ಸೋಮವಾರ, ಮಾರ್ಚ್ 20, 2023
24 °C

ಮೈಸೂರು: ಫೆ.13ರಂದು ಯುವ ರೈತ ಘಟಕಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ರಾಜ್ಯ ರೈತ ಸಂಘದಿಂದ ರಾಜ್ಯ ಯುವ ರೈತ ಘಟಕಕ್ಕೆ ಫೆ.13ರಂದು ಚಾಮರಾಜನಗರದಲ್ಲಿ ಚಾಲನೆ ನೀಡಲಾಗುವುದು’ ಎಂದು ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರಿಗೆ ಧ್ವನಿ ಕೊಟ್ಟ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೆನಪಿನ ದಿನಾಚರಣೆಯಲ್ಲಿ ಯುವ ಘಟಕ ಅಸ್ತಿತ್ವಕ್ಕೆ ಬರಲಿದೆ. ಪದಾಧಿಕಾರಿಗಳನ್ನು ನೇಮಿಸುವ ಪ್ರಕ್ರಿಯೆ ನಡೆದಿದೆ. ಪ್ರತಿ ಜಿಲ್ಲೆಯಲ್ಲೂ 100 ಯುವಕರನ್ನು ಆಯ್ಕೆ ಮಾಡಿ ಹೋರಾಟಕ್ಕೆ ಸಜ್ಜುಗೊಳಿಸಲಾಗುವುದು’ ಎಂದರು.

‘ಅಂದು ಚಾಮರಾಜನಗರದ ಪ್ರಮುಖ ವೃತ್ತಕ್ಕೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಹೆಸರು ನಾಮಕರಣ ಮಾಡಲಾಗುವುದು. ಇದಕ್ಕೆ ಅಲ್ಲಿನ ನಗರಸಭೆ ಸಮ್ಮತಿಸಿದೆ’ ಎಂದು ಹೇಳಿದರು.

‘ಬಿಜೆಪಿ ಸರ್ಕಾರವು ರಾಜ್ಯದ ಜನರ ‍ಪರಿಸ್ಥಿತಿಯನ್ನು ಅಧೋಗತಿಗೆ ಕೊಂಡೊಯ್ಯುತ್ತಿದೆ. ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು, ರೈತರ ವಶದಲ್ಲಿದ್ದ ಲಕ್ಷಾಂತರ ಎಕರೆ ಭೂಮಿಯನ್ನು ಕಪ್ಪುಹಣದವರ ಪಾಲು ಮಾಡಿ ಕೃಷಿಕರ ಬದುಕನ್ನು ಕಿತ್ತುಕೊಂಡಿದೆ. 9 ತಿಂಗಳಲ್ಲಿ 2 ಲಕ್ಷ ಎಕರೆಗೂ ಹೆಚ್ಚು ಭೂಮಿ ಸಣ್ಣ ರೈತರಿಂದ ಖರೀದಿಯಾಗಿದೆ. ಅದರಲ್ಲಿನ ಮುಕ್ಕಾಲು ಭಾಗವನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲಾಗಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಎ‍ಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಕೃಷಿ ಉತ್ಪನ್ನಗಳ ಮಾರುಕಟ್ಟೆಗಳನ್ನು ಮುಚ್ಚುವ ಪರಿಸ್ಥಿತಿ ದೂಡಿದೆ. ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರವು ಕಾಯ್ದೆಗಳನ್ನು ವಾಪಸ್ ಪಡೆದಿದ್ದರೆ, ರಾಜ್ಯ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ’ ಎಂದು ಕಿಡಿಕಾರಿದರು.

‘ಹತ್ತಿ, ಕೊಬ್ಬರಿ, ತೆಂಗು, ಅಡಿಕೆ, ತೊಗರಿ ಬೆಳೆಗಳ ಬೆಲೆ ಕುಸಿದು ರೈತರು ಕಂಗಾಲಾಗಿದ್ದಾರೆ. ಆದರೆ, ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯ ಹಣವನ್ನು ರೈತರಿಗೆ ಜಮಾ ಮಾಡಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತಾಪಿ ಜನರನ್ನು ಸಂಪೂರ್ಣ ನಿರ್ಲಕ್ಷಿಸಿವೆ’ ಎಂದು ದೂರಿದರು.

ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್‌, ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಪದಾಧಿಕಾರಿಗಳಾದ ಪ್ರಭಾಕರ್, ಸ್ವಾಮಿ ಗೌಡ, ದಶರಥ, ಚಂದ್ರು, ಸಿದ್ದಪ್ಪ ಹಾಗೂ ಪ್ರಕಾಶ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು