ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಎಸ್‌ಎಸ್‌ಎಲ್‌ಸಿ: ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ

Published 16 ಮೇ 2024, 7:25 IST
Last Updated 16 ಮೇ 2024, 7:25 IST
ಅಕ್ಷರ ಗಾತ್ರ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ತವರು ಜಿಲ್ಲೆಯಲ್ಲಿ ಸರ್ಕಾರಿ ವಸತಿ ಶಾಲೆಗಳು ಎಸ್ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಿ ಗಮನಸೆಳೆದಿವೆ.

ಸಮಾಜ ಕಲ್ಯಾಣ ಇಲಾಖೆಯ 23 ಸೇರಿದಂತೆ ಇತರ ಇಲಾಖೆಗಳಿಗೆ ಸೇರಿದ ಒಟ್ಟು 36 ವಸತಿ ಶಾಲೆಗಳು ಜಿಲ್ಲೆಯ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿವೆ. ಅವುಗಳಲ್ಲಿ ಪರೀಕ್ಷೆ ತೆಗೆದುಕೊಂಡ 1,502 ವಿದ್ಯಾರ್ಥಿಗಳಲ್ಲಿ 1,481 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶೇ 98.43ರಷ್ಟು ಫಲಿತಾಂಶ ಬಂದಿದೆ. ಇವರ ಪೈಕಿ ಬರೋಬ್ಬರಿ 175 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದು ತೇರ್ಗಡೆಯಾಗಿದ್ದಾರೆ.

1,012 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 287 ಮಂದಿ ದ್ವಿತೀಯ ಶ್ರೇಣಿ ಹಾಗೂ 7 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಫಲಿತಾಂಶ ಸುಧಾರಣೆಗೆ ಆಯಾ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ನಡೆಸಿದ ಪ್ರಯತ್ನ ಫಲ ನೀಡಿದೆ.

ವಿದ್ಯಾರ್ಥಿನಿಯರ ಸಾಧನೆ: ಹುಣಸೂರು ತಾಲ್ಲೂಕಿನ ಬಿಳಿಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಎಂ.ಭೂಮಿಕಾ 625ಕ್ಕೆ 603 ಅಂಕಗಳನ್ನು ಗಳಿಸಿ ‘ಜಿಲ್ಲೆಯ ವಸತಿ ಶಾಲೆಗಳ ಟಾಪರ್’ ಎನಿಸಿದ್ದಾರೆ. ನಂಜನಗೂಡು ತಾಲ್ಲೂಕಿನ ಹುರ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಗೀತಾಂಜಲಿ 601 ಅಂಕ ಹಾಗೂ ಹುಣಸೂರು ತಾಲ್ಲೂಕಿನ ಗಾವಡಗೆರೆಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಮೋನಿಕಾ ಎಂ.ಎ. 600 ಅಂಕ ಗಳಿಸಿ ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಮೊದಲ ಮೂರು ಸ್ಥಾನಗಳನ್ನು ಬಾಲಕಿಯರೇ ಗಳಿಸಿದ್ದಾರೆ. ಅವರಲ್ಲಿ ಇಬ್ಬರು ಹುಣಸೂರು ತಾಲ್ಲೂಕಿನವರು.

ಸಚಿವ ಮಹದೇವಪ್ಪ ಅವರು ವರಕೋಡು ಸೇರಿದಂತೆ ವಿವಿಧೆಡೆ ವಸತಿ ಶಾಲೆಗಳಿಗೆ ದಿಢೀರ್‌ ಭೇಟಿ ನೀಡಿದ್ದರು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕೆಲ ಹೊತ್ತು ಪಾಠವನ್ನೂ ಮಾಡಿದ್ದರು.

ಕಳೆದ ಸಾಲಿನಲ್ಲಿ 1,401 ವಿದ್ಯಾರ್ಥಿಗಳ ಪೈಕಿ 1,340 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಶೇ 95.6ರಷ್ಟು ಫಲಿತಾಂಶ ಬಂದಿತ್ತು.

