ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿರಿಯಾಪಟ್ಟಣ | ವೈದ್ಯಾಧಿಕಾರಿ ಮುಂದೆಯೇ ಪರಸ್ಪರ ನಿಂದಿಸಿಕೊಂಡ ಶುಭಗೌಡ, ಮಂಜು

Published 11 ಸೆಪ್ಟೆಂಬರ್ 2023, 4:53 IST
Last Updated 11 ಸೆಪ್ಟೆಂಬರ್ 2023, 4:53 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಪೃಥ್ವಿ ಎದುರಲ್ಲೇ ಆರೋಗ್ಯ ರಕ್ಷಾ ಸಮಿತಿಯ ಮಾಜಿ ಸದಸ್ಯೆ, ಬಿಜೆಪಿ ಮುಖಂಡರಾದ ಶುಭಗೌಡ ಮತ್ತು ಕಾಂಗ್ರೆಸ್ ಎಸ್‌ಸಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಯತನಹಳ್ಳಿ ಮಂಜು ಅವರು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

‘ಆಡಳಿತ ವೈದ್ಯಾಧಿಕಾರಿ ಡಾ.ಪೃಥ್ವಿ ಕಿರುಕುಳ ನೀಡುತ್ತಿದ್ದಾರೆ’ ಎಂಬ ಸ್ವಚ್ಛತಾ ಸಿಬ್ಬಂದಿಯ ಆರೋಪದ ಮೇರೆಗೆ ಆಯತನಹಳ್ಳಿ ಮಂಜು ಅವರು ಡಾ.ಪೃಥ್ವಿ ಅವರನ್ನು ಈಚೆಗೆ ಭೇಟಿಯಾಗಿ, ಸಿಬ್ಬಂದಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ, ‘ಡಾ.ಪೃಥ್ವಿ ಅವರು ಜನರೆದುರೇ ನಮ್ಮನ್ನು ಏಕವಚನದಲ್ಲಿ ನಿಂದಿಸುತ್ತಾರೆ. ಆರೋಗ್ಯ ರಕ್ಷಾ ಸಮಿತಿಯ ಮಾಜಿ ಸದಸ್ಯೆ ಶುಭಗೌಡ ಆಸ್ಪತ್ರೆಗೆ ಬಂದು ನಮಗೆ ತೊಂದರೆ ನೀಡುತ್ತಾರೆ. ಹಾಸಿಗೆಗಳಿಗೆ ಹಾಸಲು ಬೆಡ್ ಶೀಟ್‌ ನೀಡಲು ನರ್ಸ್‌ಗಳು ಸತಾಯಿಸುತ್ತಾರೆ’ ಎಂದು ಸ್ವಚ್ಛತಾ ಸಿಬ್ಬಂದಿ ಆರೋಪಿಸಿದ್ದಾರೆ. ‘ನಮ್ಮ ಕೆಲಸಕ್ಕೆ ಅಡ್ಡಿ ಪಡಿಸುವ ಹೊರಗಿನವರನ್ನು ನಿಯಂತ್ರಿಸಬೇಕು’ ಎಂದೂ ಮನವಿ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ್ದ ಡಾ.ಪೃಥ್ವಿ, ‘ಲೋಕಾಯುಕ್ತ ಅಧಿಕಾರಿಗಳು ಈಚೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಕಾಯ್ದುಕೊಂಡಿಲ್ಲ ಎಂದು ನಮಗೆ ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಬಾರದೇ? ನಿಮಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಅದನ್ನು ನೇರವಾಗಿ ನನಗೆ ತಿಳಿಸಬೇಕು. ಅದನ್ನು ಬಿಟ್ಟು ಆಸ್ಪತ್ರೆಗೆ ಸಂಬಂಧಪಡದ ವ್ಯಕ್ತಿಗಳೊಂದಿಗೆ ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ನನಗೆ ಹೇಗೆ ತಿಳಿಯುತ್ತದೆ’ ಎಂದು ಸ್ವಚ್ಛತಾ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಡಾ.ಪೃಥ್ವಿ ಅವರ ಕಚೇರಿಗೆ ದಿಢೀರನೆ ಬಂದ ಶುಭಗೌಡ, ‘ನನ್ನನ್ನು ಸಾರ್ವಜನಿಕ ಆಸ್ಪತ್ರೆಗೆ ಬಾರದಂತೆ ತಡೆಯಲು ನೀನ್ಯಾರು’ ಎಂದು ಆಯತನಹಳ್ಳಿ ಮಂಜು ಅವರನ್ನು ಏಕವಚನದಲ್ಲಿ ನಿಂದಿಸುತ್ತ ತರಾಟೆಗೆ ತೆಗೆದುಕೊಂಡರು. ಇಬ್ಬರೂ ಏರು ದನಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಮೊಬೈಲ್‌ ಫೋನ್‌ಗಳಲ್ಲಿ ವಿಡಿಯೊ ಮಾಡಿಕೊಂಡಿದ್ದಾರೆ. 

ಅಲ್ಲಿಗೆ ಬಂದ ಕಾಂಗ್ರೆಸ್ ಮುಖಂಡ ಮಹಮ್ಮದ್ ಶಫಿ, ‘ಆಸ್ಪತ್ರೆಯ ನಿರ್ವಹಣೆ ಬಗ್ಗೆ ನೀವಿಬ್ಬರು ಏಕೆ ಮೂಗು ತೂರಿಸುತ್ತೀರಿ? ನಿಮ್ಮಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ’ ಎಂದು ಸಮಾಧಾನಪಡಿಸಿ ಅಲ್ಲಿಂದ ಹೊರಗೆ ಕಳುಹಿಸಿದ್ದಾರೆ.

ಶಸ್ತ್ರಚಿಕಿತ್ಸಕ ಡಾ.ಪೃಥ್ವಿ ಬಳಿಗೆ ಬಂದಿದ್ದ ರೋಗಿಗಳು ಸುಮಾರು 2 ಗಂಟೆ ಕಾಯುವಂತಾಗಿತ್ತು. ಶುಭಗೌಡ ಹಾಗೂ ಆಯತನಹಳ್ಳಿ ಮಂಜು ಅವರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT