ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವೋದಯ ಕರ್ನಾಟಕ ಪಕ್ಷಕ್ಕೆ ಮರುಚಾಲನೆ 23ರಂದು

Last Updated 8 ಜನವರಿ 2023, 7:33 IST
ಅಕ್ಷರ ಗಾತ್ರ

ಮೈಸೂರು: ‘ಸರ್ವೋದಯ ಕರ್ನಾಟಕ ಪಕ್ಷಕ್ಕೆ ಮರುಚಾಲನೆ ನೀಡುವ ಕಾರ್ಯಕ್ರಮವನ್ನು ಜ.23ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಅಧ್ಯಕ್ಷ ಚಾಮರಸ ಮಾಲಿಪಾಟೀಲ ತಿಳಿಸಿದರು.

‘ಪಕ್ಷದ ಎಲ್ಲ ಜಿಲ್ಲೆಗಳ ಆಯ್ದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜನಪರ ಸಂಘಟನೆಗಳ ಪ್ರಮುಖರು ಹಾಗೂ ಸಮಾಜಮುಖಿ ವ್ಯಕ್ತಿಗಳನ್ನೂ ಆಹ್ವಾನಿಸಲಾಗುವುದು’ ಎಂದು ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆಯ್ದ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಅಭ್ಯರ್ಥಿಗಳ ಮೊದಲನೇ ಪಟ್ಟಿಯನ್ನು ಮರುಚಾಲನೆ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗುವುದು. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಸ್ಪರ್ಧಿಸಲಿದ್ದೇವೆ’ ಎಂದು ಹೇಳಿದರು.

‘ಪಕ್ಷವನ್ನು ಸ್ವರಾಜ್‌ ಇಂಡಿಯಾ ಜೊತೆ ವಿಲೀನಗೊಳಿಸಲಾಗಿತ್ತು. ಈಗ ಪ್ರಾದೇಶಿಕವಾಗಿಯೇ ಉಳಿಯಲು ತೀರ್ಮಾನಿಸಿ ಮರುಚಾಲನೆ ಕೊಡಲಾಗುತ್ತಿದೆ. ಪ್ರಸ್ತುತ ರಾಜಕಾರಣದಲ್ಲಿ, ನಾಡಿನ–ದೇಶದ ಅಭಿವೃದ್ಧಿಗೆ ಬೇಕಾದ ದಕ್ಷತೆ ಮತ್ತು ಪ್ರಾಮಾಣಿಕತೆ ಕಾಣಿಸುತ್ತಿಲ್ಲ. ದುಡಿಯುವ ವರ್ಗಕ್ಕೆ ಅನ್ಯಾಯವಾಗುತ್ತಿದೆ. ಹೀಗಾಗಿ, ದೂರದೃಷ್ಟಿ ಇಟ್ಟುಕೊಂಡು ಪಕ್ಷ ಕಟ್ಟಲಾಗುತ್ತಿದೆ. ಸಾಮಾಜಿಕ ನ್ಯಾಯ ಕೊಡಿಸಲು ದೊಡ್ಡ ಮಟ್ಟದಲ್ಲಿ ಹೋರಾಡಲಿದ್ದೇವೆ’ ಎಂದರು.

‘ಪಕ್ಷದ ಕೋರ್‌ ಕಮಿಟಿಯಲ್ಲಿ ಸಾಹಿತಿ ದೇವನೂರ ಮಹಾದೇವ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲ‍ಪುರ ನಾಗೇಂದ್ರ, ದಲಿತ ಮುಖಂಡರಾದ ಇಂದೂಧರ ಹೊನ್ನಾಪುರ, ಗುರುಪ್ರಸಾದ್ ಕೆರಗೋಡು ಇದ್ದಾರೆ. ಈಗಾಗಲೇ 15 ಜಿಲ್ಲಾ ಘಟಕಗಳನ್ನು ರಚಿಸಲಾಗಿದೆ. ಇದೇ 20ರೊಳಗೆ ಎಲ್ಲ ತಾಲ್ಲೂಕು ಹಾಗೂ ಜಿಲ್ಲಾ ಘಟಕಗಳ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದರು.

ಬಡಗಲಪುರ ನಾಗೇಂದ್ರ ಮಾತನಾಡಿ, ‘ಸ್ವರಾಜ್‌ ಇಂಡಿಯಾದ ಜೊತೆಗಿನ ವೈಮನಸ್ಸಿನ ಕಾರಣದಿಂದ ನಾವು ಪ್ರತ್ಯೇಕವಾಗುತ್ತಿಲ್ಲ. ಅದರೊಂದಿಗೆ ಸೌಹಾರ್ದ ಸಂಬಂಧ ಮುಂದುವರಿಯುತ್ತದೆ. ಜನರ ಆಶಯಕ್ಕೆ ಪೂರಕವಾದ ನಡೆ–ನುಡಿಯ ರಾಜಕಾರಣವನ್ನು ಪಕ್ಷ ಮಾಡಲಿದೆ’ ಎಂದು ಸ್ಪಷ್ಟಪಡಿಸಿದರು.

ರೈತ ಮುಖಂಡರಾದ ಎಚ್‌.ಸಿ.ಮಧುಚಂದನ್ ಇದ್ದರು.

ಪದಾಧಿಕಾರಿಗಳ ಆಯ್ಕೆ

ಪಕ್ಷದ ನೂತನ ಪದಾಧಿಕಾರಿಗಳಾಗಿ ಚಾಮರಸ ಮಾಲಿಪಾಟೀಲ (ಅಧ್ಯಕ್ಷ), ಪ್ರಸನ್ನ ಎನ್.ಗೌಡ (ಪ್ರಧಾನ ಕಾರ್ಯದರ್ಶಿ), ಅಮ್ಜದ್ ಪಾಷ (ಕಾರ್ಯಾಧ್ಯಕ್ಷ), ಶಿವರಾಜ್‌ ರೇವಣ ಸಿದ್ದಯ್ಯ (ಕಾರ್ಯಾಧ್ಯಕ್ಷ), ಯಾದವರೆಡ್ಡಿ (ಉಪಾಧ್ಯಕ್ಷ) ಹಾಗೂ ಜೆ.ಎಂ.ವೀರಸಂಗಯ್ಯ ಮತ್ತು ಪುನೀತ್ ಎನ್. (ವಕ್ತಾರರು) ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT