ಹಾಂಗ್‌ಝೌ : ಅವಿನಾಶ್ ಸಬ್ಳೆ ಅವರು ಏಷ್ಯನ್ ಕ್ರೀಡಾಕೂಟದ ಪುರುಷರ 3000 ಮೀ. ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡರೆ, ಶಾಟ್‌ಪಟ್ ಸ್ಪರ್ಧಿ ತಜಿಂದರ್‌ಪಾಲ್ ಸಿಂಗ್ ತೂರ್ ಚಾಂಪಿಯನ್‌ಪಟ್ಟವನ್ನು ತಮ್ಮಲ್ಲೇ ಉಳಿಸಿಕೊಂಡರು.
ಹಾಂಗ್‌ಝೌ ಒಲಿಂಪಿಕ್ ಸ್ಪೋರ್ಟ್ಸ್ ಸೆಂಟರ್ ಕ್ರೀಡಾಂಗಣದ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಭಾನುವಾರ ಮಿಂಚಿನ ಸಂಚಲನ ಮೂಡಿಸಿದ ಭಾರತದ ಅಥ್ಲೀಟ್‌ಗಳು ಒಟ್ಟು ಒಂಬತ್ತು ಪದಕಗಳನ್ನು ಬಾಚಿಕೊಂಡರು. ಭಾನುವಾರ ಪದಕ ನಿರ್ಧಾರವಾದ ಎಲ್ಲ ಎಂಟು ಸ್ಪರ್ಧೆಗಳಲ್ಲೂ ಭಾರತದ ಅಥ್ಲೀಟ್‌ಗಳು ‘ಪೋಡಿಯಂ ಫಿನಿಷ್’ ಮಾಡಿದ್ದು ವಿಶೇಷ.
ಸ್ಟೀಪಲ್‌ಚೇಸ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ 29 ವರ್ಷದ ಸಬ್ಳೆ, ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ದಿನದ ಮೊದಲ ಪದಕ ತಂದುಕೊಟ್ಟರು. ಅವರು 8 ನಿ. 19.50 ಸೆ.ಗಳಲ್ಲಿ ಗುರಿ ತಲುಪಿದರು.
ಸಬ್ಳೆ ಅವರು ಈ ಹಾದಿಯಲ್ಲಿ ಕೂಟ ದಾಖಲೆಯನ್ನೂ ಸ್ಥಾಪಿಸಿದರು. ಇರಾನ್‌ನ ಹೊಸೇನ್ ಕೆಯಹಾನಿ (8 ನಿ. 22.79 ಸೆ.) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಬೆಳ್ಳಿ ಗೆದ್ದ ಜಪಾನ್‌ನ ಅಯೊಕೊ ರಿಯೊಮಿ (8 ನಿ. 23.75 ಸೆ.) ಮತ್ತು ಕಂಚು ಜಯಿಸಿದ ಸುನದ ಸೀಯಾ ಅವರ ಪೈಪೋಟಿಯನ್ನು ಬದಿಗೊತ್ತಲು ಯಶಸ್ವಿಯಾದರು.
ಸ್ಟೀಪಲ್‌ಚೇಸ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಭಾರತ ಇದುವರೆಗೆ ಏಷ್ಯನ್ ಗೇಮ್ಸ್ ಚಿನ್ನ ಗೆದ್ದಿರಲಿಲ್ಲ. ಮಹಿಳೆಯರ ವಿಭಾಗದಲ್ಲಿ ಸುಧಾ ಸಿಂಗ್ ಅವರು 2010ರ ಕೂಟದಲ್ಲಿ ಬಂಗಾರ ಜಯಿಸಿದ್ದರು.
ಪುರುಷರ ಶಾಟ್‌ಪಟ್‌ನಲ್ಲಿ ತೂರ್ ಅವರು ನಿರೀಕ್ಷೆಯಂತೆಯೇ ಚಿನ್ನ ಗೆದ್ದು ‘ಬಲ’ ಪ್ರದರ್ಶಿಸಿದರು. ತಮ್ಮ ಆರನೇ ಹಾಗೂ ಕೊನೆಯ ಪ್ರಯತ್ನದಲ್ಲಿ ಕಬ್ಬಿಣದ ಗುಂಡನ್ನು 20.36 ಮೀ. ದೂರ ಎಸೆದರು. ಅದುವರೆಗೂ ಮುನ್ನಡೆಯಲ್ಲಿದ್ದ ಸೌದಿ ಅರೇಬಿಯಾದ ಮೊಹಮ್ಮದ್ ದಾವುದ ಟೊಲೊ (20.18 ಮೀ.) ಎರಡನೇ ಸ್ಥಾನಕ್ಕೆ ಜಾರಿದರು. ಕಂಚಿನ ಪದಕ ಚೀನಾದ ಲಿಯು ಯಾಂಗ್ (19.97 ಮೀ.) ಪಾಲಾಯಿತು.
