ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಶಾಲೇಲಿ ಕೊನೆ ಬೆಂಚ್ ವಿದ್ಯಾರ್ಥಿಗಳೇ ಇಲ್ಲ

Last Updated 31 ಜುಲೈ 2019, 5:59 IST
ಅಕ್ಷರ ಗಾತ್ರ

ಮೈಸೂರಿನಿಂದ 35 ಕಿ.ಮೀ. ದೂರದಲ್ಲಿರುವ ಗೆಜ್ಜಯ್ಯನ ವಡ್ಡರ ಗುಡಿ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಪ್ರವೇಶಿಸುತ್ತಿದ್ದಂತೆ ತರಹೇವಾರಿ ಔಷಧೀಯ ಸಸ್ಯಗಳು, ಹಣ್ಣಿನಗಿಡ, ತರಕಾರಿ, ಸೊಪ್ಪು, ಸ್ವಚ್ಛ, ಸುಂದರ ಪರಿಸರ ನಮ್ಮನ್ನು ಆಹ್ವಾನಿಸುತ್ತದೆ. ಮಕ್ಕಳು ದುಂಡುಮೇಜಿನಲ್ಲಿ ಕುಳಿತು ಪಾಠ ಪ್ರವಚನ ಕೇಳುವುದು ಗಮನ ಸೆಳೆಯುತ್ತದೆ. ಶಾಲಾ ಆವರಣದಲ್ಲಿ ಸಾವಯವ ಗೊಬ್ಬರ ಬಳಸಿ ನಿರ್ಮಿಸಿರುವ ಸುಂದರ ಕೈತೋಟವು ಮಕ್ಕಳ ಕೌಶಲವನ್ನು ಎತ್ತಿತೋರಿಸುತ್ತದೆ.

ಈ ಶಾಲೆಯಲ್ಲಿ ಸುಸಜ್ಜಿತ ಕೊಠಡಿಗಳು, ಗ್ರಂಥಾಲಯ, ಅಡುಗೆ ಮನೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪ್ರತ್ಯೇಕ ಶೌಚಾಲಯ ಕಲ್ಪಿಸಲಾಗಿದೆ. ಶಾಲೆಯಲ್ಲಿ ಬೆಳೆದ ಬದನೆ, ಅವರೆ, ಹಿರೇಕಾಯಿ, ಕುಂಬಳ, ನುಗ್ಗೆಕಾಯಿ, ಒಂದೆಲಗಾ, ಅಮೃತ ಬಳ್ಳಿ, ಆಲೋವರ, ಪಾಲಕ್, ದಂಟ್ಟಿನ ಸೊಪ್ಪು, ತುಳಸಿ, ಕಾಮಕಸ್ತೂರಿ, ಸಾಂಬರಬಳ್ಳಿ, ಬಾಳೆ ಹೀಗೆ... ಹತ್ತುಹಲವು ತರಕಾರಿ, ಸೊಪ್ಪುಗಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಲಾಗುತ್ತಿದೆ. ಸಾವಯವ ಗೊಬ್ಬರ ಬಳಸಿ
ಕೈತೋಟವನ್ನು ನಿರ್ಮಿಸಿದ್ದು, ಮಕ್ಕಳೇ ಅದರ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದಾರೆ.

ಇದ್ದಲ್ಲದೆ, ಶಾಲೆಯಲ್ಲಿ ಅಕ್ಷಯ ಪಾತ್ರೆಯನ್ನು ನಿರ್ಮಿಸಲಾಗಿದೆ. ಎಲ್ಲಾ ಮಕ್ಕಳು ತಮ್ಮಲ್ಲಿ ಬೆಳೆದ ದವಸ, ಧಾನ್ಯವನ್ನು ತಂದು ಈ ಪಾತ್ರೆಗೆ ಹಾಕುತ್ತಾರೆ. ಅಲ್ಲದೆ, ಗ್ರಾಮದ ಜನರು ತಾವು ಬೆಳೆದ ಧಾನ್ಯ, ಕಾಳು, ತರಕಾರಿಗಳನ್ನು ಅಕ್ಷಯ ಪಾತ್ರೆಗೆ ತಂದು ಹಾಕುತ್ತಾರೆ. ಶಿಕ್ಷಣ ಇಲಾಖೆಯು ಒಂದು ಮಗುವಿಗೆ ದಿವಸಕ್ಕೆ 1 ರೂಪಾಯಿ 46 ಪೈಸೆ ಕೊಡುತ್ತದೆ. ಈ ಹಣದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡಲು ಸಾಧ್ಯವಿಲ್ಲ. ಮಕ್ಕಳ ಬೆಳವಣಿಗೆ, ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅಕ್ಷಯ ಪಾತ್ರೆ ಕಲ್ಪನೆಯನ್ನು ಸಾಕಾರಗೊಳಿಸಲಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಗಿರೀಶ್‍ ಕುಮಾರ್‌ ತಿಳಿಸುತ್ತಾರೆ.

ಮೊದಲ ಬೆಂಚ್‌ನಲ್ಲಿ ಕುಳಿತುಕೊಳ್ಳುವವರೆಲ್ಲಾ ಬುದ್ಧಿವಂತರು, ಕೊನೇ ಬೆಂಚ್‌ನಲ್ಲಿ ಕುಳಿತುಕೊಳ್ಳುವವರು ದಡ್ಡರು ಎಂಬ ಮಾತಿಗೆ ಇಲ್ಲಿ ಆಸ್ಪದವೇ ಇಲ್ಲ. ಮಕ್ಕಳಲ್ಲಿ ಸಮಾನತೆ ಮೂಡಿಸಬೇಕು, ಎಲ್ಲರೂ ಒಟ್ಟಿಗೆ ಕುಳಿತು ಪಾಠ ಪ್ರವಚನಗಳನ್ನು ಕೇಳಬೇಕು, ಯಾವುದೇ ಭೇದಭಾವ ಇಲ್ಲದೆ ಓದಬೇಕು ಎಂಬ ಉದ್ದೇಶದಿಂದ ದುಂಡು ಮೇಜುಗಳ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಶಾಲೆಯ ಶಿಕ್ಷಕಿ ರತ್ನಾ.

ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ವೈದ್ಯರು, ಎಂಜಿನಿಯರ್‌ಗಳು ಆಗಿದ್ದಾರೆ. ಶಾಲೆಗೂ ಒಳ್ಳೆಯ ಹೆಸರು ತಂದಿದ್ದಾರೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ್ ಹೇಳಿದರು.

ಗದ್ದಿಗೆಯ ಮುಖ್ಯರಸ್ತೆಯ ಗೆಜ್ಜಯ್ಯನ ವಡ್ಡರ ಗುಡಿಯಲ್ಲಿ 1963ರಲ್ಲಿ ಶಾಲೆ ಸ್ಥಾಪನೆಯಾಯಿತು. ಆರಂಭದಲ್ಲಿ 5 ಮಕ್ಕಳಿದ್ದರು. ಈ ಶಾಲೆ ಇಷ್ಟೆಲ್ಲಾ ಅಭಿವೃದ್ಧಿ ಕಾಣಲು ಶಿಕ್ಷಕರು ಹಾಗೂ ಗ್ರಾಮಸ್ಥರು ಸಾಕಷ್ಟು ಶ್ರಮಿಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಮಲ್ಲಿಕಾರ್ಜುನ ಅವರು ಸಹಕಾರ ನೀಡಿದ್ದಾರೆ.

ಗೆಜ್ಜಯ್ಯನವಡ್ಡರ ಗುಡಿ ಪಕ್ಕದ ಕಾಡವಡ್ಡರ ಗುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಯಾವುದರಲ್ಲೂ ಕಡಿಮೆ ಇಲ್ಲ. ಶಾಲೆಯ ಆವರಣದ ಗೋಡೆಗಳ ಮೇಲೆ ಪರಿಸರ, ಪ್ರಾಣಿ ಪಕ್ಷಿಗಳ ಚಿತ್ರಬರಹಗಳನ್ನು ಬಿಡಿಸಲಾಗಿದೆ. ಒಂದು ಮಗುವಿನಿಂದ ಆರಂಭವಾಗಿ ಇಂದು 20 ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಮಕ್ಕಳೇ ಬೆಳೆಸಿದ ಕೈತೋಟವಿದೆ. ಮಧ್ಯಾಹ್ನದ ಬಿಸಿಯೂಟಕ್ಕೆ ತರಕಾರಿಗಳನ್ನೂ ಬೆಳೆಯಲಾಗುತ್ತಿದೆ. ಪೂಜೆಗೆ ಹೂವು, ಔಷಧೀಯ ಸಸ್ಯಗಳನ್ನೂ ಬೆಳೆಸಿದ್ದಾರೆ.

ಶಾಲೆಯ ಶಿಕ್ಷಕಿ ರೋಜಾ ಮಣಿ ಅವರ ಪರಿಶ್ರಮದ ಫಲವಾಗಿ ಪೋಷಕರು ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT