ರಮೇಶ ಕೆ.
ಮೈಸೂರು: ಗಲ್ಲಿಗಲ್ಲಿಗೂ ಕಾಂಕ್ರೀಟ್ ರಸ್ತೆ, ಸುಸಜ್ಜಿತ ಚರಂಡಿ ವ್ಯವಸ್ಥೆ, ಫುಟ್‌ಪಾತ್‌ಗೆ ಟೈಲ್ಸ್‌ಗಳ ಅಳವಡಿಕೆ. ಡಾಂಬರೀಕರಣದಿಂದ ಕಂಗೊಳಿಸುತ್ತಿರುವ ದೊಡ್ಡ ರಸ್ತೆಗಳು. ಮತ್ತೊಂದೆಡೆ ರಸ್ತೆ ಬದಿಯಲ್ಲೇ ಹಸುಗಳನ್ನು ಕಟ್ಟಿಹಾಕಲಾಗಿತ್ತು, ಮಣ್ಣಿನ ರಸ್ತೆಯೊಂದಕ್ಕೆ ಜಲ್ಲಿ ಹಾಕುವ ಕೆಲಸವೂ ನಡೆಯುತ್ತಿತ್ತು. ಅಲ್ಲಲ್ಲಿ ಕಸದ ಸಮಸ್ಯೆ...
ಇದು ಮಹಾನಗರ ಪಾಲಿಕೆಯ 27ನೇ ವಾರ್ಡ್‌ನಲ್ಲಿ ಕಂಡುಬಂದ ದೃಶ್ಯ.
ಗಲ್ಲಿಗಳಿರುವ ಇಕ್ಕಾಟ್ಟಾದ ಪ್ರದೇಶಗಳು, ವಿಶಾಲ ರಸ್ತೆಗಳಿರುವ ಕ್ವಾಟ್ರಸ್‌ಗಳು, ಸುಂದರ ಬಡಾವಣೆಗಳನ್ನೂ ಒಳಗೊಂಡ ವಾರ್ಡ್ ಇದಾಗಿದೆ. ಬಹುತೇಕ ಬಡಾವಣೆಗಳಿಗೆ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲಾಗಿದೆ. ಸಿಪಿಸಿ ಪಾಲಿಟೆಕ್ನಿಕ್ ಕಾಲೇಜು ಸೇರಿದಂತೆ ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳು ಇವೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಸಮುದಾಯದವರು ಇಲ್ಲಿ ವಾಸವಾಗಿದ್ದಾರೆ.
ಈ ವಾರ್ಡ್‌ಗೆ ಗಾಂಧಿನಗರ, ಮೊಹಮ್ಮದ್ ಸೇಠ್ ಬ್ಲಾಕ್, ಸತ್ತಾರ್‌ಸೇಠ್ ಬ್ಲಾಕ್, ವೀರನಗೆರೆ, ಬಡೇಮಕಾನ್, ಜೈಲ್ ಕ್ವಾಟ್ರಸ್, ಎಸ್.ಪಿ ಕಚೇರಿ ಹಿಂಭಾಗ, ಅಣ್ಣಮ್ಮಕೇರಿ ಹಾಗೂ ಲೂರ್ದ್‌ನಗರ ಪ್ರದೇಶಗಳು ಒಳಗೊಂಡಿವೆ.
ಗಾಂಧಿನಗರ 1ನೇ ಮುಖ್ಯರಸ್ತೆಯಲ್ಲಿ ಬಾಕ್ಸ್ ಚರಂಡಿ ಮಾಡಲಾಗಿದೆ. ಎಲ್ಲಾ ಕಡೆ ಫುಟ್‌ಪಾತ್‌ಗಳು ಟೈಲ್ಸ್‌ಗಳನ್ನು ಹಾಕಲಾಗಿದೆ. ₹39 ಲಕ್ಷ ವೆಚ್ಚದಲ್ಲಿ ಹೈದರಾಲಿ ರಸ್ತೆಯನ್ನು ನೀಲಗಿರಿ ರಸ್ತೆವರೆಗೂ ಡಾಂಬರೀಕರಣ ಮಾಡಲಾಗುತ್ತಿದೆ. ನ್ಯೂ ಬಡೇಮಕಾನ್ ರಸ್ತೆ ಡಾಂಬರು ಕಾಣಬೇಕಿದೆ. ಇಲ್ಲಿ ಮಳೆ ಬಂದರೆ ಕೆಸರುಮಯವಾಗುತ್ತದೆ.
ಸಿಪಿಸಿ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗ, ಸಮುದಾಯ ಭವನ ರಸ್ತೆ ಕಾಂಕ್ರೀಟ್ ಆಗಿದೆ. ಆದಿದ್ರಾವಿಡ ಸಮುದಾಯ ಭವನ ನಿರ್ಮಿಸಲಾಗಿದೆ. ಲಷ್ಕರ್ ಮೊಹಲ್ಲಾದ ಹಳೆ ಜೈಲ್ ಕ್ವಾಟ್ರಸ್ ಹಿಂಭಾಗದ ಬಡಾವಣೆಯ ರಸ್ತೆಪಕ್ಕದಲ್ಲಿ ತ್ಯಾಜ್ಯ ರಾಶಿ ಕಂಡು ಬರುತ್ತದೆ, ಚರಂಡಿ ವ್ಯವಸ್ಥೆ ಸರಿಪಡಿಸಬೇಕಿದೆ. ಮಳೆ ಬಂದರೆ ನೀರು ರಸ್ತೆಗೆ ಹರಿಯುತ್ತದೆ, ಸೊಳ್ಳೆಕಾಟ ಹೆಚ್ಚಾಗುತ್ತದೆ. ಗುಂಡಿಗಳು ಬಿದ್ದಿದ್ದು, ದುರಸ್ತಿ ಮಾಡಿಸಬೇಕು ಎಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.
ಫೌಂಟೇನ್ ಸರ್ಕಲ್ ಸಮೀಪದ ರಸ್ತೆಯನ್ನು ಹದಿಮೂರುವರೆ ಲಕ್ಷ ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗಿದೆ. ವೀರನಗೆರೆ ಚರಂಡಿ ಹಾಗೂ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಮಿಲಾದ್ ಪಾರ್ಕ್‌ಗೆ ಹುಲ್ಲುಹಾಸು, ಫೌಂಟೇನ್ ಹಾಗೂ ಗ್ರಿಲ್ ವ್ಯವಸ್ಥೆ ಮಾಡಲಾಗಿದೆ.
ಜೋಗಿ ಸಿದ್ದಯ್ಯ ಉದ್ಯಾನವನ್ನು ₹5 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಮಕ್ಕಳ ಆಟಿಕೆಗಳನ್ನು ಅಳವಡಿಸಿದ್ದಾರೆ. ₹6 ಲಕ್ಷ ವೆಚ್ಚದಲ್ಲಿ ಗಾಂಧಿನಗರ ಉದ್ಯಾನ ಅಭಿವೃದ್ಧಿಯಾಗಿದೆ.
ನಿತ್ಯ ಕುಡಿಯುವ ನೀರಿನ ವ್ಯವಸ್ಥೆ: ವೀರನಗೆರೆಯಲ್ಲಿರುವ 5 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್‌ನಿಂದ 27ನೇ ವಾರ್ಡ್‌ಗೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಪ್ರತಿ ದಿನ ನೀರು ಬರುತ್ತಿದ್ದು, ಸಮಸ್ಯೆಯಾದ್ದಲ್ಲಿ ಟ್ಯಾಂಕರ್ ಮೂಲಕ ಬಡಾವಣೆಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಎರಡು ಶುದ್ಧ ಕುಡಿಯುವ ನೀರಿನ ಘಟಕಗಳು ಇವೆ. ಗಾಂಧಿನಗರ 1 ಮತ್ತು 2ನೇ ಬ್ಲಾಕ್‌ಗೆ ದೇವನೂರು ಟ್ಯಾಂಕ್‌ನಿಂದ ನೀರು ಬರುತ್ತದೆ. ಎಲ್ಲಿಯೂ ಕುಡಿಯುವ ನೀರಿಗೆ ಅಭಾವ ಉಂಟಾಗಿಲ್ಲ.