2018ರ ಜಕಾರ್ತ ಕೂಟದಲ್ಲೂ ತೂರ್ ಚಿನ್ನ ಜಯಿಸಿದ್ದರು. ಆದರೆ ಆ ಕೂಟದಲ್ಲಿ ಸ್ಥಾಪಿಸಿದ್ದ ಕೂಟ ದಾಖಲೆಯನ್ನು (20.75 ಮೀ.) ಉತ್ತಮಪಡಿಸಲು 28 ವರ್ಷದ ಅವರಿಗೆ ಸಾಧ್ಯವಾಗಲಿಲ್ಲ.
ಪುರುಷರ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಮುರಳಿ ಶ್ರೀಶಂಕರ್ 8.19 ಮೀ. ಸಾಧನೆಯೊಂದಿಗೆ ಬೆಳ್ಳಿ ಗೆದ್ದರು. ಚೀನಾದ ವಾಂಗ್ ಜಿಯಾನನ್ (8.22 ಮೀ.) ಚಿನ್ನ ಜಯಿಸಿದರು.
ನಂದಿನಿಗೆ ಕಂಚು
ಅಗಸರ ನಂದಿನಿ (5,712 ಪಾಯಿಂಟ್ಸ್) ಅವರು ಮಹಿಳೆಯರ ಹೆಪ್ಟಾಥ್ಲಾನ್‌ನಲ್ಲಿ ಕಂಚು ಗೆದ್ದರು. ಈ ವಿಭಾಗದಲ್ಲಿ ಪದಕ ಭರವಸೆ ಎನಿಸಿದ್ದ ಸ್ವಪ್ನಾ ಬರ್ಮನ್ ಅವರು ನಾಲ್ಕನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದರು. ಜಾವೆಲಿನ್ ಥ್ರೋನಲ್ಲಿ (45.13 ಮೀ.) ನಿರೀಕ್ಷಿತ ದೂರ ಕಂಡುಕೊಳ್ಳದೇ ಇದ್ದುದು ಸ್ವಪ್ನಾ, ಹಿನ್ನಡೆ ಅನುಭವಿಸಲು ಕಾರಣ. ಈ ಸ್ಪರ್ಧೆಯಲ್ಲಿ ಅವರ ಶ್ರೇಷ್ಠ ಸಾಧನೆ 52.55 ಮೀ. ಆಗಿದೆ. ಸ್ವಪ್ನಾ ಒಟ್ಟು 5,708 ಪಾಯಿಂಟ್ಸ್ ಕಲೆಹಾಕಿದರು. ಈ ವಿಭಾಗದ ಚಿನ್ನದ ಪದಕವನ್ನು ಚೀನಾದ ಝೆಂಗ್ ನಿನಲಿ (6,149) ಗೆದ್ದುಕೊಂಡರು.
ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಸೀಮಾ ಪೂನಿಯಾ 58.62 ಮೀ. ಸಾಧನೆಯೊಂದಿಗೆ ಬೆಳ್ಳಿ ಜಯಿಸಿದರು. ಚೀನಾದ ಫೆಂಗ್ ಬಿನ್ (67.93 ಮೀ.) ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ಅದೇ ದೇಶದ ಜಿಯಾಂಗ್ ಝಿಚಾವೊ (61.04) ಕಂಚು ಪಡೆದರು. 40 ವರ್ಷದ ಪೂನಿಯಾ, 2014ರ ಕೂಟದಲ್ಲಿ ಚಿನ್ನ ಹಾಗೂ 2018ರ ಕೂಟದಲ್ಲಿ ಕಂಚು ಗೆದ್ದಿದ್ದರು.
ಜ್ಯೋತಿ ಯರ್‍ರಾಜಿಗೆ ಬೆಳ್ಳಿ
ಭಾರತದ ಜ್ಯೋತಿ ಯರ್‍ರಾಜಿ ಅವರು ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಬೆಳ್ಳಿ ಗೆದ್ದರು. ಈ ಓಟ ವಿವಾದಕ್ಕೆ ಕಾರಣವಾಯಿತು. ಸೂಚನೆ ಸಿಗುವ ಮುಂಚೆಯೇ ಓಟ ಆರಂಭಿಸಿದ್ದಕ್ಕೆ (ಫೌಲ್) ಚೀನಾದ ವು ಯಾನಿ ಅವರನ್ನು ಅನರ್ಹಗೊಳಿಸಲಾಯಿತು. ಆ ಬಳಿಕ ತೀರ್ಪುಗಾರರು ಅವರಿಗೆ ಓಡಲು ಅವಕಾಶ ನೀಡಿದರು.