ವಿಶೇಷ ತರಗತಿ, ಮಾರ್ಗದರ್ಶನ: ‘ನಿಯಮಿತ ತರಗತಿಗಳ ಜೊತೆಗೆ ನಿತ್ಯ ಸಂಜೆ ವಿಶೇಷ ತರಗತಿ, ಆಗಾಗ ಅಣಕು ಪರೀಕ್ಷೆಗಳನ್ನು ನಡೆಸಿದ್ದೆವು. ‘ಮಾಸ್ಟರ್‌ ಆನ್‌ ಡ್ಯೂಟಿ’ ಉಪಕ್ರಮದಲ್ಲಿ ಪ್ರತಿ ದಿನ ಒಬ್ಬರು ಶಿಕ್ಷಕರನ್ನು ನಿಯೋಜಿಸಲಾಗುತ್ತಿತ್ತು. ಅವರು ಸಂಜೆ 6ರಿಂದ ರಾತ್ರಿ 9ರವರೆಗೆ ಓದಿಸಬೇಕು ಎಂಬುದನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿದ್ದೆವು. ಪುನಶ್ಚೇತನ ತರಗತಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನವೂ ನೆರವಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ ತಿಳಿಸಿದರು.

‘ನಮ್ಮ ಶಾಲೆಯಲ್ಲೂ ನಿಯಮಿತವಾಗಿ ವಿಶೇಷ ತರಗತಿಗಳನ್ನು ನಡೆಸಿದ್ದೆವು. ಹೊರಗಿನ ಶಿಕ್ಷಕರನ್ನು ಕರೆಸಿ ಮಾರ್ಗದರ್ಶನ ಕೊಡಿಸಿದ್ದೆವು. ಆದ್ದರಿಂದ ನಮ್ಮ ಶಾಲೆಯ ಎಲ್ಲ 42 ವಿದ್ಯಾರ್ಥಿಗಳೂ ತೇರ್ಗಡೆಯಾಗಿದ್ದಾರೆ. ಹರ್ಷವರ್ಧನ್‌ ಎಂಬ ವಿದ್ಯಾರ್ಥಿ 581 ಅಂಕಗಳನ್ನು ಗಳಿಸಿದ್ದಾರೆ’ ಎಂದು ತಾಲ್ಲೂಕಿನ ದೊಡ್ಡಹುಂಡಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯಶಿಕ್ಷಕ ಎಚ್‌.ವಿ. ಹೇಮಕುಮಾರ್‌ ಪ್ರತಿಕ್ರಿಯಿಸಿದರು.

‘ಮಕ್ಕಳಿಗೆ ಸ್ಫೂರ್ತಿ ತುಂಬುವ ಉದ್ದೇಶದಿಂದ, ಹಿಂದೆ ನಮ್ಮಲ್ಲಿ ಓದಿ ವಿಶೇಷ ಸಾಧನೆ ಮಾಡಿದವರನ್ನು ಆಹ್ವಾನಿಸಿ ಸಂವಾದ ಕಾರ್ಯಕ್ರಮವನ್ನೂ ನಡೆಸಿದ್ದೆವು’ ಎಂದು ತಿಳಿಸಿದರು.

ಜಿಲ್ಲೆಯಲ್ಲಿವೆ 36 ವಸತಿ ಶಾಲೆಗಳು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 23 ಇವೆ ಶೇ 98.43ರಷ್ಟು ಫಲಿತಾಂಶ 
ತಿಂಗಳ ಸಭೆ ಜೊತೆಗೆ ಪ್ರತಿ 15 ದಿನಗಳಿಗೊಮ್ಮೆ ಪ್ರಾಂಶುಪಾಲರೊಂದಿಗೆ ಗೂಗಲ್‌ ಮೀಟ್‌ ನಡೆಸಿ ಸೂಚನೆ ನೀಡುತ್ತಿದ್ದೆವು
ಬಿ.ರಂಗೇಗೌಡ ಜಂಟಿ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ
ಫಲಿತಾಂಶ ವೃದ್ಧಿಗೆ ಕಾರಣವೇನು?
‘ನಮ್ಮ ಶಾಲೆಗಳು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವರದಾನವಾಗಿವೆ. ಕೃಷಿ ಕಾರ್ಮಿಕರ ಮಕ್ಕಳು ಹಿಂದುಳಿದ  ವರ್ಗದವರು ಹಾಗೂ ತಳ ಸಮುದಾಯದ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯ ಮೂಲಕ 6ನೇ ತರಗತಿಗೆ ದಾಖಲಾಗುತ್ತಾರೆ. ಇವರಿಗೆ 10ನೇ ತರಗತಿಯವರೆಗೆ ಉಚಿತ ವಸತಿ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಬಡವರು ಮತ್ತು ಮಧ್ಯಮ ವರ್ಗದವರಿಗೆ ಆಶಾಕಿರಣವಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. ‘ಮುಖ್ಯಮಂತ್ರಿ ತವರಾದ್ದರಿಂದ ವಸತಿ ಶಾಲೆಗಳಲ್ಲಿ ಉನ್ನತ ಸಾಧನೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿ ಮಾರ್ಗದರ್ಶನ ನೀಡಿದ್ದರು. ಪ್ರಾಂಶುಪಾಲರಿಗೆ ಸ್ಫೂರ್ತಿ ತುಂಬಿದ್ದರು. ಕೆಲವೆಡೆ ಭೇಟಿ ನೀಡಿ ಪರಿಶೀಲಿಸಿದ್ದರು. ಜೊತೆಗೆ ನಾವು ಶೈಕ್ಷಣಿಕ ವರ್ಷದ ಆರಂಭದಿಂದಲೇ ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸಿದ್ದೆವು. ಇದೆಲ್ಲದರ ಪರಿಣಾಮ ಕಳೆದ ವರ್ಷಕ್ಕಿಂತ ಹೆಚ್ಚಿನ ಫಲಿತಾಂಶ ಗಳಿಕೆ ಸಾಧ್ಯವಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
ಶೇ 100ರಷ್ಟು ಫಲಿತಾಂಶ ಪಡೆದವು‌
ನಂಜನಗೂಡು ತಾಲ್ಲೂಕಿನ ಮುಳ್ಳೇಗುಡ್ಡ ಎಸ್‌. ಹೊಸಕೋಟೆ ಸಿಂಧುವಳ್ಳಿ ಮೈಸೂರು ತಾಲ್ಲೂಕಿನ ದೊಡ್ಡಹುಂಡಿ ವರಕೋಡು ಹುಣಸೂರು ತಾಲ್ಲೂಕಿನ ಧರ್ಮಪುರ ಸಬ್ಬನಹಳ್ಳಿ (ಬಿಳಿಕೆರೆ) ತಿ.ನರಸೀಪುರ ತಾಲ್ಲೂಕಿನ ಬಿ.ಸಿ. ಹಳ್ಳಿ ಸೋಸಲೆ ತಲಕಾಡು ಸಾಲಿಗ್ರಾಮ ಕೆ.ಆರ್. ನಗರ ತಾಲ್ಲೂಕಿನ ಅರಕೆರೆ (ಭೇರ್ಯ) ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು. ಹುಣಸೂರು ತಾಲ್ಲೂಕಿನ ಧರ್ಮಪುರ ಗಾವಡಗೆರೆ ತಿ.ನರಸೀಪುರ ತಾಲ್ಲೂಕಿನ ಕೂಡ್ಲೂರು ಕೆ.ಆರ್.ನಗರ ತಾಲ್ಲೂಕಿನ ಹೆಬಸೂರು ಎಚ್‌.ಡಿ. ಕೋಟೆ ನಂಜನಗೂಡು ತಾಲ್ಲೂಕಿನ ಹುರದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳು. ನಂಜನಗೂಡಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪ್ರತಿಭಾವಂತ ವಿದ್ಯಾರ್ಥಿನಿಯರ ವಸತಿ ಶಾಲೆ ಕೆ.ಆರ್. ನಗರ ತಾಲ್ಲೂಕಿನ ಕುಪ್ಪಹಳ್ಳಿ ಪಿರಿಯಾ‍ಪಟ್ಟಣ ತಾಲ್ಲೂಕಿನ ಬೈಲುಕುಪ್ಪೆ ತಿ.ನರಸೀಪುರ ತಾಲ್ಲೂಕಿನ ಮೂಗೂರಿನ ಇಂದಿರಾಗಾಂಧಿ ವಸತಿ ಶಾಲೆ. ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ. ಮೈಸೂರು ತಾಲ್ಲೂಕಿನ ಇಲವಾಲ ಕೆ ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆ ಹೆಬ್ಬಾಳು (ಮಿರ್ಲೆ)ಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್‌ ವಸತಿ ಶಾಲೆಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT