ಮೈಸೂರು: ಪ್ಲಾಸ್ಟಿಕ್ ಬಾಟಲಿಗಳ ಹಾವಳಿ ತಡೆಯುವ ಉದ್ದೇಶದಿಂದ ಇಲ್ಲಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‌ಆರ್‌ಎಲ್) ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದಿಂದ (ಇಂಜೆಕ್ಷನ್ ಬ್ಲೋ ಮೌಲ್ಡಿಂಗ್ ಟೆಕ್ನಿಕ್) ಸಿದ್ಧಪಡಿಸಿರುವ ‘ಮಣ್ಣಿನಲ್ಲಿ ಕರಗುವ ನೀರಿನ ಬಾಟಲಿ’ಗಳನ್ನು ರಕ್ಷಣಾ ಹಾಗೂ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಅಜಯ್ ಭಟ್ ಬಿಡುಗಡೆ ಮಾಡಿದರು.
ಡಿಎಫ್‌ಆರ್‌ಎಲ್‌ದಿಂದ ‘ಮಿಲಿಟರಿ ಪಡಿತರ ಮತ್ತು ನಿರ್ದಿಷ್ಟ ಪೌಷ್ಟಿಕಾಂಶದ ಅವಶ್ಯಕತೆಗಳಿಗಾಗಿ ಸಿರಿಧಾನ್ಯಗಳು’ ಎಂಬ ವಿಷಯದ ಕುರಿತು ಎಸ್‌ಡಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರಸಂಕಿರಣದ ಉದ್ಘಾಟಿನೆ ಕಾರ್ಯಕ್ರಮದಲ್ಲಿ ಈ ಬಾಟಲಿಯ ವಿಶೇಷಗಳನ್ನು ತಿಳಿಸಲಾಯಿತು.
ಇದೇ ಮೊದಲ ಬಾರಿಗೆ ಇಂತಹ ಬಾಟಲಿ ಸಂಶೋಧನೆ ನಡೆಸಲಾಗಿದೆ ಎಂದು ಡಿಎಫ್‌ಆರ್‌ಎಲ್ ತಿಳಿಸಿದೆ.
ಪರಿಸರ ಸ್ನೇಹಿಯಾದ ಉತ್ಪನ್ನ ಇದಾಗಿದೆ. ‘ಪಾಲಿ ಲಾಕ್ಟಿಕ್ ಆ್ಯಸಿಡ್’ನಿಂದ ತಯಾರಿಸಿದ ಸುಸ್ಥಿರ ಬಾಟಲಿಗಳು ಇವಾಗಿವೆ. ಮಂಗಳೂರಿನ ಕೊಂಕಣ್ ಸ್ಪೆಷಾಲಿಟಿ ಪಾಲಿ ಪ್ರಾಡಕ್ಟ್ ಕಂಪನಿ ಸಹಯೋಗದಲ್ಲಿ ಇವುಗಳನ್ನು ಅಭಿವೃದ್ಧಿಪಡಿಸಲಾಗಿದ್ದು, 250 ಮಿ.ಲೀ. ಸಾಮರ್ಥ್ಯದ್ದಾಗಿವೆ. ಇವುಗಳನ್ನು ಬಳಸುವುದರಿಂದ ಪರಿಸರಕ್ಕೆ ಮಾರಕವಾದ ಹಾಗೂ ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್ ಬಾಟಲಿಗಳಿಗೆ ವಿದಾಯ ಹೇಳಬಹುದಾಗಿದೆ ಎನ್ನುತ್ತದೆ ಡಿಎಫ್‌ಆರ್‌ಎಲ್.
ಐಎಸ್‌ಒ 17088-2021 ಮತ್ತು ಐಎಸ್ 17899 ಟಿ–2022 ಪ್ರಮಾಣಿತ ಹಾಗೂ ಕರಗಬಹುದಾಗಿದೆ. ಪಾನೀಯಗಳನ್ನು ಹಾಕಲು ಸುರಕ್ಷಿತವಾದುದಾಗಿದೆ. ಬಾಟಲಿಯ ಕ್ಯಾಪ್ ಹಾಗೂ ಲೇಬಲ್ ಕೂಡ ಮಣ್ಣಿನಲ್ಲಿ ಕರಗುತ್ತದೆ. ಪ್ಲಾಸ್ಟಿಕ್ ಬಾಟಲಿಯಂತೆಯೇ ಪಾರದರ್ಶಕ, ಬಾಳಿಕೆ ಬರುವ ಗುಣವನ್ನು ಹೊಂದಿದೆ. ಪರಿಸರ ಮಾಲಿನ್ಯ ತಡೆಯಲು ಸಹಕಾರಿಯಾಗಿದೆ ಎಂದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.