ಚೀನಾದ ಲಿನ್ ಯುವೆಯಿ (12.74 ಮೀ.) ಚಿನ್ನ ಗೆದ್ದರು. ಯಾನಿ (12.91 ಸೆ.) ಮತ್ತು ಜ್ಯೋತಿ (13.04 ಸೆ.) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದರು. ಆದರೆ ಭಾರತ ಅಥ್ಲೆಟಿಕ್ ಫೆಡರೇಷನ್ (ಎಎಫ್‌ಐ) ತಕ್ಷಣವೇ ತನ್ನ ಪ್ರತಿಭಟನೆ ಸಲ್ಲಿಸಿದ್ದರಿಂದ ಯಾನಿ ಅವರನ್ನು ಅನರ್ಹಗೊಳಿಸಲಾಯಿತು. ಇದರಿಂದ ಜ್ಯೋತಿ ಅವರಿಗೆ ಎರಡನೇ ಸ್ಥಾನ ಲಭಿಸಿತು.
‘ಪ್ರಮುಖ ಕೂಟಗಳಲ್ಲಿ ಈ ರೀತಿಯ ಗೊಂದಲ ಮರುಕಳಿಸಬಾರದು. ಆದ್ದರಿಂದ ಈ ವಿಷಯವನ್ನು ವಿಶ್ವ ಅಥ್ಲೆಟಿಕ್ ಫೆಡರೇಷನ್ ಗಮನಕ್ಕೆ ತರಲಾಗುವುದು’ ಎಂದು ಎಎಫ್‌ಐ ಅಧ್ಯಕ್ಷ ಆದಿಲ್ ಸುಮರಿವಾಲಾ ತಿಳಿಸಿದರು.
1,500 ಮೀ. ಓಟ: ಮೂರು ಪದಕ
ಪುರುಷರ ಮತ್ತು ಮಹಿಳೆಯರ 1,500 ಮೀ. ಓಟದಲ್ಲಿ ಭಾರತಕ್ಕೆ ಒಟ್ಟು ಮೂರು ಪದಕಗಳು ಬಂದವು. ಪುರುಷರ ವಿಭಾಗದಲ್ಲಿ ಅಜಯ್ ಕುಮಾರ್ ಸರೋಜ್ ಮತ್ತು ಜಿನ್ಸನ್ ಜಾನ್ಸನ್ ಅವರಿಗೆ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಒಲಿಯಿತು. ಮಹಿಳೆಯರ ವಿಭಾಗದಲ್ಲಿ ಹರ್ಮಿಲನ್ ಬೇನ್ಸ್ ಅವರು ಬೆಳ್ಳಿ ಗೆದ್ದರು.
ಕೊನೆಯ 200 ಮೀ. ಇದ್ದಾಗ ಮಿಂಚಿನಂತೆ ಮುನ್ನುಗ್ಗಿದ ಅಜಯ್ ಕುಮಾರ್ 3 ನಿ. 38.94 ಸೆ.ಗಳಲ್ಲಿ ಗುರಿ ತಲುಪಿದರು. ಮೂರನೇ ಸ್ಥಾನ ಪಡೆದ ಜಾನ್ಸನ್ 3 ನಿ. 39.74 ನಿ.ಗಳನ್ನು ತೆಗೆದುಕೊಂಡರು. ಕೊನೆಯ ಲ್ಯಾಪ್‌ನಲ್ಲಿ ವೇಗ ಹೆಚ್ಚಿಸಿಕೊಂಡ ಕತಾರ್‌ನಲ್ಲಿ ಮೊಹಮ್ಮದ್ ಅಲಗರನಿ (3 ನಿ. 38.36 ಸೆ.) ಚಿನ್ನ ಜಯಿಸಿದರು.
ಹರ್ಮಿಲನ್ ಅವರು 4 ನಿ. 12.74 ಸೆ.ಗಳಲ್ಲಿ ಎರಡನೆಯವರಾಗಿ ಗುರಿ ತಲುಪಿದರು. ಚಿನ್ನದ ಪದಕ ಗೆದ್ದ ಬಹರೇನ್‌ನ ವಿನ್ಫ್ರೆಡ್ ಮುತಿಲೆ 4 ನಿ. 11.65 ಸೆ.ಗಳಲ್ಲಿ ಕ್ರಮಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.