ಗಲ್ಲಿ ರಸ್ತೆಗಳಿಗೂ ಕಾಂಕ್ರೀಟ್ ಕುಡಿಯುವ ನೀರಿಗಿಲ್ಲ ಸಮಸ್ಯೆ ಕೆಲವೆಡೆ ಕಾಣದ ಸ್ವಚ್ಛತೆ
- ಯಾರು ಏನಂತಾರೆ..? ಶೌಚಾಲಯ ದುರಸ್ತಿಪಡಿಸಿ 50 ಮನೆಗಳಿವೆ. ಆದಿದ್ರಾವಿಡ ಸಮುದಾಯಕ್ಕಾಗಿ ಭವನ ಕಟ್ಟಿಸಿಕೊಟ್ಟಿದ್ದಾರೆ. ಕಾಂಕ್ರೀಟ್ ರಸ್ತೆ ಚರಂಡಿ ವ್ಯವಸ್ಥೆ ಮಾಡಿದ್ದಾರೆ. ಶೌಚಾಲಯಗಳು ದುರಸ್ತಿಯಾಗಿದ್ದು ಹೊಸದಾಗಿ ಕಟ್ಟಿಸಿಕೊಡಬೇಕು. ಅಶ್ವತ್ಥಕಟ್ಟೆ ಸಿಮೆಂಟ್ ಕಿತ್ತು ಬಂದಿದ್ದು ಸರಿಪಡಿಸಬೇಕು ನಿಂಗಣ್ಣ ನಿವಾಸಿ ಚರಂಡಿ ಸಮಸ್ಯೆ ಬಗೆಹರಿದಿದೆ ಮಳೆ ಬಂದರೆ ಚರಂಡಿ ತುಂಬಿ ನೀರು ರಸ್ತೆಗೆ ಬರುತ್ತಿತ್ತು. ಮಳೆ ಬಂದರಂತೂ ಸಮಸ್ಯೆ ಹೆಚ್ಚಾಗುತ್ತಿತ್ತು ನೀರು ಕಟ್ಟಿಕೊಳ್ಳುತ್ತಿತ್ತು. ಈಗ ಪೈಪ್‌ಲೈನ್ ಸರಿ ಮಾಡಿದ್ದಾರೆ. ರಸ್ತೆಗೆ ಡಾಂಬರ್ ಹಾಕಿಸಬೇಕು ಕುಡಿಯುವ ನೀರಿನ ಸಮಸ್ಯೆಯೂ ನಮ್ಮ ವಾರ್ಡ್‌ನಲ್ಲಿ ಇಲ್ಲ. ಶುದ್ಧ ನೀರಿನ ಘಟಕಗಳೂ ಇವೆ. ಅಫ್ರೋಜ್ ಖಾನ್ ನಿವಾಸಿ ತ್ಯಾಜ್ಯ ವಿಲೇವಾರಿಯಾಗಲಿ ಜೈಲ್ ಕ್ವಾಟ್ರಸ್ ಹಿಂಭಾಗದ 5ನೇ ಅಡ್ಡರಸ್ತೆಯಲ್ಲಿ ಬಾಕ್ಸ್ ಚರಂಡಿ ಮಾಡಿಸಬೇಕು ಕೆಲವೊಮ್ಮೆ ಮೂರ್ನಾಲ್ಕು ದಿನಗಳಿಗೊಮ್ಮೆ ಕಸ ತೆಗೆದುಕೊಂಡು ಹೋಗುತ್ತಾರೆ. ಆಗ ಕಸದ ರಾಶಿ ರಸ್ತೆ ಪಕ್ಕದಲ್ಲೇ ಬಿದ್ದಿರುತ್ತದೆ. ಇದರಿಂದ ಸೊಳ್ಳೆ ನೊಣ್ಣಗಳು ಹೆಚ್ಚಾಗುತ್ತವೆ. ಪಾಲಿಕೆ ಪೌರಕಾರ್ಮಿಕರು ಪ್ರತಿ ದಿನ ತ್ಯಾಜ್ಯ ತೆಗೆದುಕೊಂಡು ಹೋಗಬೇಕು. ಮೀನಾಕ್ಷಿ ನಿವಾಸಿ
