ಮೈಸೂರು: ‘ಪರಿಶಿಷ್ಟ ಜಾತಿಗಳ ವರ್ಗೀಕರಣದ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದ್ದು, ಇದಕ್ಕಾಗಿ ಸರ್ಕಾರವು ಪ್ರತಿ ಜಾತಿಗಳ ಜನಗಣತಿ ನಡೆಸಿ ಸಮರ್ಥನೀಯ ದತ್ತಾಂಶವನ್ನು ಸಂಗ್ರಹಿಸಬೇಕು’ ಎಂದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ರವಿವರ್ಮ ಕುಮಾರ್ ಪ್ರತಿಪಾದಿಸಿದರು.
‘ಮೀಸಲಾತಿ ಮತ್ತು ವರ್ಗೀಕರಣ’ ಕುರಿತು ಇಲ್ಲಿನ ಮೈಸೂರು ವಿಶ್ವವಿದ್ಯಾಲಯ ಮಾನಸಗಂಗೋತ್ರಿಯ ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರದಿಂದ ಶನಿವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ 101 ಜಾತಿಗಳಿವೆ. ಅದರಲ್ಲಿ ಸ್ಪೃಶ್ಯರು ಹಾಗೂ ಅಸ್ಪೃಶ್ಯರು ಇದ್ದಾರೆ. ಅಸಮಾನತೆ ಈಗಲೂ ಇದೆ. ಆದ್ದರಿಂದ ವರ್ಗೀಕರಣ ಆಗಬೇಕು. ಇದಕ್ಕಾಗಿ ಯಾವ ಮಾನದಂಡವನ್ನು ಅನುಸರಿಸಬೇಕು ಎಂಬುದು ಶೈಕ್ಷಣಿಕ ವಲಯದಲ್ಲಿ ಹಾಗೂ ಪ್ರಾಜ್ಞರ ಮಟ್ಟದಲ್ಲಿ ಸಮಗ್ರ ಚರ್ಚೆಯಾಗಬೇಕು. ವರ್ಗೀಕರಣ ಸರಳವಾದ ವಿಷಯವೇನಿಲ್ಲ; ಅದು ಬಹಳ ಕ್ಲಿಷ್ಟಕರವಾದುದೇ ಆಗಿದೆ’ ಎಂದು ಹೇಳಿದರು.
‘ಪಟ್ಟಿಯಲ್ಲಿ ಈಗಿರುವ ಜಾತಿಗಳ ನಡುವೆಯೇ ವರ್ಗೀಕರಣ ಆಗಬೇಕು. ಯಾವುದನ್ನೂ ತೆಗೆದು ಹಾಕಬಾರದು; ಬೇರಾವುದನ್ನೂ ಹೊಸದಾಗಿ ಸೇರಿಸಲೂಬಾರದು. ಇದಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ಆಗಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತ್ಯೇಕ ಆಯೋಗ ರಚಿಸಲಿ: ‘ರಾಜ್ಯ ಸರ್ಕಾರವು ವರ್ಗೀಕರಣದ ವಿಷಯದಲ್ಲಿ ಮುಂದಡಿ ಇಡಬೇಕು. ಎಲ್ಲ ಜಾತಿಗಳ ಜನಗಣತಿಯನ್ನೂ ನಡೆಸಿ, ದತ್ತಾಂಶ ಸಂಗ್ರಹಿಸಿದ ನಂತರ ವರ್ಗೀಕರಣಕ್ಕೆ ಕ್ರಮ ಕೈಗೊಳ್ಳಬೇಕು. ಇದಕ್ಕೆಂದೇ ಪ್ರತ್ಯೇಕ ಆಯೋಗ ರಚಿಸಬೇಕು’ ಎಂದರು.
‘ಉತ್ತರ ಭಾರತದ ಹಲವೆಡೆ ವರ್ಗೀಕರಣಕ್ಕೆ ವಿರೋಧ ವ್ಯಕ್ತವಾಗಿದೆ. ಈ ವಿಷಯದಲ್ಲಿ ಉತ್ತರ ಭಾರತಕ್ಕೂ–ದಕ್ಷಿಣ ಭಾರತಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಇಲ್ಲಿಯ ಪರಿಶಿಷ್ಟ ಜಾತಿಯವರು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರು ಎದುರಿಸುತ್ತಿಲ್ಲ. ಹೀಗಾಗಿ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ವರ್ಗೀಕರಣದ ವಿಷಯದಲ್ಲಿ ಕ್ರಮಕ್ಕೆ ಮುಂದಾಗಬೇಕು’ ಎಂದು ಹೇಳಿದರು.
ವಿಷಯ ಮಂಡನೆ: ‘ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಹಿಂದೂಗಳಷ್ಟೇ ಇಲ್ಲ. ಮುಸ್ಲಿಮರು, ಬೌದ್ಧರು, ಸಿಖ್ಖರೂ ಇದ್ದಾರೆ. ಆ ಪಟ್ಟಿ ಸಿದ್ಧವಾಗಿದ್ದು 1931ರಲ್ಲಿ. ಅದನ್ನು ಆಗಿನ ಜನಗಣತಿ ಆಯುಕ್ತರಾಗಿದ್ದ ಜೆ.ಎಚ್. ಹಟ್ಟನ್ ಎಂಬ ಇಂಗ್ಲಿಷ್ ಅಧಿಕಾರಿ ಮಾಡಿದ್ದರು. ಅದಕ್ಕಾಗಿ, ಅಸ್ಪೃಶ್ಯತೆಯ ಮುಖಗಳನ್ನು ಆಧರಿಸಿ 9 ಮಾನದಂಡಗಳನ್ನು ಅವರು ಅನುಸರಿಸಿದ್ದರು’ ಎಂದು ತಿಳಿಸಿದರು.
ಚೆನ್ನೈನ ತಮಿಳುನಾಡು ರಾಜ್ಯ ಶೈಕ್ಷಣಿಕ ನೀತಿಯ ಉನ್ನತ ಮಟ್ಟದ ಸಮಿತಿಯ ಸಂಯೋಜಕ ಪ್ರೊ.ಎಲ್. ಜವಹರ್ ನೀಸನ್ ‘ತಮಿಳುನಾಡು ಮಾದರಿ’, ನವದೆಹಲಿಯ ಜೆಎನ್‌ಯು ಪ್ರಾಧ್ಯಾಪಕ ವೈ.ಚಿನ್ನಾರಾವ್ ‘ಆಂಧ್ರಪ್ರದೇಶ–ತೆಲಂಗಾಣ ಮಾದರಿ’ ಹಾಗೂ ವಿದ್ಯಾವರ್ಧಕ ಕಾನೂನು ಕಾಲೇಜಿನ ಅಧ್ಯಾಪಕ ‘ಕರ್ನಾಟಕ ಮಾದರಿ’ ಕುರಿತು ವಿಚಾರ ಮಂಡಿಸಿದರು. ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಪ್ರೊ.ಜಿ. ಮೋಹನ್ ಗೋಪಾಲ್ ಹಾಗೂ ಕೇಂದ್ರದ ನಿರ್ದೇಶಕ ಪ್ರೊ.ಜೆ. ಸೋಮಶೇಖರ್ ಮಾತನಾಡಿದರು.
ಅಸ್ಪೃಶ್ಯತೆ ಇಂದಿಗೂ ಹೋಗಿಲ್ಲ; ಕೀಳರಿಮೆಯೂ ನಿವಾರಣೆಯಾಗಿಲ್ಲ. ಸುಶಿಕ್ಷಿತರ ನಡುವೆಯೂ ಅಸಮಾನತೆ ಇದೆ. ಶೋಷಿತ ಸಮಾಜದ ನ್ಯಾಯಾಧೀಶರನ್ನು ಅಭಿನಂದಿಸುವುದಕ್ಕೂ ಹಿಂಜರಿಯುವುದು ಕಂಡುಬರುತ್ತಿದೆರವಿವರ್ಮ ಕುಮಾರ್ ಮಾಜಿ ಅಧ್ಯಕ್ಷ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.