ಮೈಸೂರು: ಕುಲಾಂತರಿ ನೀತಿ ವಿರೋಧಿಸಿ ರೈತ ಸಂಘವು ರಾಜ್ಯದಾದ್ಯಂತ ಸೆ.26ರಂದು ಪ್ರತಿಭಟನೆ ನಡೆಸಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಟಿ.ಆರ್. ವಿದ್ಯಾಸಾಗರ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ. ಕುಲಾಂತರಿ ಆಹಾರ ಬೆಳೆಗಳು ಬೇಡವೇ ಬೇಡ. ಅದಕ್ಕಾಗಿ ನೀತಿ ರೂಪಿಸುವ ಅಗತ್ಯವೂ ಇಲ್ಲ. ರಾಜ್ಯ ಸರ್ಕಾರವೂ ಕುಲಾಂತರಿ ಮುಕ್ತ ಕರ್ನಾಟಕ ಎಂದು ಘೋಷಿಸುವಂತೆ ಒತ್ತಾಯಿಸಲಾಗುವುದು’ ಎಂದರು.
‘ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕುಲಾಂತರಿ ನೀತಿ ರೂಪಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ರೈತರು ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನು ಸಮರ್ಪಕವಾಗಿ ದಾಖಲಿಸಬೇಕು. ದೇಶದ ರೈತರು ಕೃಷಿಗೆ ಅಗತ್ಯವಿರುವ ಬೀಜಗಳ ಮೇಲಿನ ಸ್ವಾವಲಂಬನೆಯನ್ನು ಕಳೆದುಕೊಳ್ಳುವಂಥ ಸ್ಥಿತಿಯನ್ನು ಕುಲಾಂತರಿ ಬೆಳೆಗಳು ತಂದೊಡ್ಡುತ್ತವೆ. ಈ ವ್ಯವಸ್ಥೆಯೂ ದೇಹಕ್ಕೂ, ದೇಶಕ್ಕೂ, ಪ್ರಕೃತಿಗೂ ಮಾರಕ. ಈ ಪ್ರತಿಭಟನೆಯಲ್ಲಿ ಎಲ್ಲರೂ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ರಘು, ನಂಜನಗೂಡು ತಾಲ್ಲೂಕು ಅಧ್ಯಕ್ಷ ಸತೀಶ್, ಮುಖಂಡರಾದ ತಿಮ್ಮನಾಯಕ, ವೆಂಕಟೇಶ್, ಶ್ವೇತಾ, ಸಿದ್ದಲಿಂಗಪುರ ಮೋಹನ್ ಕುಮಾರ್, ಕಿರಣ್, ಮಹದೇವ್‌ನಾಯಕ ಉಪಸ್ಥಿತರಿದ್ದರು.