‘ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ’ ‘ಅಣ್ಣಮ್ಮಕೇರಿ ಸೇರಿದಂತೆ ವಾರ್ಡ್‌ನ ಬಹುತೇಕ ರಸ್ತೆಗಳಿಗೆ ಡಾಂಬರ್ ಇರಲಿಲ್ಲ ನನ್ನ ಅವಧಿಯಲ್ಲಿ ಮಾಡಿಸಿದ್ದೇನೆ. ಸುಮಾರು ₹15 ಕೋಟಿ ಅನುದಾನದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಆಗಿವೆ. ಗಾಂಧಿನಗರ ಹೈದರಾಲಿ ರಸ್ತೆ ವೀರನಗೆರೆಯ ಕೆಲವೆಡೆ ರಸ್ತೆ ಹಾಳಾಗಿದ್ದು ದಸರಾ ವೇಳೆಗೆ ಡಾಂಬರ್ ಹಾಕಲಾಗುವುದು. ಪೊಲೀಸ್ ಅಕಾಡೆಮಿ ಕ್ವಾಟ್ರಸ್ ರಸ್ತೆಗಳಿಗೆ ಡಾಂಬರ್ ಹಾಕಲಾಗಿದೆ. ಹೊಸದಾಗಿ ಬೀದಿ ದೀಪಗಳನ್ನು ಅಳವಡಿಸಿದ್ದೇವೆ. ಫುಟ್‌ಪಾತ್ ಕೆಲಸ ನಡೆಯುತ್ತಿದೆ ಎಂದು ಮಹಾನಗರ ಪಾಲಿಕೆಯ 27ನೇ ವಾರ್ಡ್ ಸದಸ್ಯ ಮಹಮ್ಮದ್ ರಫೀಕ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ವಾರ್ಡ್‌ನ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಮೂಲಸೌಕರ್ಯ ಕಲ್ಪಿಸಲು ಶ್ರಮಿಸಿದ್ದೇನೆ. ₹30 ಲಕ್ಷ ವೆಚ್ಚದಲ್ಲಿ ಗಾಂಧಿನಗರ ಮಹಮ್ಮದ್ ಸೇಠ್ ಬ್ಲಾಕ್ ಸತ್ತರ್ ಸೇಠ್ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಪಡಿಸಲಾಗಿದೆ. ₹33 ಲಕ್ಷ ವೆಚ್ಚದಲ್ಲಿ ಪೈಲಟ್ ವೃತ್ತದ ಹತ್ತಿರ ಅತಿಥಿಗೃಹ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಜೆ.ಪಿ.ಪ್ಯಾಲೆಸ್ ಹಿಂಭಾಗದ ರಸ್ತೆ ಬಡೇಮಕಾನ್ ಎಸ್.ಎ.ಪಂಕ್ಷನ್ ಹಾಲ್ ರಸ್ತೆ ಹಾಗೂ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿವೆ. ₹10 ಲಕ್ಷ ವೆಚ್ಚದಲ್ಲಿ ಗಾಂಧಿನಗರದಲ್ಲಿ ಇಂಟರ್‌ಲಾಕ್ ವ್ಯವಸ್ಥೆ ಆಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.