾಲೇಜುಗಳಲ್ಲಿ ವರ್ಷಕ್ಕೆ ಕನಿಷ್ಠ ಒಂದೂವರೆ ಲಕ್ಷ ರೂಪಾಯಿ ಶುಲ್ಕ ತರಲೇಬೇಕು. ಆ ಕಾಲೇಜು ಹೊಸದಾಗಿದ್ದರೆ ಹಾಗೂ ಅತ್ಯಾಧುನಿಕ ಸೌಲಭ್ಯಗಳಿದ್ದರೆ ಶುಲ್ಕ ಇನ್ನೂ ಜಾಸ್ತಿಯಾಗುತ್ತದೆ. ಇದಕ್ಕೆಲ್ಲಾ ಕಡಿವಾಣ ಹಾಕಲು ಜಿಲ್ಲಾಡಳಿತ ಮುಂದಾಗಬೇಕು’ ಎನ್ನುವುದು ಅವರ ಕಾಳಜಿಯಾಗಿದೆ.

ರಸೀದಿ ಕೊಡದಿರುವುದೂ ಉಂಟು!

‘ಖಾಸಗಿ ಶಾಲೆಗಳಲ್ಲಿ ವರ್ಷ ವರ್ಷವೂ ಶುಲ್ಕ ಹೆಚ್ಚಿಸಲಾಗುತ್ತಿದ್ದು ಇದಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ವಿವಿಧ ರೂಪದಲ್ಲಿ ಹಣ ಪಡೆಯುವುದೂ ಉಂಟು. ಎಲ್ಲದಕ್ಕೂ ರಸೀದಿ ಕೊಡದಿರುವುದೂ ಉಂಟು. ಹೀಗಾಗಿ ಇಂತಿಷ್ಟು ಶುಲ್ಕವನ್ನಷ್ಟೆ ತೆಗೆದುಕೊಳ್ಳಬೇಕು ಎಂದು ಸರ್ಕಾರವೇ ನಿಗದಿಪಡಿಸಿದರೆ ಪೋಷಕರಿಗೆ ಅನುಕೂಲವಾಗುತ್ತದೆ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT