ಸೋಮವಾರ, ಮಾರ್ಚ್ 20, 2023
25 °C

ಸುತ್ತೂರು ಜಾತ್ರೆ: ನಿತ್ಯ 2 ಲಕ್ಷ ಮಂದಿಗೆ ಪ್ರಸಾದ

ಎಂ.ಪ್ರಕಾಶ್ Updated:

ಅಕ್ಷರ ಗಾತ್ರ : | |

Prajavani

ಸುತ್ತೂರು (ನಂಜನಗೂಡು ತಾಲ್ಲೂಕು): ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಆಗಮಿಸಿರುವ ಲಕ್ಷಾಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆಗಾಗಿ ಮಹಾ ದಾಸೋಹ ನಡೆಸಲಾಗುತ್ತಿದೆ.

ಜಾತ್ರೆ ಆರಂಭವಾದ ಜ.17ರಿಂದ ಪ್ರತಿದಿನ ಭಕ್ತರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಿದ್ದು, ಸುತ್ತೂರಿನ ವಿವಿಧೆಡೆ ತಾತ್ಕಾಲಿಕ ದಾಸೋಹ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿದಿನ
1.5 ಲಕ್ಷದಿಂದ 2 ಲಕ್ಷ ಮಂದಿ ಪ್ರಸಾದ ಸೇವಿಸುತ್ತಿದ್ದಾರೆ.

ಉಪಾಹಾರಕ್ಕೆ ಕೇಸರಿ ಬಾತ್, ಖಾರಾಬಾತ್, ಸಿಹಿ ಹಾಗೂ ಖಾರ ಪೊಂಗಲ್, ಬಿಸಿ ಬೇಳೆ ಬಾತ್ ಹಾಗೂ ಮೈಸೂರು ಪಾಕ್, ಬಾದೂಶ, ಬೂಂದಿ, ಲಾಡು, ಪಾಯಸ ನೀಡಲಾಗುತ್ತಿದೆ.

ಊಟಕ್ಕಾಗಿ ರಾಯಚೂರು ಜಿಲ್ಲೆಯ ಸಿಂಧನೂರಿನಿಂದ 1 ಸಾವಿರ ಕ್ವಿಂಟಾಲ್ ಸಣ್ಣ ಅಕ್ಕಿ, 50 ಸಾವಿರ ತೆಂಗಿನ ಕಾಯಿ, 1,600 ಟಿನ್ ರೀಫೈಂಡ್ ಅಡುಗೆ ಎಣ್ಣೆ, 200 ಕೆ.ಜಿ ಬೇಳೆ, 50 ಕೆ.ಜಿ ಹಲಸಂದೆ, 30 ಟನ್ ಬೆಲ್ಲವನ್ನು ತರಿಸಲಾಗಿದೆ.

ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ 150 ಕ್ವಿಂಟಾಲ್ ಸಕ್ಕರೆಯನ್ನು ದೇಣಿಗೆ ಯಾಗಿ ನೀಡಿದೆ. ಪ್ರತಿದಿನ ಮೈಸೂರು, ಪಾಂಡವಪುರ, ಗುಂಡ್ಲುಪೇಟೆ, ಊಟಿ, ನಂಜನಗೂಡಿನ ಮಾರುಕಟ್ಟೆಗಳಿಂದ ಟನ್ ಗಟ್ಟಲೆ ತರಕಾರಿ ದೇಣಿಗೆಯಾಗಿ ದೊರೆಯುತ್ತಿದೆ. ಶಿವಮೊಗ್ಗದ ಭಕ್ತರು 2 ಟನ್ ತರಕಾರಿ ಕಳುಹಿಸಿದ್ದಾರೆ.

ಆಹಾರ ತಯಾರಿಸಲು 4–5 ಕ್ವಿಂಟಾಲ್ ಆಹಾರ ತಯಾರಿಸ ಬಹುದಾದ 35 ಕೊಪ್ಪರಿಕೆಗಳನ್ನು ಬಳಸಲಾಗುತ್ತಿದೆ.

ಮಹಿಳೆಯರು, ಪುರುಷರು ಹಾಗೂ ಸ್ವಯಂಸೇವಕರಿಗಾಗಿ ಪ್ರತ್ಯೇಕ ಆಹಾರ ಕೌಂಟರ್‌ಗಳನ್ನು ತೆರೆಯಲಾಗಿದೆ. ಸುತ್ತೂರಿನ ಬಸವೇಶ್ವರ ಹೈಸ್ಕೂಲ್, ವಸ್ತುಪ್ರದರ್ಶನ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ.

‘500 ಮಂದಿ ಬಾಣಸಿಗರು, 300 ಮಂದಿ ಸ್ವಚ್ಛತಾ ನಿರ್ವಾಹಕರು ಹಾಗೂ ಸುತ್ತೂರಿನ ಸುತ್ತಮುತ್ತಲ 33 ಹಳ್ಳಿಗಳ 2 ಸಾವಿರ ಹಾಗೂ ಸಂಸ್ಥೆಯ
1 ಸಾವಿರ ಸ್ವಯಂಸೇವಕರು ಭಕ್ತರ ದಾಸೋಹ ಸೇವೆಯಲ್ಲಿ ನಿರತರಾಗಿದ್ದಾರೆ’ ಎಂದು ಜಾತ್ರಾ ಸಮಿತಿಯ ಸಂಚಾಲಕ ಪ್ರೊ.ಸುಬ್ಬಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

***

ಭಜನಾ ಮೇಳದಲ್ಲಿ ಕಾರ್ಯಕ್ರಮ ನೀಡಲು ಮುಧೋಳದಿಂದ 15 ಮಂದಿ ಬಂದಿದ್ದೇವೆ. ಇಲ್ಲಿ ಊಟ, ತಿಂಡಿ ವ್ಯವಸ್ಥೆ ಬಹಳ ಅಚ್ಚುಕಟ್ಟಾಗಿದೆ.

–ರಂಗವ್ವ, ಮುಧೋಳ

***

ಪ್ರತಿವರ್ಷ ಜಾತ್ರೆಗೆ ಬರುತ್ತೇನೆ. ಸುತ್ತೂರು ಮಠ ಅನ್ನ ದಾಸೋಹಕ್ಕೆ ಪ್ರಸಿದ್ಧಿ ಪಡೆದಿದೆ. ಜಾತ್ರೆಯ ಪ್ರಸಾದ ರುಚಿ–ಶುಚಿಯಾಗಿದೆ.

–ಸಿದ್ದಮಲ್ಲಪ್ಪ, ಕೊತ್ತವಾಡಿ, ಚಾಮರಾಜನಗರ ತಾಲ್ಲೂಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು