ಮೈಸೂರು: ‘ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಯ ಮೂಲಕ ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ಕೊನೆಯಾಗಿ ಸ್ವಚ್ಛ ರಾಜಕಾರಣಕ್ಕೆ ವೇದಿಕೆ ಸಿದ್ಧವಾಗಲಿ. ಬಿಜೆಪಿ ಮೇಲಿನ ಎಲ್ಲಾ ಹಗರಣಗಳ ಆರೋಪಗಳ ಬಗ್ಗೆ ತನಿಖೆಗೆ ಕಾಂಗ್ರೆಸ್ ಸರ್ಕಾರವೂ ಆದೇಶಿಸಲಿ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.
ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ರಾಜ್ಯಪಾಲರ ನಿರ್ಧಾರ ಸ್ವಾಗತಾರ್ಹವಾದುದು. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ಮೇಲೆ ನೂರು ಆರೋಪಗಳನ್ನು ಮಾಡಿತ್ತು. ಆದರೆ, ಒಂದಾದರೂ ತನಿಖೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿಸಿದ್ದಾರಾ?’ ಎಂದು ಕೇಳಿದರು.
‘ಯಾವ ಹಗರಣದ ಬಗ್ಗೆಯೂ ಸಣ್ಣ ತನಿಖೆಯೂ ಆಗಿಲ್ಲ. ದೊಡ್ಡ ದೊಡ್ಡವರು ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಾರೆ. ಕಾರ್ಯಕರ್ತರನ್ನು ಮಂಗ್ಯಾ ಮಾಡಲು ಹೇಳಿಕೆಗಳ ಮೇಲಾಟ ನಡೆಸುತ್ತಾರಷ್ಟೆ. ಶಿಕಾರಿಪುರದಲ್ಲಿ ಡಮ್ಮಿ ಅಭ್ಯರ್ಥಿ ಹಾಕಿದ್ದು ನಾವೇ ಎಂದು ಡಿ.ಕೆ. ಶಿವಕುಮಾರ್ ಅವರೇ ಹೇಳಿಕೊಂಡಿದ್ದರು. ಆಗ ನಡೆದಿದ್ದು ಹೊಂದಾಣಿಕೆ ರಾಜಕಾರಣ ತಾನೇ’ ಎಂದು ಪ್ರಶ್ನಿಸಿದರು.