ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಅನುಮತಿ ಇಲ್ಲದೆ ಬಸದಿ ದುರಸ್ತಿ

Published 24 ಫೆಬ್ರುವರಿ 2024, 6:32 IST
Last Updated 24 ಫೆಬ್ರುವರಿ 2024, 6:32 IST
ಅಕ್ಷರ ಗಾತ್ರ

ಮೈಸೂರು: ನಗರದ ಬನುಮಯ್ಯ ಕಾಲೇಜಿನ ಆವರಣದಲ್ಲಿ ಪ್ರಾಚೀನ ಜೈನ ಮಂದಿರದ ಪುನರುಜ್ಜೀವನ ಕಾಮಗಾರಿಯು ನಡೆಯುತ್ತಿದ್ದು, ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಹಾಗೂ ಪಾಲಿಕೆಯ ಅನುಮತಿ ಪಡೆದಿಲ್ಲ ಎಂಬ ಆರೋಪ ಕೇಳಿಬಂದಿದೆ.

‘ಬಸದಿಯ ಮುಂಭಾಗ ಮಾನಸ್ತಂಭ ಸ್ಥಾಪಿಸಲಾಗಿದೆ. ಒಳಭಾಗದಲ್ಲಿ ಕಲ್ಲು–ಚಪ್ಪಡಿಗಳನ್ನು ತೆಗೆದು ಮಾರ್ಬಲ್‌ ಕಲ್ಲುಗಳನ್ನು ಅಳವಡಿಕೆ ಮಾಡಲಾಗಿದೆ. ಪಾಲಿಕೆ ಹಾಗೂ ಪುರಾತತ್ವ ಇಲಾಖೆಯ ಬಳಿ ಅನುಮತಿ ತೆಗೆದುಕೊಂಡಿಲ್ಲ’ ಎಂದು ಇತಿಹಾಸ ತಜ್ಞ ಪ್ರೊ.ಎನ್‌.ಎಸ್‌.ರಂಗರಾಜು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ನಗರದ ಹೃದಯ ಭಾಗದಲ್ಲಿನ ಈ ಪಾರಂಪರಿಕ ಕಟ್ಟಡದ ಬಗ್ಗೆ ಜೈನ ಮುಖಂಡರಿಗೆ ಮಾಹಿತಿಯೇ ಇಲ್ಲವಾಗಿದೆ. ಯಾವುದೇ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಗೆ ನೀಡದೇ ದುರಸ್ತಿ ಕಾಮಗಾರಿ ನಡೆಸಿದ್ದಾರೆ. ಗೋಡೆಗಳನ್ನು ಒಡೆದು ದೊಡ್ಡ ಕಿಟಕಿಗಳನ್ನು ಮಾಡಿದ್ದಾರೆ. ನೆಲಹಾಸನ್ನು ಬದಲಿಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪಾಲಿಕೆಯ ಎಂಜಿನಿಯರಿಂಗ್‌ ವಿಭಾಗ, ಪರಂಪರೆ ಸಂರಕ್ಷಣಾ ಸಮಿತಿ ಬಳಿ ವಿಚಾರಿಸಿದಾಗ ಅನುಮತಿ ಪಡೆದಿಲ್ಲ ಎಂಬುದು ಗೊತ್ತಾಗಿದೆ’ ಎಂದು ಸ್ಪಷ್ಟಪಡಿಸಿದರು.

ಕೋಟೆ ಶಾಂತೀಶ್ವರ ತೀರ್ಥಂಕರ ಬಸದಿ ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಬಸದಿಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಆಜ್ಞೆಯ ಅನುಸಾರ 1896ರಲ್ಲಿ ಸ್ಥಳಾಂತರಿಸಲಾಗಿದೆ. 128 ವರ್ಷದ ಇತಿಹಾಸವನ್ನು ಈಗಿರುವ ಪಾರಂಪರಿಕ ಬಸದಿ ಹೊಂದಿದೆ.

ಕೋಟೆಯೊಳಗೆ ಚೋಳರಾಜ ಪ್ರತಿಷ್ಠಾಪಿಸಿದ್ದ ದೇವಾಲಯವನ್ನು ಶ್ರೀನಿವಾಸಕಟ್ಟೆ ಸಮೀಪದ ಪ್ರದೇಶಕ್ಕೆ ಸ್ಥಳಾಂತರಿಸಿರುವ ಉಲ್ಲೇಖವು ನಾಲ್ವಡಿ ಅವರು ಬರೆಸಿರುವ ಶಾಸನದಲ್ಲಿದೆ.

‘ಹಳೇ ಕಾಮಗಾರಿಯ ಮುಂದುವರಿಕೆ’

‘ಮಹಾರಾಜ ಕಾಲದಲ್ಲಿ ಕಟ್ಟಿದ ಬಸದಿಯಾಗಿದೆ. ಎಂ.ಕೆ. ಸೋಮಶೇಖರ್ ಹಾಗೂ ಎಸ್.ಎ.ರಾಮದಾಸ್‌ ಅವರು ಶಾಸಕರಾಗಿದ್ದ ಅವಧಿಯಲ್ಲೇ ದುರಸ್ತಿ ಕಾರ್ಯವು ನಡೆದಿದ್ದು ಈಗಿನದು ಅದರ ಮುಂದುವರಿದ ಭಾಗವಷ್ಟೇ’ ಎಂದು ಜೈನ ಸಮಾಜದ ಮುಖಂಡ ಸುರೇಶ್‌ಕುಮಾರ್‌ ಜೈನ್ ‍‘ಪ್ರಜಾವಾಣಿ’ಗೆ ತಿಳಿಸಿದರು.  ‘ಗೋಡೆಗಳು ಶಿಥಿಲವಾಗಿದ್ದವು. ಆದ್ದರಿಂದ ಬದಲಿಸಲಾಗಿದೆ. ಮಾರ್ಬಲ್ಸ್ ಅಳವಡಿಸಲಾಗಿದೆ. ಬಸದಿ ಮುಂದೆ ಚಪ್ಪರ ಹಾಕುತ್ತಿದ್ದ ಜಾಗದಲ್ಲಿ ದಾನಿಗಳ ನೆರವಿನಿಂದ ಮಾನಸ್ತಂಭ ನಿರ್ಮಿಸಲಾಗಿದೆ’ ಎಂದರು. ‘ಬಸದಿಯನ್ನು ಹಿಂದೂ ದೇವಾಲಯಗಳನ್ನು ನೋಡಿಕೊಳ್ಳುವ ಮುಜರಾಯಿ ಇಲಾಖೆಗೆ ಸೇರಿಸಬೇಕೆ ಬೇಡವೇ ಎಂಬ ಗೊಂದಲವೂ ಸರ್ಕಾರ ಮಟ್ಟದಲ್ಲಿಯೇ ಇದೆ’ ಎಂದು ಹೇಳಿದರು.

ನೆಲಹಾಸು ಬದಲಾವಣೆ ಗೋಡೆ ಒಡೆದು ಕಿಟಕಿ ಅಳವಡಿಸಿರುವುದು
ನೆಲಹಾಸು ಬದಲಾವಣೆ ಗೋಡೆ ಒಡೆದು ಕಿಟಕಿ ಅಳವಡಿಸಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT